ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ವಿನ್ಯಾಸವಿದ್ದರಷ್ಟೇ ಮನೆ ಸೊಗಸು

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮನೆ ಕಟ್ಟುವಾಗ ಕೈಯಲ್ಲಿ ಒಂದಿಷ್ಟು ದುಡ್ಡು, ತಲೆಯಲ್ಲಿ ಇನ್ನೊಂದಿಷ್ಟು ವಿಚಾರ ಇದ್ದರಷ್ಟೇ ಸಾಲದು. ಕನಸಿನಲ್ಲಿ ರೂಪು ಪಡೆದಿರುವ ಮನೆ ಯಥಾವತ್ತಾಗಿ ನನಸಾಗಬೇಕು ಎಂದರೆ ಅದರ ಸರಿಯಾದ ವಿನ್ಯಾಸ ಮಾಡುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಹಣದ ಜೊತೆ ಕನಸೂ ‘ನೀರುಪಾಲು’.

ಉದ್ಯೋಗಸ್ಥರಾದ ಸುಂದರ್ ರಾಜ್ ಹಾಗೂ ಲಕ್ಷ್ಮಿ ದಂಪತಿಗೂ ಎಲ್ಲರ ಹಾಗೆ ತಮ್ಮ ಕನಸಿನ ಮನೆಯನ್ನು ಕಟ್ಟಿಸುವ ಆಸೆ. ಇನ್ನೇನು ಮುಂದಿನ ತಿಂಗಳಿನಿಂದ ಮನೆ ಪ್ರಾರಂಭಿಸಿಬಿಡಬೇಕು ಎಂಬ ಮಾತನ್ನು ಆಗಾಗ್ಗೆ ಆಡುತ್ತಿದ್ದರು.

ದಿನವೂ ಸಂಜೆ ವಾಕ್ ಹೋಗಿ ವಾಪಾಸು ಬರುವಾಗ  ಪಕ್ಕದ ಲೇಔಟ್‌ನಲ್ಲಿ ಕಾಣಿಸುತ್ತಿದ್ದ ಮುಕ್ತಾಯ ಹಂತಕ್ಕೆ ಬಂದಿರುವ  ಮನೆಯೊಂದು ಇವರಿಗೆ ಮೆಚ್ಚುಗೆ ಆಗಿತ್ತು. ಆ ಮನೆಯ ಸಮೀಪ ಬಂದಾಗಲೆಲ್ಲ ಇಬ್ಬರ ಕಾಲುಗಳು ಸ್ವಲ್ಪ ಹೊತ್ತು ನಿಂತು ಮುಂದೆ ಸಾಗುತ್ತಿದ್ದವು. ದಿನವೂ ಆ ಮನೆ ನಿರ್ಮಾಣದಲ್ಲಿ ಅಗುತ್ತಿದ್ದ ಪ್ರಗತಿಯು ಇವರಿಬ್ಬರ ಚರ್ಚೆಯ ವಿಷಯ ಕೂಡಾ ಆಗಿತ್ತು.

ಒಂದು ದಿನ ಹೀಗೆ ಅಚಾನಕ್ ಆ ಮನೆ ಕೆಲಸ ವಹಿಸಿಕೊಂಡಿದ್ದ ರಂಗಪ್ಪ ಮೇಸ್ತ್ರಿಯ ಪರಿಚಯ ಆಗಿ, ದಂಪತಿಗೆ ಮನೆ ಕಟ್ಟುವ ಕನಸಿಗೆ ರೆಕ್ಕೆ ಬಂದ ಹಾಗಾಯಿತು. ಅಂದಿನಿಂದ ದಿನ ದಿನವೂ ಮಾತಿಗೆ ಸಿಗುತ್ತಿದ್ದ ರಂಗಪ್ಪ ಮೇಸ್ತ್ರಿಯನ್ನು ಹಬ್ಬದಂದು ಊಟಕ್ಕೂ ಆಹ್ವಾನಿಸಿದರು.

ಊಟವಾದ ಮೆಲೆ ಮಾತಿನ ಮಧ್ಯೆ ಲೋಕಾರೂಢಿಯಂತೆ ಆ ಮನೆಗೆ ಎಷ್ಟು ಖರ್ಚು ಆಗಿರಬಹುದು ಎಂದು ರಂಗಪ್ಪನನ್ನು ಕೇಳಿಯೇ ಬಿಟ್ಟರು. ‘ಈಗಾಗಲೇ 30 ಲಕ್ಷ ರೂಪಾಯಿ ದಾಟಿದೆ. ಎಲ್ಲಾ ಮುಗಿಯುವ ಹೊತ್ತಿಗೆ 35 ಲಕ್ಷ ದಾಟಬಹುದು’ ಎಂದ ರಂಗಪ್ಪ, ‘ಇಂಥ ಮನೆಯನ್ನೂ ಇನ್ನೂ ಕಡಿಮೆ ವೆಚ್ಚದಲ್ಲಿಯೂ ಕಟ್ಟಬಹುದು’ ಎಂತಲೂ ಹೇಳಿದ.

ತಮ್ಮ ಬಜೆಟ್‌ನಲ್ಲಿಯೇ ಮನೆ ಕಟ್ಟಬಹುದು ಎಂದು ಸಂತಸಗೊಂಡ ದಂಪತಿ, ತಮ್ಮ ನಿವೇಶನ ಇಲ್ಲೇ ಹತ್ತಿರದಲ್ಲಿಯೇ ಇರುವ ವಿಷಯ ಹೇಳುತ್ತಾ, ಮನೆ ಕಟ್ಟಿಸುವ ಆಸೆಯನ್ನು ಮೇಸ್ತ್ರಿಯ ಮುಂದಿಟ್ಟರು. ಹತ್ತಾರು ವರ್ಷಗಳ ಅನುಭವಸ್ಥನಾದ ರಂಗಪ್ಪ, ತನ್ನ ಅನುಭವದಿಂದ ಕೆಲವು ಉಚಿತ ಸಲಹೆಗಳನ್ನು ಕುಳಿತಲ್ಲಿಯೆ ಕೊಟ್ಟ. ಇದರಿಂದ ಪ್ರೇರೇಪಿತರಾದ ದಂಪತಿ ತಮ್ಮ ಮನೆ ಕಟ್ಟಿಕೊಡುವಂತೆ ಆತನಿಗೆ ನೇರವಾಗಿಯೇ ಕೋರಿಕೆ ಇಟ್ಟರು.

ಪಕ್ಕದ ಲೇಔಟ್ ಮನೆ ಕೆಲಸ ಒಂದು ತಿಂಗಳಲ್ಲಿ ಮುಗಿಯುತ್ತಲೇ, ನಿಮ್ಮ ಮನೆ ಕೆಲಸ ಶುರು ಮಾಡಬಹುದೆಂದು ಒಪ್ಪಿಕೊಂಡ ರಂಗಪ್ಪ, ಮನೆಯ ವಿವರ ಪಡೆದು ತನಗೆ ಗೊತ್ತಿರುವ ಒಬ್ಬರಿಂದ ತಾನೇ ಮನೆಯ ನಕ್ಷೆ ಹಾಕಿಸಿಕೊಂಡು ಬರುವುದಾಗಿಯು ಹೇಳಿದ. ಪಕ್ಕದ ಲೇಔಟ್‌ನಲ್ಲಿ ತಾನು ಕಟ್ಟುತ್ತಿರುವ ಮನೆಯ ಆರ್ಕಿಟೆಕ್ಟ್ ಸೈಟ್ ಗೆ ಬಂದಿದ್ದು ಕೇವಲ ನಾಲ್ಕೈದು ಸಲ. ಕೇವಲ ಗೆರೆ ಎಳೆದು ಕೊಟ್ಟಿದ್ದಕ್ಕೆ ಲಕ್ಷಕ್ಕೂ ಅಧಿಕ ಶುಲ್ಕ ಪಡೆದಿರುವುದಾಗಿ ಮೇಸ್ತ್ರಿ ಹೇಳಿದಾಗ ದಂಪತಿ ದಂಗಾಗಿ ಹೋದರು. ತಮ್ಮ ಪುಣ್ಯಕ್ಕೆ ಈ ಅನುಭವಿ ರಂಗಪ್ಪ ಮೇಸ್ತ್ರಿ ಸಿಕ್ಕಿದ್ದು ಒಳ್ಳೆಯದೇ ಆಯಿತು ಎಂದುಕೊಂಡರು.

ಎರಡೇ ದಿನದಲ್ಲಿ ಮನೆಯ ನೀಲ ನಕ್ಷೆಯನ್ನು ರಂಗಪ್ಪ ಎರಡು ಬಿಳಿ ಹಾಳೆಯ ಮೇಲೆ ಪ್ರಿಂಟ್ ಹಾಕಿಸಿ ತಂದು ತೋರಿಸಿ, ರೂ28 ಲಕ್ಷದಲ್ಲಿ ಈ ಮನೆಯನ್ನು ಕಟ್ಟ ಬಹುದೆಂದು ತಿಳಿಸಿದ.  ತನ್ನ ಪರಿಚಯಸ್ಥರೊಬ್ಬರಿಂದ ಇನ್ನೆರಡು ದಿನಗಳಲ್ಲಿ ಮನೆಯ ಎಸ್ಟಿಮೇಟ್, ಸ್ಯಾಂಕ್ಷನ್ ಪ್ಲಾನ್ ಎಲ್ಲವನ್ನೂ ಪ್ರಿಂಟ್ ಔಟ್ ತಂದು ಒಪ್ಪಿಸುವುದಾಗಿ ಹೇಳಿ ಇದೆಲ್ಲವೂ ಸೇರಿ ಕೆಲವು ಸಾವಿರ ರೂಪಾಯಿ ವೆಚ್ಚ ಆಗಬಹುದು ಎಂದ.

ಖಾಸಗಿ ಕಂಪೆನಿಯೊಂದರ ಮ್ಯಾನೇಜರ್ ಆಗಿದ್ದ ಸುಂದರ್ ರಾಜ್ ಅವರು, ರಂಗಪ್ಪನ ಸಲಹೆಯಂತೆ ಪ್ಲಾನ್ ಸ್ಯಾಂಕ್ಷನ್ ಇತ್ಯಾದಿಗಳನ್ನು ಕ್ಷಿಪ್ರದಲ್ಲಿ ಮುಗಿಸಿದರು.

ಕೆಲವು ವರ್ಷಗಳ ಹಿಂದೆಯೇ ಖರೀದಿಸಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದ ನಿವೇಶನದ ಅಧಾರದ ಮೇಲೆ, ಪತ್ನಿ ಲಕ್ಷ್ಮಿ ಕೆಲಸ ಮಾಡುವ ಬ್ಯಾಂಕ್‌ನಿಂದ ಸಲೀಸಾಗಿ ರೂ30 ಲಕ್ಷ ಸಾಲ ಮಂಜೂರು  ಮಾಡಿಸಿ ಕೊಂಡರು. ಅತ್ತ  ರಂಗಪ್ಪ, ತನ್ನೆಲ್ಲ ಬಾಕಿ ಕೆಲಸ ಮುಗಿಸಿ, ಮರು ವಾರವೇ ಸುಂದರ್‌ರಾಜ್ ಅವರ ಮನೆ ಕೆಲಸ ಆರಂಭಿಸುವುದಾಗಿ ತಿಳಿಸಿದ. ಮನೆಗೆ ಅಗತ್ಯವಿದ್ದ ಜಲ್ಲಿ ಮರಳು ಕಬ್ಬಿಣ ಮುಂತಾದ ಲಿಸ್ಟ್ ಕೊಟ್ಟು, ಅದನ್ನೆಲ್ಲಾ ಸಪ್ಲೈ ಮಾಡುವ ಕೆಲವರ ದೂರವಾಣಿ ಸಂಖ್ಯೆಯನ್ನೂ ಕೊಟ್ಟಿದ್ದರಿಂದ ಸುಂದರ್ ರಾಜ್‌ಗೆ ವಾರದಲ್ಲೆ ಎಲ್ಲವೂ ಸುಲಭವಾಗಿ ಸಾಧ್ಯವಾಯಿತು.

ಒಳ್ಳೆಯ ಮುಹೂರ್ತದಲ್ಲಿ ಮನೆಯ ಗುದ್ದಲಿ ಪೂಜೆ ಆಗಿ, ಒಂದೂವರೆ ತಿಂಗಳಿನಲ್ಲಿ ಮನೆಯ ಮೊದಲನೇ ಸ್ಲಾಬ್ ಹಾಕಿ ಮನೆ ಒಂದು ಹಂತಕ್ಕೆ ಬಂದೇ ಬಿಟ್ಟಿತು. ಮರು ವಾರ ದೀಪಾವಳಿ ಹಬ್ಬವಾದ್ದರಿಂದ ಕೆಲಸಗಾರರು ರಜಕ್ಕೆ ಹೋದರು. ಸದ್ಯಕ್ಕೆ ಸ್ಲಾಬ್ ಕ್ಯೂರಿಂಗ್ ಕೂಡಾ ಆಗಬೇಕಿತ್ತು. ಆದರೆ ಒಂದು ವಾರವಾದರೂ ಕೆಲಸಗಾರರ ಪತ್ತೆಯೇ ಇರಲಿಲ್ಲ. ಜಾಸ್ತಿ ದಿನ ಕ್ಯೂರ್ ಆದಷ್ಟು ಒಳ್ಳೆಯದೇ ಎಂದು ಪಕ್ಕದ ಮನೆಯವರೊಬ್ಬರು ಹೇಳಿದ್ದರಿಂದ ದಂಪತಿ ಹೆಚ್ಚಿನ ಚಿಂತೆ ಮಾಡಲಿಲ್ಲ. ಹಬ್ಬಕ್ಕೆಂದು ಮಂಗಳೂರಿನಿಂದ ಬಂದಿದ್ದ ಲಕ್ಷ್ಮಿಯವರ ತಂಗಿ ಹಾಗೂ ತಂಗಿ ಗಂಡನಿಗೆ ಸಪ್ರೈಸ್ ಮಾಡಲು ಸೈಟ್ ಕಡೆ ಕರೆದುಕೊಂಡು ಹೋದ ಲಕ್ಷ್ಮಿಯವರಿಗೆ ಅಗಿದ್ದು ಮಾತ್ರ ನಿರಾಶೆ! ‘ಮುಂದಕ್ಕೆ ಇಷ್ಟೆಲ್ಲ ಜಾಗ ಬಿಡುವ ಬದಲು ಇಲ್ಲೇ ಒಂದು ಕೋಣೆ ಹೊಂದಿಸಬಹುದಿತ್ತಲ್ಲವೇ, ಹಿಂದುಗಡೆಯ ಕೋಣೆ ಇನ್ನೂ ಎರಡು ಅಡಿ ಆದರೂ ಹೆಚ್ಚಿಸಬೇಕಿತ್ತು’ ಎಂದು ತಂಗಿ ಹೇಳಿದಾಗ ಲಕ್ಷ್ಮಿ ಅವರಿಗೆ ಇದು ಸರಿಯೆನಿಸಿತು.   ‘ಮೇಲೆ ಒಂದು ರೂಮ್ ಕಟ್ಟಿಸಿದರೆ, ಪರಿಚಯಸ್ಥರಿಗೆ ಬಾಡಿಗೆಗೆ ಕೊಡಬಹುದು. ನೀವು ಊರಲ್ಲಿ ಇಲ್ಲದ ಸಮಯದಲ್ಲೂ ಅಸುರಕ್ಷತೆಯ ಸಮಸ್ಯೆ ಇರುವುದಿಲ್ಲ’ ಎಂದು ತಂಗಿಯ ಗಂಡ ಹೇಳಿದ ಸಲಹೆಯೂ ಸರಿ ಎನ್ನಿಸಿತು. ಆದರೆ ಅದಕ್ಕೆ ಈಗ ಇಟ್ಟಿರುವ ಮೆಟ್ಟಿಲುಗಳನ್ನು ಬದಲಾಯಿಸೊದು ಹೇಗೆ ಎಂಬ ಚಿಂತೆ ಕಾಡಿತು.

ಹಬ್ಬ ಮುಗಿಸಿ ಊರಿನಿಂದ ಬಂದ ರಂಗಪ್ಪ ಮೇಸ್ತ್ರಿ, ‘ಇದಕ್ಕೇನೂ ಯೋಚಿಸಬೇಕಾದ ಅವಶ್ಯಕತೆ ಇಲ್ಲ. ಅರ್ಧ ಕಟ್ಟಿರುವ ಮೆಟ್ಟಿಲುಗಳನ್ನು ಒಡೆದು ಅಲ್ಲಿಗೆ ದೇವರು ಕೋಣೆ ಬರುವ ಹಾಗೆ ಮಾಡಿ ಮುಂದೆ ಪಾರ್ಕಿಂಗ್‌ಗೆ ಹೊಂದಿಕೊಂಡಂತೆ ಹೊಸ ಮೆಟ್ಟಿಲುಗಳನ್ನು ಕಟ್ಟಬಹುದು. ಹಿಂದಿರುವ ಕೋಣೆಯ ಒಂದು ಭಾಗದ ಗೋಡೆ ಮಾತ್ರ ಒಡೆದು ಸ್ವಲ್ಪ ಹೊರಕ್ಕೆ ಕಟ್ಟಿದರೆ ಇನ್ನೂ ಎರಡು ಅಡಿ ದೊಡ್ಡ ರೂಮ್ ಆಗುತ್ತೆ’ ಎಂದು ಸಲಹೆ ಕೊಟ್ಟ. ಕೆಲ ದಿನಗಳ ಹಿಂದಷ್ಟೇ ಕಟ್ಟಿದ ಗೋಡೆಯನ್ನು ಒಡೆಯುವಾಗ ಲಕ್ಷ್ಮಿಗೆ ತನ್ನ ಹೃದಯಕ್ಕೆ ಹೊಡೆದ ಹಾಗೆ ಆಗುತ್ತಿತ್ತು. ‘ಇದೆಲ್ಲ ಮಾಮೂಲು ಬಿಡಿ ಮೇಡಂ’ ಎಂದ ಮೇಸ್ತ್ರಿ ಕೆಲವು ಮನೆಗಳಲ್ಲಿ ಪಿಲ್ಲರ್‌ಗಳನ್ನೂ ಒಡೆದು ಕೆಡವಿದ ಕತೆಯನ್ನೆಲ್ಲಾ ಹೇಳಿ ಲಕ್ಷ್ಮಿ ಅವರನ್ನು ಸಮಾಧಾನ ಪಡಿಸಿದರು.

ಇಷ್ಟಕ್ಕೇ ಮುಗಿಯಲಿಲ್ಲ. ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು. ಹೀಗೆ ಇನ್ನೂ ಹಲವರ ‘ಅಮೂಲ್ಯ’ ಸಲಹೆಗಳಿಂದ ಮನೆ ಅಂತೂ ಇಂತೂ ಒಂದು ರೂಪಕ್ಕೆ ಬಂತು. ಆದರೆ ಅಷ್ಟರಲ್ಲಿ ಸಾಲ ಪಡೆದ ಹಣ ಖಾಲಿಯಾಗಿ ಬೇರೊಂದು ಬ್ಯಾಂಕ್‌ನಿಂದ ಪಡೆದ ರೂ೧೦ ಲಕ್ಷ ಪರ್ಸನಲ್ ಲೋನ್ ಕೂಡ ಖಾಲಿಯಾಯಿತು!

ಆದರೆ ರಂಗಪ್ಪ ಪಕ್ಕದ ಲೇಔಟ್‌ನಲ್ಲಿ ಕಟ್ಟಿ ಕೊಟ್ಟ ಹಾಗೆ ತಮ್ಮ ಮನೆಗೆ ಯಾವ ರೂಪ ಲಾವಣ್ಯಗಳೂ ಇಲ್ಲ ಎಂದು  ದಂಪತಿಗೂ ಅನಿಸತೊಡಗಿತ್ತು.

ತಮ್ಮ ಮನಸ್ಸಿನ ತಳಮಳವನ್ನು ಸುಂದರ್ ರಾಜ್ ತಮ್ಮ ಹಿತೈಷಿ ರಾಮಪ್ಪನಿಗೆ ಹೇಳಿಕೊಂಡರು. ಮರುದಿನವೇ ರಾಮಪ್ಪನವರು ಸೈಟ್‌ಗೆ ಬಂದಾಗ ಅವರಿಗೆ ತಲೆ ಬುಡ ಅರ್ಥವಾಗಲಿಲ್ಲ. ಮನೆಯ ನೀಲ ನಕ್ಷೆಯನ್ನು ತರಿಸಿ ನೋಡಿದರೆ ಅದಕ್ಕೂ ಮನೆಗೂ ತಾಳ ಮೇಳವೇ ಇರಲಿಲ್ಲ. ಮನೆ ಪ್ರಾರಂಭಿಸುವ ಮೊದಲಿದ್ದ ನಕ್ಷೆಗೂ ಈಗ ಕಟ್ಟುತ್ತಿರುವ ಮನೆಗೂ ಯಾವ ಹೋಲಿಕೆಯೂ ಕಾಣಲಿಲ್ಲ. ರಾಮಪ್ಪನವರಿಗೆ ಯಾಕೋ ಮೇಸ್ತ್ರಿ ಬಗ್ಗೆ ಅನುಮಾನ ಬಂದು ಅವನನ್ನೇ ಕರೆಸಿ ಮನೆ ನಕ್ಷೆಯನ್ನು ತೋರಿಸಿ ಗದರಿಸಿಯೇ ಕೇಳಿದರು. ಪೆಚ್ಚು ಮೋರೆ ಹಾಕಿದ ರಂಗಪ್ಪಾ ಮಧ್ಯೆ ಮಧ್ಯೆ ಮನೆಯ ವಿನ್ಯಾಸ ಬದಲಾಗುತ್ತಾ ಬಂದಿದಕ್ಕೆ ಕಾರಣವನ್ನೂ ವಿವರಿಸಿದ. ‘ದಂಪತಿ ಹೇಳಿದಂತೆ ನಾನು ಕಟ್ಟುತ್ತಾ ಹೋದೆ’ ಅನ್ನೋ ಮಾತಾಡಿದನೇ ಹೊರತು ಇದರಲ್ಲಿ ತನ್ನ ಜವಾಬ್ದಾರಿಯೂ ಇತ್ತೆಂಬ ಸೂಕ್ಷ್ಮವನ್ನು ಯೋಚಿಸಲೇ ಇಲ್ಲ.

ಎಲ್ಲವನ್ನೂ ಯೊಚಿಸಿದ ರಾಮಪ್ಪ ಅಡುಗೆ ಮನೆಯ ವಿನ್ಯಾಸ, ಟೈಲ್ಸ್, ಮೂರು ಬಾತ್ ರೂಂಗಳಿಗೆ ಬೇಕಾದ ಖರ್ಚು ವೆಚ್ಚಗಳಲ್ಲದೇ ಪೇಂಟಿಂಗ್, ಎಲೆಕ್ಟ್ರಿಕ್ ಮುಂತಾದವನ್ನೆಲ್ಲಾ ಲೆಕ್ಕ ಹಾಕಿ ‘ಈ ಮನೆಯನ್ನು ಪೂರ್ಣ ಗೊಳಿಸಲು ಇನ್ನೂ ಕನಿಷ್ಠ ರೂ10 ಲಕ್ಷಗಳಾದರೂ ಬೇಕು ಸುಂದರ್’ ಎಂದಾಗ ನಿಂತ ನೆಲವೇ ಕುಸಿದ ಹಾಗೆ ಅನ್ನಿಸ್ತು ಸುಂದರ್ ರಾಜ್ ಅವರಿಗೆ.

ರೂ20 ಲಕ್ಷ ಕೊಟ್ಟು ಖರೀದಿಸಿದ ಸೈಟ್ ನಲ್ಲಿ ರೂ40 ಲಕ್ಷ ಹಾಕಿ ಕಟ್ಟಿದ ಮನೆಗೆ ಇನ್ನೂ ರೂ10 ಲಕ್ಷ ಹೊಂದಿಸಲು ಯಾವ ದಾರಿಯೂ ಕಾಣದಾಯಿತು. ಅಷ್ಟಾಗಿಯೂ ಆ ಮನೆ ತಮ್ಮ ನಿರೀಕ್ಷೆಯಂತೆ ಬರುವುದು ಸಾಧ್ಯವಿಲ್ಲ ಅನ್ನೋದು ಆಗಲೇ ಸ್ಪಷ್ಟವಾಗಿತ್ತು! ಮನೆಗೆ ಬಂದು ಎಲ್ಲಾ ರೀತಿಯಿಂದಲೂ ಯೋಚಿಸಿ ತಮ್ಮ ಕನಸಿನ ಆ ಮನೆಯನ್ನೂ ಯಥಾ ಸ್ಥಿತಿಯಲ್ಲಿ ಮಾರಿ ಕೈತೊಳೆದುಕೊಳ್ಳುವ ನಿರ್ಧಾರಕ್ಕೆ ಬಂದರು ದಂಪತಿ...

ಈ ನೈಜ ಘಟನೆ ಕೇಳಿದ ಎಲ್ಲರಿಗೂ ಸ್ಪಷ್ಟವಾಗಿ ಅರ್ಥ ಆಗೋದು ಇಷ್ಟೇ. ಮನೆ ಕಟ್ಟುವ ಮುನ್ನ ವಿನ್ಯಾಸ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದು.

ಮೊದಲಿಗೆ ಕೇಳಬೇಕಿದ್ದ ತಜ್ಞರ ಸಲಹೆಯನ್ನು ಕೊನೆಯಲ್ಲಿ ಕೇಳಿದ್ದು. ಮನೆಗೆ ಬೇಕಾಗುವ ಪ್ರತಿ ವಸ್ತುವನ್ನೂ ಗಣನೆಗೆ ತೆಗೆದುಕೊಳ್ಳದ ತಪ್ಪು ಅಂದಾಜು ವೆಚ್ಚ. ಕಂಡ ಕಂಡವರ ಸಲಹೆ ಪಡೆದು ಗೋಡೆ ಮೆಟ್ಟಿಲುಗಳನ್ನು ಒಡೆದು ಕಟ್ಟಿದ್ದು. ರಂಗಪ್ಪ ಮೇಸ್ತ್ರಿ ಹಲವಾರು ಸುಂದರ ಮನೆಗಳನ್ನೂ ಕಟ್ಟಿದ ಅನುಭವಸ್ಥನಾದರೂ ಯಾವ ಮನೆಯನ್ನು ಸ್ವತಃ ವಿನ್ಯಾಸ ಮಾಡಿದವನಲ್ಲ ಎಂಬುದು. ಇಲ್ಲಿ ರಂಗಪ್ಪ ಮೋಸಗಾರ ಅಂತೇನೂ ಅಲ್ಲ. ಆಗ್ಗಾಗ್ಗೆ ಸಲಹೆಯನ್ನೇನೋ ಕೊಡುತ್ತಿದ್ದ. ಆದರೆ ಇಡೀ ಮನೆಯನ್ನು ಒಟ್ಟಾಗಿ ಯೋಚಿಸಿ ಯೋಜಿಸುವ ಶಕ್ತಿ ಇಲ್ಲದ ಮುಗ್ಧ ಮನುಷ್ಯ ಆತ.

ಹೊಸ ಮನೆ ಕಟ್ಟುವಾಗ ಎಲ್ಲರ ಸಲಹೆಗಳ ಅವಶ್ಯಕತೆ ಖಂಡಿತಾ ಇದೆ. ನಮ್ಮ ಅವಶ್ಯಕತೆ, ಅಭಿರುಚಿ, ನಮ್ಮ ಶಕ್ತಿ, ಊರಿನ ಹವಾಗುಣ ಮುಂತಾದ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ಅಭಿರುಚಿಗೆ ಹೊಂದುವ ಕೆಲವು ಮನೆಗಳನ್ನಾದರೂ ನಾಲ್ಕಾರು ಬಾರಿ ಹೋಗಿ ನೋಡಬೇಕು. ಸಾಧ್ಯವಾದರೆ ಅಂತಹ ಮನೆಗಳ ಕೆಲವು ಫೋಟೊಗಳನ್ನು ತೆಗೆದು ಇಟ್ಟುಕೊಳ್ಳುವುದು ಇನ್ನೂ ಉಪಯುಕ್ತ. ಅದರ ನಂತರವೇ ಆರ್ಕಿಟೆಕ್ಟ್ ಅಥವಾ ಎಂಜಿನಿಯರ್ ಗಳನ್ನು ಭೇಟಿಮಾಡಿ ನಮ್ಮ ಅಭಿರುಚಿ ಅವಶ್ಯಕತೆ ಹಾಗೂ ಶಕ್ತಿಯನ್ನು ಸ್ಪಷ್ಟವಾಗಿ ವಿವರಿಸಬೇಕು. ಮನೆಯ ವಿನ್ಯಾಸಕ್ಕೆ ನಮ್ಮ ಹಣ ಮಾತ್ರವಲ್ಲಾ, ಜೊತೆಗೆ ನಮ್ಮ ಸಮಯವನ್ನೂ, ಆಸಕ್ತಿಯನ್ನು ವಿನಿಯೋಗಿಸಬೇಕು. ಹಣದ ಹೊಂದಾಣಿಕೆಯಾದ ತಕ್ಷಣ ಮನೆ ಕಟ್ಟಲು ಆರಂಭಿಸುವ ಬದಲು ಕನಿಷ್ಠ ಮೂರರಿಂದ ಆರು ತಿಂಗಳ ಕಾಲ ಸ್ಪಷ್ಟವಾದ ವಿನ್ಯಾಸಕ್ಕೆ ಮುಂತಾದ ಸಿದ್ಧತೆಗಳಿಗೆ ಕಾಲ ಮೀಸಲಿಡಬೇಕು. ನಮ್ಮ  ಸ್ಪಷ್ಟವಾದ ಅಭಿರುಚಿಯನ್ನು, ಆಸಕ್ತಿಗಳನ್ನು ಹಾಗೂ ಸಿದ್ಧತೆಗಳನ್ನು ಖಂಡಿತವಾಗಿ ಆರ್ಕಿಟೆಕ್ಟ್ ಅಥವಾ ಎಂಜಿನಿಯರ್ ಮೆಚ್ಚುತ್ತಾರೆ ಹಾಗೂ ನಮ್ಮ ಮನೆಯ ವಿನ್ಯಾಸಕ್ಕೆ ಅವರ ಸಹಾಯವು ಸುಲಭವಾಗುತ್ತದೆ ಕೂಡಾ.

ಈಗಂತೂ ಎಲ್ಲರೂ ಮನೆಯ ವಿನ್ಯಾಸವನ್ನೂ ಕಂಪ್ಯೂಟರ್ ಸಹಾಯದಿಂದ ಮಾಡುತ್ತಿರುವುದರಿಂದ, ಇನ್ನೂ ಹೆಚ್ಚಿನ ನಿಖರತೆಯನ್ನು ನಿರೀಕ್ಷಿಸಬಹುದು.

ಉದಾ: ನಮ್ಮ ಮನೆಯ ಹಾಲಿನ ಅಳತೆ 10 ಅಡಿ 3 ಇಂಚು X 14ಅಡಿ 6 ಇಂಚು ಎಂದಿದ್ದಾಗ ಅಲ್ಲಿಗೆ ನಾವು ಬಳಸಲು ಹೊರಟಿರುವ ಟೈಲ್ಸ್ ಯಾವ ಸೈಜಿನದು (10 X10 ಇಂಚೋ, 1X 1ಅಡಿಯೋ ಅಥವಾ 2X2 ಅಡಿಯೋ) ಎಂಬುದನ್ನೂ ವಿನ್ಯಾಸದ ಸಮಯದಲ್ಲೇ ನಿರ್ಧರಿಸಿ ಕೊನೆಯಲ್ಲಿ ಉಳಿಯುವ 3 ಇಂಚು ಟೈಲ್ಸ್ ಕತ್ತರಿಸಿ ಕುಳ್ಳರಿಸುವ ಬದಲು ಆ ಹಾಲ್ ಅಳತೆಯನ್ನೆ 10X15 ಅಡಿ ಅಥವಾ 12X 12 ಅಡಿ ಆಗಿ ಬದಲಾಯಿಸಲು ಸಾಧ್ಯವಿದೆಯೇ ಅಂತಲೂ ನೋಡಿ ತೀರ್ಮಾನಿಸಬಹುದು. ಹೀಗೆ ವಾಷ್ ಬೇಸಿನ್ ಮುಂತಾದ ವಿವರಗಳನ್ನು ಮನೆ ವಿನ್ಯಾಸದ ಸಮಯದಲ್ಲೇ ಹೋಗಿ ನೋಡಿ ವಿಚಾರಿಸಿದಾಗ ಅದರ ಬಣ್ಣ ಅಳತೆ ಹಾಗೂ ಬೆಲೆ ನಮ್ಮ ಈ ಮನೆಗೆ ಹೊಂದಿಕೊಳ್ಳಬಲ್ಲದೇ ಎನ್ನುವುದು ಈ ವಿನ್ಯಾಸದ ಸಮಯದಲ್ಲೇ ನಿರ್ಧರಿಸಿ ಸ್ಪಷ್ಟ ಪಡಿಸಿಕೊಳ್ಳಬಹುದು.

ನಮ್ಮ ಮನೆಯ ಉಪಯೋಗ ನಮಗೆ ಮನೆ ಒಳಾಂಗಣದಲ್ಲೇ ಆದರೂ  ಅದು ಹೊರಗಿನಿಂದ ನೋಡಲು ಹೀಗೆ ಇರಬೇಕು ಎಂಬ ಬಗ್ಗೆ ಎಲ್ಲರಲ್ಲೂ ಒಂದು ರೀತಿಯ ಅಸ್ಪಷ್ಟ ಕಲ್ಪನೆ ಮನಸ್ಸಿನಲ್ಲಿಯೇ ರೂಪುಗೊಂಡಿರುತ್ತದೆ. ಮನೆಯ ಒಟ್ಟು ಪರಿದಿ ಹಾಗೂ ಮುಂಭಾಗದ ಬಾಗಿಲು, ಕಿಟಕಿ, ಬಾಲ್ಕನಿ ಹಾಗೂ ಗೋಡೆಗೆ ಹೊದಿಸುವ ಕ್ಲಾಡಿಂಗ್ ಮುಂತಾದ ಎಲ್ಲವನ್ನೂ ಮನೆಯ ಪ್ಲಾನ್ ಜೊತೆ ಜೊತೆಗೆ ಯೋಚಿಸಲು ಆರಂಭಿಸುವುದು ಒಳ್ಳೆಯದು. ಕೆಲವು ಸಂದರ್ಭಗಳಲ್ಲಿ ಹೊರಗಿನ ವಿನ್ಯಾಸಕ್ಕನುಗುಣವಾಗಿ ಕಿಟಕಿಯ ಅಳತೆ ಹಾಗೂ ಇಡುವ ಜಾಗಗಳನ್ನೇ ಬದಲಾಯಿಸಬೇಕಾಗಿ ಬರಬಹುದು. ಈಗಿಗ ಪ್ಲಾನ್ ಮಾಡಿದ ನಂತರ ಮನೆಯ 3ಡಿ ಚಿತ್ರವನ್ನೂ ಕಲಾವಿದರಿಂದ ಮಾಡಿಸಿ ನೋಡಿದರೆ ಮನೆಯ ಸಂಪೂರ್ಣ  ಕಲ್ಪನೆ ನಮ್ಮ ಕೈವಶವಾಗತ್ತದೆ.

ಹೀಗೆ ಸಿದ್ಧಗೊಂಡ ವಿನ್ಯಾಸದ ವಿವರ ನಮ್ಮ ಬಳಿ ಸ್ಪಷ್ಟವಾಗಿ ಇದ್ದಾಗ ಬಂದು ಹೋಗುವ ನಮ್ಮ ಮಿತ್ರರಿಗಾಗಲಿ ಅಥವಾ ಬಂಧುಗಳಿಗಾಗಲಿ  ಅನವಶ್ಯಕವಾದ ಸಲಹೆ ಕೊಡುವ ಸಾಧ್ಯತೆ ಕಮ್ಮಿ. ನಾವು ಕಟ್ಟಲು ಹೊರಟಿರುವ ರೂ40 ಲಕ್ಷದಿಂದ ರೂ-50 ಲಕ್ಷದ ಮನೆಗೆ ಕೇವಲ ವಿನ್ಯಾಸಕ್ಕೆ ಕೆಲವು ತಿಂಗಳುಗಳ ಸಮಯ ಹಾಗೂ ಲಕ್ಷಗಟ್ಟಲೆ ಹಣ ವ್ಯಯವಾದರೂ ಅದು ಮುಂದಾಗಬಹುದಾದ ಎಡವಟ್ಟು ಗಳಿಗೆ ಹೋಲಿಸಿದಲ್ಲಿ ಉಪಯುಕ್ತವೇ. ಹೀಗೆಲ್ಲ ಮನೆಯ ವಿನ್ಯಾಸ ಸಿದ್ಧವಾದ ಮೇಲೆ ಇದೇ ರಂಗಪ್ಪ ಮೇಸ್ತ್ರಿ ನಮ್ಮ ಕನಸಿನ ಮನೆಯನ್ನು ನಮ್ಮ ನಿರೀಕ್ಷೆಗೆ ಮೀರಿ ಸುಂದರವಾಗಿ ಕಟ್ಟಿ ಕೊಡಬಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT