ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 499 ಅಂಶ ಇಳಿಕೆ

ತಿಂಗಳಲ್ಲೇ ಗರಿಷ್ಠ ಮಟ್ಟದ ಕುಸಿತ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ಶುಕ್ರವಾರದ ವಹಿವಾಟಿನಲ್ಲಿ 29,844 ಅಂಶಗಳ ಹೊಸ ಮಟ್ಟಕ್ಕೆ ತಲುಪಿತ್ತು. ಆದರೆ, ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದಿಂದ ಷೇರುಗಳ ಮಾರಾಟಕ್ಕೇ ಆದ್ಯತೆ ನೀಡಿದ್ದರಿಂದ ದಿಢೀರ್‌ ಉಂಟಾದ ಒತ್ತಡದಲ್ಲಿ 499 ಅಂಶ­ಗಳಷ್ಟು ಭಾರಿ ಕುಸಿತ ಕಂಡಿತು. ನಂತರ 29,183 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಇದು 2015ರಲ್ಲಿ ಈವರೆಗಿನ ವಹಿವಾಟಿನಲ್ಲಿ ದಾಖಲಾಗಿ­ರುವ ದಿನವೊಂದರ ಎರಡನೇ ಅತಿ ದೊಡ್ಡ ಸೂಚ್ಯಂಕ ಕುಸಿತವಾಗಿದೆ.
ಬ್ಯಾಂಕಿಂಗ್‌, ಫಾರ್ಮಾ ಮತ್ತು ಆಟೊ ವಲಯದ ಷೇರುಗಳಲ್ಲಿ ಲಾಭ ಗಳಿಕೆ ಉದ್ದೇಶದಿಂದ ಹೂಡಿಕೆದಾರರು ಮಾರಾಟಕ್ಕೆ ಮುಗಿಬಿದ್ದಿದ್ದರ ಫಲವಾಗಿ ಸಂವೇದಿ ಸೂಚ್ಯಂಕ ಈ ಪ್ರಮಾಣದ ಕುಸಿತ ಅನುಭವಿಸಿದೆ.

ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ತಗ್ಗಿದೆ. ಒಂದು ಡಾಲರ್‌ಗೆ ₨62ರಂತೆ ವಿನಿಮಯಗೊಂಡಿದೆ. ಇದೂ ಕೂಡಾ ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ.

ಇದಕ್ಕೂ ಮುನ್ನ, ದಿನದ ಆರಂಭ­ದಲ್ಲಿ  ಸೂಚ್ಯಂಕ ಸಾರ್ವ­ಕಾಲೀನ ದಾಖಲೆ ಮಟ್ಟವಾದ 29,844 ಅಂಶಗಳನ್ನು ತಲುಪಿತ್ತು.
ಬಿಎಸ್‌ಇ ಸಂವೇದಿ ಸೂಚ್ಯಂಕವು ಕಳೆದ 10 ವಹಿವಾಟುಗಳಲ್ಲಿ 2,346 ಅಂಶಗಳಷ್ಟು ಏರಿಕೆ­ ದಾಖಲಿಸಿದೆ.

ನಿಫ್ಟಿಯಲ್ಲೂ ಕುಸಿತ
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಸೂಚ್ಯಂಕ ‘ನಿಫ್ಟಿ’ ಕೂಡಾ ಆರಂಭದ ವಹಿವಾಟಿನಲ್ಲಿ 8,996 ಅಂಶಗಳಿಗೆ ಏರಿಕೆ ಕಾಣುವ ಮೂಲಕ ಸಾರ್ವಕಾಲೀನ ಗರಿಷ್ಠ ಮಟ್ಟಕ್ಕೆ ತಲುಪಿತ್ತು.

ನಂತರದಲ್ಲಿ 8,809 ಅಂಶಗಳಿಗೆ ಕುಸಿದು ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿ­ನಲ್ಲಿ ‘ನಿಫ್ಟ’ 143 ಅಂಶಗಳಷ್ಟು ಹಾನಿ ಅನುಭವಿಸಿದೆ.

ಬ್ಯಾಂಕಿಂಗ್‌ ವಲಯದ ಷೇರುಗಳು ಶೇ 3ಕ್ಕೂ ಅಧಿಕ ನಷ್ಟ ಅನುಭವಿಸಿ­ದವು. ಗ್ರಾಹಕ ಬಳಕೆ ವಸ್ತುಗಳು ಮತ್ತು  ವಾಹನ ಉದ್ಯಮ ವಲಯದ ಷೇರುಗಳು ಸಹ ಹೆಚ್ಚಿನ ಹಾನಿ ಅನುಭವಿಸಿದವು. ಉಳಿದಂತೆ ಪ್ರಧಾನ ಸರಕುಗಳು, ಲೋಹ ಹಾಗೂ ತೈಲ ಮತ್ತು ಅನಿಲ ಕಂಪೆನಿಗಳ ಷೇರುಗಳು ನಷ್ಟ ಅನುಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT