ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಖರೀದಿ ಪ್ರಕ್ರಿಯೆ ವಿಳಂಬ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೇನಾ ಖರೀದಿ ಪ್ರಕ್ರಿಯೆಗೆ (ಡಿಪಿಪಿ) ಹೊಸ ನಿಯಮಾವಳಿ ರೂಪಿಸುವಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ಈ ಹಿಂದಿನ ಯುಪಿಎ ಸರ್ಕಾರ ಸೃಷ್ಟಿಸಿದ ಗೊಂದಲ ಇದಕ್ಕೆ ಕಾರಣ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಹೇಳಿದ್ದಾರೆ.

ಶಸ್ತ್ರಾಸ್ತ್ರ ಹಾಗೂ ಸೇನಾ ಸಾಮಗ್ರಿ ಖರೀದಿಯಲ್ಲಿನ ಅವ್ಯವಹಾರ ತಡೆಗಟ್ಟಲು ಹಾಗೂ ಈ ಪ್ರಕ್ರಿಯೆಯಲ್ಲಿ ಇರುವ ಅನುಮಾನದ ವಾತಾವರಣವನ್ನು ತಿಳಿಗೊಳಿಸಲು ಮೇ ತಿಂಗಳ ಹೊತ್ತಿಗೆ ಹೊಸ ಡಿಪಿಪಿ ರೂಪಿಸುವುದಾಗಿ ಪರಿಕ್ಕರ್‌ ತಿಳಿಸಿದ್ದರು.

‘ಸೇನಾ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾವು ಬ್ರಿಟಿಷ್‌ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಸರ್ಕಾರದಲ್ಲಿರುವ ಎಲ್ಲರೂ ಪ್ರತಿಯೊಬ್ಬರನ್ನು ಅನುಮಾನದಿಂದ ನೋಡುತ್ತಾರೆ. ಈ ಕುರಿತು ಹಲವು ಪ್ರಶ್ನೆ, ಅನುಮಾನಗಳು ಏಳುತ್ತವೆ. ಸೇನೆಯ ಜಗತ್ತು ದೊಡ್ಡದು. ಇಲ್ಲಿ ಬಹಿರಂಗವಾಗಿ ಮಾತನಾಡುವುದೇ ತಪ್ಪು ಎನ್ನುವ ವಾತಾವರಣ ಇದೆ’ ಎಂದರು. ‘ಒಂದೇ ಶ್ರೇಣಿ, ಸಮಾನ ಪಿಂಚಣಿ  ’ ವಿಚಾರಕ್ಕೆ ಸಂಬಂಧಿಸಿದಂತೆ ಸೈನಿಕರು ತಾಳ್ಮೆಯಿಂದ ಇರಬೇಕು ಎಂದು ಪರಿಕ್ಕರ್‌ ಹೇಳಿದರು.

ವಿವೇಕಾನಂದ ಅಂತರರಾಷ್ಟ್ರೀಯ ಪ್ರತಿಷ್ಠಾನ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಕಾರ್ಯಾಚರಣೆಗಳಲ್ಲಿ ಉಗ್ರರು ಮೃತಪಟ್ಟ ಬಗ್ಗೆ ಪ್ರಶ್ನಿಸಿದಾಗ, ನುಸುಳುಕೋರರನ್ನು ತಡೆಯಲು ಭಾರತೀಯ ಸೇನೆ ಸದಾ ಎಚ್ಚರದಿಂದ ಇರುತ್ತದೆ ಎಂದರು.

ಮಲಬಾರ್‌ ತೀರದಲ್ಲಿ ಭಾರತ, ಅಮೆರಿಕ ನಡುವೆ ನಡೆಯಲಿರುವ ಜಂಟಿ ಸಮರಾಭ್ಯಾಸದಲ್ಲಿ ಜಪಾನ್‌ ಪಾಲ್ಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಸಚಿವರು ನೇರವಾಗಿ ಉತ್ತರಿಸಲಿಲ್ಲ. ನಾನು ನಕಾರಾತ್ಮಕ ಉತ್ತರ ನೀಡುತ್ತಿಲ್ಲ ಎಂದು ತಕ್ಷಣವೇ ಅಂದರು.

ಚೀನಾ ಗಣೇಶನ ಸಣ್ಣ ಕಣ್ಣು: ಭಾರತದ ದೇವರ ವಿಗ್ರಹಗಳನ್ನು ಈಗ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಪರಿಕ್ಕರ್‌, ಚೀನಾದಿಂದ  ಭಾರತಕ್ಕೆ ಬರುತ್ತಿರುವ ಗಣೇಶನ ವಿಗ್ರಹದ ಕಣ್ಣು ದಿನದಿಂದ ದಿನಕ್ಕೆ ಸಣ್ಣದಾಗುತ್ತಿದೆ ಎಂದರು.‌

‘ಭಾರತದಲ್ಲೇ ತಯಾರಿಸಿ’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ದೀಪಾವಳಿ ಉಡುಗೊರೆಯಿಂದ ನಮ್ಮ ದೇವರ ವಿಗ್ರಹಗಳ ತನಕ ಎಲ್ಲವನ್ನೂ ದೇಶದಲ್ಲೇ ತಯಾರಿಸಬೇಕಿದೆ ಎಂದರು. ಹಲವು ಸಮಾರಂಭಗಳಲ್ಲಿ ಸ್ಮರಣಿಕೆಯಾಗಿ ನನಗೆ ದೇವರ ವಿಗ್ರಹ ನೀಡುತ್ತಾರೆ. ಇತ್ತೀಚೆಗೆ ಅವುಗಳ ಕಣ್ಣು ಸಣ್ಣದಾಗುತ್ತಿರುವುದು ಗಮನಕ್ಕೆ ಬಂತು. ತಿರುಗಿಸಿ ನೋಡಿದಾಗ ‘ಮೇಡ್‌ ಇನ್‌ ಚೈನಾ’ ಮೊಹರೆ ಕಂಡುಬಂತು ಎಂದು ಪರಿಕ್ಕರ್‌ ಹೇಳಿದಾಗ ಸಭೆಯಲ್ಲಿ ನಗೆಯ ಅಲೆ ಉಕ್ಕಿತು.
***
ಭಯೋತ್ಪಾದಕರನ್ನು ಭಯೋತ್ಪಾದಕರಿಂದಲೇ ಹಿಮೆಟ್ಟಿಸಬೇಕು ಎಂಬ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಆಂಧ್ರದ ಮೆಣಸು ನುರಿದಂತೆ ಆಗಿದೆ

-ಮನೋಹರ ಪರಿಕ್ಕರ್‌, ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT