ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲತೆಯ ದಾರಿ ಹಿಡಿದು...

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಡಿ.ಜೆ. ಅನೂಪ್‌  ಅವರು ರಾಜಸ್ತಾನದ ಜೋಧ್‌ಪುರದವರು. ತಮ್ಮ ಐದನೆಯ ವಯಸ್ಸಿನಲ್ಲಿ ತಂದೆಯ ವ್ಯವಹಾರದ ಕಾರಣದಿಂದ ಅವರು ಬಂದು ನೆಲೆಸಿದ್ದು ಚೆನ್ನೈನಲ್ಲಿ. ನಂತರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಾಗ  ಅನೂಪ್‌ ಎಂಟನೆಯ ತರಗತಿ ವಿದ್ಯಾರ್ಥಿ. ಈಗ ಅನೂಪ್‌ ಕನ್ನಡ, ತಮಿಳು ಎರಡೂ ಭಾಷೆಗಳನ್ನು ಮಾತನಾಡಬಲ್ಲರು. ಅಷ್ಟೇ ಅಲ್ಲ, ಓದಿ ಬರೆಯಲೂ ಬಲ್ಲರು.

ಅವರ ಸಂಗೀತ ಮೋಹ ಬಾಲ್ಯದೊಂದಿಗೆ ಸೇರಿಕೊಂಡಿದೆ. ‘ಎಲ್ಲಕ್ಕಿಂತ ಮೊದಲು ನಾನು ಸಂಗೀತಗಾರ. ಸಂಗೀತವೆಂಬುದು ನನಗೆ ದೇವನಿತ್ತ ವರ’ ಎಂದು ಅನೂಪ್‌ ಹೇಳಿಕೊಳ್ಳುತ್ತಾರೆ. ಏಳನೇ ತರಗತಿಯಲ್ಲಿದ್ದಾಗಲೇ ತಮ್ಮ ಮನೆಯಲ್ಲಿದ್ದ ಹಳೆಯ ಕೀಬೋರ್ಡ್‌ನಲ್ಲಿ ಯಾವುದೇ ಹಾಡು ಕೇಳಿದರೂ ನುಡಿಸುವಷ್ಟು ಪರಿಣತಿ ಹೊಂದಿದ್ದರು. ಅದೂ ಯಾವುದೇ ಔಪಚಾರಿಕ ತರಬೇತಿ ಇಲ್ಲದೆಯೇ. ಸಂಗೀತದ ಹಂಬಲದಲ್ಲಿ ಅವರು ಕಾಲೇಜು ದಿನಗಳಲ್ಲಿ ಮೂರ್‍ನಾಲ್ಕು ಸಂಗೀತ ಬ್ಯಾಂಡ್‌ಗಳನ್ನೂ ಕಟ್ಟಿದ್ದರು.

‘ನಾನು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪ್ರತಿ ಸಲ ಬ್ಯಾಂಡ್‌ ಕಟ್ಟಿದಾಗಲೂ ಅವರ ಕೋರ್ಸ್‌ ಮುಗಿದ ತಕ್ಷಣ ಬಿಟ್ಟುಹೋಗುತ್ತಿದ್ದರು. ಇದು ನಿರಂತರವಾಗಿ ಆಗುವ ಕೆಲಸ ಅಲ್ಲ ಎನಿಸಿತು. ಅದೇ ಸಮಯಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಡಿ.ಜೆ. ಸಂಸ್ಕೃತಿ ಹೊಸದಾಗಿ ರೂಪುಗೊಳ್ಳುತ್ತಿತ್ತು.  ನನಗೆ ಆ ಕ್ಷೇತ್ರದತ್ತ ಆಸಕ್ತಿ ಹುಟ್ಟಿತು. ನಾನು ನನ್ನ ಸ್ನೇಹಿತರಿಗೆ ಹೇಳಿ ಲಂಡನ್‌ನಿಂದ ಕೆಲವು ಸಂಗೀತ ಉಪಕರಣಗಳನ್ನು ತರಿಸಿಕೊಂಡೆ. ಹಂತಹಂತವಾಗಿ ಅವುಗಳನ್ನು ಬಳಸಿಕೊಳ್ಳುವುದನ್ನು ಕಲಿತುಕೊಂಡೆ’ ಎಂದು ಅವರು ಡಿ.ಜೆ. ವೃತ್ತಿ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಹಟದಿಂದಲೇ ಡಿ.ಜೆ. ಕೆಲಸ ಕಲಿತುಕೊಂಡ ಅವರು ಮೊದಲು ಕಾರ್ಯಕ್ರಮ ನೀಡಿದ್ದು 1992ರಲ್ಲಿ ಬ್ರಿಗೇಡ್‌ ರಸ್ತೆಯಲ್ಲಿನ ಪಬ್‌ ಒಂದರಲ್ಲಿ. ಅಲ್ಲಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಅನೂಪ್‌, ಹೈದರಾಬಾದ್‌, ಗೋವಾ, ಮುಂಬೈನಲ್ಲಿ ಕೆಲವು ಕಾಲ ಡಿ.ಜೆ. ಆಗಿ ಕೆಲಸ ಮಾಡಿದ್ದಾರೆ. ಅಲ್ಲದೇ ದೇಶದ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿಯೂ ಡಿ.ಜೆ.ಆಗಿ ಕಾರ್ಯಕ್ರಮ ನೀಡಿದೆ ಹೆಗ್ಗಳಿಕೆ ಅವರದ್ದು.

ಅನೂಪ್‌ ಅನೇಕ ಹಾಡುಗಳನ್ನು ರಿಮಿಕ್ಸ್‌ ಮಾಡಿರುವುದೂ ಅಲ್ಲದೇ ಆಲ್ಬಂಗಳನ್ನೂ ತಂದಿದ್ದಾರೆ. ಉಪೇಂದ್ರ ಅಭಿನಯದ ‘ಉಪೇಂದ್ರ’ ಸಿನಿಮಾದ ‘ಮಸ್ತ್‌ ಮಸ್ತ್‌ ಹುಡುಗಿ ಬಂದ್ಳು’, ಎ.ಆರ್‌. ರೆಹಮಾನ್‌ ಅವರ ಸಂಗೀತ ನಿರ್ದೇಶನದ ‘ರಂಗ್‌ ದೇ ಬಸಂತಿ’ ಸೇರಿದಂತೆ ಅನೇಕ ಹಾಡುಗಳನ್ನು ಅನೂಪ್‌ ಅಫಿಶಿಯಲ್‌ ರಿಮಿಕ್ಸ್‌ ಮಾಡಿದ್ದಾರೆ. ಡಿ.ಜೆ.ಗಳ ಕೆಲಸದಲ್ಲಿ ಸೃಜನಶೀಲತೆ ಇರುವುದಿಲ್ಲ ಎಂಬ ವಾದವನ್ನು ಅನೂಪ್‌ ಬಿಲ್‌ಕುಲ್‌ ಒಪ್ಪುವುದಿಲ್ಲ.

‘ಒಬ್ಬ ಒಳ್ಳೆಯ ಡಿ.ಜೆ. ಸಂಗೀತವನ್ನು ಪ್ಲೇ ಮಾಡಿದರೆ ಖಂಡಿತ ಅದರಲ್ಲಿ ಸೃಜನಶೀಲತೆ ಇರುತ್ತದೆ. ಅಸಂಖ್ಯಾತ ಹಾಡುಗಳಿರುತ್ತವೆ. ಅವುಗಳ ಮಧ್ಯೆ ಯಾವುದನ್ನು ಆಯ್ದುಕೊಳ್ಳಬೇಕು, ಯಾವುದರಿಂದ ಆರಂಭಿಸಬೇಕು, ಹೇಗೆ ಮುಂದುವರಿಸಬೇಕು, ಯಾವುದು ಆದಮೇಲೆ ಯಾವುದನ್ನು ಸೇರಿಸಬೇಕು ಎನ್ನುವುದೆಲ್ಲ ತುಂಬ ಮುಖ್ಯ. ಅವನಿಗೆ ಸಂಗೀತ ಜ್ಞಾನ, ಲಯ–ತಾಳ ಜ್ಞಾನ, ಶ್ರುತಿಯ ತಿಳಿವಳಿಕೆ ಅತ್ಯಗತ್ಯ’ ಎನ್ನುವುದು ಅವರ ಸಮರ್ಥನೆ.

ಹಾಗೆಂದು ಎಲ್ಲ ಡಿ.ಜೆ.ಗಳೂ ತುಂಬ ಸೃಜನಶೀಲರಾಗಿರುತ್ತಾರೆ ಎಂದು ಅವರು ಹೇಳುವುದಿಲ್ಲ. ‘ಇದೊಂದೇ ಕ್ಷೇತ್ರ ಅಂತಲ್ಲ. ನಟನಾ ಕ್ಷೇತ್ರದಲ್ಲಿಯೂ ಒಳ್ಳೆಯ–ಕೆಟ್ಟ ನಟರಿರುತ್ತಾರೆ. ಒಳ್ಳೆಯ ನಟರು ನಿಜವಾಗಿಯೂ ಸೃಜನಶೀಲರಾಗಿರುತ್ತಾರೆ. ಅಭಿನಯ ಕೌಶಲ ಹೊಂದಿರುತ್ತಾರೆ. ಹಾಗೆಯೇ ಅಂತಹ ಸಾಮರ್ಥ್ಯ ಇಲ್ಲದವರು ಗ್ಲ್ಯಾಮರ್‌ ಮೊರೆಹೋಗುತ್ತಾರೆ. ಅವರಲ್ಲಿ ಸೃಜನಶೀಲತೆ ಇರುವುದಿಲ್ಲ. ಡಿ.ಜೆ. ಕ್ಷೇತ್ರದಲ್ಲಿಯೂ ಅತ್ಯಂತ ಸೃಜನಶೀಲ ಪ್ರತಿಭೆಗಳೂ ಇದ್ದಾರೆ. ಹಾಗೆಯೇ ಸಂಗೀತದ ಬಗ್ಗೆ ಏನೂ ಜ್ಞಾನವಿಲ್ಲದ ಕೆಟ್ಟ ಡಿ.ಜೆ.ಗಳೂ ಇದ್ದಾರೆ’ ಎನ್ನುವ ಅನೂಪ್‌, ‘ಒಳ್ಳೆಯ ಡಿ.ಜೆ. ಆಗಲು ಹಾಡುಗಳ ಸಂಗ್ರಹವಿದ್ದರಷ್ಟೇ ಸಾಲದು ಸಂಗೀತದ ಬಗ್ಗೆ ಜ್ಞಾನವೂ ಅವಶ್ಯಕ’ ಎನ್ನುತ್ತಾರೆ.

‘ಡಿ.ಜೆ. ಎನ್ನುವುದು ಒಂದು ಫನ್‌ ವೃತ್ತಿ. ಆದರೆ ಡಿ.ಜೆ.ಗಳು ತಮ್ಮ ವೃತ್ತಿಯನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬಾರದು’ ಎನ್ನುವುದು ಅನೂಪ್‌ ಕಿವಿಮಾತು. ‘ಆಕರ್ಷಕ ವೇದಿಕೆ, ಪತ್ರಿಕೆಗಳಲ್ಲಿ ಚಿತ್ರಗಳು, ಕ್ಷಿಪ್ರ ಪ್ರಚಾರ, ಪಾರ್ಟಿ, ಹುಡುಗಿಯರು, ಹಣ ಇವೆಲ್ಲವೂ ಇಲ್ಲಿವೆ. ಹರೆಯದಲ್ಲಿ ಇವೆಲ್ಲವುಗಳಿಂದ ಆಕರ್ಷಿತರಾಗುವುದು ಸಹಜ. ಆದರೆ ಈ ಆಕರ್ಷಣೆಯಲ್ಲಿ ಡಿ.ಜೆ. ವೃತ್ತಿಯ ಮುಖ್ಯ ಅವಶ್ಯಕತೆಗಳನ್ನೇ ಮರೆತುಬಿಡುತ್ತಾರೆ. ನೀವು ಒಳ್ಳೆಯ ಕೆಲಸ ಮಾಡಿದರೆ ಮೇಲಿನ ಎಲ್ಲ ಅಂಶಗಳೂ ತಂತಾವೇ ಬರುತ್ತವೆ. ಆದರೆ ಅವುಗಳ ಮೋಹದಲ್ಲಿ ಕೆಲಸವನ್ನೇ ಮರೆತರೆ ಅಂಥವರ ವೃತ್ತಿಯ ಆಯುಷ್ಯ ತುಂಬ ಚಿಕ್ಕದಾಗಿರುತ್ತದೆ.

ಒಂದು ಕೆಟ್ಟ ಕಾರ್ಯಕ್ರಮ ನೀಡಿದರೆ ಮತ್ತೆ ಯಾರೂ ಕರೆಯುವುದಿಲ್ಲ, ಅಷ್ಟು ಸ್ಪರ್ಧಾತ್ಮಕವಾಗಿದೆ ಈ ಕ್ಷೇತ್ರ’ ಎಂದು ಅವರು ಡಿ.ಜೆ. ಕ್ಷೇತ್ರದ ಸೂಕ್ಷ್ಮ ಸವಾಲುಗಳ ಬಗ್ಗೆ ವಿವರಿಸುತ್ತಾರೆ. ಬದಲಾಗುತ್ತಿರುವ ಜನರ ಅಭಿರುಚಿಗಳನ್ನು ಗ್ರಹಿಸಲು ಅನೂಪ್‌ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಮೊರೆಹೋಗುತ್ತಾರೆ. ‘ಇಂದಿನ ಆಧುನಿಕ ಮಾಧ್ಯಮಗಳನ್ನು ನಮ್ಮ ಪ್ರತಿಭೆಯ ಪರಿಚಯಕ್ಕೆ ಬಳಸಿಕೊಳ್ಳಬೇಕು. ಇಲ್ಲವಾದರೆ ಎಷ್ಟು ಪ್ರತಿಭೆ ಇದ್ದರೂ ಅದು ವ್ಯರ್ಥ’ ಎನ್ನುವುದು ಅವರ ಅಭಿಮತ.

ಡಿ.ಜೆ. ಕ್ಷೇತ್ರದಲ್ಲಿ ಕನ್ನಡ ಹಾಡುಗಳು ಹೆಚ್ಚು ಬಳಕೆಯಾಗದಿರುವುದಕ್ಕೂ ಇವರು ಕಾರಣಗಳನ್ನು ಕೊಡುತ್ತಾರೆ. ‘ನಮ್ಮ ಕನ್ನಡ ಸಿನಿಮಾಗಳಲ್ಲಿ ಹಾಡುಗಳನ್ನು ಮಾಡುತ್ತಾರೆ. ಆದರೆ ಅವು ಕ್ಲಬ್‌ ಮ್ಯೂಸಿಕ್‌ಗೆ ಸರಿಹೊಂದುವಂತಿರುವುದಿಲ್ಲ. ಕ್ಲಬ್‌ಗಳಲ್ಲಿ ದೊಡ್ಡ ದೊಡ್ಡ ಸೌಂಡ್‌ ಸಿಸ್ಟಂಗಳಿರುತ್ತವೆ. ಊಫರ್‌ಗಳಿರುತ್ತವೆ. ಬೇಸ್‌ ಸರಿಯಾಗಿ ಬರಬೇಕು. ಅವಕ್ಕೆ ಕನ್ನಡ ಹಾಡುಗಳು ಹೊಂದುವುದಿಲ್ಲ’ ಎನ್ನುವ ಅನೂಪ್‌, ಸ್ವತಃ ಕನ್ನಡದ ಅನೇಕ ಹಾಡುಗಳನ್ನು ಡಿ.ಜೆ. ಸಂಗೀತಕ್ಕೆ ಹೊಂದುವಂತೆ ರಿಮಿಕ್ಸ್‌ ಮಾಡಿದ್ದಾರೆ. ಜತೆಗೆ ಖ್ಯಾತ ಸಂಗೀತನಿರ್ದೇಶಕ ಮನೋಮೂರ್ತಿ ಅವರ ಹಾಡುಗಳನ್ನೆಲ್ಲ ‘ಮನೋ ರಿಮಿಕ್ಸ್‌’ ಎಂಬ ಹೆಸರಿನಲ್ಲಿ ರಿಮಿಕ್ಸ್‌ ಮಾಡುವ ಕೆಲಸದಲ್ಲಿಯೂ ತೊಡಗಿಕೊಂಡಿದ್ದಾರೆ. 

ಎ.ಆರ್‌. ರೆಹಮಾನ್‌, ಉಸ್ತಾದ್‌ ನಸ್ರತ್‌ ಫತೇ ಅಲಿ ಖಾನ್‌ ಅವರಂತಹ ಮಹಾನ್‌ ಸಂಗೀತಗಾರರನ್ನೆಲ್ಲ ನಾನು ಮೊದಲಿನಿಂದಲೂ ಆರಾಧನಾ ಮನೋಭಾವದಲ್ಲಿ ನೋಡುತ್ತಿದ್ದೆ. ಅಂಥವರೊಂದಿಗೆ ವೇದಿಕೆ ಹಂಚಿಕೊಳ್ಳುವ ಕೆಲಸ ಮಾಡುವ ಪುಳಕವನ್ನು ನನಗೆ ಈ ಡಿ.ಜೆ. ವೃತ್ತಿ ಕಲ್ಪಿಸಿದೆ. ಅದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

-ಅನೂಪ್‌ ಅವರನ್ನು ಫೇಸ್‌ಬುಕ್‌ನಲ್ಲಿ ಹಿಂಬಾಲಿಸಲು: http://goo.gl/lDvhHe

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT