ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸಾರ್ ಮಂಡಳಿಯಲ್ಲೂ ಮೊಂಡು ಕತ್ತರಿ..!

Last Updated 9 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸಾಮಾಜಿಕ ವ್ಯವಸ್ಥೆ ನಮ್ಮ ಗ್ರಹಿಕೆಗೆ ನಿಲುಕದಷ್ಟು ಕಲುಷಿತವಾಗಿದೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಮಾತು–-ಕೃತಿಯ ನಡುವೆ ತಾಳ ಮೇಳವಿಲ್ಲದ ಮಂದಿ ಹೆಚ್ಚಾಗುತ್ತಿದ್ದಾರೆ. ಸಾರ್ವಜನಿಕ ವಲಯ­ದಲ್ಲಿ ನಿಂತು ಹಸಿ ಸುಳ್ಳುಗಳನ್ನೇ ಹಾರಿಬಿಡು­ವವರ ಸಂಖ್ಯೆ ಕಡಿಮೆಯಿಲ್ಲ. ಹೀಗಿರುವಾಗ ಆದರ್ಶಗಳ ಬಗ್ಗೆ ಕನಸು ಕಾಣುತ್ತಾ ಆದರ್ಶ­ಗಳನ್ನೇ ನಿರೀಕ್ಷಿಸುತ್ತಾ ಬದುಕುವವರು ಮನೋ­ವ್ಯಾಕುಲಕ್ಕೆ ಸಿಲುಕದಿದ್ದರೆ ಸಾಕು. ಪ್ರಭುತ್ವಗಳು ಸಮಚಿತ್ತದಲ್ಲಿ ವ್ಯವಹರಿಸುವ ಬದಲು ತಾಳ್ಮೆ ಕಳೆದುಕೊಂಡು ವ್ಯವಹರಿಸುವಂತಾಗಿದೆ. ಭ್ರಷ್ಟಾ­ಚಾರ ಮತ್ತು ಅತ್ಯಾಚಾರಗಳೆರಡೂ ವ್ಯಾಪಕ­ವಾಗಿ ಚರ್ಚೆಯಾಗುತ್ತಿವೆ. ಅವು ಘಟಿಸುತ್ತಿರುವ ಪ್ರಮಾಣವೂ ಹೆಚ್ಚಾಗುತ್ತಿರುವುದು ವಿಷಾದಕರ.

ಮಾಧ್ಯಮಗಳಂತೂ ಮಾರುಕಟ್ಟೆಯ ವಿಸ್ತರ­ಣೆಯ ಸಾಧನಗಳಾಗಿಯೇ ವ್ಯವಹರಿಸ­ತೊಡ­ಗಿವೆ. ಟಿ.ವಿ. ಚಾನೆಲ್‌ಗಳು  ತನ್ನೆದುರು ಕಾರ್ಯ­ಕ್ರಮಗಳನ್ನು ನೋಡಲು ಕುಳಿತುಕೊಳ್ಳುವವರನ್ನು ಸರಕನ್ನಾಗಿ ಮಾರ್ಪಡಿಸುವವರೆಗೂ ಪಟ್ಟು ಬಿಡ­ದಂತೆ ಕಾರ್ಯಕ್ರಮಗಳನ್ನು ರೂಪಿಸಿ ತನ್ನ ತೆಕ್ಕೆಗೆ ವೀಕ್ಷಕರನ್ನು ಸೆಳೆಯುವ ಕಸರತ್ತನ್ನು ನಿರಂತರ­ವಾಗಿ ಮಾಡುತ್ತಿವೆ. ಜೊತೆಗೆ ಇಡೀ ಕುಟುಂಬ ನೆಮ್ಮದಿಯಿಂದ ಕುಳಿತು ನೋಡದಂತಹ ಕಾರ್ಯ­ಕ್ರಮ ಮತ್ತು ಜಾಹೀರಾತುಗಳನ್ನು ಭರ್ಜರಿ­ಯಾಗಿ ಪ್ರಚಾರ ಮಾಡುವಲ್ಲಿ ತೊಡಗಿಕೊಂಡಿವೆ.

ಕಾಂಡೋಮ್ ಜಾಹೀರಾತು ನೋಡಿದ ಪುಟ್ಟ ಮಗ ‘ಅಪ್ಪಾ ಅದೇನು..? ಇದು ಯಾವುದರ ಜಾಹೀರಾತು?’ ಎಂದು ಕುತೂ­ಹಲದಿಂದ ಕೇಳುವ ರಭಸದಲ್ಲಿಯೇ ಪಾಲಕರಿಗೆ ಉತ್ತರಿಸಲಾಗದ ಸಂದಿಗ್ಧ ಸ್ಥಿತಿಯನ್ನು ನಿರ್ಮಿಸಿದ ಕೊಡುಗೆ ಈ ಜಾಹೀರಾತುಗಳಿಗೆ ಸಲ್ಲುತ್ತದೆ.
ಇತ್ತೀಚೆಗೆ ಬರುವ ಸಿನಿಮಾಗಳ ಬಗ್ಗೆಯಂತೂ ಮಾತನಾಡುವುದೇ ಬೇಡ. ಎಲ್ಲ ಬಗೆಯ ಮಸಾ­ಲೆ­ಯನ್ನೂ ಭರಪೂರವಾಗಿ ತುಂಬಿ ಯುವಜನತೆ­ಯನ್ನು ಆಕರ್ಷಿಸುವ ಜೊತೆಗೆ ಅವರ ದಾರಿ­ತಪ್ಪಿಸುವ ದಿಸೆಯಲ್ಲಿಯೂ ಕೆಲ ಚಿತ್ರಗಳು ಪರೋಕ್ಷವಾಗಿ ನೆರವಾಗುತ್ತಿವೆ. ೩–೪ ದಶಕಗಳ ಹಿಂದೆ ಸ್ಥಿತಿ ಹೀಗಿರಲಿಲ್ಲ. 

ಆಗ ಸಿನಿಮಾ ಅತ್ಯಂತ ಮೌಲಿಕವಾಗಿತ್ತು. ಆದರೆ ಈಗ ಆ ಬಗೆಯ ಚಿತ್ರ­ಗಳು ಅಪರೂಪ. ಆಗ ಒಂದು ಸಿನಿಮಾ ನೋಡು­ವುದೆಂದರೆ ಒಂದು ಒಳ್ಳೆಯ ಕೃತಿ ಓದಿದ ಅನು­ಭವವಾಗುತ್ತಿತ್ತು. ಒಂದು ಸುಂದರ ದೃಶ್ಯಕಾವ್ಯ ಸವಿದ ಖುಷಿ ಇರುತ್ತಿತ್ತು. ನೀವು ಟಿಕೆಟ್‌ಗೆ ಕೊಟ್ಟ ದುಡ್ಡು ಪೈಸೆಗೆ ಪೈಸೆ ವಸೂಲಾಗುತ್ತಿತ್ತು. ಈಗ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಈಗ ಅದ್ದೂರಿ­ಯಾದ ಚಿತ್ರಮಂದಿರಗಳಿವೆ. ಆದರೆ ಜೀವನಕ್ಕೆ ಮಾರ್ಗದರ್ಶಿಯಾಗಬಹುದಾದ ಸಿನಿಮಾಗಳು ಬರುತ್ತಿಲ್ಲ. ಆ ಬಗೆಯ ಕತೆಗಳು ದೊರೆಯುತ್ತಿಲ್ಲ, ಆ ರೀತಿಯ ನಿರ್ದೇಶಕರಿಲ್ಲ, ನಟರಿಲ್ಲ ಎನ್ನುವ ಕಾರಣಗಳು ನೆಪವಾಗಬಹುದು. ವಸ್ತು ಸ್ಥಿತಿ ಏನೆಂದರೆ ಪ್ರೇಕ್ಷಕನ ಮನಸ್ಥಿತಿ ಬದಲಾಗಿದೆ, ಪೀಳಿಗೆಯ ಅಂತರದ ಮಾತುಗಳು ಹೆಚ್ಚಾಗಿವೆ.

ನಾನು ಅತ್ಯಂತ ಇಷ್ಟಪಟ್ಟು ನೋಡಿದ ಹಳೆಯ ಸಿನಿಮಾ ನನ್ನ ಮಗನಿಗೆ ಇಂದು ಅಲರ್ಜಿ­ಯಾ­ಗ­ತೊಡಗಿದೆ. ನಮ್ಮ ಮುಂದೆ ಆಗ ಆಯ್ಕೆಗಳೇ ಇರ­ಲಿಲ್ಲ. ಈಗ ಅವನ ಮುಂದೆ ಸಾಕಷ್ಟು ಆಯ್ಕೆ­ಗಳಿವೆ. ಹಾಗೆಂದೇ ಆತ ಟಕ ಟಕ.. ಎಂದು ರಿಮೋಟ್ ಬಟನ್ ಒತ್ತುತ್ತಲೇ ಹೋಗುತ್ತಾನೆ. ಕೊನೆಗೂ ಅವನ ಮನಸು ಸಮಾಧಾನ ಅನುಭವಿಸಿರುವುದಿಲ್ಲ.

ಈಚೆಗೆ ಬರುತ್ತಿರುವ ಸಿನಿಮಾಗಳು ಗಲ್ಲಾ ಪೆಟ್ಟಿಗೆ ತುಂಬಿಸುವ ಸೂತ್ರವನ್ನು ಮಾತ್ರ ಅನು­ಸರಿಸುತ್ತಿವೆ. ಆ ಸಿನಿಮಾ ಬೀರುವ ಪರಿಣಾಮದ ಬಗ್ಗೆ ಯೋಚಿಸುವ ಸ್ಥಿತಿಯಿಲ್ಲ. ಗಲ್ಲಾ ಪೆಟ್ಟಿಗೆ­ಯಲ್ಲಿ ಚಿತ್ರ ಗೆದ್ದರೆ ತೀರಿತು. ಆ ಸಿನಿಮಾ ನೀಡುವ ಸಂದೇಶವೇನು ಎನ್ನುವ ಬಗ್ಗೆ ಕೊನೆಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅತ್ಯಂತ ಅಸಂಬದ್ಧವಾದ ಸಂಭಾಷಣೆ, ದೃಶ್ಯ ಇರುವ ಚಿತ್ರಗಳೂ ಗಲ್ಲಾ ಪೆಟ್ಟಿ­ಗೆಯಲ್ಲಿ ಗೆದ್ದಿರಬಹುದು. ಕೆಲ ಚಿತ್ರ­ಗಳಂತೂ ಪ್ರದರ್ಶನಕ್ಕೂ ಯೋಗ್ಯವಿರುವುದಿಲ್ಲ ಹಾಗಿರುವಾಗಲೂ ಅವು ಸುಸೂತ್ರವಾಗಿ ಸೆನ್ಸಾರ್ ಮಂಡಳಿಯ ಕತ್ತರಿಯಿಂದ ಪಾರಾಗಿ ಬರುವುದಿದೆ. ಇದರರ್ಥ ಸೆನ್ಸಾರ್ ಮಂಡಳಿಯ ಕತ್ತರಿ ಮೊಂಡಾಗಿರಬೇಕು ಇಲ್ಲವೇ ಅಲ್ಲೂ ಕೂಡಾ ಅಪರಾತಪರಾ ವ್ಯವಹಾರಗಳು ನಡೆ­ದಿರಬಹುದು.

ಹೌದು ನಡೆದದ್ದಿದೆ ಎನ್ನುವದನ್ನು ಈಚೆಗೆ ಸಿಬಿಐ ಸಾಬೀತು ಮಾಡಿದೆ. ಸೆಂಟ್ರಲ್ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಷನ್‌ ಸೆನ್ಸಾರ್ ಬೋರ್ಡ್‌ನ  ಮುಖ್ಯ ಕಾರ್ಯ­ನಿರ್ವಹಣಾ ಅಧಿಕಾರಿ (ಸಿಇಒ), ಒಬ್ಬ ಸಲಹಾ ಸದಸ್ಯ ಮತ್ತು ಏಜೆಂಟ್ ಒಬ್ಬನನ್ನು ಸಿಬಿಐ ಬಂಧಿಸಿ ಅಧಿಕಾರಿಯ ಮನೆಯಲ್ಲಿ  ₨ ೧೦.೫ ಲಕ್ಷ ಹಣ ಮತ್ತು ಬಂಗಾರದ ಆಭರಣ, ಆಸ್ತಿಯ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದೆ.
ಈ ಮಹಾನುಭಾವರು ಛತ್ತೀಸ್‌ಗಡದ ಸಿನಿಮಾ ಒಂದನ್ನು ಸೆನ್ಸಾರ್ ಮಾಡಿ ಪ್ರಮಾಣ­ಪತ್ರ ನೀಡಲು ₨ ೭೦ ಸಾವಿರ  ಲಂಚ ಕೇಳಿದ್ದರು. ಸಿಬಿಐಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಆ ಅಧಿಕಾರಿ ಮತ್ತು ಇನ್ನಿಬ್ಬರು ಸದಸ್ಯರನ್ನು ಸಿಬಿಐ ಬಂಧಿಸಿದೆ. ಇದು ಒಂದು ಝಲಕ್..!

ಇಂಥಾ ಅದೆಷ್ಟು ಕರ್ಮ ಕಾಂಡಗಳು ಜರುಗಿವೆಯೋ ಗೊತ್ತಿಲ್ಲ. ಹೀಗೆ ಸೆನ್ಸಾರ್ ಮಂಡಳಿಯ ಕತ್ತರಿಯ ಒಂದೇ ಒಂದು ಅಲಗು ಮೊಂಡಾದರೂ ಸಾಕು ಕಳಪೆ ಚಿತ್ರಗಳು ತೆರೆಗೆ ಬಂದುಬಿಡುತ್ತವೆ. ಜೊತೆಗೆ ಯಾವುದೇ ರೀತಿಯ ಗಾಂಭೀರ್ಯವೂ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕನಲ್ಲಿ ಉಳಿ­ಯುವುದಿಲ್ಲ. ಹಣ ಕೊಟ್ಟರೆ ಎಲ್ಲವೂ ಸಾಧ್ಯ ಎನ್ನುವ ಮನಸ್ಥಿತಿಯೇ ತುಂಬಾ ಕೆಟ್ಟದ್ದು. ಗುಣಾ­ತ್ಮಕ ಚಿತ್ರಗಳು ಮತ್ತು ಕಳಪೆ ಚಿತ್ರಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿದಂತಾಗುತ್ತದೆ. ಈ ಬಗೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೊಂಡುಕತ್ತರಿಯನ್ನು ಹಿಡಿದು ಕುಳಿತವರನ್ನು ತುರ್ತಾಗಿ ಸೆನ್ಸಾರ್ ಮಾಡ­ಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಪ್ರೇಕ್ಷಕನ ಎದುರಲ್ಲಿ ಸರಿ–ತಪ್ಪುಗಳ ಆಯ್ಕೆಗಳೇ ಇಲ್ಲದಿರ­ಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT