ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸಾರ್ ಮಂಡಳಿಯೂ ನಮ್ರತೆಯ ಕೊರತೆಯೂ

ಅಕ್ಷರ ಗಾತ್ರ

‘ಗಾಳಿ ಬೀಜ’ ಪ್ರಾಯೋಗಿಕ ಚಿತ್ರ. ಅದು ಸಿನಿಮಾ ಮಂದಿರದ ಟಿಕೆಟ್ ಕೌಂಟರ್‌ನಲ್ಲಿ ಹಣ ತಂದು ಸುರಿಯುವ ಚಿತ್ರ­ವಲ್ಲ. ಬದಲಾಗಿ, ಪ್ರತಿಮೆಗಳು ಮತ್ತು ಸಂಕೇತ­ಗಳನ್ನೊಳಗೊಂಡ ಹೊಸ ಪ್ರಯೋಗ. ಬಹಳ ಉತ್ಸಾಹದಿಂದ ಬಾಬು ಈಶ್ವರ್ ಪ್ರಸಾದ್ ನಿರ್ದೇಶಿಸಿರುವ ‘ಗಾಳಿ ಬೀಜ’ಕ್ಕೆ ಕೇಂದ್ರ ಚಲನ­ಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರವನ್ನು  ನಿರಾಕರಿಸಿ ವಿವಾದಕ್ಕೆ ಗುರಿಯಾಗಿದೆ. ಮಂಡಳಿಯ ಪ್ರಾದೇ­ಶಿಕ ಅಧಿಕಾರಿ ಬಹುಶಃ ತಮ್ಮ ಇತಿಮಿತಿಯನ್ನು ದಾಟಿ ಹಿರಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರ­ವಳ್ಳಿ ಅವರ ವಿರುದ್ಧ ವೈಯಕ್ತಿಕ ಆಪಾದನೆ­ಗಳನ್ನು ಹೊರಿಸಿದ್ದು ಎಷ್ಟು ಆಶ್ಚರ್ಯವೋ ಅಷ್ಟೇ ತಪ್ಪು.   ಹಿಂದೆ ನಾನು ಕೇಂದ್ರ ಚಲನಚಿತ್ರ ಪ್ರಮಾ­ಣೀ­ಕರಣ ಮಂಡಳಿಯ ಸದಸ್ಯನಾಗಿ, ಪ್ರಾದೇಶಿಕ ಪರಿಶೀಲನಾ ಸಮಿತಿ ಅಧ್ಯಕ್ಷನಾಗಿ ಕಾರ್ಯ­ನಿರ್ವ­ಹಿಸಿದ ವರ್ಷಗಳಲ್ಲಿ ಅಧಿಕಾರಿಗಳು ಇಂಥ ಅನು­ಚಿತ­­ವಾದ ಬಹಿರಂಗ ಜಟಾಪಟಿಗೆ ಅವಕಾಶ ಕೊಟ್ಟಿರಲಿಲ್ಲ. 

ಆ ಅವಧಿಯಲ್ಲಿ ನಮ್ಮನ್ನು ಯಾರು ಬೇಕಾದರೂ ಸಂಪರ್ಕಿಸಬಹುದಿತ್ತು. ಆದರೆ ಅದನ್ನು  ನಮ್ಮ ಮೇಲಿನ ಪ್ರಭಾವದ ಪ್ರಯತ್ನ­ವೆಂದು ನಾವು ಪರಿಗಣಿಸಿರಲಿಲ್ಲ. ನಾವು ಪ್ರಭಾ­ವಕ್ಕೆ ಒಳಗಾಗುವ ವ್ಯಕ್ತಿಗಳಲ್ಲ ಎನ್ನುವ ವಿಷಯ ಎಲ್ಲರಿಗೂ ತಿಳಿದಿತ್ತು. ನಮ್ಮ ಕಾರ್ಯ ಜವಾ­ಬ್ದಾರಿಗೆ ಸಿನಿಮಾ ಪ್ರಪಂಚದ ಎಲ್ಲರೂ ಪೂರಕವಾಗಿ ಸಹಕರಿಸಿದ್ದರು.

‘ಗಾಳಿ ಬೀಜ’ ಚಿತ್ರಕ್ಕೆ ಮಂಡಳಿಯ ಪ್ರಮಾಣ­ಪತ್ರ ನಿರಾಕರಿಸಲು ಅಧಿಕಾರಿ ೩-೪ ಕಾರಣಗಳನ್ನು ಮಾಧ್ಯಮಗಳ ಮೂಲಕ ಜನರ ಮುಂದಿಟ್ಟಿ­ದ್ದಾರೆ. ಅದರಲ್ಲಿ ಕೆಲವು ಹೀಗಿವೆ: ಇದು ಸಾಕ್ಷ್ಯಚಿತ್ರವೋ, ಚಲನಚಿತ್ರವೋ ಸ್ಪಷ್ಟವಿಲ್ಲ. ಇದರ ಕಥೆ ಅರ್ಥವಾಗಲ್ಲ, ಪ್ರೇಕ್ಷಕರಿಗೆ ಚಿತ್ರ ಏನನ್ನೂ ತಿಳಿಸುವುದಿಲ್ಲ.

೧೯೫೨ರ ಸಿನಿಮಾಟೊಗ್ರಾಫ್‌ ಕಾಯ್ದೆಯಲ್ಲಿ ಚಲನಚಿತ್ರ ಸರ್ಟಿಫಿಕೇಟ್ ನೀಡುವ ಉದ್ದೇಶಗಳ­ಲ್ಲೊಂದಾದ  ಚಿತ್ರದ ಸೌಂದರ್ಯ ಗುಣ  ಮತ್ತು ಚಲನಚಿತ್ರ ತಯಾರಿಕೆ ಕಲೆ (cinematically of a good standard) ಎರಡೂ ಇಲ್ಲ. ನಿರಾಕರಣೆಗೆ ಈ ಉದ್ದೇಶವನ್ನು ಉಲ್ಲೇ­ಖಿಸಿದ ಅಧಿಕಾರಿ, ಅದೇ ಪರಿಚ್ಛೇದದ ಮೊದಲ ಭಾಗದಲ್ಲಿರುವ ‘ಸಾಧ್ಯವಾದಷ್ಟು’ (as for as possible) ಎನ್ನುವ ಪದಕ್ಕೆ ಗಮನ ಕೊಟ್ಟಂತೆ ಕಾಣುವುದಿಲ್ಲ. ಹಾಗಾದಾಗ ಉದ್ದೇ­ಶದ ಈ ಎರಡೂ ಅಂಶಗಳ ಪರಿಣಾಮ ನಿರ್ಣಾಯಕವಾಗುವುದಿಲ್ಲ.

ಕೇಂದ್ರ ಸರ್ಕಾರದ ೧೯೫೨ರ ಸಿನಿಮಾ­ಟೊಗ್ರಾಫ್ ಕಾಯ್ದೆ ಅಡಿ ಪ್ರಮಾಣೀಕರಣದ ಉದ್ದೇಶ­ಗಳು ಮತ್ತು ಆ ಉದ್ದೇಶಗಳ ಸಾಕಾರ­ಕ್ಕಾಗಿ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸ­ಲಾಗಿದೆ.  ಆ ಮಾರ್ಗಸೂಚಿಗಳು ಕಾಯ್ದೆಯ ಕೇಂದ್ರ ಬಿಂದು.  ಪ್ರತಿಯೊಂದು ಮಾರ್ಗಸೂಚಿ ಆಧಾರದಲ್ಲಿ  ಚಿತ್ರವನ್ನು ಪರಿಶೀಲಿಸುವುದು ಪರಿಶೀಲನಾ ಅಧಿಕಾರಿಯ ವೈಯಕ್ತಿಕ ಜವಾಬ್ದಾರಿ (ಸೆಕ್ಷನ್ ೨೨/೧೩).
ಮಾರ್ಗಸೂಚಿಗಳನ್ನು ಅನ್ವಯಿಸುವ ಪ್ರಕ್ರಿಯೆ, ಸರ್ಟಿಫಿಕೇಟಿನ ನಿರಾಕರಣೆಯ ನಿರ್ಧಾರ­ಗಳು ಸಂವಿಧಾನದತ್ತವಾದ  ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲ­ಭೂತ ಹಕ್ಕುಗಳ ಚೌಕಟ್ಟಿನೊಳಗೆ ನಡೆಯ­ತಕ್ಕದ್ದು. ಅಂದರೆ, ಚಲನಚಿತ್ರ ಪ್ರಮಾಣೀಕರಣ ಮಂಡಳಿ, ಎಲ್ಲಾ ಮಾರ್ಗಸೂಚಿಗಳನ್ನು ಕೋರ್ಟುಗಳು ಗುರುತಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಕುರಿತ ತೀರ್ಪು­ಗಳಿಗೆ ಅನುಗುಣವಾಗಿ ಮಾತ್ರ ಸರ್ಟಿಫಿಕೇಟನ್ನು ನಿರಾಕರಿಸಬಹುದು (ಉದಾ: ಹಿಂಸಾಚಾರವನ್ನು ವೈಭವೀಕರಿಸುವ ಸಮಾಜವಿರೋಧಿ ಚಟು­ವಟಿಕೆ, ಮಕ್ಕಳ ಮತ್ತು ಮಹಿಳೆಯರ ಮೇಲಿನ ಹಿಂಸಾ­ಚಾರ– ಅತ್ಯಾಚಾರ,  ಅಂಗವಿಕಲರ ಹೀಯಾಳಿಕೆ, ಧಾರ್ಮಿಕ ಅವಹೇಳನ, ರಾಷ್ಟ್ರ­ವಿರೋಧಿ ದೃಶ್ಯ­ಗಳು ಮತ್ತು ಸಂಭಾಷಣೆಗಳ ನಿರ್ಬಂಧ). ಸರ್ಟಿಫಿಕೇಟ್ ನಿರಾಕರಣೆಯು ಸಂವಿಧಾನದ ಸ್ಪಷ್ಟ ಆಶಯ ಹಾಗೂ ಕೋರ್ಟುಗಳ ಆದೇಶಗಳ ಹೊರತಾದ  ನಿರ್ಧಾರವಾಗಲು ಅವಕಾಶವಿಲ್ಲ.

ಚಿತ್ರನಿರ್ಮಾಪಕ ಕೆ.ಎ.ಅಬ್ಬಾಸ್ ಅವರ ‘ಚಾರ್‌ ಶಹರ್‌ ಏಕ್‌ ಕಹಾನಿ’ (ಸಾಕ್ಷ್ಯಚಿತ್ರ, ೧೯೭೧);  ‘ಆಕ್ರೋಶ್’ ಸಾಕ್ಷ್ಯಚಿತ್ರ (ಗೋಧ್ರಾ ಹತ್ಯಾ­ಕಾಂಡ ಬಗ್ಗೆ), ‘ತಮಸ್’ (ಟೆಲಿವಿಷನ್‌ ಸಿನಿಮಾ, ದೇಶವಿಭಜನೆ ಕಾಲದ ಕೋಮುದಳ್ಳುರಿ ಕುರಿತದ್ದು) ಹಾಗೂ ಇನ್ನಿತರ ಅಸಂಖ್ಯಾತ ಪ್ರಕರಣಗಳಲ್ಲಿ ಸಂಕುಚಿತ ಮನೋಭಾವದ ಕತ್ತರಿ ಪ್ರಯೋಗ ಪ್ರಸ್ತಾವಗಳನ್ನು  ವಜಾಮಾಡಿದ ಸುಪ್ರೀಂ ಕೋರ್ಟ್‌ ಸೃಜನಶೀಲವಾದಂತಹ ಪ್ರಯೋಗಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಎಂದು ಘೋಷಿಸಿದೆ.

‘ಚಲನಚಿತ್ರಗಳ ದೃಶ್ಯಗಳನ್ನು ಕತ್ತರಿಸಲು ಅಧಿಕಾರ ಕೊಡುವ ಮಾನದಂಡಗಳು, ಜೀವನ ಮತ್ತು ಸಮಾಜದಲ್ಲಿರುವ ಒಳಿತು ಕೆಡುಕುಗಳನ್ನು ವಿಶ್ಲೇಷಿಸುವ ಸೃಜನಶೀಲ ಕಲೆಗೆ ಗಣನೀಯ ಸ್ವಾತಂತ್ರ್ಯವನ್ನು ಗುರುತಿಸಬೇಕು’ ಎಂದು  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಹಿದಾಯತುಲ್ಲಾ ಅವರು ನಾಲ್ಕು ದಶಕಗಳ ಹಿಂದೆಯೇ ಹೇಳಿದ್ದರು.

‘ಗಾಳಿ ಬೀಜ’ ಸಿನಿಮಾಗೆ  ಸರ್ಟಿಫಿಕೇಟ್‌ ನೀಡು­ವುದರಿಂದ  ಈ ರೀತಿಯ ಯಾವುದೇ ಅಪಾಯ­ವಾಗಲೀ, ಯಾವುದೇ ಮಾರ್ಗಸೂಚಿಯ ಉಲ್ಲಂ­ಘನೆಯಾಗಲೀ ನಡೆದು ಸಮಾಜದ ಮೌಲ್ಯಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆಯೇ? ವಾಕ್‌­ಸ್ವಾತಂತ್ರ್ಯ ಮತ್ತು ಅಭಿ­ವ್ಯಕ್ತಿ ಸ್ವಾತಂತ್ರ್ಯಗಳ ಹಕ್ಕನ್ನು ಭಾರತದ ಸಾರ್ವ­ಭೌಮತ್ವ ಮತ್ತು ಅಖಂ­ಡತೆಯ, ರಾಜ್ಯದ ಭದ್ರತೆಯ, ಸಾರ್ವಜನಿಕ ಸುವ್ಯವಸ್ಥೆಯ, ಸಭ್ಯ­ತೆಯ ಅಥವಾ ನೈತಿಕತೆಯ ಹಿತದೃಷ್ಟಿಯಿಂದ ಅಥವಾ ನ್ಯಾಯಾಲಯದ ನಿಂದನೆಯ, ಅಪ­ರಾ­ಧದ ಚಿತಾವಣೆಯ
ಸಂಬಂಧ­ದಲ್ಲಿ ಯುಕ್ತ ನಿರ್ಬಂಧಗಳನ್ನು ವಿಧಿಸಬಹುದೇ ವಿನಾ ಮತ್ಯಾವ ಆಧಾರ, ನೆಪಕ್ಕೂ ಅವಕಾಶವಿಲ್ಲ. ಅಷ್ಟೇ ಅಲ್ಲ, ‘ಯುಕ್ತ ನಿರ್ಬಂಧ’ವನ್ನೂ ‘ಅಗತ್ಯ­ತೆಯ ಅಡಿಗಲ್ಲು’ (anvil of necessity) ಆಧಾರ­ದಲ್ಲೇ ರುಜುವಾತು ಮಾಡಬೇಕು. ‘ಗಾಳಿ ಬೀಜ’ ಸಿನಿಮಾದ ಕತ್ತರಿಗೆ ಇಂತಹ ಅಗತ್ಯತೆಯ ಅಡಿಗಲ್ಲು  ಇರುವುದಾದರೆ ಅದು ಯಾವುದು?

ರಂಗರಾಜನ್ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನಲ್ಲಿರುವ ಒಂದು ವಾಕ್ಯ ಹೀಗಿದೆ: ‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಒಂದೇ ಹಾಡನ್ನು ಹಾಡಬೇಕೆಂದು ಬಯಸುವುದು ಅನವಶ್ಯಕ.’ ಪ್ರಜಾಪ್ರಭುತ್ವ ಉಳಿಯ ಬೇಕಾದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಅನಿವಾರ್ಯ. ಅದರ ‘ಸಮಂಜಸ’ ನಿರ್ಬಂಧಕ್ಕೆ ಸಂವಿಧಾನದಲ್ಲೇ (ಕಲಂ ೧೯(೨)) ಅವಕಾಶವಿದ್ದರೂ, ಕೋರ್ಟು­ಗಳು ನಿರ್ಬಂಧದ ವ್ಯಾಪ್ತಿಯನ್ನು ಸೀಮಿತ­ಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿವೆ.

ದೇಶದಲ್ಲಿ ಜಾತಿ-, ಕೋಮು ಆಧಾರಿತ ದೃಷ್ಟಿಕೋನದ ಒತ್ತಾಯ, ಚಳವಳಿಗಳಿಂದಾಗಿ ಜಾತಿ,ಮತಗಳ ನಿಂದನೆಯ ಕಾರಣ ಮುಂದಿಟ್ಟು (identity politics) ಸಾಹಿತ್ಯಕ ಮೌಲ್ಯವಿರುವ  ಕಾದಂಬರಿಗಳು, ಸಂಶೋಧನೆ ನಡೆಸಿ ರಚಿಸಿರುವ ಪುಸ್ತಕ, ಚಿತ್ರಕಲೆ  ಹಾಗೂ ಚಲನಚಿತ್ರಗಳ ನಿಷೇಧಗಳು ಕರ್ನಾಟಕ ಸರ್ಕಾರವೂ ಸೇರಿದಂತೆ ಹಲವಾರು ಸರ್ಕಾರಗಳ ವತಿಯಿಂದ ಈವರೆಗೂ ನಿರಂತರವಾಗಿ ನಡೆದಿವೆ.

ಪ್ರಸ್ತುತ ವಾತಾವರಣ ಇಂಥ ನಿಷೇಧ ಮತ್ತು ಮರು-ಮತಾಂತರ ವಿವಾದಗಳಿಗೆ ಇಂಬುಕೊಟ್ಟು ಎಲ್ಲಾ ವ್ಯಕ್ತಿಗಳ, ಸಮುದಾಯಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಏಕಮುಖದ ದಾರಿಯಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸುಧಾರಣೆಯ ವಿರೋಧಿಯಾಗದೆ, ಅಧಿಕಾರಶಾಹಿ ನಿಲುವನ್ನು ಬದಿಗಿಟ್ಟು ಸಂವಿಧಾನದ ಆಶಯಕ್ಕೆ ಪೂರಕವಾಗಿ ಸೃಜನಶೀಲ ನಿರ್ದೇಶಕರ ಪ್ರತಿಭೆಗೆ ಸ್ಪಂದಿಸಲಿ ಎಂದು ಆಶಿಸುತ್ತೇನೆ. ‘ಚಲನಚಿತ್ರ (feature film) ಮತ್ತು ಸಾಕ್ಷ್ಯಚಿತ್ರ ಎರಡೇ ನಮ್ಮಲ್ಲಿರುವ ವರ್ಗೀಕರಣ. ನಿಮಗೆ ಮೂರನೇ ವರ್ಗದ ಅಗತ್ಯವಿದ್ದರೆ ನೀವು ಕಾನೂನಿನಲ್ಲಿ ತಿದ್ದುಪಡಿ ಮಾಡಿಸಿ’ ಎನ್ನುವ ವಿವೇಚನಾರಹಿತ ಮಾತು ಅಕ್ಷಮ್ಯ. ಎರಡೇ ವರ್ಗಗಳು ಇದ್ದಾಗ ಮಂಡಳಿ ಪ್ರಮಾಣ ಪತ್ರವನ್ನು ನಿರಾಕರಿಸುವ ಬದಲು ಹಿಂತಿರುಗಿಸಬಹುದಿತ್ತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT