ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಶರಪೋವಾ

ವಿಂಬಲ್ಡನ್ ಮಿಶ್ರ ಡಬಲ್ಸ್‌: ಎಂಟರ ಘಟ್ಟಕ್ಕೆ ಪೇಸ್ ಜೋಡಿ; ಜೊಕೊವಿಚ್‌ಗೆ ಗೆಲುವು
Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ):  ರಷ್ಯಾದ ಮರಿಯಾ ಶರಪೋವಾ ಮಂಗಳವಾರ ಮತ್ತೆ ವಿಜೃಂಭಿಸಿದರು. ಆಲ್‌ ಇಂಗ್ಲೆಂಡ್ ಕ್ಲಬ್‌ನ ಹುಲ್ಲಿನಂಕಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಕೊಕೊ ವಾಂಡೆವೆಗೆ ಅವರನ್ನು ಸೋಲಿಸಿದ ಶರಪೋವಾ ಸೆಮಿಫೈನಲ್‌ ಪ್ರವೇಶಿಸಿದರು.

ಮರಿಯಾ ಶರಪೋವಾ 6–3, 6–7, 6–2ರಲ್ಲಿ ಅಮೆರಿಕ ಆಟಗಾರ್ತಿಗೆ ಸೋಲಿನ ರುಚಿ ತೋರಿಸಿದರು. ಶರಪೋವಾ ವಿಂಬಲ್ಡನ್‌ನಲ್ಲಿ ಐದನೇ ಬಾರಿಗೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.  ಅಲ್ಲದೇ  ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಒಟ್ಟು 20 ಬಾರಿ ಸೆಮಿಫೈನಲ್‌ನಲ್ಲಿ ಆಡಿದ ದಾಖಲೆಯನ್ನೂ ಅವರು ಹೊಂದಿದ್ದಾರೆ.

ಮೊದಲ ಸೆಟ್‌ನಲ್ಲಿ ಹತ್ತು ಡಬಲ್ ಫಾಲ್ಟ್ ಮಾಡಿದ ಶರಪೋವಾ ಮೊದಲ ಗೇಮ್  ಕೈಚೆಲ್ಲಿದ್ದರು. ಆದರೆ, ನಂತರ ಛಲದ ಆಟ ತೋರಿದ ಶರಪೋವಾ ಸೆಟ್ ಗೆದ್ದರು.  ಆದರೆ, ಎರಡನೇ ಸೆಟ್‌ನಲ್ಲಿ ಸೋಲನುಭವಿಸಿದರೂ ಶರಪೋವಾ ಮೂರನೇ ಸೆಟ್‌ನಲ್ಲಿ  ತಿರುಗೇಟು ನೀಡಿದರು. ಒಟ್ಟು  2 ಗಂಟೆ, 46 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಶರಪೋವಾ ಗೆಲುವನ್ನು ಒಲಿಸಿಕೊಂಡರು. 

ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ ದೇಶದ ಗಾರ್ಬೈನ್ ಮುಗುರುಜಾ ಸೆಮಿಫೈನಲ್‌ ಪ್ರವೇಶಿಸಿದರು.
ಅವರು 7–5, 6–3ರಿಂದ ಟಿಮಿಯಾ ಬ್ಯಾಸಿನಸ್ಕಿ ವಿರುದ್ಧ ಜಯಗಳಿಸಿದರು.  ಕಳೆದ 18 ವರ್ಷಗಳಲ್ಲಿ ಸ್ಪೇನ್‌ ಆಟಗಾರ್ತಿಯರು ವಿಂಬಲ್ಡನ್‌ ಸೆಮಿಫೈನಲ್ ಪ್ರವೇಶಿಸಿರಲಿಲ್ಲ.   1997ರಲ್ಲಿ ಸ್ಪೇನ್‌ನ ಅರಾಂತಾ ಸ್ಯಾಂಚೆಜ್ ವಿಕಾರಿಯೊ  ಸೆಮಿಗೆ ಪ್ರವೇಶಿಸಿದ್ದರು.

ಎಂಟರ ಘಟಕ್ಕೆ ಜೊಕೊವಿಚ್: ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ನೊವಾಕ್ 6-7, 6-7, 6-1, 6-4, 7-5ರಿಂದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು ಸೋಲಿಸಿದರು.

ಮೊದಲ ಎರಡು ಸೆಟ್‌ಗಳಲ್ಲಿ ಸೋಲನುಭವಿಸಿದ್ದ ಸರ್ಬಿಯಾದ ಆಟಗಾರ ಮುಂದಿನ ಸೆಟ್‌ಗಳಲ್ಲಿ ಫಿನಿಕ್ಸ್‌ನಂತೆ ಮೇಲೆದ್ದರು. ಬಲಶಾಲಿ ಹೊಡೆತಗಳಿಗೆ ಹೆಸರಾದ 14ನೇ ಶ್ರೇಯಾಂಕದ ಕೆವಿನ್ ಮೊದಲ ಎರಡೂ ಸೆಟ್‌ಗಳಲ್ಲಿ ಅಮೋಘ ಆಟವಾಡಿದರು.

ಮೊದಲ ಗೇಮ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಅವರು, ಗಂಟೆಗೆ 130 ಕಿ.ಮೀ  ವೇಗದ ಮೂರು ಏಸ್‌ಗಳನ್ನು ಸಿಡಿಸಿದರು.  ಅಗ್ರಶ್ರೇಯಾಂಕದ ನೋವಾಕ್‌ಗೆ ಭೀತಿ ಮೂಡಿಸಿದ್ದರು. ಆದರೆ, ಆತ್ಮವಿಶ್ವಾಸ ಒಗ್ಗೂಡಿಸಿಕೊಂಡ ಜೊಕೊವಿಚ್ ಮೂರು ಮತ್ತು ನಾಲ್ಕನೆ ಸೆಟ್‌ಗಳಲ್ಲಿ ಆಕರ್ಷಕ ಆಟವಾಡಿದರು. ನಂತರದ ನಿರ್ಣಾಯಕ ಸೆಟ್‌ನಲ್ಲಿ ಇಬ್ಬರೂ ತುರುಸಿನ ಪೈಪೋಟಿ ನಡೆಸಿದರು. ಒಟ್ಟು 3.47 ಗಂಟೆ ನಡೆದ ಪಂದ್ಯದಲ್ಲಿ ನೋವಾಕ್ ಗೆದ್ದರು.

ಎಂಟರ ಘಟ್ಟಕ್ಕೆ ಪೇಸ್‌–ಹಿಂಗಿಸ್: ಭಾರತದ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿಯು ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಿಶ್ರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಪೇಸ್ ಜೋಡಿಯು 6–2, 6–2ರಿಂದ ನ್ಯೂಜಿಲೆಂಡ್‌ನ ಆರ್ಟೆಮ್ ಸಿಟಾಕ್ ಮತ್ತು ಆಸ್ಟ್ರೇಲಿಯಾದ ಅನಾಸ್ತೇಸಿಯಾ ರೊಡಿಯೊನೊವಾ ಅವರನ್ನು ಸೋಲಿಸಿತು.

ಹಸಿರು ಹುಲ್ಲಿನಂಕಣದಲ್ಲಿ ನಡೆದ 48 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಪೇಸ್ ಮತ್ತು ಹಿಂಗಿಸ್ ತಮ್ಮ ಎದುರಾಳಿಗಳನ್ನು ಸುಲಭವಾಗಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT