ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಾತ್ಮಕ ವಿಜ್ಞಾನದ ಮಾದರಿ

ವಿಜ್ಞಾನವು ‘ಪ್ರಜ್ಞೆ’ ಮತ್ತು ‘ಸಂವೇದನೆ’ಯಾಗಿ ಸಾಕಾರಗೊಳ್ಳಬೇಕಾಗಿದೆ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

103ನೇ ‘ಭಾರತೀಯ ವಿಜ್ಞಾನ ಮೇಳ’ ಜನವರಿ 3ರಿಂದ 7ರವರೆಗೆ ಮೈಸೂರಿನಲ್ಲಿ ನಡೆಯಲಿರುವುದು ಹೆಮ್ಮೆಯ ಸಂಗತಿ. ದೇಶ–ವಿದೇಶಗಳಿಂದ ಬರುವ ವಿಜ್ಞಾನಿಗಳು, ನೊಬೆಲ್‌ ಪ್ರಶಸ್ತಿ ಪುರಸ್ಕೃತರು, ವಿಜ್ಞಾನ ಕ್ಷೇತ್ರದಲ್ಲಿರುವ ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜ್ಞಾನ ಹಾಗೂ ವಿಜ್ಞಾನಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಬೇರೆ ದೇಶಗಳ ವೈಜ್ಞಾನಿಕ ಚಟುವಟಿಕೆ ಕುರಿತು ನಾವು ಇಲ್ಲಿ ತಿಳಿದುಕೊಳ್ಳುವುದೆಲ್ಲವೂ ಈ ಸಮಾವೇಶದಿಂದಾಗುವ ವೈಚಾರಿಕ ಲಾಭಗಳೇ.

ಆದರೆ ಇಂತಹ ಸಮಾವೇಶಗಳು ಬರೀ ಉನ್ನತ ಮಟ್ಟದ ಗಣ್ಯರ ಸಭೆಯಾಗದೆ, ವಿಜ್ಞಾನದ ದೊಡ್ಡ ದೊಡ್ಡ ಸಿದ್ಧಾಂತಗಳ ಕುರಿತ ಚರ್ಚೆಗೆ ಸೀಮಿತವಾಗದೆ, ಇವುಗಳ ಆಚೆಯೂ ‘ಮೂಲ ವಿಜ್ಞಾನ ಶಿಕ್ಷಣ’ದ ಕುರಿತು ಚರ್ಚಿಸುವ ವೇದಿಕೆಗಳಾಗಬೇಕು. ವಿಜ್ಞಾನ ಬೆಳೆಯಬೇಕಾದರೆ ಮೊದಲು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿಯುಸಿ ಹಂತಗಳಲ್ಲಿ ವಿಜ್ಞಾನವನ್ನು ಕಲಿಸುವುದರಲ್ಲಿರುವ ಸಮಸ್ಯೆಗಳ ಬಗ್ಗೆ  ಚಿಂತನೆ ಮಾಡಬೇಕಾಗಿದೆ.

ಜ್ಞಾನದ ಮಾದರಿಗಳು ಮತ್ತು ಪರಂಪರೆಗಳು ಹಲವು. ಇವುಗಳಲ್ಲಿ ವಿಜ್ಞಾನ ಒಂದು ಮಾದರಿ. ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಹುಟ್ಟಿ  ಬೆಳೆದುಬಂದ ಈ ಜ್ಞಾನ ಪರಂಪರೆ, ಸಮಕಾಲೀನ ಪ್ರಪಂಚದಲ್ಲಿ ಜ್ಞಾನದ ಅತ್ಯುನ್ನತ ಉದಾಹರಣೆಯಾಗಿ, ‘ಜ್ಞಾನವೆಂದರೆ ವಿಜ್ಞಾನ’ ಎನ್ನುವ ಹಾಗೆ ಆಗಿದೆ. ಇಂತಹ ವಿಜ್ಞಾನದ ವಿಜೃಂಭಣೆ ಕುರಿತು ಕಟು ಟೀಕೆಗಳು ಸಾಕಷ್ಟು ಬಂದಿವೆ.

ಅದೇನೆ ಇರಲಿ, ನಮ್ಮದಲ್ಲದ ಈ ಪರಂಪರೆಯನ್ನು ಇಂದು ನಮ್ಮದಾಗಿಸಿಕೊಳ್ಳಬೇಕಾಗಿದೆ. ಪಾಶ್ಚಿಮಾತ್ಯ ದೇಶದಿಂದ ಎರವಲು ಪಡೆದ ಕ್ರಿಕೆಟ್‌ ಅನ್ನು ನಮ್ಮದಾಗಿಸಿಕೊಂಡು, ಅದರಲ್ಲಿ ಹಿರಿಮೆಯನ್ನು ಸಾಧಿಸಿರುವ ನಾವು, ಪಶ್ಚಿಮದ ಕೊಡುಗೆಯಾದ ವಿಜ್ಞಾನವನ್ನೂ ನಮ್ಮದಾಗಿಸಿಕೊಳ್ಳಬಹುದು. ಆದರೆ ಆಟದಷ್ಟು ಸುಲಭವಾಗಿ ವಿಜ್ಞಾನವನ್ನು  ನಮ್ಮದಾಗಿಸಿಕೊಳ್ಳಲು ಆಗದು. ಅದಕ್ಕೆ ದೀರ್ಘ ಕಾಲ ಬೇಕಾಗುತ್ತದೆ.

‘ವಿಜ್ಞಾನ ಶಿಕ್ಷಣ’ ಗುಣಮಟ್ಟದ ಪ್ರಶ್ನೆ ಬಂದಾಗ, ನಾವು ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ರಾಜಕೀಯ ಹಸ್ತಕ್ಷೇಪ ಮುಂತಾದವುಗಳ ಬಗ್ಗೆ ಚರ್ಚಿಸುತ್ತೇವೆ. ಇವುಗಳ ಜೊತೆಗೆ ಆಳವಾದ ಕೆಲವು ಮೂಲಭೂತ ಸಮಸ್ಯೆಗಳನ್ನೂ ಅವಲೋಕಿಸಬೇಕಿದೆ. ಮೊದಲನೆಯದಾಗಿ, ವಿಜ್ಞಾನವೆಂಬ ಪರಿಕಲ್ಪನೆಯನ್ನು ನಾವು ಗ್ರಹಿಸುವುದರಲ್ಲಿಯೇ ಸ್ವಲ್ಪಮಟ್ಟಿಗೆ ದೋಷವಿದೆ ಎನಿಸುತ್ತದೆ. ವಿಜ್ಞಾನವೆಂಬುದು ಕೇವಲ ವಿಷಯವಲ್ಲ. ಅದು ಅಧ್ಯಯನ ಮಾಡುವ ಒಂದು ವಿಧಾನ. ಬೌದ್ಧಿಕ ಕೌಶಲಗಳನ್ನೊಳಗೊಂಡ ಚಟುವಟಿಕೆ.

ಭೌತ ವಿಜ್ಞಾನ, ರಸಾಯನ ವಿಜ್ಞಾನಗಳನ್ನು ಕೇವಲ ವಿಷಯಗಳನ್ನಾಗಿ, ಜ್ಞಾನದ ಶಿಸ್ತುಗಳನ್ನಾಗಿ ನೋಡಿದರೆ, ಅವುಗಳ ಬಗ್ಗೆ ನಾವು ಮಾಹಿತಿ  ಪಡೆಯುತ್ತೇವೆಯೇ ಹೊರತು ಆ ಕ್ಷೇತ್ರಗಳಲ್ಲಿ ಹೇಗೆ ಕೆಲಸ ಮಾಡಬೇಕೆನ್ನುವ ಕೌಶಲಗಳನ್ನು ಕಲಿಯುವುದು ತೀರಾ ವಿರಳ.  ಭೌತ ವಿಜ್ಞಾನ, ರಸಾಯನ ವಿಜ್ಞಾನಗಳು ವಿಜ್ಞಾನ ಚಟುವಟಿಕೆಯ ಅತ್ಯುನ್ನತ ಮಾದರಿಗಳೇ ಹೊರತು, ಅವಷ್ಟೇ ವಿಜ್ಞಾನಗಳಲ್ಲ.

ಅವುಗಳನ್ನಷ್ಟೇ ವಿಜ್ಞಾನವೆಂದು ಕರೆಯುವುದು ‘ವಿಜ್ಞಾನ’ದ ಸಂಕುಚಿತ ಅರ್ಥವಾಗುತ್ತದೆ. ವಿಜ್ಞಾನ ನೈಸರ್ಗಿಕ ಜಗತ್ತನ್ನು ವಿವರಿಸುವ ಮತ್ತು ಅಲ್ಲಿನ ಸಮಸ್ಯೆಗಳನ್ನು ಬಿಡಿಸಲು ಬೆಳೆದು ಬಂದ ಕಸುಬು. ಇಂತಹ ಗ್ರಹಿಕೆ ಹಿನ್ನೆಲೆಯಲ್ಲಿ ಸಿದ್ಧಸೂತ್ರಗಳನ್ನು ಬದಿಗಿಟ್ಟು ನಾವು ಸೃಜನಾತ್ಮಕವಾಗಿ ವಿಜ್ಞಾನವನ್ನು ಕಲಿಸಬೇಕು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಜ್ಞಾನವೆಂಬುದು ಸಂಪೂರ್ಣ ಚಟುವಟಿಕೆಯಾದರೆ, ನಮ್ಮಲ್ಲಿ ಅದು ಕೆಳದರ್ಜೆಯ ಅಣಕವಾಗಿದೆ ಅಷ್ಟೆ! ಕೇವಲ ವಿಜ್ಞಾನದ ರೂಪಗಳನ್ನು, ಖಾಲಿಯಾದ ಫಾರ್ಮುಲಾಗಳನ್ನು ನಾವು ಮರು ಉತ್ಪಾದಿಸುತ್ತೇವೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹಂತದಲ್ಲಿ ವಿಜ್ಞಾನ ಕಲಿಕೆಯ ಪರಿ ಎಂತಹುದು ಎಂದರೆ, ತಮ್ಮ ವೈಯಕ್ತಿಕ ಜೀವನದ ಉಲ್ಲೇಖ ಮಾಡುತ್ತಾ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊಫೆಸರ್ ಕೆ.ರಾಘವೇಂದ್ರರಾವ್ ಹೀಗೆ ಹೇಳುತ್ತಾರೆ ‘ಗಣಿತವನ್ನು ನನ್ನ ಸ್ಕೂಲಿನಲ್ಲಿ ಎಷ್ಟು ಕೆಟ್ಟದಾಗಿ ಕಲಿಸಿದ್ದರೆಂದರೆ, ಆ ವಿಷಯದ ಬಗ್ಗೆ ಇದ್ದ ನನ್ನ ಕುತೂಹಲ, ಆಸಕ್ತಿ ಕಡಿಮೆಯಾಗಿ ಅದರ ಬಗ್ಗೆ ಭಯ ಮತ್ತು ತಿರಸ್ಕಾರ ಹುಟ್ಟಿತು. ಭೌತ ವಿಜ್ಞಾನದ ಬಗ್ಗೆ ನನಗಿದ್ದ ಪ್ರೀತಿ ಮಾಯವಾಗಿ ನಾನು ಸಾಹಿತ್ಯ ಮತ್ತು ಸಮಾಜ ವಿಜ್ಞಾನದ ಕಡೆ ಒಲವು ತೋರಿಸುವಂತಾಯಿತು’.

ವಿದ್ಯಾರ್ಥಿಗಳು ಪಿಯುಸಿ ಹಂತಕ್ಕೆ ಬರುವಾಗ ಜ್ಞಾನ ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕೃತಕವಾದ ಶ್ರೇಣೀಕರಣ ಮಾನಸಿಕವಾಗಿ ಅವರನ್ನು ಆವರಿಸುತ್ತದೆ. ಆರ್ಟ್ಸ್ ತೆಗೆದುಕೊಳ್ಳುವುದು ಕೀಳು, ಸೈನ್ಸ್ ತೆಗೆದುಕೊಳ್ಳುವುದು ಮೇಲು ಎನ್ನುವ ಭಾವನೆಯನ್ನು ಸೃಷ್ಟಿಸಿದ್ದೇವೆ. ತಮ್ಮ ಕಲಿಕಾ ಸಾಮರ್ಥ್ಯ ಹಾಗೂ ಅವರ ವೈಯಕ್ತಿಕ ಆಸಕ್ತಿಗಳನ್ನು ನಿರ್ಲಕ್ಷಿಸಿ ಎಷ್ಟೋ ವಿದ್ಯಾರ್ಥಿಗಳು ಪ್ರತಿಷ್ಠೆಗಾಗಿ ಪಿಯುಸಿ ಹಂತದಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಪಡಬಾರದ ಕಷ್ಟಪಡುತ್ತಾರೆ. ವಿಜ್ಞಾನ ಕಲಿಯುವುದೆಂದರೆ ಒಂದು ಹೆಮ್ಮೆಯ ವಿಷಯ, ಹಾಗೆಯೇ ಅದು ಒಳ್ಳೆಯ ಸಂಬಳ ತಂದುಕೊಡುವ ನೌಕರಿಗೆ ದಾರಿ ಮಾಡಿಕೊಡುವುದೆಂದು ಅದನ್ನು ಹಿಂಬಾಲಿಸುತ್ತಾರೆ ವಿನಾ, ‘ವಿಜ್ಞಾನದ ಓದು’ ಉತ್ಸಾಹದ ಅನ್ವೇಷಣೆಯಾಗಿ ಬರುವುದಿಲ್ಲ.

ಇಂತಹ ಮನಸ್ಥಿತಿಯಲ್ಲಿ ದೇಶದ ‘ವಿಜ್ಞಾನ ಶಿಕ್ಷಣ’ದ ಸಾಧನೆ ಎಂದರೆ ಸಿಇಟಿಯನ್ನು ವ್ಯವಸ್ಥಿತವಾಗಿ ಕಾಲಕಾಲಕ್ಕೆ ತಪ್ಪದೇ ಮಾಡುತ್ತಾ ಬಂದಿರುವುದು. ವಿಜ್ಞಾನದ ಸಿದ್ಧಾಂತಗಳು ಅರ್ಥವಾಗಲಿ ಬಿಡಲಿ, ಎಲ್ಲ ಫಾರ್ಮುಲಾಗಳನ್ನು ಉರು ಹೊಡೆದು ರ್‍ಯಾಂಕ್‌ ಗಳಿಸುವುದು ಬರೀ ವಿದ್ಯಾರ್ಥಿಗಳ ಧ್ಯೇಯವಲ್ಲ, ಅದು ಶಿಕ್ಷಕರ ಮತ್ತು ಪಾಲಕರ ಬಲವಾದ ನಂಬಿಕೆ ಕೂಡ. ವಿದ್ಯಾರ್ಥಿಗಳಿಗೆ ಸೂತ್ರಗಳು ಗೊತ್ತಿರುತ್ತವೆಯೇ ಹೊರತು, ಆ ಸೂತ್ರಗಳು ಹೇಗೆ ಬಂದಿವೆ, ಅವುಗಳನ್ನು ರೂಪಿಸಿರುವ ಆಲೋಚನಾಕ್ರಮ ಎಂತಹುದು ಎಂಬುದು ಗಮನಕ್ಕೆ ಬರುವುದಿಲ್ಲ.

ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿರುವವರು ಪ್ರಾಧ್ಯಾಪಕರಾಗಿ ಬಡ್ತಿ ಹೊಂದುವ ಧ್ಯೇಯವನ್ನು ಹೊಂದಿರುತ್ತಾರೆಯೇ ಹೊರತು, ವಿಜ್ಞಾನಿಯಾಗಿ ಗುರುತಿಸಿಕೊಳ್ಳುವ ತುಡಿತ ಅಪರೂಪ. ಈ ಹೊತ್ತಿನಲ್ಲಿ, ನಾವು ‘ವಿಜ್ಞಾನದ ತತ್ವಜ್ಞಾನ’ವನ್ನು (ಫಿಲಾಸಫಿ ಆಫ್ ಸೈನ್ಸ್) ಕಲಿಕೆಯ ಎಲ್ಲ ಹಂತಗಳಲ್ಲಿ ಅಳವಡಿಸುವುದರಿಂದ ಹೆಚ್ಚು ಉಪಯುಕ್ತವಾಗಬಹುದು. ‘ವಿಜ್ಞಾನದ ತತ್ವಜ್ಞಾನ’ದಲ್ಲಿ ವಿಜ್ಞಾನ ನಡೆದುಬಂದ ದಾರಿ, ಉದ್ದೇಶ, ವಿಧಾನ ಮುಂತಾದವುಗಳ ಕತೆ ನಿರೂಪಣೆಯಾಗುವುದರಿಂದ, ವಿಜ್ಞಾನದ ಕಲಿಕೆ ರಕ್ತಮಾಂಸ ತುಂಬಿಕೊಂಡು ನಮ್ಮನ್ನು ಮುಟ್ಟುತ್ತದೆ. ಎಲ್ಲ ಹಂತಗಳಲ್ಲಿ ವಿಜ್ಞಾನದ ಕಲಿಸುವಿಕೆ ಈ ರೀತಿ ನಿರೂಪಣೆಯಾದರೆ, ವಿಜ್ಞಾನ ‘ಪ್ರಜ್ಞೆ’ ಮತ್ತು ‘ಸಂವೇದನೆ’ಯಾಗಿ ಸಾಕಾರಗೊಳ್ಳುತ್ತದೆ.

ಮೂಲವಿಜ್ಞಾನವನ್ನು ಕಲಿಸಲು, ಕಲಿಯಲು ಅನುವು ಮಾಡಿಕೊಡುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಲ್ಯಾಬ್‌ಗಳಂತಹ ಮೂಲ ಸೌಕರ್ಯ ಇಲ್ಲದಿದ್ದರೂ ವಿಜ್ಞಾನ ಪಠ್ಯಕ್ರಮಕ್ಕೆ ಹೊಸ ರೂಪ, ಶಿಕ್ಷಕರಿಗೆ ವಿಜ್ಞಾನವನ್ನು ಹೇಗೆ ಕಲಿಸಬೇಕೆಂಬ ತರಬೇತಿ ಕೊಡುವುದರ ಮೂಲಕ ಇದನ್ನು ಸಾಧಿಸಬಹುದು. ನಮಗೆ ವೈಜ್ಞಾನಿಕ ಸೂತ್ರ ಮತ್ತು ನಿಯಮಗಳ ಜೊತೆ ವಿಜ್ಞಾನದ ‘ಭಾವ’ವೂ (ಸೆನ್ಸ್ ಆಫ್ ಸೈನ್ಸ್) ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT