ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರೆನಾ ‘ಮೆಲ್ಬರ್ನ್‌ ರಾಣಿ’

ಆಸ್ಟ್ರೇಲಿಯಾ ಓಪನ್‌ ಟೆನಿಸ್‌; ಶರಪೋವಾ ಕನಸು ಭಗ್ನ
Last Updated 31 ಜನವರಿ 2015, 19:53 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ರಾಯಿಟರ್ಸ್‌): ಆಧುನಿಕ ಟೆನಿಸ್‌ನಲ್ಲಿ ತಾನೇ ಗಟ್ಟಿಗಿತ್ತಿ ಎಂಬುದನ್ನು ಮತ್ತೊಮ್ಮೆ  ತೋರಿಸಿ ಕೊಟ್ಟ ಸೆರೆನಾ ವಿಲಿಯಮ್ಸ್‌ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ರಾಡ್‌ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ 6–3, 7–6 ರಲ್ಲಿ ರಷ್ಯಾದ ಮರಿಯಾ ಶರಪೋವಾ ಅವರನ್ನು ಮಣಿಸಿದರು.

33ರ ಹರೆಯದ ಸೆರೆನಾಗೆ ಮೆಲ್ಬರ್ನ್‌ ಪಾರ್ಕ್‌ ನಲ್ಲಿ ಒಲಿದ ಆರನೇ ಪ್ರಶಸ್ತಿ ಇದು. ಈ ಗೆಲುವಿನ ಮೂಲಕ ಅವರು ಶರಪೋವಾ ವಿರುದ್ಧದ ಪ್ರಭುತ್ವವನ್ನು ಮತ್ತೆ ಮುಂದುವರಿಸಿದ್ದಾರೆ. ರಷ್ಯಾದ ಆಟಗಾರ್ತಿ ಸೆರೆನಾ ಕೈಯಲ್ಲಿ ಸತತ 16ನೇ ಸೋಲು ಅನುಭವಿಸಿದ್ದಾರೆ. 2004ರ ಡಬ್ಲ್ಯುಟಿಎ ಫೈನಲ್ಸ್‌ ಟೂರ್ನಿಯಲ್ಲಿ ಶರಪೋವಾ ಕೊನೆಯದಾಗಿ ಸೆರೆನಾ ಅವರನ್ನು ಮಣಿಸಿದ್ದರು. 

ಇಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಸೆರೆನಾ ಪಂದ್ಯದುದ್ದಕ್ಕೂ ಛಲದ ಆಟ ತೋರಿದರು. ವೇಗದ ಸರ್ವ್‌ ಮತ್ತು ಆಕರ್ಷಕ ರಿಟರ್ನ್‌ಗಳ

19ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ
ಸೆರೆನಾ ಚಾಂಪಿಯನ್‌ ಆಗುವ ಮೂಲಕ ವೃತ್ತಿಜೀವನದ 19ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ‘ಓಪನ್‌ ಯುಗ’ದಲ್ಲಿ ಅತಿಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ್ತಿಯರ ಪಟ್ಟಿಯಲ್ಲಿ ಅವರು ಅಮೆರಿಕದ ಹೆಲೆನ್‌ ವಿಲ್ಸ್‌ ಮೂಡಿ ಜತೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಮಾರ್ಗರೆಟ್‌ ಕೋರ್ಟ್‌ (24) ಮತ್ತು ಜರ್ಮನಿಯ ಸ್ಟೆಫಿ ಗ್ರಾಫ್‌ (22) ಮಾತ್ರ ಸೆರೆನಾ ಅವರಿಗಿಂತ ಮುಂದಿದ್ದಾರೆ.
ಸೆರೆನಾ ಗೆದ್ದ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳ ವಿವರ: ಆಸ್ಟ್ರೇಲಿಯಾ ಓಪನ್‌ (2003, 2005, 2007, 2009, 2010, 2015), ಫ್ರೆಂಚ್‌ ಓಪನ್‌ (2002, 2013), ವಿಂಬಲ್ಡನ್‌ (2002, 2003, 2009, 2010, 2012), ಅಮೆರಿಕ ಓಪನ್‌ (1999, 2002, 2008, 2012, 2013, 2014)

ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಪಂದ್ಯದ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಮುರಿದ ಸೆರೆನಾ ಉತ್ತಮ ಆರಂಭ ಪಡೆದರು. ಈ ಸೆಟ್‌ ವೇಳೆ ಮಳೆ ಸುರಿದ ಕಾರಣ ಸುಮಾರು 12 ನಿಮಿಷ ಆಟವನ್ನು ನಿಲ್ಲಿಸಲಾಯಿತು. ಆ ಬಳಿಕ ಮತ್ತೆರಡು ಸಲ ಎದು ರಾಳಿಯ ಸರ್ವ್‌ ಮುರಿದ ಸೆರೆನಾ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲಿ ಇಬ್ಬರೂ ಪಟ್ಟುಬಿಡದೆ ಹೋರಾಟ ನಡೆಸಿದ್ದರಿಂದ ಪಂದ್ಯದ ಕಾವು ಹೆಚ್ಚಿತು. ಇಬ್ಬರೂ ತಮ್ಮ ಸರ್ವ್‌ಗಳನ್ನು ಕಾಪಾಡಿ ಕೊಂಡ ಕಾರಣ 6–6 ರಲ್ಲಿ ಸಮಬಲ ಕಂಡುಬಂತು. ಇದರಿಂದ ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್‌ ಮೊರೆ ಹೋಗಲಾಯಿತು. ಸೆರೆನಾ ತಮ್ಮ ಅಪಾರ ಅನುಭವದ ಬಲದಿಂದ ಟೈಬ್ರೇಕರ್‌ನಲ್ಲಿ ಶರಪೋವಾ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಭರ್ಜರಿ ಏಸ್‌ ಮೂಲಕ ಪಂದ್ಯ ಗೆದ್ದುಕೊಂಡರಲ್ಲದೆ, ಕೋರ್ಟ್‌ನಲ್ಲಿ ಕುಣಿದು ಕುಪ್ಪಳಿಸಿದರು.

ಪಂದ್ಯದಲ್ಲಿ ಸೆರೆನಾ ರ್‍ಯಾಕೆಟ್‌ನಿಂದ ಒಟ್ಟು 18 ಏಸ್‌ಗಳು ಎದುರಾಳಿಯ ಕೋರ್ಟ್‌ಗೆ ಅಪ್ಪಳಿಸಿದವು. ಅದರಲ್ಲಿ ಒಂದು ಏಸ್ ಗಂಟೆಗೆ 203 ಕಿ.ಮೀ. ವೇಗದಲ್ಲಿತ್ತು! ಶರಪೋವಾ ತನ್ನೆಲ್ಲಾ ಶಕ್ತಿ ಹಾಗೂ ಯುಕ್ತಿಯನ್ನು ತೋರಿದರೂ ಸೆರೆನಾ ಗೆಲುವಿನ ಓಟಕ್ಕೆ ತಡೆಯೊಡ್ಡಲು ವಿಫಲರಾದರು. 
 

ಮರ್ರೆ– ಜೊಕೊವಿಚ್‌ ಫೈನಲ್‌ ಇಂದು
ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ಸರ್ಬಿಯದ ನೊವಾಕ್‌ ಜೊಕೊವಿಚ್‌ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಜೊಕೊವಿಚ್‌ ಚಾಂಪಿಯನ್‌ ಆದರೆ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಐದು ಸಲ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಗೌರವ ತಮ್ಮದಾಗಿಸಿಕೊಳ್ಳಲಿದ್ದಾರೆ.
ಭಾನುವಾರ ನಡೆಯಲಿರುವ ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಲಿಯಾಂಡರ್‌ ಪೇಸ್– ಮಾರ್ಟಿನಾ ಹಿಂಗಿಸ್‌ ಜೋಡಿ ಕ್ರಿಸ್ಟಿನಾ ಮ್ಲಾಡೆನೊವಿಚ್‌ –ಡೇನಿಯಲ್‌ ನೆಸ್ಟರ್‌  ಅವರ ಸವಾಲನ್ನು ಎದುರಿಸಲಿದೆ.

‘19ನೇ ಗ್ರ್ಯಾಂಡ್‌ ಸ್ಲಾಮ್‌ ಟ್ರೋಫಿ ಎತ್ತಿಹಿಡಿಯಲು ಸಂತಸವಾಗುತ್ತಿದೆ’ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೆರೆನಾ ಹೇಳಿದರು. ‘ಮರಿಯಾ ಅವರನ್ನೂ ಅಭಿನಂದಿಸುವೆ. ಅವರು ನಿಜವಾಗಿಯೂ ನನಗೆ ಪ್ರಬಲ ಪೈಪೋಟಿ ತೋರಿದರು’ ಎಂದರು.

‘ಸೆರೆನಾ ವಿರುದ್ಧ ಗೆಲುವು ಲಭಿಸದೆ ತುಂಬಾ ವರ್ಷಗಳೇ ಕಳೆದಿವೆ. ಆದರೂ ಅವರ ಎದುರು ಆಡುವುದನ್ನು ಇಷ್ಟಪಡುತ್ತೇನೆ. ಏಕೆಂದರೆ ಶ್ರೇಷ್ಠ ಆಟಗಾರ್ತಿಯ ಎದುರು ಆಡುವುದು ನನಗಿಷ್ಟ’ ಎಂದು ಶರಪೋವಾ ಪ್ರತಿಕ್ರಿಯಿಸಿದ್ದಾರೆ.

ಇಟಲಿ ಜೋಡಿಗೆ ಗರಿ: ಇಟಲಿಯ ಸಿಮೊನ್‌ ಬೊಲೆಲಿ ಮತ್ತು ಫ್ಯಾಬಿಯೊ ಫಾಗ್ನಿನಿ ಅವರು ಇದೇ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಪ್ರಶಸ್ತಿ ಜಯಿಸಿದರು. ಫೈನಲ್‌ನಲ್ಲಿ ಈ ಜೋಡಿ 6–4, 6–4 ರಲ್ಲಿ ಫ್ರಾನ್ಸ್‌ನ ಪಿಯೆರ್‌ ಹ್ಯೂಸ್‌ ಮತ್ತು ನಿಕೊಲಸ್‌ ಮಾಹುತ್‌ ಅವರನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT