ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸೂತ್ರ ಆಡಳಿತದ ಸೂತ್ರ

Last Updated 19 ಮೇ 2016, 19:32 IST
ಅಕ್ಷರ ಗಾತ್ರ

ನೇಮಕಾತಿ ಮಾಡದೆ ಹಣ ಉಳಿತಾಯ ಮಾಡುವುದು ಜಾಣ್ಮೆಯಲ್ಲ; ಆಡಳಿತದ ವಾಹನಕ್ಕೆ ವೇಗ ಸಿಗಬೇಕೆಂದರೆ ಸಕಾಲದಲ್ಲಿ ನೇಮಕಾತಿಗಳು ಆಗುತ್ತಲೇ ಇರಬೇಕು.

ಕರ್ನಾಟಕದ ಕಾರ್ಯಾಂಗದಲ್ಲಿ ನೇಮಕಾತಿಗಳಿಲ್ಲದೆ ಸರ್ಕಾರಿ ಕಚೇರಿಗಳು ಭಣಗುಟ್ಟುತ್ತಿವೆ ಎಂಬ ಸುದ್ದಿ (ಪ್ರ.ವಾ., ಮೇ 13) ನಿಜಕ್ಕೂ ಆಘಾತಕಾರಿ. ಸುಮಾರು ಮೂರನೇ ಒಂದರಷ್ಟು ಹುದ್ದೆಗಳಲ್ಲಿ ಜನ ಇಲ್ಲವೆಂದಾದರೆ ಸುಸೂತ್ರವಾಗಿ ಕೆಲಸ ಸಾಗುವುದು ಹೇಗೆ? ಅಂದರೆ ಮಂಜೂರಾದ 7.80 ಲಕ್ಷ ಹುದ್ದೆಗಳಲ್ಲಿ 2.70 ಲಕ್ಷ ಹುದ್ದೆಗಳು ಖಾಲಿ ಇವೆ ಎಂಬ ಸುದ್ದಿ ಸೂಚಿಸುವುದೇನನ್ನು? ಅಷ್ಟು ಮಂದಿಗೆ ಕೊಡುವ ಸಂಬಳ ಖಜಾನೆಗೆ ಉಳಿತಾಯವೆಂದೇ? ಆದರೆ ಆಗುವ ನಷ್ಟ ಎಷ್ಟು? ಇದು ಲೆಕ್ಕಕ್ಕೆ ಸಿಗದಷ್ಟು! ಹುದ್ದೆಗಳು ಖಾಲಿಯಾಗಲು ಪ್ರಧಾನ ಕಾರಣವೆಂದರೆ ನೌಕರರ ನಿವೃತ್ತಿ. 

ಒಬ್ಬ ನೌಕರ ನಿವೃತ್ತಿ ಹೊಂದುವ ವೇಳೆಗೆ ಆತನ ತಿಂಗಳ ವೇತನ ₹ 50 ಸಾವಿರ ಇದೆ ಎಂದು ಇಟ್ಟುಕೊಳ್ಳೋಣ. ಆತನ ಜಾಗಕ್ಕೆ ನೇಮಕವಾಗುವವರಿಗೆ ಆರಂಭದ ವೇತನ ಸುಮಾರು ₹ 20 ಸಾವಿರ ಇರುತ್ತದೆ. ಅದರಲ್ಲೇ ಸರ್ಕಾರಕ್ಕೆ ತಿಂಗಳಿಗೆ ಹೆಚ್ಚು ಕಡಿಮೆ ₹ 30 ಸಾವಿರ ಉಳಿತಾಯವಾಗುತ್ತದೆ. ಅಲ್ಲದೆ ಅಲ್ಲಿ ಕೆಲಸವೂ ನಡೆಯುತ್ತದೆ. ಸರ್ಕಾರದ ‘ಭಾಗ್ಯ’ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲೂ ಸಾಧ್ಯವಾಗುತ್ತದೆ. ಇದರ ಬದಲು ನೇಮಕಾತಿ ಮಾಡದೆ ಹಣ ಉಳಿತಾಯ ಮಾಡುವುದು ಜಾಣ್ಮೆ ಎನಿಸುವುದಿಲ್ಲ. ಇದರಿಂದಾಗಿ ಆಡಳಿತ ಯಂತ್ರದ ಓಡುವ ಚಕ್ರದ ಕಡ್ಡಿ ಮುರಿದಂತಾಗುತ್ತದೆ.

ಹೊಸ ಕಡ್ಡಿಯನ್ನು ಹಾಕದಿದ್ದರೆ ಚಕ್ರ ಅಪ್ಪಚ್ಚಿಯಾಗುತ್ತದೆ. ಆಡಳಿತದ ವಾಹನಕ್ಕೆ ವೇಗ ಸಿಗಲಾರದು. ಹಾಗಾಗಿ ಸುಸೂತ್ರ ಆಡಳಿತಕ್ಕಾಗಿ ಸಕಾಲದಲ್ಲಿ ನೇಮಕಾತಿಗಳು ಆಗುತ್ತಲೇ ಇರಬೇಕು. ನೇಮಕಾತಿಯಲ್ಲಿ ವಿಳಂಬ ನೀತಿ ಎಂಬುದು ಈಗಿನ ಸರ್ಕಾರವೂ ಮುಂದುವರಿಸುತ್ತಿರುವ ಹಳೆಯ ಸಂಗತಿ. ಬಹಳ ವರ್ಷಗಳ ಹಿಂದೆ ಆರಂಭವಾದ ಆರ್ಥಿಕ ಮಿತವ್ಯಯ ಎಂಬ ನೀತಿಗೆ ಮುಕ್ತಿಯೇ ಸಿಕ್ಕಿಲ್ಲ. ಈ ನೀತಿಯನ್ನು ನೇಮಕಾತಿಗಳಿಗೆ ಅನ್ವಯಿಸಿದ್ದೇ ತಪ್ಪು. ಅದು ಅನುಷ್ಠಾನವಾಗಬೇಕಾಗಿದ್ದದ್ದು ಸರ್ಕಾರಿ ಕಾರ್ಯಕ್ರಮಗಳ ದುಂದುವೆಚ್ಚದ ನಿಯಂತ್ರಣದಲ್ಲಿ.

ವರ್ಷಗಳು ಕಳೆದಂತೆ ನೇಮಕಾತಿ ವಿಳಂಬ ಹಾಗೆಯೇ ಉಳಿಯಿತು. ಸರ್ಕಾರದ ಆಡಂಬರದ ಕಾರ್ಯಕ್ರಮಗಳ ವೆಚ್ಚದಲ್ಲಿ ಮಿತವ್ಯಯದ ನೆನಪಾಗುತ್ತಲೇ ಇಲ್ಲ. ಸಚಿವರ ಕಚೇರಿಗಳು, ಬಂಗಲೆಗಳ ಸೌಂದರ್ಯವೃದ್ಧಿ ಮತ್ತು ವಾಸ್ತು ಶುದ್ಧಿಗೆ, ದುಬಾರಿ ಕಾರುಗಳಿಗೆ, ಪ್ರವಾಸಗಳಿಗೆ, ಅಧಿಕಾರಿಗಳ ಹೊಸ ಮನೆ, ನವೀನ ವಾಹನಗಳಿಗೆ, ಉದ್ಘಾಟನಾ ಸಮಾರಂಭಗಳಿಗೆ, ಸೌಲಭ್ಯ ವಿತರಣೆಯ ಕಾರ್ಯಕ್ರಮಗಳಿಗೆ, ಸಾಹಿತ್ಯ-ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಉತ್ಸವಗಳಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಳ್ಳೆ ಹೊಡೆಯುವ ದುಡ್ಡಿಗೆ, ಅನವಶ್ಯಕವಾಗಿ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮಿತವ್ಯಯ ಅನ್ವಯವಾಗುವುದಿಲ್ಲ.

ಆದರೆ ಹುದ್ದೆಗಳ ಭರ್ತಿಗೆ ಮಿತವ್ಯಯ ಅಡಚಣೆಯಾಗುತ್ತದೆ. ಯಾಕೆ ಹೀಗಾಗುತ್ತದೆ ಎಂಬ ಪ್ರಶ್ನೆಯನ್ನು ಕೆದಕಿದರೆ ಸಿಕ್ಕುವ ಉತ್ತರಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಸರ್ಕಾರಿ ನೌಕರರ ನಿವೃತ್ತಿ, ಸಾವು, ಅನಾರೋಗ್ಯ ಹಾಗೂ ಅತ್ಯಪರೂಪವಾಗಿ ರಾಜೀನಾಮೆಯಿಂದ ತೆರವಾಗುವ ಸ್ಥಾನಗಳಿಗೆ ತಕ್ಷಣವೇ ನೇಮಕಾತಿ ಮಾಡಲು ಕೆಪಿಎಸ್‌ಸಿಯ ಬಳಿ ಪರೀಕ್ಷೆ ನಡೆಸಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಇರಬೇಕು. ಯಾವ ತಿಂಗಳಲ್ಲಿ, ಯಾವ ಹುದ್ದೆಗಳಲ್ಲಿ ಎಷ್ಟು ಮಂದಿ ನಿವೃತ್ತರಾಗುತ್ತಾರೆ ಎಂಬುದು ನಿವೃತ್ತಿಗೆ ಆರು ತಿಂಗಳ ಮೊದಲೇ ಗೊತ್ತಾಗುವುದರಿಂದ ಅಗತ್ಯವುಳ್ಳ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕೆಂಬ ಬೇಡಿಕೆಯನ್ನು ಆಯಾ ಇಲಾಖೆಗಳು ಮಂಡಿಸಬೇಕು.

ಮೀಸಲಾತಿ ನಿಯಮಗಳನ್ನು ಅನ್ವಯಿಸಿ ಆಯ್ದ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮೊದಲಿಗರ ಹೆಸರುಗಳನ್ನು ಹಾಗೂ ಇತರ ಮಾಹಿತಿಗಳನ್ನು ಇಲಾಖೆಗೆ ಕಳುಹಿಸಿಕೊಡಬೇಕು. ಅವರು ನೇಮಕಾತಿ ಆದೇಶ ನೀಡಿದಾಗ ಒಪ್ಪಿಗೆ ನೀಡಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಬೇಕು. ಹಿಂದೆ ಸರ್ಕಾರದ ಅಂಗವಾಗಿದ್ದ ಎಂಪ್ಲಾಯ್‌ಮೆಂಟ್‌ ಎಕ್ಸ್‌ಚೇಂಜ್‌ಗಳು ಈ ಕೆಲಸ ಮಾಡುತ್ತಿದ್ದವು. ಈಗ ಅವುಗಳನ್ನು ಮುಚ್ಚಲಾಗಿರುವುದರಿಂದ ಕೆಪಿಎಸ್‌ಸಿಯೇ ಆ ಕೆಲಸ ಮಾಡಬೇಕು. ಆದರೆ ಮಾಡುತ್ತಿಲ್ಲ. ಏಕೆಂದರೆ ಅದಕ್ಕೆ ‘ಮಿತವ್ಯಯ’ ಎಂಬುದಕ್ಕಿಂತ ದೊಡ್ಡ ಕಾರಣವಿದೆ. ಅದು ಮತ್ತೇನೂ ಅಲ್ಲ,

ಈ ಹುದ್ದೆಗಳು ಸರ್ಕಾರಿ ಕೆಲಸಗಳಾದ್ದರಿಂದ ‘ನಮ್ಮ ಮನೆ ದೇವರಿಗೇ ಇರಲಿ’ ಎಂಬ ಆಸೆ ಆಡಳಿತದ ಚುಕ್ಕಾಣಿ ಹಿಡಿದ ನೇತಾರರಿಗೆ ಮತ್ತು ಅಧಿಕಾರಿಗಳಿಗೆ. ಹಾಗಾಗಿ ಪಾರದರ್ಶಕ ಆಯ್ಕೆಯ ಮೇಲೂ ಕಪ್ಪು ಕಾಗದ ಹಚ್ಚಿ, ಹುದ್ದೆಗಳನ್ನು ತಮ್ಮವರಿಗಾಗಿ ಮಾಡಿಕೊಳ್ಳುವ ಹುನ್ನಾರ. ಆದರೆ ಈ ‘ತಮ್ಮವರ’ ಸಂಖ್ಯೆಯೇ ಅಪಾರವಾಗಿರುವುದರಿಂದ ಯಾರಿಗೂ ಬೇಡ ಎಂಬ ಸ್ಥಿತಿಸ್ಥಾಪಕ ಧೋರಣೆಯು ನೇಮಕಾತಿ ಪ್ರಕ್ರಿಯೆಗೆ ಅಡ್ಡವಾಗಿದೆ. ಹೀಗೆಯೇ ನಿಗಮ ಮಂಡಳಿಗಳಿಗೆ ನೇಮಕಾತಿ ತಡವಾದದ್ದೆಂಬುದನ್ನು ನೆನಪಿಸಿಕೊಳ್ಳಬಹುದು. 

ಇನ್ನೊಂದು ಕಾರಣವೆಂದರೆ, ಇತ್ತೀಚೆಗೆ ಹೊರಗುತ್ತಿಗೆಯ ವಿಧಾನದ ಮೂಲಕ ಕಡಿಮೆ ವೇತನ ಕೊಟ್ಟರೂ ಎಲ್ಲಾ ಕೆಲಸಗಳಿಗೆ ಜನ ಸಿಗುತ್ತಾರೆ. ಈ ಹೊರಗುತ್ತಿಗೆದಾರರು ಇಲಾಖಾ ಮುಖ್ಯಸ್ಥರನ್ನು ಮಾತ್ರ ಸಂತೋಷವಾಗಿಟ್ಟು, ಇಡೀ ದಿನ ವಿಶ್ರಾಂತಿ ಇಲ್ಲದೆ ದುಡಿಯುವ ಕೆಲಸಗಾರರಿಗೆ ಕಡಿಮೆ ಸಂಬಳ ಕೊಟ್ಟು ಶೋಷಿಸಿದರೂ ಕೇಳುವವರಿಲ್ಲ. ಜನರು ಸಂಕಷ್ಟಕ್ಕೊಳಗಾಗಿ ಸರ್ಕಾರಕ್ಕೆ ಶಾಪ ಹಾಕಿ ಕೋಪ ತಣಿಸಿಕೊಳ್ಳುತ್ತಾರೆ. ಆದರೆ ವಿರೋಧ ಪಕ್ಷದವರೂ ಸುಮ್ಮನಿದ್ದಾರೆ ಯಾಕೆ? ಯಾಕೆಂದರೆ ಅವರು ಅಧಿಕಾರದಲ್ಲಿದ್ದಾಗಲೂ ಮಾಡಿದ್ದು ಇದನ್ನೇ. ಆರ್ಥಿಕ ಮಂಜೂರಾತಿಯ ನೆಪದಲ್ಲಿ ನೇಮಕಾತಿಪ್ರಕ್ರಿಯೆಗೆ ಚಾಲನೆ ನೀಡಿಯೇ ಇಲ್ಲ. 

ಉದಾಹರಣೆಗೆ 2011-12ರಲ್ಲಿ 1.42ಲಕ್ಷ ಹುದ್ದೆಗಳು ಖಾಲಿ ಇದ್ದವು. ಅವುಗಳನ್ನು ತುಂಬಿದ್ದರೆ ಇಂದು ಕಾಣುವಷ್ಟು ಕೊರತೆ ಇರುತ್ತಿರಲಿಲ್ಲ. ಅಲ್ಲದೆ ಅವರಿಗೆ ಕೃತಜ್ಞರಾದ ನೌಕರರೂ ಇಲಾಖೆಗಳಲ್ಲಿ ಇರುತ್ತಿದ್ದರು. ಆಡಳಿತ ಯಂತ್ರ ಸುಸೂತ್ರವಾಗಿ ಚಲಿಸುವುದಕ್ಕೆ ಕಾರಣರೂ ಆಗಬಹುದಿತ್ತು. ಸಮಾಜಕ್ಕೂ ಇದರಿಂದ ಹಿತವಾಗುತ್ತಿತ್ತು. ಪ್ರಸ್ತುತ ಸರ್ಕಾರವೂ ಈ ದಿಸೆಯಲ್ಲಿ ಚಿಂತನೆ ನಡೆಸಿ ಖಾಲಿ ಹುದ್ದೆಗಳನ್ನು ತುಂಬಿದರೆ ನೌಕರರು ಆಭಾರಿಗಳಾಗಿರುತ್ತಾರೆ, ಸಮಾಜವೂ ಹಿತ ಭಾವನೆಯನ್ನು ತಾಳುತ್ತದೆ. ಆಡಳಿತ ಯಂತ್ರದ ವೇಗ ಹೆಚ್ಚಿಸುವುದರ ಮೂಲಕವೇ ಬಜೆಟ್‌ನ ಎಲ್ಲ ಯೋಜಿತ ಅಭಿವೃದ್ಧಿ ಕಾರ್ಯಗಳನ್ನೂ ಸಾಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT