ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿ ದ್ವಿಪಾತ್ರ!

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸ್ವಂತ ಖುಷಿಗೆ ‘ಕೆಂಡಸಂಪಿಗೆ’, ಅಭಿಮಾನಿ ದೇವರುಗಳ ಖುಷಿಗೆ ‘ದೊಡ್ಮನೆ ಹುಡುಗ’– ಹೀಗೆ, ಸೂರಿ ಅವರದು ನಿರ್ದೇಶಕರಾಗಿ ದ್ವಿಪಾತ್ರ. ‘ಚಂದನವನ’ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸೂರಿ ತಮ್ಮ ಈ ಹೊತ್ತಿನ ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ದೊಡ್ಮನೆ ಹುಡ್ಗ’ ಸಿನಿಮಾದ ಚಿತ್ರೀಕರಣ ಯಾವ ಹಂತದಲ್ಲಿದೆ? 
ಸತತ 24 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಈಗ ಮೈಸೂರಿನಲ್ಲಿ ಅಂಬರೀಷ್ ಅವರ ಪಾಲಿನ ಐದು ದಿನಗಳ ಚಿತ್ರೀಕರಣ ನಡೆಯುತ್ತಿದೆ.

ಶೀರ್ಷಿಕೆ ನೋಡಿದರೆ ಪಕ್ಕಾ ಕೌಟುಂಬಿಕ ಚಿತ್ರ ಎನ್ನುವಂತಿದೆ?
ಇದು ಮಸಾಲೆ ಸಿನಿಮಾ. ಅಭಿಮಾನಿ ದೇವರುಗಳಿಗೆ ಮಾಡುತ್ತಿರುವ ಚಿತ್ರ. ‘ಅಭಿಮಾನಿಗಳು ನಮ್ಮನೆ ದೇವರು’ ಎನ್ನುವ ಅಡಿ ಬರಹವಿದೆ. ಒಂದಿಷ್ಟು ಭಾವುಕತೆ, ಒಂದು ಮನೆ, ಅದಕ್ಕೆ ಹೊಂದಿಕೊಂಡಂತೆ ಪಾತ್ರಗಳು– ಹೀಗೆ ‘ದೊಡ್ಮನೆ ಹುಡ್ಗ’ ಸಾಗಲಿದೆ.

ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ನಿಮ್ಮ ನಡಿಗೆ ವೇಗವಾಗಿದೆ. ಕೈಯಲ್ಲಿ ಮೂರು ಚಿತ್ರಗಳಿವೆ?
ತಂಡ ಚೆನ್ನಾಗಿದೆ. ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದೇವೆ. ತುಂಬಾ ಬರೆಯುತ್ತಿದ್ದೇನೆ. ‘ಕೆಂಡಸಂಪಿಗೆ’ ನಾನು ಇಷ್ಟು ದಿನ ಮಾಡಿದ ಚಿತ್ರಗಳಿಗಿಂತ ಭಿನ್ನವಾದದ್ದು. ‘ದೊಡ್ಮನೆ ಹುಡ್ಗ’ ಪಕ್ಕಾ ಕರ್ಮಷಿಯಲ್. ‘ಸೈಲೆಂಟ್ ಸುನೀಲ’ ನೈಜ ಕಥೆ ಆಧರಿಸಿದ್ದು. ಎಲ್ಲವೂ ಬೇರೆ ಬೇರೆ ದಿಕ್ಕಿನಲ್ಲಿ ಬೇರೆಯ ಆಯಾಮದ ಚಿತ್ರಗಳು ಎನ್ನುವುದು ವಿಶೇಷ.

‘ಕೆಂಡಸಂಪಿಗೆ’ ಪ್ರಯೋಗಶೀಲ ಚಿತ್ರವೇ?
ಅದು ಪೂರ್ಣ ಸ್ಕ್ರೀನ್ ಪ್ಲೇ ಮೂವಿ. ‘ಬೇರೆ ಭಾಷೆಯಲ್ಲಿ ಆ ರೀತಿ–ಈ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ ಏಕೆ’ ಎನ್ನುವವರಿಗೆ ‘ನಾವು ಮಾಡುತ್ತೇವೆ’ ಎಂದು ತೋರಿಸುವಂಥ ಸಿನಿಮಾ ‘ಕೆಂಡಸಂಪಿಗೆ’. ಈ ರೀತಿಯ ಸಿನಿಮಾಗಳಿಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ನೋಡಬೇಕು ಎನ್ನುವ ಕಾರಣಕ್ಕೆ ನಾನು ಈ ಚಿತ್ರ ಮಾಡಿದ್ದು. ‘ದುನಿಯಾ’ ಸಿನಿಮಾಕ್ಕೆ ಜನರು ಓಟು ಕೊಟ್ಟು, ನಿನಗೂ ಕೆಲಸ ಮಾಡುವ ಶಕ್ತಿಯಿದೆ, ಯೋಚನೆಗಳಿವೆ ಎಂದು ಬೆಂಬಲಿಸಿದರು. ಅಲ್ಲಿಂದ ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತ ಒಂದಿಷ್ಟು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಹೋಗುತ್ತಿದ್ದೇನೆ. ಜನರನ್ನೂ ಖುಷಿಪಡಿಸಿ ನಾವೂ ಖುಷಿಪಟ್ಟಿದ್ದೇವೆ. ‘ಕೆಂಡಸಂಪಿಗೆ’ ತಂತ್ರಜ್ಞರೇ ಮಾಡಿರುವ ಸಿನಿಮಾ. ಯಾರೂ ನಾಯಕ–ನಾಯಕಿ ಎಂದು ಕಟೌಟ್ ಹಾಕಿ ಹೇಳುವುದಿಲ್ಲ. ರೆಗ್ಯೂಲರ್ ಮಾದರಿಯದ್ದು ಅಲ್ಲವೇ ಅಲ್ಲ.

‘ಕೆಂಡಸಂಪಿಗೆ’ಯಂಥ ಪ್ರಯೋಗಕ್ಕೆ ಒಡ್ಡಿಕೊಂಡಿದ್ದೀರಿ. ಆದರೆ, ಇಂಥ ಪ್ರಯೋಗಗಳಿಗೆ ಪ್ರೇಕ್ಷಕರ ಬೆಂಬಲ ದೊರೆಯುವ ವಿಶ್ವಾಸ ಇದೆಯೇ?
ನಮ್ಮ ಪ್ರೇಕ್ಷಕರು ಎಷ್ಟು ಬುದ್ಧಿವಂತರು ಎಂದರೆ ಮಲೆಯಾಳಂ, ತೆಲುಗು, ತಮಿಳು ಸೇರಿದಂತೆ ಎಲ್ಲ ಭಾಷೆಗಳ ಸಿನಿಮಾ ನೋಡುತ್ತಾರೆ. ಜಾಗತಿಕ ಚಿತ್ರಗಳನ್ನೂ ನೋಡುತ್ತಾರೆ. ಆದ್ದರಿಂದ ಕಳ್ಳದಾರಿಗಳಲ್ಲಿ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ. ಡ್ಯೂಪ್‌ಗಳನ್ನು ಪ್ರೇಕ್ಷಕರು ಉಳಿಸಿಕೊಂಡಿಲ್ಲ. ಮಲಯಾಳಂನ ‘ದೃಶ್ಯಂ’ ಚೆನ್ನಾಗಿತ್ತು. ಅದು ರೀಮೇಕ್ ಮಾಡಿದಾಗಲೂ ಯಶಸ್ವಿಯಾಯಿತು. ಯಾವುದೇ ಚಿತ್ರಗಳು ಇಷ್ಟವಾಗದಿದ್ದರೆ ಪ್ರೇಕ್ಷಕರು ತೆಗೆದು ಬಿಸಾಕುತ್ತಾರೆ.

‘ನೀವು ಒಂದು ಸಲ ಕೆಂಡಸಂಪಿಗೆಯಂಥ ಚಿತ್ರವನ್ನು ನೋಡಿ. ಆ ದಿಕ್ಕಿನಲ್ಲಿ ನಡೆಯುವುದಕ್ಕೆ, ಸಿನಿಮಾ ಬಗ್ಗೆ ಆಲೋಚಿಸಲು ಸಾಧ್ಯವಾ ನೋಡಿ’ ಎನ್ನುವುದನ್ನು ಪ್ರೇಕ್ಷಕರಿಗೆ ಹೇಳುತ್ತಿದ್ದೇನೆ. ಪುನೀತ್, ಯಶ್ ಅವರ ಸಿನಿಮಾ ಮಾಡುವಾಗ ಬಾಕ್ಸಾಫೀಸ್, ಮಾರುಕಟ್ಟೆ ನೋಡಿಕೊಂಡು ಅವರ ಇಮೇಜಿಗೆ ತಕ್ಕಂತೆ ಕಥೆ ಮಾಡಬೇಕು. ಆ ನಡುವೆಯೇ ನನಗೂ ಕೆಲಸ ಬರುತ್ತದೆ ಎನ್ನುವುದನ್ನು ಸಾಬೀತುಪಡಿಸಬೇಕು. ಆ ಮೂಲಕ ನಾನೂ ಜನರನ್ನು ತಲುಪಬೇಕು. ನನ್ನ ಪ್ರಯೋಗಗಳನ್ನು ನನ್ನ ಮೇಲೆ ಮಾಡಿಕೊಳ್ಳುವೆ.

ಕಮರ್ಷಿಯಲ್ ಸಿನಿಮಾ ಮಾಡಿಕೊಡಿ ಎಂದು ಬರುವವರಿಗೆ ಆ ರೀತಿ ಚಿತ್ರ ಮಾಡುವೆ. ಎಲ್ಲ ನೋಡುಗರೂ ಒಂದೇ. ಕಾಮಿಡಿ ಸೇರಿದಂತೆ ಏನೇ ಹೇಳಿದರೂ ಅದು ಸಿನಿಮಾ ಎನಿಸಿಕೊಳ್ಳುತ್ತದೆಯೇ ಎನ್ನುವುದನ್ನು ನಾವು ಕಂಡುಕೊಳ್ಳಬೇಕು. ಸಿನಿಮಾ ಬರೀ ಮಾತಲ್ಲ, ಛಾಯಾಗ್ರಹಣವೂ ಅಲ್ಲ. ‘ಕೆಂಡಸಂಪಿಗೆ’ ನಮ್ಮ ಬುದ್ಧಿಗೆ, ನಮ್ಮ ಖುಷಿಗೆ ಮಾಡಿರುವ ಸಿನಿಮಾ. ಮೇ ತಿಂಗಳ ಅಂತ್ಯದೊಳಗೆ ಚಿತ್ರ ತೆರೆಗೆ ಬರುತ್ತದೆ.

ಕನ್ನಡ ಚಿತ್ರಗಳಿಗೆ ಬಜೆಟ್ ಇತಿಮಿತಿಯೇ ದೊಡ್ಡ ಸಮಸ್ಯೆ ಎನ್ನುವ ಮಾತಿದೆ. ನಿಮ್ಮ ಅನುಭವ ಏನು?
ತೆಲುಗಿನ ಒಂದು ಸಣ್ಣ ಚಿತ್ರ ಎಂದರೂ ಅದರ ಬಜೆಟ್ 30 ಕೋಟಿ ರೂಪಾಯಿ. ತಮಿಳಿನಲ್ಲಿ 100 ಕೋಟಿ ಬಂಡವಾಳ ಹೂಡಿ, 100 ಕೋಟಿ ವ್ಯಾಪಾರ ಮಾಡಿದ ಚಿತ್ರಗಳಿವೆ. ನಮ್ಮಲ್ಲಿ ಮಾರುಕಟ್ಟೆ ಚಿಕ್ಕದು. ದೊಡ್ಡ ಯಶಸ್ಸು ಎನಿಸಿಕೊಳ್ಳುವ ‘ಮುಂಗಾರು ಮಳೆ’, ‘ಸಂಗೊಳ್ಳಿ ರಾಯಣ್ಣ’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಯಂಥ ಚಿತ್ರಗಳ ಬಂಡವಾಳವೇ ಸುಮಾರು 20 ಕೋಟಿ. ವ್ಯಾಪಾರವೂ ಮೂವತ್ತು ನಲವತ್ತು ಕೋಟಿ. ಕೋಲಾರ ಸೇರಿದಂತೆ ಗಡಿಭಾಗಕ್ಕೆ ನಮ್ಮ ಚಿತ್ರಗಳನ್ನು ತಲುಪಿಸುವುದು ಕಷ್ಟವಾಗುತ್ತಿದೆ. ಈ ಮಾರುಕಟ್ಟೆ ಇತಿಮಿತಿ ನೋಡಿಕೊಂಡೇ ನಾವು ಕೆಲಸ ಮಾಡಬೇಕಿದೆ.

‘ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್’ ಮಾಡಿದ್ದೀರಿ. ಅದರ ಫಲಿತಾಂಶ ಏನು?
‘ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್’ಗೆ ರಾಜ್ಯದ ಮೂಲೆ ಮೂಲೆಗಳಿಂದ 300 ಡಿವಿಡಿಗಳು ಬಂದಿವೆ. ಯೋಗರಾಜ ಭಟ್ಟರು ಸೇರಿದಂತೆ ಬಹುಮಂದಿ ನಿರ್ದೇಶಕರಿಗೆ ಹೊಸಬರು ಬೇಕು. 20–30 ಜನರು ಈ ‘...ಟ್ಯಾಲೆಂಟ್ ಹಂಟ್’ನಡಿ ಸಿಕ್ಕುವ ಸಾಧ್ಯತೆ ಇದೆ. ಒಂದು ಕಾರ್ಯಕ್ರಮ ಮಾಡಿ ಅವರನ್ನು ಪರಿಚಯಿಸಲಾಗುತ್ತದೆ. ಈ ಮುನ್ನ ಪ್ರತಿಭೆಗಳಿಗೆ ಇಂಥ ಒಂದು ವೇದಿಕೆ ಇರಲಿಲ್ಲ. ಅದನ್ನು ನಾವು ಮಾಡಿದ್ದೇವೆ.

ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರವನ್ನು ನಿರ್ಮಿಸುತ್ತಿದ್ದೀರಿ. ಮುಂದೆ ಇದೇ ರೀತಿ ಯಾವುದಾದರೂ ಸಾಹಿತ್ಯ ಕೃತಿಗಳನ್ನು ಸಿನಿಮಾ ಮಾಡುವ ಆಸೆ ಇದೆಯೇ?
ನನಗೆ ಜಯಂತ ಕಾಯ್ಕಿಣಿ ಅವರ ಕಥೆಗಳನ್ನು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಅದು ಕಮರ್ಷಿಯಲ್ ಆಗಿಯೂ ಇರಬೇಕು. ದೇವನೂರರ ‘ಕುಸುಮಬಾಲೆ’, ಕಾರ್ನಾಡರ ‘ಯಯಾತಿ’ ಇಷ್ಟ. ‘ಕರ್ವಾಲೋ’ ಸಿನಿಮಾ ಮಾಡಬೇಕು ಎಂದರೆ ಕನಿಷ್ಠ 25 ಕೋಟಿ ಬಜೆಟ್ ಬೇಕು. ಭೈರಪ್ಪ ಅವರ ‘ಪರ್ವ’ದ ಕೆಲವು ಭಾಗ ಇಷ್ಟವಾಗುತ್ತದೆ. ಆದರೆ ಅವೆಲ್ಲವೂ ಬಜೆಟ್‌ನಿಂದ ಕಷ್ಟಸಾಧ್ಯ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT