ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ರಂಗ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಉಳ್ಳವರ ತಿಜೋರಿಯಲ್ಲಿನ ಸಂಪತ್ತು ಲೂಟಿ ಮಾಡಿ, ಇಲ್ಲದವರಿಗೆ ಹಂಚುವ ‘ರಾಬಿನ್ ಹುಡ್’ನಂತೆ ಈ ರಂಗ. ಸೂಟ್‌ಕೇಸ್‌ಗಟ್ಟಲೆ ಕಪ್ಪು ಹಣ ಎಲ್ಲಿ ಕೈ ಬದಲಾಗು­ತ್ತದೋ, ಅಲ್ಲಿಗೆ ನುಗ್ಗಿ ಅದನ್ನು ಹೊತ್ತೊಯ್ದು ಸಮಾ­ಜೋಪ­ಯೋಗಿ ಕೆಲಸಕ್ಕೆ ನೀಡುವ ಹೃದಯವಂತ. ದಾರಿ ಏನೇ ಇರಲಿ; ಆತ ಮಾಡುತ್ತಿರುವುದು ಒಳ್ಳೆಯ ಕೆಲಸವಲ್ಲವೇ? ಅದಕ್ಕಾಗಿ ಆತ ‘ಸೂಪರ್‌ ರಂಗ’!

ತೆಲುಗಿನ ‘ಕಿಕ್’ ಚಿತ್ರದ ರೂಪಾಂತರ ಈ ‘ಸೂಪರ್ ರಂಗ’. ಇನ್ನೊಬ್ಬರಿಗೆ ನೆರವು ನೀಡುವುದರಲ್ಲೇ ‘ಕಿಕ್’ ಇದೆ ಎಂದು ಬಲವಾಗಿ ನಂಬುವ ರಂಗ, ಹಲವು ಸಾಹಸಗಳನ್ನು ಮಾಡಿ ಅದರ ಜತೆಗೆ ಉಚಿತವಾಗಿ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳುವ ಹುಂಬ. ಸಿನಿಮಾದುದ್ದಕ್ಕೂ ರಂಗನ ಜತೆಗೆ ಪ್ರೇಕ್ಷಕನನ್ನು ಕಾಡುವ ‘ಕಿಕ್‌’, ಕೊನೆಕೊನೆಗೆ ಪ್ರೇಕ್ಷಕ ಕುರ್ಚಿ ತುದಿಗೆ ಕೂತು ಚಡಪಡಿಸುವಂತೆ ಮಾಡಿಬಿಡುತ್ತದೆ.

ಕೈತುಂಬ ಸಂಬಳ ಕೊಡುವ ಉದ್ಯೋಗದಲ್ಲಿ ಕಿಕ್ ಸಿಗುತ್ತಿಲ್ಲ ಎಂದು ನೌಕರಿ ಬದಲಿಸುವ ರಂಗನ ಬಯಕೆಗೆ ಆತನ ಅಪ್ಪ ಅಡ್ಡ ಬರುವುದೇ ಇಲ್ಲ. ಯಾಕೆಂದರೆ ಇದು ಸಿನಿಮಾ! ಪ್ರಿಯತಮೆ ಭಾರತದಿಂದ ಮಲೇಷ್ಯಾಕ್ಕೆ ಹೋದಾಕ್ಷಣ ಅಲ್ಲಿಗೇ ಹಾರಿ ಬಿಡುವ ರಂಗನ ಉದ್ದೇಶ ಬೇರೆಯೇ ಆಗಿರುತ್ತದೆ. ಆದರೆ ಅದು ಪ್ರೇಕ್ಷಕನ ಗಮನಕ್ಕೆ ಬರುವ ಹೊತ್ತಿಗೆ ಸಿನಿಮಾ ಮುಕ್ತಾಯದ ಹಂತ ತಲುಪಿರುತ್ತದೆ. ಕುತೂಹಲ ಹೆಚ್ಚಿಸುತ್ತಲೇ ಹೋಗುವ ಕ್ಲೈಮ್ಯಾಕ್ಸ್‌ಗೆ ಹೃದಯ ಕಲಕುವ ಮತ್ತು ತಮಾಷೆ ದೃಶ್ಯಗಳನ್ನು ಹದವಾಗಿ ಬೆರೆಸಿರುವುದು ‘ರಂಗ’ನ ಸ್ಪೆಷಲ್.

ಭ್ರಷ್ಟಾಚಾರ, ಪುಢಾರಿಗಳ ವಂಚಕ ಸ್ವಭಾವವನ್ನು ಬಯಲಿಗೆ ಎಳೆಯುವುದಕ್ಕಿಂತ ಜನರಿಗೆ ನೆರವಾಗುವ ಬಗೆ ಹೇಗೆಂಬ ‘ಹೊಸ ವಿಧಾನ’ವನ್ನು ಪಕ್ಕಾ ಮನರಂಜನೆ ಶೈಲಿಯಲ್ಲಿ ನಿರೂಪಿಸಿದ್ದಾರೆ ನಿರ್ದೇಶಕ ಸಾಧು ಕೋಕಿಲ. ಪ್ರೇಮದಾಟಕ್ಕೆ ಕೊಟ್ಟಷ್ಟೇ ಆದ್ಯತೆಯನ್ನು ಹೊಡೆದಾಟಕ್ಕೂ ನೀಡಲಾಗಿದೆ. ಉಪೇಂದ್ರ ಅವರ ಮ್ಯಾನರಿಸಂ, ಸಂಭಾಷಣೆಯನ್ನು ಇಷ್ಟಪಡುವವರಿಗೆ ಇಡೀ ಸಿನಿಮಾ ಇಷ್ಟವಾಗುತ್ತದೆ. ಏನನ್ನಾದರೂ ಸಾಧಿಸಬೇಕು ಎಂಬ ಬಿಸಿರಕ್ತದ ಯುವಕನ ಪಾತ್ರಕ್ಕೆ ಅವರ ಆಯ್ಕೆ ಸರಿಯಾಗಿದೆ. ಲೀಲಾಜಾಲದಿಂದ ಕೋಟಿಗಟ್ಟಲೆ ಹಣ ಲೂಟಿ ಮಾಡುವಷ್ಟೇ ಸುಲಭವಾಗಿ, ಹೃದಯಂಗಮ ಸನ್ನಿವೇಶದಲ್ಲೂ ಅಭಿನಯಿಸಿ ಮೇಲುಗೈ ಸಾಧಿಸಿದ್ದಾರೆ. ನಾಯಕಿಯರಾದ ಕೃತಿ ಕರಬಂಧ ಹಾಗೂ ಪ್ರಿಯಾಂಕಾ ರಾವ್ ಗ್ಲಾಮರ್‌ಗೆ ಸೀಮಿತ. ಆಗಾಗ್ಗೆ ಬಂದು ಸಂಭಾಷಣೆ ಒಪ್ಪಿಸುವ ಗೊಂಬೆಗಳಿದ್ದಂತೆ. ಪೊಲೀಸ್‌ ಅಧಿಕಾರಿಯಾಗಿ ರಘು ಮುಖರ್ಜಿ ಆಯ್ಕೆ ‘ಪರ್ಫೆಕ್ಟ್’ ಅನ್ನುವ ಹಾಗಿದೆ.

ಸಿನಿಮಾದ ಇನ್ನೊಬ್ಬ ಹೀರೊ ಛಾಯಾಗ್ರಾಹಕ ಅಶೋಕ್ ಕಶ್ಯಪ್. ಸ್ಲೊವೇನಿಯಾದ ಹಿಮ ಪರ್ವತಗಳನ್ನೂ ಮಲೇಷ್ಯಾದ ಗಗನಚುಂಬಿ ಕಟ್ಟಡಗಳನ್ನೂ ಸೆರೆಹಿಡಿದು ಸಿನಿಮಾಕ್ಕೊಂದು ಮೋಹಕ ಛಾಯೆ ಸೃಷ್ಟಿಸಿದ್ದಾರೆ. ಒಂದೊಂದು ದೃಶ್ಯವನ್ನೂ ಚೆಂದಗೊಳಿಸುವಲ್ಲಿ ಅವರ ಶ್ರಮವಿದೆ. ಹಾಡುಗಳ ಒಂದು ಸಾಲು ಕೂಡ ಕೇಳದಷ್ಟು ಅಬ್ಬರಿಸುವ ಸಂಗೀತ ಅರ್ಜುನ್ ಜನ್ಯ ಅವರದು. ಹಾಡು ಕೇಳದಿದ್ದರೂ ಅಡ್ಡಿಯಿಲ್ಲ; ನೋಡುವುದನ್ನು ಮಾತ್ರ ತಪ್ಪಿಸಿಕೊಳ್ಳಬಾರದು. ಹಾಗಿದೆ ಅಶೋಕ್ ಕ್ಯಾಮೆರಾ ಕೈಚಳಕ. ಗುರುಪ್ರಸಾದ್‌ ಸಂಭಾಷಣೆಯ ಮೊನಚು ಉಪೇಂದ್ರ ಅವರಿಗಷ್ಟೇ ಸೀಮಿತವಾದಂತಾಗಿದೆ. ಸಾಧು ಕೋಕಿಲ, ರಂಗಾಯಣ ರಘು, ಬುಲೆಟ್‌ ಪ್ರಕಾಶ್ ಅವರ ಕಾಮಿಡಿ ಟ್ರ್ಯಾಕ್ ನಗೆಗಡಲಲ್ಲಿ ತೇಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT