ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ ಕಿಂಗ್ಸ್‌–ರಾಯಲ್ಸ್‌ ಪೈಪೋಟಿ

ಕ್ರಿಕೆಟ್‌: ವಿಶ್ವಾಸದಲ್ಲಿ ದೋನಿ ಪಡೆ, ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಲು ಸೆಣಸಾಟ
Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಸಮಾನ ಗೆಲುವು ಮತ್ತು ಸಮ ಪಾಯಿಂಟ್‌ಗಳನ್ನು ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್‌ ತಂಡಗಳು ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಬುಧವಾರ ಮುಖಾಮುಖಿಯಾಗಲಿವೆ.

ಎರಡು ಸಲ ಐಪಿಎಲ್‌ ಚಾಂಪಿಯನ್‌ ಆಗಿರುವ ಸೂಪರ್‌ ಕಿಂಗ್ಸ್ ತಂಡ ಸೋಮವಾರ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ 93 ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ. ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಸಾಧಿಸಿವೆ. ದೋನಿ ಪಡೆ ಮೊದಲ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲು ಕಂಡಿತ್ತು.

ರಾಯಲ್ಸ್‌ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ಜಯ ಪಡೆದು, ಎರಡನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ವಿರುದ್ಧ ನಿರಾಸೆಗೆ ಒಳಗಾಗಿತ್ತು. ಆದ್ದರಿಂದ ಎರಡು ತಂಡಗಳ ಬಳಿ ಈಗ ತಲಾ ಎರಡು ಪಾಯಿಂಟ್‌ಗಳಿವೆ.

ಡ್ವೇನ್‌ ಸ್ಮಿತ್‌, ಬ್ರೆಂಡನ್‌ ಮೆಕ್ಲಮ್‌, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್‌ ಮತ್ತು ದೋನಿ ಅವರನ್ನೊಳಗೊಂಡ ಸೂಪರ್‌ ಕಿಂಗ್ಸ್

ಬ್ಯಾಟಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿದೆ. ಈ ತಂಡ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರೂ 205 ರನ್‌ ಕಲೆ ಹಾಕಿದ್ದನ್ನು ಮರೆಯುವಂತಿಲ್ಲ. ಡೇರ್‌ಡೆವಿಲ್ಸ್‌ ವಿರುದ್ಧವೂ ಸವಾಲಿನ ಮೊತ್ತ ಗಳಿಸಿತ್ತು. ಕೊನೆಯ ಓವರ್‌ಗಳಲ್ಲಿ ಅಬ್ಬರಿಸುವ ದೋನಿ ತಂಡದ ಪ್ರಮುಖ ಬಲ ಎನಿಸಿದ್ದಾರೆ. ರೈನಾ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು.

ಸೂಪರ್‌ ಕಿಂಗ್ಸ್‌ ತಂಡ ಬೌಲಿಂಗ್‌ನಲ್ಲಿಯೂ ಬಲಿಷ್ಠವಾಗಿದೆ. ಡೆವಿಲ್ಸ್‌ ತಂಡವನ್ನು ಸೋಮವಾರ 84 ರನ್‌ಗೆ ಕಟ್ಟಿ ಹಾಕಿದ್ದು ಇದಕ್ಕೆ ಸಾಕ್ಷಿ. ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಆರ್‌. ಅಶ್ವಿನ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
2008ರ ಚೊಚ್ಚಲ ಐಪಿಎಲ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ರಾಯಲ್ಸ್‌ ಕೂಡಾ ಬಲಿಷ್ಠವಾಗಿದೆ. ಅಜಿಂಕ್ಯ ರಹಾನೆ, ಸ್ಟುವರ್ಟ್‌ ಬಿನ್ನಿ, ಕಿಂಗ್ಸ್‌ ಇಲೆವೆನ್‌ ವಿರುದ್ಧ ಅರ್ಧಶತಕ ಸಿಡಿಸಿದ್ದ ಶೇನ್‌ ವಾಟ್ಸನ್‌, ಯುವ ಆಟಗಾರ ಸಂಜು ಸ್ಯಾಮ್ಸನ್‌ ರಾಯಲ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು.

ಕಿಂಗ್ಸ್‌ ಇಲೆವೆನ್‌ ಎದುರಿನ ಪಂದ್ಯದಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿರುವ ಧವಳ್‌ ಕುಲಕರ್ಣಿ, ಜೇಮ್ಸ್ ಫಾಕ್ನರ್‌, ರಜತ್‌ ಭಾಟಿಯಾ ಆ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT