ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಯೋಜನೆಯೇ ಪರಿಹಾರ

ಮೆಟ್ರೊ ಯೋಜನೆ– ಕುಂಟುತ್ತಿದೆ ಏಕೆ?

ಯಾವುದೇ ನಗರಕ್ಕಾದರೂ ಸರಿ, ಸುಸ್ಥಿರ ಸಾರಿಗೆ ಎಂಬುದು ಸಮತೋಲನದಿಂದ ಕೂಡಿದ ವ್ಯವಸ್ಥೆಯಾಗಿರಬೇಕು. ಪರಿಸರ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಅದು ರಚನಾತ್ಮಕ ಕೊಡುಗೆ ನೀಡುವಂತಿರಬೇಕು.

ನಮ್ಮ ರೂಢಿಗತ ಸಾರಿಗೆ ಯೋಜನೆಗಳ ಗುರಿ ಸಾಮಾನ್ಯವಾಗಿ ವಾಹನ ಸಂಚಾರವನ್ನು ಉತ್ತಮಗೊಳಿಸುವುದೇ ಆಗಿರುತ್ತದೆ. ಆದರೆ ಸಂಚಾರ ಮತ್ತು ಸಾಗಣೆಯಿಂದಾಗುವ ವ್ಯಾಪಕ ಪರಿಣಾಮಗಳನ್ನು ಪರಿಗಣಿಸುವಲ್ಲಿ ಈ ಯೋಜನೆಗಳು ವಿಫಲವಾಗಿರುತ್ತವೆ.

ಜನ ತಮ್ಮ ಉದ್ಯೋಗ ಸ್ಥಳಕ್ಕೆ, ಶಿಕ್ಷಣ ಸಂಸ್ಥೆಗಳಿಗೆ, ಮಿತ್ರರು ಮತ್ತು ಕುಟುಂಬದ ಸದಸ್ಯರನ್ನು ಭೇಟಿ ಮಾಡುವುದಕ್ಕೆ, ಸರಕು ಮತ್ತು ಸೇವಾ ಸೌಲಭ್ಯಗಳನ್ನು ಸಾಗಿಸುವುದಕ್ಕೆ ಅವಕಾಶ ಮಾಡಿಕೊಡುವುದೇ ಸಾರಿಗೆ ವ್ಯವಸ್ಥೆಯ ನಿಜವಾದ ಉದ್ದೇಶ.

ಹಿಂದಿನಿಂದಲೂ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ನಗರಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲೂ ಜನರ ಬದಲಾಗಿ ವಾಹನಗಳ ಸಂಚಾರಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತಿದೆ. ಆದರೆ ಸಂಚಾರ ನಂತರದ ಮಾತು. ಮೊದಲು, ನಗರಗಳನ್ನು ಜನರ ಲಭ್ಯತೆಗೆ ಅನುಗುಣವಾಗಿ ವಿನ್ಯಾಸಗೊಳಿಸಬೇಕಾಗಿರುವುದು ಆಧುನಿಕ ನಗರ ಮತ್ತು ಸಾರಿಗೆ ಯೋಜನೆಗಳ ನೂತನ ಮಾದರಿಯಾಗಬೇಕಾಗಿದೆ!

ಸುಸ್ಥಿರ ಸಾರಿಗೆಯು ಸಮಾಜದಲ್ಲಿನ ಎಲ್ಲ ವರ್ಗಗಳ ಜನರ ಮೂಲ ಅಗತ್ಯಗಳ ಪೂರೈಕೆಗೆ ಸುರಕ್ಷಿತ ಮತ್ತು ಅನುಕೂಲಕರವಾದ ವ್ಯವಸ್ಥೆ. ಇದು ಎಲ್ಲರಿಗೂ ಲಭ್ಯವಾಗುವಂತೆ ಇರಬೇಕು, ಪರಿಸರ ಸ್ನೇಹಿ ಆಗಿರಬೇಕು, ಕೈಗೆಟುಕುವಂತೆಯೂ ಇರಬೇಕು.

ಬೆಂಗಳೂರಿನಲ್ಲಿ ಈಗಿರುವ ಕೇವಲ 42 ಕಿ.ಮೀ. ದೂರದ ಮೆಟ್ರೊ ರೈಲು ವ್ಯವಸ್ಥೆ ಮಾತ್ರ ನಗರದ ಎಲ್ಲರ ಸೇವಾ ಅಗತ್ಯಗಳನ್ನೂ ಪೂರೈಸಲಾರದು. ಮೆಟ್ರೊವನ್ನು ಇತರ ಸಾರಿಗೆ ವ್ಯವಸ್ಥೆಗಳೊಂದಿಗೆ ಜೋಡಿಸಬೇಕಾದ ಕೆಲಸ ಅಗತ್ಯವಾಗಿ ನಡೆಯಬೇಕು. ಬಿಎಂಆರ್‌ಸಿಎಲ್ ಸಕ್ರಿಯ ಪಾತ್ರ ನಿರ್ವಹಿಸಿ ಬೆಂಗಳೂರು ನಗರಕ್ಕೆ ಬಹು ಸಾರಿಗೆ ವ್ಯವಸ್ಥೆಯೊಂದನ್ನು ರೂಪಿಸಬೇಕಾಗಿದೆ.

ಎತ್ತರಿಸಿದ ಮಾರ್ಗದ ಮೆಟ್ರೊ ವ್ಯವಸ್ಥೆ ಬೆಂಗಳೂರು ನಗರದ ಸೌಂದರ್ಯಕ್ಕೆ ಧಕ್ಕೆಯುಂಟುಮಾಡುತ್ತದೆ. ಮೆಟ್ರೊ ವ್ಯವಸ್ಥೆಗೆ ಅಪಾರ ಬಂಡವಾಳ ಸಹ ಬೇಕಾಗುತ್ತದೆ (ಪ್ರತಿ ಕಿ.ಮೀ.ಗೆ ₹ 250 ಕೋಟಿಯಿಂದ ₹ 300 ಕೋಟಿ). ಸುರಂಗದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಿಸಿದರೆ ವೆಚ್ಚ ಇನ್ನಷ್ಟು ಅಧಿಕವಾಗಬಹುದು. ಆದರೆ ಪರಿಸರದ ದೃಷ್ಟಿಯಿಂದ ಅದು ಸುರಕ್ಷಿತ ಮತ್ತು ಅವಲಂಬನಾರ್ಹ ವ್ಯವಸ್ಥೆ. ಅಷ್ಟೇ ಅಲ್ಲ ಭೂ ಬಳಕೆಗೂ ಹೆಚ್ಚು ತೊಡಕುಂಟು ಮಾಡದು.

ಹೀಗಾಗಿ ಬೆಂಗಳೂರು ಮೆಟ್ರೊವನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಬಂಡವಾಳ ಹೂಡಿಕೆಯ ಮೂಲಕ ನೆಲದಡಿ ನಿರ್ಮಿಸಬಹುದು. ಅಲ್ಲಿನ ಅಭಿವೃದ್ಧಿಯನ್ನು ‘ಸುರಂಗ ಪ್ರದೇಶ ಅಭಿವೃದ್ಧಿ ಪರಿಕಲ್ಪನೆ’ಯಡಿ ರಿಯಲ್‌ ಎಸ್ಟೇಟ್‌ ಮೌಲ್ಯವರ್ಧನೆಯ ಮೂಲಕ ನಗರದ ಆಡಳಿತಗಾರರಿಗೆ ವಹಿಸಿಕೊಡಬಹುದು.

ಮೋನೊ ರೈಲಿಗೆ ಪ್ರತಿ ಕಿ.ಮೀ.ಗೆ ₹ 175 ಕೋಟಿಯಷ್ಟು ವೆಚ್ಚ ತಗಲುತ್ತದೆ. ಇದು ಯುಕ್ತವಾದ ಕನಿಷ್ಠ ಸಾಮರ್ಥ್ಯದ ಸಾರಿಗೆ ವ್ಯವಸ್ಥೆಯಾಗಿದ್ದು ಯೋಜನೆಯ ಶ್ರೇಣಿಯಲ್ಲಿ ಮೆಟ್ರೊ ರೈಲಿಗಿಂತ ಸಾಕಷ್ಟು ಮೊದಲೇ ಸ್ಥಾನ ಪಡೆದಿದೆ. ವರ್ತುಲ ರೈಲು ಮತ್ತು ಉಪನಗರ ರೈಲು ವ್ಯವಸ್ಥೆಗಳು ಸಾಮಾನ್ಯವಾಗಿ, ಅಸ್ತಿತ್ವದಲ್ಲಿರುವ ಮೂಲಸೌಲಭ್ಯಗಳನ್ನೇ ಅಲ್ಪಸ್ವಲ್ಪ ಬದಲಾವಣೆಗಳ ಮೂಲಕ ಬಳಸಿಕೊಳ್ಳುತ್ತವೆ.

ಅದಾಗಲೇ ನಿರ್ಮಾಣಗೊಂಡಿರುವ ರಸ್ತೆಗಳನ್ನೇ ಬಳಸಿಕೊಳ್ಳುವ ಗ್ರೇಡ್‌ ಬಸ್‌ ಸಾರಿಗೆ ವ್ಯವಸ್ಥೆಯ ಮೂಲಸೌಲಭ್ಯಕ್ಕೂ ಭಾರಿ ಹಣವೇನೂ ವ್ಯಯವಾಗದು. ಬಸ್‌ಗಳ ಖರೀದಿ, ನಿಲ್ದಾಣಗಳು ಮತ್ತು ನಿಲುಗಡೆ ಸ್ಥಳ ಸಿದ್ಧತೆಯಂತಹ ಇತರ ಖರ್ಚುಗಳನ್ನಷ್ಟೇ ಭರಿಸಬೇಕಾಗುತ್ತದೆ. ಇಷ್ಟಾದರೂ ಇನ್ನಷ್ಟೇ ಅಭಿವೃದ್ಧಿಗೊಳಿಸಬೇಕಾಗಿರುವ ಈ ವ್ಯವಸ್ಥೆ ನಮ್ಮ ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಸೂಕ್ತವಾಗಿದೆ.

ಸಾರ್ವಜನಿಕ ಸಾರಿಗೆಯು ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸಬೇಕು, ಸರ್ವರ ಸುರಕ್ಷತೆಯನ್ನೂ ಒಳಗೊಂಡಿರಬೇಕು. ಇಂತಹದ್ದೊಂದು ಉತ್ತಮವಾದ ವ್ಯವಸ್ಥೆಗಾಗಿ ನಮಗೆ ಮಹತ್ವಾಕಾಂಕ್ಷೆಯ ಮತ್ತು ದೂರದೃಷ್ಟಿಯ ಕಾರ್ಯತಂತ್ರ ಬೇಕಾಗಿದೆ. ಈ ವ್ಯವಸ್ಥೆಗೆ ವಿನಿಯೋಗಿಸುವ ಹಣವನ್ನು ಸರ್ಕಾರ ದುಪ್ಪಟ್ಟುಗೊಳಿಸಬೇಕು. ಸಮಾಜದ ಎಲ್ಲ ವರ್ಗದ ಜನರ ಸಂಚಾರ ಆಯ್ಕೆಯಾಗಬಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ, ವಾಯುಮಾಲಿನ್ಯ, ಶಬ್ದ ಮಾಲಿನ್ಯವನ್ನು ತಗ್ಗಿಸುವ ಕ್ರಮಗಳನ್ನು ಒಳಗೊಂಡಿರಬೇಕು. ಪಳೆಯುಳಿಕೆ ಇಂಧನದ ಅವಲಂಬನೆ ಕಡಿಮೆ ಮಾಡುವ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯ ವ್ಯವಸ್ಥೆ ಅದಾಗಿರಬೇಕು.

ಸಾರ್ವಜನಿಕ ಸಾರಿಗೆಯು ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಕಲ್ಯಾಣಕ್ಕೆ ಅಗತ್ಯವಾದ ಮಹತ್ವದ ಅಂಶ. ಹೀಗಾಗಿ ಗುಣಮಟ್ಟದ ಬದುಕು ಮತ್ತು ನಗರಗಳ ಆರ್ಥಿಕ ಅಭಿವೃದ್ಧಿಗೆ ಸುಸ್ಥಿರ ನಗರ ಸಾರಿಗೆ ಅತ್ಯಂತ ಅವಶ್ಯ. ಇಂಥ ವ್ಯವಸ್ಥೆಯು ಮಾರುಕಟ್ಟೆ, ಉದ್ಯೋಗ ಸ್ಥಳ ಮತ್ತು ಹೆಚ್ಚುವರಿ ಕೆಲಸ ಕಾರ್ಯಗಳಿಗೆ ಸೇವಾ ಲಭ್ಯತೆ ಒದಗಿಸುವ ಮೂಲಕ ತನ್ನ ಸಮುದಾಯಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳನ್ನು ಒದಗಿಸುತ್ತದೆ.

ಸಾರಿಗೆ ಮೂಲಸೌಲಭ್ಯ ಸುಧಾರಿಸುವಾಗ ಕೆಲವೇ ಕ್ಷೇತ್ರಗಳಿಗೆ ಗಮನ ಹರಿಸುವ ಕ್ರಮದಿಂದ ನಾವು ಹೊರಬಂದು ಸಮಗ್ರ ಸಾರಿಗೆ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು. ವಿವಿಧ ಸಾರಿಗೆ ಸೌಲಭ್ಯಗಳ ನಡುವಿನ ಸಂಪರ್ಕ ಕೊಂಡಿ ಉತ್ತಮವಾಗಿರುವುದು ಅತ್ಯವಶ್ಯಕ. ಅಂದರೆ ಸಾಮಾನ್ಯ ರೈಲು, ಲೋಕಲ್‌ ರೈಲು, ಮೆಟ್ರೊ ರೈಲು, ಮೋನೊ ರೈಲು, ಸಿಟಿ ಬಸ್‌ ಇತ್ಯಾದಿಗಳ ನಡುವೆ ಸೂಕ್ತ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು.

ದೇಶದ ನಗರಗಳಲ್ಲಿ ಆರ್ಥಿಕ ವೃದ್ಧಿ, ಕ್ಷಿಪ್ರ ನಗರೀಕರಣದ ಜೊತೆ ಜೊತೆಗೆ ಸಂಚಾರ ಚಟುವಟಿಕೆಯೂ ತೀವ್ರವಾಗಿ ಹೆಚ್ಚುತ್ತಿದೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಗಳ ನಗರ ವ್ಯಾಪ್ತಿಯ ಕಾರ್ಯಚಟುವಟಿಕೆ ವೃದ್ಧಿಸಿರುವುದೇ ಇದಕ್ಕೆ ಉದಾಹರಣೆ.

ಇಂದು ಜಗತ್ತಿನ ಒಟ್ಟು ಇಂಧನ ಬಳಕೆಯಲ್ಲಿ ಸಾರಿಗೆ ಕ್ಷೇತ್ರದ ಪಾಲು ಪ್ರಮುಖವಾಗಿದ್ದು, ನಾಲ್ಕನೇ ಒಂದರಷ್ಟಿದೆ. ಇಂಗಾಲವನ್ನು ಪರಿಸರಕ್ಕೆ ಬಿಡುಗಡೆ ಮಾಡುವಲ್ಲಿಯೂ ಅದರ ಪಾತ್ರ ದೊಡ್ಡದಿದೆ. ಹೀಗಾಗಿ ನಡಿಗೆ, ಸೈಕ್ಲಿಂಗ್‌, ತ್ರಿಚಕ್ರ ವಾಹನ, ಮೆಟ್ರೊ ರೀತಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಜೈವಿಕ ಇಂಧನ ಅಥವಾ ಮರುಬಳಕೆಯ ಇಂಧನಗಳ ಮೂಲಕ ಇಂಧನ ದಕ್ಷ ವಾಹನಗಳ ಅಭಿವೃದ್ಧಿ ಮೂಲಕವೂ ಇಂತಹ ಪರಿಣಾಮಗಳನ್ನು ತಗ್ಗಿಸಬಹುದು.

ಬೆಂಗಳೂರು ನಗರಾಧಿಕಾರಿಗಳು ಸಂಚಾರ ದಟ್ಟಣೆ ತಗ್ಗಿಸಲು ರಸ್ತೆ ವಿಸ್ತರಣಾ ಯೋಜನೆಗಳಿಗೆ ಬಂಡವಾಳ ಹೂಡುವುದನ್ನು ನಿಲ್ಲಿಸಬೇಕು. ರಸ್ತೆ ಅಗಲಗೊಳಿಸುವುದಿದ್ದರೆ ಮೆಟ್ರೊ ರೈಲು, ಮೋನೊ ರೈಲು, ಬಸ್‌ ಸಂಚಾರ ಮಾರ್ಗಗಳು, ಬಸ್‌ ಕ್ಷಿಪ್ರ ಸಂಚಾರ ವ್ಯವಸ್ಥೆ, ಲೋಕಲ್‌ ರೈಲಿನಂಥ ಕಾರಣಗಳಿಗಷ್ಟೇ ಆಗಿರಬೇಕು.

ಪಾದಚಾರಿ ಮಾರ್ಗಗಳು, ಸೈಕಲ್‌ ಪಥದಂಥ ವಾಹನೇತರ ಸಾರಿಗೆಗೆ ಹೆಚ್ಚಿನ ಗಮನ ಹರಿಸಬೇಕು. ಇನ್ನಷ್ಟು ಖಾಸಗಿ ವಾಹನಗಳ ಸ್ಥಳಾವಕಾಶಕ್ಕಾಗಿ ರಸ್ತೆ ವಿಸ್ತರಿಸುವ ಬದಲು, ಮುಖ್ಯ ರಸ್ತೆಗಳು ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ, ಗುಂಡಿರಹಿತ ರಸ್ತೆಗಳ ನಿರ್ಮಾಣಕ್ಕೆ ನಾವು ಗಮನ ಹರಿಸುವುದು ಒಳಿತಲ್ಲವೇ?

ಇಂದು ಹೆದ್ದಾರಿಗಳಲ್ಲಿ ಸೈಕಲ್‌ ಓಡಿಸುವುದು, ದ್ವಿಚಕ್ರ ವಾಹನ ಸವಾರಿ ನಡೆಸುವುದು ಬಹಳ ಅಪಾಯಕಾರಿ. ಏಕೆಂದರೆ ವೇಗವಾಗಿ ಬರುವ ವಾಹನಗಳು ಈ ಚಿಕ್ಕ ವಾಹನಗಳನ್ನು ಅಡ್ಡ ಹಾಕಿಬಿಡುತ್ತವೆ. ಇದರಿಂದ ಜನ ಇಂದು ಲಘು ವಾಹನಗಳನ್ನು ಬಳಸದೆ ಕಾರುಗಳನ್ನು ಹೊರತೆಗೆಯುತ್ತಾರೆ. ಹೀಗಾಗಿ ಮೆಟ್ರೊದಂಥ ಸಾರ್ವಜನಿಕ ಸಾರಿಗೆ ನಿಲುಗಡೆ ಸ್ಥಳದ ಸಮೀಪಕ್ಕೆ ತೆರಳುವ ರಸ್ತೆ ಸುರಕ್ಷಿತವಾಗಿರಬೇಕು, ಕಾಲ್ನಡಿಗೆ, ಸೈಕಲ್‌ ಮೂಲಕ ಹೋಗುವವರೂ ಸುರಕ್ಷಿತವಾಗಿ ಅಂತಹ ಸ್ಥಳಗಳಿಗೆ ಹೋಗುವುದಕ್ಕೆ ಉತ್ತೇಜಿಸಬೇಕು. ಅಲ್ಲಿನ ವಾಹನ ನಿಲುಗಡೆ ಸ್ಥಳ ಸಮರ್ಪಕವಾಗಿರಬೇಕು.

ನಾವು ಮೆಟ್ರೊ ಮಾದರಿಯ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಹೊಂದಿಕೊಳ್ಳಬೇಕಿದ್ದರೆ ನಮ್ಮ ನಗರಗಳಲ್ಲಿನ ಅಲ್ಪಾವಧಿ ಹಾಗೂ ದೀರ್ಘಾವಧಿಯ ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಸಮರ್ಪಕವಾದ ಯೋಜನೆಗಳನ್ನು ರೂಪಿಸಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT