ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಲ್ಲದ ಸಂಗೀತ

Last Updated 13 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಳೆ, ಗಾಳಿ, ಬಿಸಿಲಿನಿಂದ ಬಚಾವಾಗಲು  ದಿನನಿತ್ಯ ಇವರ ಹೆಣಗಾಟ, ಎಲ್ಲೆಲ್ಲೋ ಬಿದ್ದ ಪ್ಲಾಸ್ಟಿಕ್‌, ಗೋಣಿ ಹೆಕ್ಕಿ ತಂದು ಗುಡಿಸಲಿಗೆ ತೇಪೆ ಹಾಕಿದರೆನೇ ತಲೆ ಮೇಲೊಂದು ಸೂರು. ಭವಿಷ್ಯದ  ಗೊತ್ತು ಗುರಿಯಿಲ್ಲದ ಗುಳಿಬಿದ್ದ ಕಣ್ಣುಗಳು, ಯಾರು ಬಂದು ಯಾವಾಗ ಎತ್ತಂಗಡಿ ಮಾಡಿಬಿಟ್ಟಾರೋ ಎಂಬ ಭಯದ ನೆರಳು. ಹರಿದ ಬಟ್ಟೆ, ಎಣ್ಣೆ ಕಾಣದ ಕೆದರಿದ ತಲೆಗೂದಲು. ಆದರೆ ಇವರ ಕೈ ಸ್ಪರ್ಶಿಸಿದೊಡನೇ ಒಣಗಿದ ಚರ್ಮದಲ್ಲೂ ಸಂಗೀತ ನಿನಾದ ಹೊಮ್ಮುತ್ತದೆ.

ಇವರೇ ‘ಚೆನ್ನ ದಾಸರು’. ಚೆಂದದ ಬದುಕು ಕಾಣದ ಈ ಚೆನ್ನದಾಸರ ಕೈಚಳಕದಿಂದ ಹೊರಹೊಮ್ಮುವ ನಾದ ಮಾತ್ರ ಚೆನ್ನವೋ ಚೆನ್ನ. ಮೂಲತಃ ಕೊಪ್ಪಳ ಜಿಲ್ಲೆಯವರಾದ ಈ ಮಂದಿ, ಸುಮಾರು ಎರಡು ಶತಮಾನಗಳ ಹಿಂದೆ ಹುಬ್ಬಳ್ಳಿಯ ಕುಸುಗಲ್‌ನಲ್ಲಿ ಬಂದು ನೆಲೆಸಿದ್ದಾರೆ. ಮೂರನೇ ತಲೆಮಾರಿಗೂ ಇನ್ನು ಆಡಳಿತದಿಂದ ಸೂರಿನ ನೆರವು ಸಿಕ್ಕಿಲ್ಲ.  ಕುಸುಗಲ್‌ ಹೊರವಲಯದಲ್ಲಿರುವ ದೇವಸ್ಥಾನದ ಮುಂದೆ ವಾಸವಾಗಿದ್ದ ಈ ಜನರನ್ನು ಖಾಲಿ ಮಾಡಿಸಲಾಗಿದೆ. ಕುಸುಗಲ್‌ನ ಮುಖ್ಯರಸ್ತೆಯ ಪಕ್ಕದ ಜಾಗವೇ ಸದ್ಯ ಅವರ ಪಾಲಿನ ಅರಮನೆ. ತಬಲಾ, ಹಾರ್ಮೋನಿಯಂ ಮತ್ತು ಡಗ್ಗಾ ತಯಾರಿಸಿ ಮಾರಾಟ ಮಾಡಿ ಬದುಕು ಸಾಗಿಸುವ ಅವರಿಗೆ ಮತದಾನದ ಹಕ್ಕು, ಆಧಾರ್ ಕಾರ್ಡ್‌, ನ್ಯಾಯಬೆಲೆ ಅಂಗಡಿಯ ಕಾರ್ಡ್‌ ನೀಡಲಾಗಿದೆ. ಆದರೆ ಮೂಲ ಸೌಕರ್ಯದಿಂದ ಇವರು ಸಂಪೂರ್ಣ ವಂಚಿತರು. ಕುಡಿಯಲು ನೀರು ಇಲ್ಲ, ವಿದ್ಯುತ್‌ ಬೆಳಕು ಕಂಡೇ ಇಲ್ಲ.

‘ಅಕ್ಕಪಕ್ಕದ ಊರಿನಲ್ಲಿ ಯಾರಾದರೂ ಸತ್ತರೆ, ಶುಭ ಸಮಾರಂಭಗಳಿಗೆ ನಾವು ಬೇಕು. ವೋಟಿಗಾಗಿ ಅದಕ್ಕೆ ಅಗತ್ಯ ಇರುವಷ್ಟು ಅನುಕೂಲ ಮಾತ್ರ ಕಲ್ಪಿಸಲಾಗಿದೆ. ಚುನಾವಣೆ ವೇಳೆ ನಮ್ಮ ಕಡೆ ಮುಖ ಮಾಡುವ ರಾಜಕಾರಣಿಗಳು ನಂತರ ಇತ್ತ ಸುಳಿಯುವುದೇ ಇಲ್ಲ. ಕತ್ತಲಿನ ಬದುಕೇ ನಮ್ಮದಾಗಿದೆ, ನಮ್ಮ ಹಣೆಬರಹವೇ ಇಷ್ಟು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ 80 ವರ್ಷದ ಕಲ್ಲಪ್ಪ. ಶಾಲೆ ಕಲಿಯದ ಈ ಜನರಿಗೆ ತಬಲಾ, ಹಾರ್ಮೋನಿಯಂ ತಯಾರಿಸುವುದು ಮಾತ್ರ ಹಾಲು ಕುಡಿದಷ್ಟೇ ಸುಲಭ. ಒಟ್ಟು 19 ಮಂದಿಯ ಈ ಗುಂಪಿನಲ್ಲಿ 6 ಮಂದಿ ದುಡಿಯುತ್ತಾರೆ. ಈ ಕೆಲವೇ ಮಂದಿ ಅಷ್ಟು ಜನರ ಹೊಟ್ಟೆ ತುಂಬಿಸಲು ದುಡಿಯುವುದು ಅನಿವಾರ್ಯ. ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಬರುವ ಜನರು ಅವರ ಬಳಿ ತಬಲಾ ಮತ್ತು ಹಾರ್ಮೋನಿಯಂ ಖರೀದಿಸುತ್ತಾರೆ.

ಷೋರೂಂಗಳಲ್ಲಿ ತುಟಿ ಪಿಟಕ್‌ ಎನ್ನದೇ ಐದಾರು ಸಾವಿರ ರೂಪಾಯಿ ಬೆಲೆ ನೀಡಿ ಖರೀದಿಸುವ ಈ ಸಂಗೀತ ಸಾಧನಗಳನ್ನು ಇವರ ಬಳಿ ಖರೀದಿಸಲು ಚೌಕಾಸಿ ನಡೆಯುತ್ತದೆ. 500 ರಿಂದ ಸಾವಿರ ರೂಪಾಯಿ ಬೆಲೆ ಹೇಳಿದರೂ ಅದಕ್ಕಿಂತ ಕಡಿಮೆ ಮೊತ್ತ ನೀಡಿ ಖರೀದಿಸಲಾಗುತ್ತದೆ. ‘ಒಂದು ದಿನಕ್ಕೆ 4ರಿಂದ 5 ತಬಲಾ ತಯಾರಿಸುತ್ತೇವೆ. ಒಂದು ತಬಲಾ, ಡಗ್ಗಾ ಬೆಲೆ 500ರಿಂದ 1000 ಹೇಳುತ್ತೇವೆ. ಇದಕ್ಕೂ ಜನರು ಚೌಕಾಸಿ ಮಾಡುತ್ತಾರೆ. ಸಿಕ್ಕಷ್ಟು ಸಿಗಲಿ ಎಂದು ನಾವು ಮಾರುತ್ತಿದ್ದೇವೆ. ಇವಿಷ್ಟೇ ನಮ್ಮ ಹೊಟ್ಟೆಗೆ ಸಾಲಲ್ಲ. ಆದ್ದರಿಂದ ಹೆಂಗಸರೆಲ್ಲ ಪಿನ್ನು, ರಿಬ್ಬನ್‌, ಹಣೆಬೊಟ್ಟು ಮತ್ತಿತರ ವಸ್ತುಗಳನ್ನು ಮಾರಾಟ ಮಾಡಿ ಅಷ್ಟಿಷ್ಟು ಸಂಪಾದಿಸುತ್ತಾರೆ’ ಎನ್ನುತ್ತಾರೆ ಈ ಅಲೆಮಾರಿಗಳು.

ಹಲಸು, ಖೈರ್, ಬಿಜೈಸಾರ್, ಚಂದನ, ಸೀಸಂ ಮರದಿಂದ ತಯಾರಿಸಿದ ತಬಲಾಗಳು ಅತ್ಯುತ್ತಮವಾಗಿರುತ್ತವೆ. ಮಾವು ಬೇವು, ಜಾಲಿಯಿಂದಲೂ ತಬಲಾ ತಯಾರಿಸಲಾಗುತ್ತದೆ. ಆದರೆ ಅವು ಗುಣಮಟ್ಟದಿಂದ ಕೂಡಿರುವುದಿಲ್ಲ. ಡಗ್ಗಾವನ್ನು ಅಲ್ಯುಮಿನಿಯಂ, ಕಬ್ಬಿಣದ ತಗಡು, ಸ್ಟೀಲ್‌, ತಾಮ್ರ, ಹಿತ್ತಾಳೆ ಮತ್ತು ಕುರಿ, ಆಡಿನ ಚರ್ಮದಿಂದಲೂ ತಯಾರಿಸುತ್ತಾರೆ. ಚರ್ಮವನ್ನು ಉಪ್ಪು ನೀರಿನಲ್ಲಿ ಸ್ವಲ್ಪ ದಿನಗಳವರೆಗೆ ನೆನೆಸಿ ಹದ ಮಾಡಿಕೊಂಡು ನಂತರ ಅಳತೆಗೆ ತಕ್ಕಂತೆ ಕತ್ತರಿಸಿ ಉಳಿದ ಚರ್ಮವನ್ನು  ದಾರವನ್ನಾಗಿ ಬಳಿಸಿ ಹೆಣೆಯಲಾಗುತ್ತದೆ. ತಬಲದ ಮಧ್ಯ ಭಾಗದಲ್ಲಿ ಸ್ವರ ಹೊರ ಹೊಮ್ಮಲು ಒಂದು ಕಪ್ಪು ಕಲ್ಲಿನ  ಪುಡಿಯಿಂದ ತಯಾರಿಸಿ ಲೇಪಿಸಿದ ಕಪ್ಪು ಭಾಗಕ್ಕೆ ಕರಣೀ ಅಥವಾ ಸ್ಯಾಹೀ ಎನ್ನುವರು.

ಮೂರರಿಂದ ಆರರವರೆಗೆ ಪದರುಗಳನ್ನು ಸಾಲಿಗ್ರಾಮದ ಕಲ್ಲಿನಿಂದ ತಿಕ್ಕಿ ಹಾಕಲಾಗುವುದು. ಆದರೆ ಡಗ್ಗಾಕ್ಕೆ ಕರುಣೀಯನ್ನು ಸ್ವಲ್ಪ ಜಾಸ್ತಿ ಹಾಕುತ್ತಾರೆ. ಕವಚದ ಮಧ್ಯ ಭಾಗದ ವರ್ತುಲ ಆಕಾರದಲ್ಲಿ ಕಬ್ಬಿಣದ ಕಿಟ್ಟದಿಂದ ಅಥವಾ ಒಂದು ಜಾತಿಯ ಕಪ್ಪು ಕಲ್ಲಿನಿಂದ ತಿಕ್ಕಿ ಹಾಕಲಾಗುತ್ತದೆ. ಈ ಕರಣೀಯಿಂದಲೇ ತಬಲಾದಲ್ಲಿ ಇಂಪಾದ ನಾದ  ಹೊರಡುತ್ತದೆ. ಇದರ ಜೊತೆಗೆ ಬೆಣೆ (ಕಟ್ಟಿಗೆ ತುಂಡಿನ ಗಟ್ಟಿಗಳು) ಅಳವಡಿಸಲಾಗುತ್ತದೆ. ಇದರಿಂದ ಸ್ವರಗಳನ್ನು ಸಂಗೀತಗಾರರಿಗೆ ಅನುಕೂಲ ಆಗುವಂತೆ ಏರಿಳಿತ ಮಾಡಬಹುದು. ಈ ಬೆಣೆಯನ್ನು ಕಳಿಸಿಯ ನಡುವೆ ಅಳವಡಿಸಲಾಗುತ್ತದೆ. ಹಿಂದೆ ಜಿಂಕೆಯ ಚರ್ಮ ಬಳಸಿ ತಬಲಾ ಮತ್ತು ಡಗ್ಗಾ ತಯಾರಿಸಲಾಗುತ್ತಿತ್ತು. ಸದ್ಯ ಚಿಗರೆ, ಕೃಷ್ಣಮೃಗ ಬೇಟೆ ಅಪರಾಧವಾದ್ದರಿಂದ ಅದರ ಬಳಕೆ ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT