ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ರಸ್ತೆ: ಕೋರ್ಟ್‌ ಕಾಳಜಿ

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಸ್ತೆ ಅಪಘಾತಗಳು ಮತ್ತು ಅದರಿಂದ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ನಮಗೆ ವಿಶ್ವದಲ್ಲಿಯೇ ಮೊದಲ ಸ್ಥಾನ. ಅಮೂಲ್ಯ ಜೀವಗಳು ವಿನಾಕಾರಣ ರಸ್ತೆಯಲ್ಲೇ ಮುರುಟಿ ಹೋಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಅದಕ್ಕಾಗಿಯೇ ಮೋಟಾರು ವಾಹನ ಕಾಯ್ದೆಯ ಕಟ್ಟುನಿಟ್ಟು ಪಾಲನೆ ಮತ್ತು ರಸ್ತೆ ಸುರಕ್ಷತಾ ವಿಧಾನಗಳ ಅನುಷ್ಠಾನದ ಮೇಲೆ ನಿಗಾ ಇಡಲು ನ್ಯಾಯಮೂರ್ತಿ ಕೆ.ಎಸ್‌. ರಾಧಾ­ಕೃಷ್ಣನ್ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ನೇಮಿಸಿದೆ.

ಕೇಂದ್ರ ಭೂಸಾರಿಗೆ ಖಾತೆ ಮಾಜಿ ಕಾರ್ಯದರ್ಶಿ ಎಸ್. ಸುಂದರ್ ಹಾಗೂ ರಸ್ತೆ ಸುರಕ್ಷತೆ ತಜ್ಞ ಡಾ. ನಿಷಿ ಮಿತ್ತಲ್ ಈ ಸಮಿತಿಯಲ್ಲಿದ್ದಾರೆ. ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಮೂರು ತಿಂಗಳ ಒಳಗೆ ಸಮಿತಿಗೆ ಮೊದಲ ವರದಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸದಾಶಿವಂ ನೇತೃತ್ವದ ಪೀಠ ಗಡುವು ನೀಡಿದೆ. ಸುರಕ್ಷಿತ ಸಂಚಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ರೀತಿಯಲ್ಲಿ  ರಸ್ತೆಗಳ ನಿರ್ವಹಣೆ ಮಾಡಬೇಕು ಎಂಬುದು ಪ್ರಜೆಗಳ ಕನಿಷ್ಠ ಅಪೇಕ್ಷೆ; ಅದು ಅವರ ಹಕ್ಕು ಎಂಬ ನ್ಯಾಯಪೀಠದ ವ್ಯಾಖ್ಯಾನ ಮಹತ್ವಪೂರ್ಣ.

ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವುದರಲ್ಲಿ ನಮ್ಮ ದೇಶದ ರಸ್ತೆಗಳು ಕುಖ್ಯಾತಿ ಪಡೆದಿವೆ. 2011ರ ವರದಿ ಪ್ರಕಾರ ನಮ್ಮ ರಸ್ತೆಗಳಲ್ಲಿ ಪ್ರತೀ ನಿಮಿಷಕ್ಕೆ ಗಂಭೀರ ಸ್ವರೂಪದ ಒಂದು ಅಪಘಾತ, ಮೂರೂವರೆ ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತದೆ. ಅಂದರೆ ಆ  ವರ್ಷ 4.97 ಲಕ್ಷ ಅಪ­ಘಾತಗಳು ನಡೆದಿದ್ದು, 1.43 ಲಕ್ಷ ಜನ ಅಸು ನೀಗಿದ್ದಾರೆ. ಇವರಲ್ಲಿ 15–24 ವಯೋಮಾನದವರ ಪ್ರಮಾಣ ಶೇ 30.3. ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ನಡೆಯುವ ಅಪಘಾತಗಳ ಪ್ರಮಾಣ ಶೇ 77.5ರಷ್ಟು. ಸೈಕಲ್ ಸವಾರರು, ಪಾದಚಾರಿಗಳಿಂದ ನಡೆಯುವ ತಪ್ಪು ಶೇ 3.7. ರಸ್ತೆಯ ದುಸ್ಥಿತಿಯಿಂದಾಗಿ ನಡೆಯುವ ಅಪಘಾತಗಳು ಶೇ 1.7.

ನಮ್ಮ ನೆರೆಯ ಚೀನಾ ನಮಗಿಂತ ಉತ್ತಮ. ಅಲ್ಲಿ ಐದು ವರ್ಷಗಳ ಅವಧಿಯಲ್ಲಿ ಅಪಘಾತದ ಸಾವಿನ ಪ್ರಮಾಣವನ್ನು 1.07 ಲಕ್ಷದಿಂದ 68 ಸಾವಿರಕ್ಕೆ ಇಳಿಸಲು ಅವರು ಶಕ್ತರಾಗಿದ್ದಾರೆ. ಅವರಿಗೆ ಸಾಧ್ಯವಾಗಿದ್ದು ನಮ­ಗೇಕೆ ಆಗುತ್ತಿಲ್ಲ ಎಂಬುದು ಗಂಭೀರ ಚಿಂತನೆಯ ವಿಷಯ.

ಕಾನೂನು ಪಾಲನೆ, ರಸ್ತೆ ವಿನ್ಯಾಸ ತಂತ್ರಜ್ಞಾನ, ರಸ್ತೆ ಸುರಕ್ಷತೆಯ ಶಿಕ್ಷಣ ಮತ್ತು ತುರ್ತು ಚಿಕಿತ್ಸೆ– ಈ ನಾಲ್ಕು ಪ್ರಮುಖ ವಿಷಯಗಳು ಅಪಘಾತ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವಕ್ಕೆ ಆದ್ಯತೆ ಸಿಗಬೇಕು. ಕಾನೂನಿನ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೇ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಜನ ಹಿಂಜರಿಯುವ ಸ್ಥಿತಿ ನಮ್ಮಲ್ಲಿದೆ. ಜೀವ ಉಳಿಸಲು ನೆರವಾದವರಿಗೆ ಕಾನೂನಿನಿಂದ ಯಾವುದೇ ತೊಂದರೆಯಾಗದು ಎಂದು ದೇಶದ ಅತ್ಯುನ್ನತ ನ್ಯಾಯಾಲಯವೇ ಅನೇಕ ಸಲ ಹೇಳಿದ್ದರೂ ವಾಸ್ತವದಲ್ಲಿ ಜನರ ಅನುಭವ ಬೇರೆಯೇ ಇದೆ. ಇದರ ಬಗ್ಗೆಯೂ ಸಮಿತಿ ಗಮನ ಹರಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT