ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಡಾನ್‌ ಸೌಂದರ್ಯ

ಬಿಎಂಡಬ್ಲ್ಯು ಆ್ಯಕ್ಟಿವ್‌ ಹೈಬ್ರಿಡ್‌ 7
Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಹೊಸ ಕಾರು ಖರೀದಿ ವಿಚಾರ ಬಂದಾಗ, ಮಧ್ಯಮ ವರ್ಗದ ಗ್ರಾಹಕರು ಸಹ ಸಣ್ಣ ಕಾರುಗಳಿಂದ ‘ಸೆಡಾನ್‌’ ಶ್ರೇ­ಣಿಯ ಆರಾಮದಾಯಕ ಕಾರು­ಗಳಿಗೆ ಆಯ್ಕೆ ಬದಲಿಸುತ್ತಿರುವ ಕಾಲವಿದು. ಹೀಗಾಗಿ ಮೆಟ್ರೊ ನಗರಗಳಿಗೆ ಮಾತ್ರ ಸೀಮಿ­ತವಾಗಿದ್ದ ಆಡಿ, ಬೆಂಜ್‌, ಜಾಗ್ವಾರ್‌, ಬಿಎಂ­ಡಬ್ಲ್ಯು, ಫೋಕ್ಸ್‌ವ್ಯಾಗನ್‌, ವೋಲ್ವೊ­ನಂತಹ ಐಷಾ­ರಾಮಿ ಕಾರುಗಳು ಈಗ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಿ­ನಂತಹ ಎರಡು ಮತ್ತು ಮೂರನೇ ಹಂತದ ನಗರಗಳ ರಸ್ತೆಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಆಧುನಿಕ ಜೀವನ ಶೈಲಿಯ ಭಾಗವಾಗಿರುವ ‘ಬ್ರಾಂಡ್‌’ ಪರಿಕಲ್ಪನೆ ಕಾರು ಖರೀದಿ ವಿಚಾರದಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಹೀಗಾಗಿ ಒಮ್ಮೆ ಸುಮ್ಮನೆ ರಸ್ತೆ ಮೇಲೆ ಕಣ್ಣಾಡಿಸಿದರೂ ಮಾರುತಿ, ಹುಂಡೈ, ಟಾಟಾ, ಜನರಲ್‌ ಮೋಟಾರ್ಸ್‌ನ ಸಾಂಪ್ರದಾಯಿಕ ಕಾರುಗಳನ್ನು ಹಿಂದಿಕ್ಕಿ, ರೆನೊ ಡಸ್ಟರ್‌, ಫೋರ್ಡ್‌ ಎಕೊ ಸ್ಪೋರ್ಟ್ಸ್‌, ಫೋಕ್ಸ್‌ವ್ಯಾಗನ್‌ ಪೋಲೊ, ಫಿಯಟ್‌ ಪುಂಟೊ, ಮಹೀಂದ್ರಾ 500 ನಂತಹ ಹೊಸ ತಲೆಮಾರಿನ ‘ಎಸ್‌ಯುವಿ’ಗಳು ಮುನ್ನು­­ಗ್ಗುತ್ತಿರುವುದನ್ನೂ ಕಾಣಬ­ಹುದು.

ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟದ (ಎಸ್‌ಎಐಎಂ) ಅಂಕಿ ಅಂಶದಂತೆ ದೇಶದಲ್ಲಿ ಪ್ರತಿ ತಿಂಗಳು ಸರಾ­ಸರಿ 1.5 ಲಕ್ಷ ಕಾರುಗಳು ಮಾ­ರಾ­ಟ­ವಾಗುತ್ತವೆ. ಇದರಲ್ಲಿ ವಿಲಾಸಿ ಕಾರುಗಳ ಮಾರುಕಟ್ಟೆ ಗಾತ್ರ ಶೇ 2ಕ್ಕಿಂತಲೂ ಕಡಿಮೆ. ಒಂದು ವರ್ಷದಲ್ಲಿ 10 ಸಾವಿರ ವಿಲಾಸಿ ಕಾರುಗಳು ಮಾ­ರಾ­ಟವಾದರೆ ಅದೇ ಹೆಚ್ಚು. ಆದರೆ, ಸಣ್ಣ ಕಾರುಗಳಿಗೆ ಹೋಲಿಸಿದರೆ ‘ಸೆಡಾನ್‌’ ಕಾರುಗಳ ಮಾರಾಟ ಪ್ರತಿ ತಿಂಗಳು ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಬಿಎಂಡಬ್ಲ್ಯು ಕಂಪೆನಿ ಭಾರತೀಯ ಮಾರುಕಟ್ಟೆ ಮುಖ್ಯಸ್ಥ ಫಿಲಿಪ್‌ ವೊನ್‌ ಸೆಹ್ರ್‌. ತಿಂಗಳಿಗೆ 650 ರಿಂದ 700 ವಿಲಾಸಿ ಕಾರುಗಳು ಮಾರಾಟವಾಗಬಹುದು. ಆದರೆ, ಈ ಕ್ಷೇತ್ರ ಮಾಸಿಕ ಶೇ 25ರಿಂದ ಶೇ 30ರಷ್ಟು ಪ್ರಗತಿ ಕಾಣುತ್ತಿದೆ. ಇದೇ ವೇಳೆ ಸಣ್ಣ ಕಾರುಗಳ ಮಾರಾಟ ಇದೇ ಸರಾಸರಿಯಲ್ಲಿ ಇಳಿಕೆ ಕಾಣುತ್ತಿದೆ ಎನ್ನುತ್ತಾರೆ ಅವರು.

ಭಾರತದ ಎರಡು ಮತ್ತು ಮೂರನೆಯ ಹಂತದ ನಗರಗಳಲ್ಲಿ ಮುಖ್ಯವಾಗಿ ಯುವ ಉದ್ಯಮಿಗಳಿಂದ ‘ಸೆಡಾನ್‌’ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ನಾವು ಆರು ಹೊಸ ಮಾದರಿ­ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಎಂ 3 ಸೆಡಾನ್‌, ಎಂ 4 ಕೂಪ್‌, ಎಂ–5 ಸೆಡಾನ್‌, ನ್ಯೂ ಎಕ್ಸ್‌ 3 ಇದರಲ್ಲಿ ಪ್ರಮುಖವಾದವು. ಇವುಗಳ ಎಕ್ಸ್‌ಷೋರೂಂ ಬೆಲೆ ₨80 ಲಕ್ಷದಿಂದ ₨1. 75 ಕೋಟಿವರೆಗೆ ಇದೆ. ಉದಯಪುರ, ಮಂಗಳೂರು, ನಾಗಪುರ­­ದಂತಹ ಎರಡನೆಯ ಹಂತದ ನಗರಗಳಲ್ಲೂ ಹೊಸ ಡೀಲರ್‌ಶಿಪ್ ಅಲ್ಲದೆ ಲಖನೌದಂತಹ ಪುಟ್ಟ ನಗರದಲ್ಲೇ ಕಳೆದ ವರ್ಷ ಹೊಸದಾಗಿ ಡೀಲರ್‌ಶಿಪ್‌ ಪ್ರಾರಂಭಿಸಿ 200 ಕಾರುಗಳನ್ನು ಮಾರಾಟ ಮಾಡಿ­ದ್ದೇವೆ  ಎನ್ನುವುದು ಫಿಲಿಪ್‌ ಅವರು ನೀಡುವ ವಿವರಣೆ. 

ಆಲ್‌ ನ್ಯೂ ಆ್ಯಕ್ಟಿವ್‌ ಹೈಬ್ರಿಡ್‌ 7


ಕಂಪ್ಲೀಟ್‌ ಬಿಲ್ಟ್‌ ಯುನಿಟ್‌ (ಸಿಬಿಯು) ಮುಖಾಂತರ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಈ ಕಾರು, ‘ಎಮಿಷನ್‌ ಫ್ರೀ ಪ್ಯೂರ್‌ ಎಲೆಕ್ಟ್ರಿಕ್‌ ಡ್ರೈವಿಂಗ್‌ ಇಂಟೆಲಿಜೆಂಟ್‌ ಎನರ್ಜಿ ಮ್ಯಾನೇಜ್‌ಮೆಂಟ್‌’ ವ್ಯವಸ್ಥೆ ಹೊಂದಿರುವ ದೇಶದ ಮೊದಲ ವಿಲಾಸಿ ಕಾರು. ಅಂದರೆ ಅತ್ಯಂತ ಕಡಿಮೆ ಇಂಧನ ಬಳಸಿಕೊಳ್ಳುತ್ತದೆ ಮತ್ತು ಸ್ವಲ್ಪವೂ ಹೊಗೆ (ಇಂಗಾಲ) ಉಗುಳುವುದಿಲ್ಲ. ‘ಹೈಬ್ರಿಡ್‌ ಸೆಡಾನ್‌’ ವರ್ಗದಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಈ ವಿಲಾಸಿ ಸುಂದರಿಯ ಬೆಲೆ 1.35 ಕೋಟಿ. ಸದ್ಯ ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲಿ ಮಾತ್ರ ಲಭ್ಯ. ಟೊಯೊಟಾ ಕ್ಯಾಮ್ರಿ ಮತ್ತು ಪ್ರಿಯಸ್‌ ಹೈಬ್ರಿಡ್‌ ಮಾದರಿಗಳಿಗೆ ಇದು ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ.

ಸ್ಥಳ ಮತ್ತು ಸೌಂದರ್ಯದ ಸಮ್ಮಿಲನ
ಬೇಕಾ­ದಷ್ಟು ಸ್ಥಳಾವಕಾಶ ಮತ್ತು  ಅಪೂರ್ವ ಸೌಂದರ್ಯ ಹೈಬ್ರಿಡ್‌ 7ನ ವಿಶೇಷತೆ. ಐಷಾರಾಮದ ಜತೆಗೆ ಸವಾರನಿಗೆ ಆರಾಮದಾಯಕ ಅನುಭವವೂ ಲಭಿಸಲಿದೆ. ಇಂಟೆಲಿಜೆಂಟ್‌ ಎನರ್ಜಿ ಮ್ಯಾನೇಜ್‌ಮೆಂಟ್‌ ವ್ಯವಸ್ಥೆ­ಯಿಂ­ದಾಗಿ ಒಂದೇ ಒಂದು ಹನಿ ಪೆಟ್ರೋಲ್‌ ಕೂಡ  ಅನಗತ್ಯವಾಗಿ ಪೋಲಾಗುವು ದಿಲ್ಲ. ಜತೆಗೆ ಈ ತಂತ್ರಜ್ಞಾನ ಹೆಚ್ಚುವರಿ ವಿದ್ಯುತ್‌ ಶಕ್ತಿ­ಯನ್ನು ಒಂದೆಡೆ ಸಂಗ್ರಹಿಸಿಟ್ಟು ಅಗತ್ಯ­ವಿದ್ದಾಗ ಚಾಲನೆಗೆ ಪೂರೈಸುತ್ತದೆ. ಬಿಎಂಡಬ್ಲ್ಯು 7 ಸರಣಿಯ ಎಂಜಿನ್‌ ಸಾಮರ್ಥ್ಯ ಮತ್ತು  ಕಾರ್ಯಕ್ಷಮತೆ­ಯನ್ನು ಹೈಬ್ರಿಡ್‌ ಸರಣಿಯಲ್ಲೂ ಉಳಿಸಿ­ಕೊಳ್ಳಲಾಗಿದೆ. ಹಾಗೆಂದು ಐಷಾ­ರಾಮಿ ಅನುಭವದಲ್ಲಿ ಯಾವುದೇ ರಾಜಿ ಮಾಡಿಲ್ಲ. ಇಲ್ಲಿ ‘ಸೆಡಾನ್‌’ನ ಎಲ್ಲ ವೈಶಿಷ್ಠ್ಯಗಳಿಗೆ ವಿಲಾಸಿ ಸ್ಪರ್ಶ ನೀಡಲಾಗಿದೆ ಎನ್ನುತ್ತಾರೆ ಫಿಲಿಪ್‌.

ಹೊಸ ಅಡಾಪ್ಟಿವ್‌ ಎಲ್‌ಇಡಿ ಹೆಡ್‌ಲೈಟ್ಸ್‌ ಕಾರಿನ ಮುಂಭಾಗಕ್ಕೆ ಆಕರ್ಷಕ ರೂಪ ನೀಡಿದೆ. ಮುಂಭಾಗದ ಏಪ್ರನ್‌­­ನ­ಲ್ಲಿರುವ ಹೊಸ ಕಿಡ್ನಿ ಗ್ರಿಲ್‌ ಸ್ಲಾಟ್ಸ್‌ ಮತ್ತು ಕ್ರೋಮ್‌ ಅಕ್ಸೆಂಟ್ಸ್‌ ಒಟ್ಟಾರೆ ನೋಟವನ್ನು ಇನ್ನಷ್ಟು ಮೋಹಕ­ಗೊಳಿಸಿದೆ. ಆ್ಯಕ್ಟಿವ್‌ ಹೈಬ್ರಿಡ್‌ 7ನ ರಿಯರ್‌ನಲ್ಲಿ ಸಿ ಪಿಲ್ಲರ್‌ಗಳ ಮೇಲೆ  ಮತ್ತು ಎಂಜಿನ್‌ ಕವರ್‌ನಲ್ಲಿ ವಿಶೇಷ ಲೆಟರಿಂಗ್‌ ಇದೆ. ಕಾಕ್‌ಪಿಟ್‌ ಚಾಲಕನ ಕಡೆಗೆ ಬಾಗಿದ್ದು, ಎಲ್ಲ ನಿಯಂತ್ರಣಗಳು ಸುಲಭವಾಗಿ ಕೈಗೆಟುಕುವಂತಿದೆ. ಕಾರಿನ ಬಾಗಿಲು­ಗಳು ಮುಚ್ಚಿದಾಗ ಒಂದು ಸಣ್ಣ ಶಬ್ದ ಕೂಡ ಕೇಳಿಸುವುದಿಲ್ಲ. ಅಷ್ಟೇ ಅಲ್ಲ ಒಳಗೆ ಕುಳಿತರೆ ಹೊರಗೆ ಭೂಕಂಪವಾದರೂ ಗೊತ್ತಾಗುವುದಿಲ್ಲ.  ಶಬ್ದ ನಿರೋಧಕ ತಂತ್ರಜ್ಞಾನ ಹಾಗಿದೆ. ಇನ್ನು ವಿಶಾಲ ಸೀಟುಗಳು ಅತ್ಯಂತ ಆರಾಮ­ದಾಯಕ ಅನುಭವ ನೀಡುತ್ತದೆ. ದೂರ ಪ್ರಯಾಣಕ್ಕೆ ಇದು ಹೇಳಿ ಮಾಡಿಸಿದಂತಿದೆ. ಆ್ಯಂಬಿಯೆಂಟ್‌ ಲೈಟಿಂಗ್‌­­ನಿಂದಾಗಿ ಕಾರಿನ ಒಳಾಂಗಣದ ಬೆಳಕಿನ ಬಣ್ಣ ಬದಲಾಗುತ್ತಿರುತ್ತದೆ.

ಕಾರಿನ ಮೇಲ್ಭಾಗದಲ್ಲಿ (ರೂಫಿಂಗ್‌) ಗರಿಷ್ಠ ಗುಣಮಟ್ಟದ ಪ್ಯಾನೊರಮಿಕ್‌ ಗ್ಲಾಸ್‌ ಅಳವಡಿಸಲಾ­ಗಿದೆ. ಇದರಿಂದ  ಒಳಗೆ ಕುಳಿತವರಿಗೆ ತಲೆ ಎತ್ತಿದರೆ ನಿಲಾಕಾಶ, ಆಗಸಕ್ಕೆ ಮುಖಮಾಡಿ ನಿಂತಿರುವ ಮರಗಳು ಸಹಜವಾದ ನೈಸರ್ಗಿಕ ಬಣ್ಣದಲ್ಲೇ ಕಾಣಿಸುತ್ತದೆ. ಆದರೆ, ಹೊರಗಿ­ನಿಂದ ನೋಡಿ­ದರೆ ಒಳಗೆ ಕುಳಿತವರು ಕಾಣುವುದಿಲ್ಲ. ಹೈಬ್ರಿಡ್‌ 7 ಕಾರುಗಳು ಎಲೆಕ್ಟ್ರಿಕ್‌ ಮೋಟಾರ್‌ ಮತ್ತು ಪೆಟ್ರೋಲ್‌ ಎಂಜಿನ್‌ ಪರಿಪೂರ್ಣ ಸಂಯೋಜನೆ­ಯಲ್ಲಿ ಕೆಲಸ ಮಾಡುತ್ತದೆ. ಲೀಥಿಯಂ ಐಯಾನ್‌ ಹೈ ಪರ್ಫಾರ್ಮೆನ್ಸ್‌ ಬ್ಯಾಟರಿ ಹೊಂದಿದೆ. ಬ್ರೇಕ್‌ ಹಾಕಿದಾಗ ಎನರ್ಜಿ ರೀಜನರೇಷನ್‌ ತಂತ್ರಜ್ಞಾನದ ಮೂಲಕ ಬ್ಯಾಟರಿ ಚಾರ್ಜ್‌ ಆಗುತ್ತದೆ.

ಬಿಎಂಡಬ್ಲ್ಯು ಟ್ವಿನ್‌ ಪವರ್‌ ಟರ್ಬೊ ಸಿಕ್ಸ್‌ ಸಿಲಿಂಡರ್‌ ಇನ್‌ ಲೈನ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಇದರಿಂದ ಓವರ್‌ಟೇಕ್‌ ಮಾಡುವಾಗ ಹೆಚ್ಚಿನ ಇಂಧನ ಬಳಸದೇ ಹೆಚ್ಚುವರಿ ಶಕ್ತಿ ನೀಡುತ್ತದೆ. ಹೈಬ್ರಿಡ್‌ ಪರ್ಫಾರ್ಮೆನ್ಸ್‌ನಲ್ಲಿ ಈ ಕಾರು ಕೇವಲ 5.7 ಸೆಕೆಂಡು ಗಳಲ್ಲಿ 0 ಯಿಂದ 100 ಕೀ.ಮೀ ವರೆಗೆ ವೇಗ ವರ್ಧಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಗರಿಷ್ಠ 250 ಕೀ.ಮೀ ವೇಗ ಪಡೆದು ಕೊಳ್ಳಲಿದೆ.  ಕಾರು ತನ್ನ ಗರಿಷ್ಠ ವೇಗ ಮಟ್ಟವನ್ನು (250 ಕೀ.ಮೀ) ತಲುಪಿದಾಗ ವಿದ್ಯುನ್ಮಾನವಾಗಿ ನಿಯಂತ್ರಣಕ್ಕೊಳಗಾಗಲಿದೆ.

ಪ್ಯೂರ್‌ ಎಲೆಕ್ಟ್ರಿಕ್‌ ಮೂಡ್‌ಗೆ ಬದಲಾಯಿಸಿಕೊಂಡರೆ ಹೊಗೆ ಉಗುಳದೆ 60 ಕೀ.ಮೀ ವೇಗದಲ್ಲಿ ನಾಲ್ಕು ಕಿಲೊ­ಮೀಟರ್‌ ದೂರದವರೆಗೆ ಚಾಲನೆ ಮಾಡಬಹುದು. ಚಾಲಕ ತನಗೆ ಬೇಕಾದ ಹಾಗೆ ಚಾಲನೆ ವಿಧಾನ ಆಯ್ಕೆ ಮಾಡಿಕೊಳ್ಳಬಹುದು.  ಎಕೊ ಪ್ರೊ, ಕಂಫರ್ಟ್‌ ಮೂಡ್‌, ಸ್ಪೋರ್ಟ್ಸ್‌ ಮೂಡ್‌ ಮತ್ತು ಸ್ಪೋರ್ಟ್ಸ್‌ ಪ್ಲಸ್‌ ಮೂಡ್‌ನಲ್ಲಿಟ್ಟು ಕಾರು ಚಲಾಯಿಸಬಹುದು. ಏಯ್ಟ್‌್ ಸ್ಪೀಡ್‌ ಆಟೊಮ್ಯಾಟಿಕ್‌ ಟ್ರಾನ್ಸ್‌­ಮಿಷ­ನ್‌­ನಲ್ಲಿ ಎಲೆಕ್ಟ್ರಿಕ್‌ ಎಂಜಿನ್‌ ಮತ್ತು ಸೆಪರೇಟಿಂಗ್‌ ಕ್ಲಚ್‌ ಇದೆ. ಇದರಿಂದ ಸರಳ ಗೇರ್‌ ಬದಲಾವಣೆ ಮತ್ತು ಅತ್ಯಂತ ಮೃದು ಚಾಲನೆ ಅನುಭವ ಲಭಿಸುತ್ತದೆ. ಹಿಂದಿನ 15 ನಿಮಿಷಗಳ ವಿದ್ಯುತ್‌ ಬಳಕೆ ವಿವರ ಸಹ ಸೆಂಟರ್‌ ಕನ್ಸೋಲ್‌ನ ಬಾರ್‌ ಚಾರ್ಟ್‌ನಲ್ಲಿ ಕಾಣುತ್ತದೆ.

ಹೊಸ ತಲೆಮಾರಿನ ಬಿಎಂಡಬ್ಲ್ಯು ‘ಐ ಡ್ರೈವ್‌’ ತಂತ್ರಜ್ಞಾನವೂ ಇದರಲ್ಲಿದೆ. ಜಿಪಿಎಸ್‌ ತಂತ್ರಜ್ಞಾನ ಹೊಂದಿರುವ ನೇವಿಗೇಷನ್‌ ಪ್ರೊಫೆನಲ್ಸ್‌ ಜತೆಗೆ ಹಿಂಭಾಗದ ಸೀಟುಗಳಿಗೆ ವಿಮಾನದ ಹಿಂಬದಿ ಸೀಟುಗಳಿಗೆ ಅಳವಡಿಸಿರುವಂತೆ ಎರಡು ಹೊಸ ವಿನ್ಯಾಸದ 9.6 ಇಂಚಿನ ದೃಶ್ಯ ಪರದೆ  ಅಳವಡಿಸಲಾಗಿದೆ. ಇದರ ಜತೆಗೆ ವಿಶಾಲ ಗಾತ್ರದ ಫೋಲ್ಡಿಂಗ್‌ ಟೇಬಲ್‌ಗಳು ಮುಂದಿನ ಸೀಟಿನ ಬ್ಯಾಕ್‌ರೆಸ್ಟ್‌ಗೆ ಜೋಡಿ­ಸಲಾಗಿದೆ. ಕಾರಿನೊಳಗೆ ಕುಳಿತು ಆರಾಮ­ವಾಗಿ  ಆಹಾರ ಸೇವಿಸಲು ಮತ್ತು ಭರಪೂರ ಮನರಂಜನೆ ಅನುಭವ ಪಡೆಯುವಂತೆ ಒಳಾಂಗಣ ವಿನ್ಯಾಸಗೊಳಿಸಲಾಗಿದೆ. ಆಲ್‌ ನ್ಯೂ ಆ್ಯಕ್ಟಿವ್‌ ಹೈಬ್ರಿಡ್‌ 7 ಆಲ್ಫೈನ್‌ ವೈಟ್‌, ಗ್ಲೇಸಿಯರ್‌ ಸಿಲ್ವರ್‌, ಹವಾನ್ನ ಸಫೈರ್‌ ಬ್ಲ್ಯಾಕ್‌, ಕಾಶ್ಮೀರಿ ಸಿಲ್ವರ್‌, ಮಿಲನೊ ಬ್ಲೀಜ್‌, ಸ್ಪೇಸ್‌ ಗ್ರೇ, ಇಂಪೀರಿಯಲ್‌ ಬ್ಲೂ, ಐವರಿ ವೈಟ್‌, ಸೇರಿದಂತೆ 9 ಬಣ್ಣಗಳಲ್ಲಿ ಲಭ್ಯ. ವಿಲಾಸಿ ಕಾರಿನ ಮೋಹಿಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಆಯ್ಕೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT