ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಮನ್‌ರ ‘ಆರೋಗ್ಯವು ದೀರ್ಘಾಯುಷ್ಯವು’

ವಿಮರ್ಶೆ
Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಡಾ. ಎ.ಸಿ. ಸೆಲ್ಮನ್, ಎಂ.ಡಿ., ಅವರ ‘ಆರೋಗ್ಯವು ದೀರ್ಘಾಯುಷ್ಯವು’ ಸರ್ವಸಾಧಾರಣವಾದ ರೋಗಗಳ ಕಾರಣ, ನಿವಾರಣೆ ಮತ್ತು ಚಿಕಿತ್ಸೆಯನ್ನು ಕುರಿತು ಸುಲಭಶೈಲಿಯಲ್ಲಿ ರಚಿಸಲಾದ ಉಪಯುಕ್ತ ಕೃತಿ. ಇದರ ಮೊದಲ ಆವೃತ್ತಿ ಫೆ. 25, 1929ರಂದು ಪೂನಾ ನಗರದ ಓರಿಯೆಂಟಲ್ ವಾಚ್‌ಮ್ಯಾನ್ ಪಬ್ಲಿಷಿಂಗ್ ಹೌಸ್ ಪರವಾಗಿ ಎಲ್.ಸಿ, ಷೆಫರ್ಡ್ ಅವರು ಮುದ್ರಿಸಿ ಪ್ರಕಟಿಸಿದ್ದಾರೆ. 

362 ಪುಟಗಳ, 73 ಉಪಯುಕ್ತ ಪೂರಕ ಚಿತ್ರಪಟಗಳನ್ನೊಳಗೊಂಡ ಕೃತಿಯ ಬೆಲೆ ನಮೂದಾಗಿಲ್ಲ. ಈ ಪುಸ್ತಕವು ಎಷ್ಟು ಉಪಯುಕ್ತವಾಗಿತ್ತೆಂದರೆ, 1933ರಲ್ಲಿ ಎರಡನೆಯ ಆವೃತ್ತಿಯೂ 1949ರಲ್ಲಿ ಮೂರನೆಯ ಪರಿಷ್ಕೃತ ಹಾಗೂ ವಿಸ್ತೃತ ಆವೃತ್ತಿಗಳು ಪ್ರಕಟವಾದವು. ಒಟ್ಟು ಮೂರು ಆವೃತ್ತಿಗಳಿಂದ ಈ ಗ್ರಂಥದ 9200 ಪ್ರತಿಗಳು ಹೊರಬಂದಿರುವುದು ಇದರ ಸತತ ಬಳಕೆಗೆ ನಿದರ್ಶನವಾಗಿದೆ.

1929ರಲ್ಲಿಯೇ ಅರೋಗ್ಯದ ಮೂಲ ವಿಚಾರಗಳನ್ನು ನಿರೂಪಿಸುವ 510 ಪುಟಗಳ ‘ನೂತನ ಆರೋಗ್ಯ ಮತ್ತು ದೀರ್ಘಾಯಸ್ಸು’ ಎನ್ನುವ ಸೆಲ್ಮನ್ ಅವರ ಮತ್ತೊಂದು ಕೃತಿ ಪ್ರಕಟವಾಗಿದೆ. ಇಷ್ಟು ಹೊರತು ಪಡಿಸಿದರೆ ಸೆಲ್ಮನ್ ಅವರ ಬಗ್ಗೆ ಬೇರೆ ಮಾಹಿತಿಗಳು ಕಂಡುಬಂದಿಲ್ಲ.

ಹತ್ತೊಂಬತ್ತನೆಯ ಶತಮಾನದಲ್ಲಿ ನಿರ್ದಿಷ್ಟ ಕಾಯಿಲೆಗಳಿಗೆ ಸಂಬಂಧಿಸಿದಂತೆ ಅನೇಕ ಅಮೂಲ್ಯ ಕೃತಿಗಳು ಕನ್ನಡದಲ್ಲಿ ಹೊರಬಂದಿವೆ. ಕೊರವಂಡ ಅಪ್ಪಯ್ಯರ ‘ಸಿಡುಬು ಹಾಕುವ ಚಿಕಿತ್ಸಾ ಸಂಗ್ರಹವು’ (1892), ತ್ರಿಂಬಕ ಸಖಾರಾಮ ಶಿರವಲಕರ ಅವರ ‘ಮಹಾಮಾರಿಯು, ಅದರ ಕಾರಣಗಳು, ನಿವಾರಣವು, ಉಪಾಯಗಳೂ’ (1879),

ಎಚ್. ಅಪ್ಪಣ್ಣಚೆಟ್ಟಿ ರಚಿಸಿದ ‘ಪ್ಲೇಗಿನ ಚರಿತ್ರೆ’ (1901), ಕ್ರಿಸ್ಚಿಯನ್ ಲಿಟರೇಚರ್ ಸೊಸೈಟಿ ಪ್ರಕಟಿಸಿದ ‘ಮಕ್ಕಳನ್ನು ಬೆಳೆಸತಕ್ಕ ವಿಧ’ (1895), ಬೋಧರಾಚಾರ್ಯ ಮಹಿಷಿ ಪ್ರಕಟಿಸಿದ ‘ಗರ್ಭಿಣೀ ಶಿಶು ಸಂಗೋಪನ’ (1890), ಇಂದ್ರಕಂಠ ವಲ್ಲಭಾಚಾರ್ಯರ ‘ವೈದ್ಯಚಿಂತಾಮಣಿ’ (1899), ಸರಸ್ವತೀ ಅವಧಾನರ ‘ವೈದ್ಯಶತಶ್ಲೋಕೀ’ (1876),

ಗೂಡಪಲ್ಲಿ ಹರಿರಾಮಶಾಸ್ತ್ರಿ ಅವರೆ ‘ಸುಶ್ರುತ ವಾಗ್ಭಟಾದಿಗಳ ಚಿಕಿತ್ಸಾ ವಿಧಾನ’ (೧೮೯೨), ಕಾರೇಬಯಲ್ಕರ್ ಗಣೇಶ ಶಾಂತಯ್ಯಾ ಬರೆದ ‘ಮಲಯಾಳ ವಿಷವೈದ್ಯಶಾಸ್ತ್ರವು’ (1899)–  ಇವು ಕನ್ನಡದಲ್ಲಿ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಕಟಗೊಂಡಿರುವ ಕೆಲವು ಹಳೆಯ ಪುಸ್ತಕಗಳು.

ಈ ಕೃತಿಯ ಪೀಠಿಕೆಯಲ್ಲಿ ಗ್ರಂಥಕರ್ತರು: ‘‘ಮನುಷ್ಯವರ್ಗದವರಲ್ಲಿ ಪ್ರಬಲವಾಗಿರುವ ಮುಕ್ಕಾಲು ಪಾಲು ರೋಗಗಳನ್ನೆಲ್ಲಾ ನಿವಾರಣೆ ಮಾಡುವುದು ಸಾಧ್ಯವಾಗಿರುವುದರಿಂದ ಸಾಧಾರಣವಾದ ಎಲ್ಲಾ ರೋಗಗಳ ಕಾರಣ, ನಿವಾರಣೆ ಮತ್ತು ಚಿಕಿತ್ಸೆಯನ್ನು ಕುರಿತು ಎಲ್ಲರೂ ಓದಿ ತಿಳಿದುಕೊಳ್ಳಲು ಸಾಧ್ಯವಿರುವಂಥ ಮತ್ತು ಸುಲಭಶೈಲಿಯಲ್ಲಿ ರಚಿಸಲ್ಪಟ್ಟಿರುವಂಥ ಒಂದು ಪುಸ್ತಕವು ಬಹಳ ಅವಶ್ಯವಾಗಿರುತ್ತದೆ.

ಈ ಪುಸ್ತಕದಲ್ಲಿ ಶರೀರದ ಎಲ್ಲಾ ಭಾಗಗಳ ರಚನೆ ಮತ್ತು ಅವುಗಳ ಕರ್ತವ್ಯಗಳನ್ನು ಕುರಿತು ಪ್ರಾಮುಖ್ಯವಾದ ವಿಷಯಗಳನ್ನೂ ಮತ್ತು ಪ್ರತಿಯೊಂದು ಅಂಗವನ್ನು ಆರೋಗ್ಯಸ್ಥಿತಿಯಲ್ಲಿಡಲು ಪ್ರತಿಯೊಬ್ಬನೂ ಅನುಸರಿಸಬೇಕಾದ ಸೂತ್ರಗಳನ್ನೂ ಮತ್ತು ಸರ್ವಸಾಧಾರಣವಾಗಿ ಸಂಭವಿಸುವ ರೋಗಗಳನ್ನು ಕುರಿತೂ ವಿವರಿಸಿದೆ. ಈ ರೋಗಗಳ ನಿವಾರಣೆಗಾಗಿ ಏನೇನು ಮಾಡಬೇಕೋ ಅವುಗಳನ್ನು ವಿರಳವಾಗಿ ತಿಳಿಸಿದೆ.

ಮನೆಯಲ್ಲಿಯೇ ಕೊಡಬಹುದಾದ ಚಿಕಿತ್ಸೆಗಳನ್ನು ಚೆನ್ನಾಗಿ ವಿವರಿಸಿದೆ. ವೈದ್ಯನನ್ನು ನಿರಾಕರಿಸಬೇಕೆಂಬುದಾಗಿ ಈ ಪುಸ್ತಕವನ್ನು ರಚನೆ ಮಾಡಲಿಲ್ಲ. ರೋಗದ ಚಿಹ್ನೆಗಳನ್ನು ಕುರಿತು ತಿಳಿಸಿ, ಗಟ್ಟಿಗನಾದ ವೈದ್ಯನಿಂದ ದೊರೆಯಬಹುದಾದ ಸಹಾಯವನ್ನು ಕುರಿತು ರೋಗದಿಂದ ನರಳುವವನು ತಿಳಿದುಕೊಳ್ಳಬೇಕಾದ ಸಂಗತಿಗಳನ್ನು ಈ ಪುಸ್ತಕವು ವಿವರಿಸುವುದರಿಂದ ವೈದ್ಯರೂ, ಔಷಧಶಾಲೆಗಳೂ, ಆರೋಗ್ಯಾಲಯಗಳೂ ಮಾಡುತ್ತಿರುವ ಕೆಲಸವನ್ನು ಕುರಿತು ಓದುಗರು ಶ್ಲಾಘನೆ ಮಾಡಲು ಇದೊಂದು ಮಾರ್ಗವಾಗಿದೆ’’ ಎಂದು ಬರೆದಿದ್ದಾರೆ.

ಪ್ರತಿಯೊಂದು ಮನೆಯಲ್ಲಿಯೂ ಈ ಪುಸ್ತಕವು ಸಹಾಯವಾಗಿ ಪರಿಣಮಿಸುವುದೆಂದು ಗ್ರಂಥಕರ್ತನ ಹಾರೈಕೆ. ಈ ಕೃತಿಯ ವಿಷಯಾನುಕ್ರಮಣಿಕೆಯಲ್ಲಿ ಒಟ್ಟು 36 ಅಧ್ಯಾಯಗಳಿವೆ. ಅವು ಹೀಗಿವೆ: ‘ಮನುಷ್ಯನ ಅತ್ಯಮೂಲ್ಯ ಐಶ್ವರ್ಯವು’, ‘ಶರೀರದ ಪ್ರಕೃತಿ’, ‘ಶರೀರದ ಪೋಷಣೆ’, ‘ಹಲ್ಲುಗಳು’,
‘ನಿಶ್ವಾಸೋಚ್ಛ್ವಾಸಗಳ ಅವಯವಗಳು’, ‘ಜೀವದ ರಕ್ತಪರಿಚಲನೆ’, ‘ಮೂತ್ರ ಪಿಂಡಗಳು’,

‘ಮನುಷ್ಯನ ಅಸ್ಥಿಪಂಜರ’, ‘ಶರೀರದಲ್ಲಿ ಎಲ್ಲ ಭಾಗಗಳನ್ನು ಆಳುವ ನರಗಳ ಕಟ್ಟು’, ‘ದೃಷ್ಟಿ ಮತ್ತು ಕೇಳಿಸುವಿಕೆ’, ‘ದೇಹದ ಉತ್ಪತ್ತಿ ಮತ್ತು ಬದಲಾವಣೆಗಳು’, ‘ಮದ್ಯಪಾನ ಮತ್ತು ಹೊಗೇಸೊಪ್ಪು’, ‘ಆರೋಗ್ಯಕ್ಕೆ ಉತ್ತಮವಾದ ಆಹಾರಪದಾರ್ಥಗಳು’, ‘ರೋಗೋತ್ಪತ್ತಿಗೆ ಕಾರಣಗಳು’, ‘ಔಷಧಿಗಳ ವಿಷಯ’, ‘ಒಂದುನೂರು ವರ್ಷಗಳು ಬದುಕುವ ರೀತಿ’, ‘ರೋಗವನ್ನು ಸ್ವಸ್ಥ ಮಾಡುವ ಶಕ್ತಿಯು’,

‘ಗರ್ಭಧರಿಸುವುದು ಮತ್ತು ಶಿಶುವಿನ ಜನನ’, ‘ಚಿಕ್ಕಮಕ್ಕಳ ಪೋಷಣೆಯು’, ‘ಗೃಹವೈದ್ಯಾಲಯ’, ‘ನೊಣಗಳ ಬಾಧೆ’, ‘ಮಕ್ಕಳ ರೋಗಗಳು’, ‘ಸಾಮಾನ್ಯವಾದ ಅಂಟುರೋಗಗಳು’, ‘ಜೀರ್ಣಾಂಗದ ರೋಗಗಳು’, ‘ಸೊಳ್ಳೆ, ಹೇನು ಮುಂತಾದುವುಗಳಿಂದ ಹರಡುವ ರೋಗಗಳು’, ‘ದೇಹದ ಪೋಷಣೆಗೆ ಅಗತ್ಯವಾದ ಪದಾರ್ಥಗಳನ್ನು ತ್ಯಜಿಸುವುದರಿಂದ ಉಂಟಾಗುವ ರೋಗಗಳು’,

‘ಹುಳ ಕ್ರಿಮಿಗಳಿಂದುಂಟಾಗುವ ರೋಗಗಳು’, ‘ಮೂಗಿನ ಮತ್ತು ಗಂಟಲಿನ ರೋಗಗಳು’, ‘ಎದೆಯ ರೋಗಗಳು’, ‘ಮೇಹರೋಗಗಳು’, ‘ಸ್ತ್ರೀಯರ ರೋಗಗಳು’, ‘ಚರ್ಮದ ರೋಗಗಳು’, ‘ಕಣ್ಣು ಮತ್ತು ಕಿವಿಯ ರೋಗಗಳು’, ‘ವಿವಿಧವಾದ ರೋಗಾದಿಗಳು’, ‘ಅಪಾಯಗಳು ಮತ್ತು ಜರೂರಿ ಅನುಪತ್ಯಗಳು’.

ಮೇಲಿನ ವಿಷಯಾನುಕ್ರಮಣಿಕೆಯ ಮೂಲಕ ಈ ಪುಸ್ತಕದ ಒಟ್ಟು ಸ್ವರೂಪವೇನೆಂಬುದನ್ನು ತಿಳಿಯಬಹುದು. ಇವುಗಳ ಜೊತೆಗೆ ಪ್ರತಿ ಅಧ್ಯಾಯದಲ್ಲಿ ಆಯಾ ಅಧ್ಯಾಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕುರಿತ ಪೂರಕವಾದ ಅವಯವಗಳ ಚಿತ್ರಗಳಿವೆ. ಮನುಷ್ಯನ ಒಟ್ಟು ಶರೀರದ ಸ್ಥೂಲ ಸಾಮಾನ್ಯ ನೋಟದ ಜತೆಗೆ ಪ್ರತಿ ಅಂಗೋಪಾಂಗಗಳನ್ನು ಕುರಿತ ಸಾಂಗೋಪಾಂಗವಾದ ಆರೋಗ್ಯ ವಿಚಾರಗಳಿವೆ.

ಮನುಷ್ಯನ ಶರೀರ, ಪಂಚೇಂದ್ರಿಯಗಳು, ಸ್ತ್ರೀಯರು, ಮಕ್ಕಳು, ಸ್ತ್ರೀಯರ ಗರ್ಭಧಾರಣೆ, ಶಿಶುಜನನ, ಮನುಷ್ಯನ ಜೀರ್ಣಾಂಗಗಳು, ಮೂತ್ರಪಿಂಡಗಳು, ರಕ್ತ, ನರ, ಮೆದುಳು, ಅಸ್ಥಿಪಂಜರಕ್ಕೆ ಸಂಬಂಧಿಸಿದಂತೆ ವಿವರವಾದ ವಿಶ್ಲೇಷಣೆಗಳಿವೆ.

ದುರಭ್ಯಾಸಕ್ಕೆ ಸಂಬಂಧಿಸಿದಂತೆ ಮದ್ಯಪಾನ ಹಾಗೂ ಹೊಗೇಸೊಪ್ಪಿನಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ಮಾರ್ಮಿಕವಾಗಿ ನಿರೂಪಿಸಲಾಗಿದೆ. ರೋಗೋತ್ಪತ್ತಿಗೆ ಕಾರಣಗಳನ್ನು ನೀಡಿ ಅಂತಹವುಗಳನ್ನು ಮೊದಲೇ ನಿವಾರಿಸಿಕೊಳ್ಳುವುದರ ಬಗ್ಗೆ ಲೇಖಕರು ಸೂಚನೆಗಳನ್ನು ನೀಡಿದ್ದಾರೆ.

ಒಳ್ಳೆಯ ಅಭ್ಯಾಸಗಳು, ಒಳ್ಳೆಯ ಗಾಳಿ, ನೈರ್ಮಲ್ಯ ವಾತಾವರಣ, ಉತ್ತಮವಾದ ಆಹಾರ, ವ್ಯಾಯಾಮ ಇವುಗಳ ಅಗತ್ಯವನ್ನು ಕುರಿತು ಇಲ್ಲಿ ಗ್ರಂಥವೈದ್ಯರು ಹೇಳಿರುತ್ತಾರೆ. ಮನುಷ್ಯನ ಸಹಜ ನಡಾವಳಿಗಳ ಜೊತೆಗೆ ಅವನಿಗೆ ನೊಣ, ಸೊಳ್ಳೆ, ಹೇನು, ಹುಳು, ಕ್ರಿಮಿ, ಕೀಟ ಇತ್ಯಾದಿಗಳಿಂದ ಬರಬಹುದಾದ ಕಾಯಿಲೆಗಳನ್ನು ಕುರಿತು ವಿವರವಾಗಿ ಹೇಳಿದ್ದಾರೆ.

ಪ್ರತಿಯೊಂದು ಮನೆಗೆ ಒಂದು ಚಿಕ್ಕ ಗೃಹವೈದ್ಯಾಲಯದ ಅಗತ್ಯವನ್ನು ಲೇಖಕರು ಶಿಫಾರಸು ಮಾಡಿರುವುದು ಆರೋಗ್ಯದ ಬಗ್ಗೆ ಅವರ ಕಾಳಜಿಯನ್ನು ಸೂಚಿಸುತ್ತದೆ. ಕೃತಿಯ ಕೊನೆಯಲ್ಲಿ ಒಂದು ಉಪಯುಕ್ತ ಔಷಧಿಗಳ ಪಟ್ಟಿಯನ್ನು ನೀಡಿ ಯಾವ ಯಾವ ಕಾಯಿಲೆಗೆ ಯಾವ ಯಾವ ಔಷಧಗಳು ಎಂಬುದನ್ನು ಸೂಚಿಸಿರುವುದು ಉಪಯುಕ್ತವಾಗಿದೆ.

‘ಅಪಾಯಗಳು ಮತ್ತು ಜರೂರಿನ ಅನುಪತ್ಯಗಳು’ ಅಧ್ಯಾಯದಲ್ಲಿ ಗಾಯಗಳನ್ನು ಕಟ್ಟುವುದು, ಚಿಕಿತ್ಸೆ, ವಿಪರೀತವಾಗಿ ರಕ್ತ ಹರಿಯುವಂಥ ಕಠಿಣವಾದ ಗಾಯಗಳು, ಬುರುಡೆಯಲ್ಲಿನ ಗಾಯದಿಂದ ರಕ್ತ ಸುರಿದರೆ ಅದನ್ನು ನಿಲ್ಲಿಸುವ ವಿಧಾನ, ಮುಖ ಮತ್ತು ಕುತ್ತಿಗೆಯಿಂದ ರಕ್ತ ಹರಿಯುವುದು, ಭುಜಗಳಿಂದಲೂ ಕಂಕುಳಿಂದಲೂ ರಕ್ತ ಹರಿಯುವುದು, ಗಾಯವು ವ್ರಣವಾದರೆ ಏನು ಮಾಡಬೇಕು,

ನರ ಹೊರಳುವುದು, ಮೂಳೆ ಮುರಿದು ಹೋಗುವುದು, ಕೀಲು ತಪ್ಪುವುದು, ಪ್ರಾಣಿಗಳು ಕಚ್ಚಿದಾಗ ಏನು ಮಾಡಬೇಕು, ಹಾವು ಕಚ್ಚುವುದು, ಚೇಳು ಮತ್ತು ಜರಿಯ ಕಡಿತ, ವಿಷ ತಕ್ಕೊಂಡವರಿಗೆ ಚಿಕಿತ್ಸೆ, ನೀರಿನಲ್ಲಿ ಮುಳುಗಿ ಹೋದವರಿಗೆ ಚಿಕಿತ್ಸೆ ಮಾಡುವ ವಿಧಾನ ಮುಂತಾದುವುಗಳ ಕ್ರಮಬದ್ಧವಾದ ವಿವರಣೆ ಬಹಳ ಉಪಯುಕ್ತವಾಗಿದೆ.

ದೇಹದ ವಿವಿಧ ಭಾಗಗಳಲ್ಲಿ ಮೂಳೆ ಮುರಿದಾಗ ಕಟ್ಟುಗಳನ್ನು ಹೇಗೆ ಕಟ್ಟಬೇಕೆಂಬುದನ್ನು ಸಚಿತ್ರವಿವರಣೆಯೊಂದಿಗೆ ನೀಡಲಾಗಿದೆ. ಇವಿಷ್ಟೇ ಅಲ್ಲದೆ ಬಾಯಿ ಹುಣ್ಣು, ಬಿಕ್ಕಲು, ಮೂಗು ಬೆದರುವುದು, ಅಂಡವಾಯು (ಹರ್ನಿಯ), ಮೂತ್ರಕೋಶದಲ್ಲಿ ಕಲ್ಲಿರುವುದು, ಕಾಮಾಲೆ ರೋಗ,

ಮೂರ್ಛೆ ಅಥವಾ ಪ್ರಲಾಪ ಸನ್ನಿ, ಕೀಲುಗಳ ನೋವು, ಬೆನ್ನು ನೋವು ಮತ್ತು ವಾಯು ನೋವು, ಕಾಸು, ಸೂಜಿ ಮುಂತಾದ ಪದಾರ್ಥಗಳನ್ನು ನುಂಗುವುದು  ಈ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಗಳ ವಿವರಣೆ ಓದುಗರಿಗೆ ಮಾಹಿತಿಪೂರ್ಣವೂ ಉಪಯುಕ್ತವೂ ಆಗಿದೆ.

ಒಳ್ಳೆಯ ಆರೋಗ್ಯವನ್ನು ಕುರಿತ ಮನುಷ್ಯನ ಪರಿಕಲ್ಪನೆ ಎಂದರೆ ಮನುಷ್ಯ ನೂರು ವರುಷ ಬಾಳುವುದು. ಇಲ್ಲಿ ಒಂದು ನೂರು ವರ್ಷಗಳು ಬದುಕುವ ರೀತಿ ಎನ್ನುವ ವಿಶೇಷ ಬರಹ ಒಂದಿದೆ. ಅದರಲ್ಲಿ ಆಗಿನ ಕಾಲಕ್ಕೆ 156 ವರ್ಷಕಾಲ ಬದುಕಿದ್ದ ಜಾರೋ ಅಗ ಎನ್ನುವವನ ಛಾಯಾಚಿತ್ರವನ್ನು ನೀಡಲಾಗಿದೆ.

ಅವನು ಸಸ್ಯಾಹಾರಿಯಂತೆ. ಆ ಚಿತ್ರ 1930ರಲ್ಲಿ ತೆಗೆದದ್ದು ಎನ್ನುವ ಅಂಶವನ್ನು ಚಿತ್ರದಡಿ ನೀಡಲಾಗಿದೆ. ಮನುಷ್ಯನು ನೂರು ವರ್ಷ ಬದುಕಿರಬೇಕಾದರೆ ಮಿತಾನುಭವಿಯೂ ಆಹಾರ ವ್ಯಾಯಮಗಳ ವಿಷಯದಲ್ಲಿ ಕಟ್ಟುನಿಟ್ಟಾದ ಸೂತ್ರ ಅನುಸರಿಸಬೇಕು ಎನ್ನುವುದು ಲೇಖಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT