ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಅಧ್ವರ್ಯು ಮದರ್‌ ತೆರೆಸಾ

ವ್ಯಕ್ತಿ/ ಸ್ಮರಣೆ
ಅಕ್ಷರ ಗಾತ್ರ

‘ಗಣ್ಯರ ಗುಣವನ್ನು ಅವರ ಮರಣದಲ್ಲಿ ಕಾಣು’ ಎಂಬ ಮಾತಿದೆ. ಇಬ್ಬರು ಅತಿ ಗಣ್ಯ ವ್ಯಕ್ತಿಗಳಾದ ರಾಜಕುಮಾರಿ ಡಯಾನಾ ಮತ್ತು ಮದರ್‌ ತೆರೆಸಾ ಅವರ ಸಾವನ್ನು ಜಗತ್ತು ಸ್ವೀಕರಿಸಿದ ರೀತಿ ಅತ್ಯಂತ ಸ್ಫೂರ್ತಿದಾಯಕವಾದುದು. ಇಹಲೋಕ ಬರೀ ಐಶ್ವರ್ಯ, ಆಡಂಬರವನ್ನಷ್ಟೇ ನೋಡುತ್ತದೆ, ರಾಜಕೀಯ ಅಧಿಕಾರಕ್ಕೆ ಮಾತ್ರ ಅದು ಮಣೆ ಹಾಕುತ್ತದೆ ಎಂಬ ಭಾವನೆ ಸಾರ್ವತ್ರಿಕವಾದುದು. ಆದರೆ ಮದರ್‌ ತೆರೆಸಾ ಅವರ ಸಾವು ಈ ನಂಬಿಕೆಯನ್ನು ಹುಸಿಯಾಗಿಸಿತು. ಸೇವೆ, ಗೌರವ, ಭಕ್ತಿಗೆ ಎಂದೆಂದಿಗೂ ಆದರ ಇದ್ದೇ ಇರುತ್ತದೆ ಎಂಬುದನ್ನು ಸಾಧಿಸಿ ತೋರಿಸಿತು.

ಶಿಕ್ಷಕರ ದಿನಾಚರಣೆಯಾದ ಅಂದು ಮದರ್‌ ತೆರೆಸಾ ಅವರ ಸಾವಿನ ಸುದ್ದಿ ಕೇಳಿದಾಗ ನಾನು ಉತ್ತರ ಕರ್ನಾಟಕದಲ್ಲಿದ್ದೆ. ಸೇವೆಗೇ ತನ್ನ ಜೀವನವನ್ನು ಮುಡಿಪಾಗಿಟ್ಟ ಆ ದಿವ್ಯಚೇತನಕ್ಕೆ ಜನ ತೋರಿದ ಗೌರವ, ಭಕ್ತಿ ಕಂಡು ಮೂಕವಿಸ್ಮಿತಳಾದೆ. ಆ ಸಂದರ್ಭದಲ್ಲಿ ವ್ಯಕ್ತವಾದ ಅಪರಿಮಿತ ಜನಾದರ ತೆರೆಸಾ ಅವರ ಅನನ್ಯ ಸೇವೆಗೆ ಕಾಣಿಕೆಯಂತಿತ್ತು. ಮದರ್‌ ತೆರೆಸಾ ಎಂದ ಕೂಡಲೇ ಬಹುತೇಕರ ಮನದಲ್ಲಿ ಮೂಡುವುದು  ಸುಕ್ಕುಗಟ್ಟಿದ ಮುಖ, ನೀಲಿಯಂಚು, ಬಿಳಿ ಸೀರೆಯ ವೃದ್ಧೆಯ ಚಿತ್ರ.

ಆದರೆ ಅದರ ಹಿಂದೆ ಇದ್ದ ಅವರ ಕರ್ತೃತ್ವ ಶಕ್ತಿ ಅಪರಿಮಿತವಾದುದು. ಯಾವುದೇ ರೀತಿಯ ಪ್ರಚಾರ, ಆಡಂಬರದ ಹಂಗಿಲ್ಲದೆ ಅವರು ಆರಂಭಿಸಿದ ‘ಮಿಷನರೀಸ್‌ ಆಫ್‌ ಚಾರಿಟಿ’ ಸ್ವಯಂ ಸೇವಾ ಸಂಸ್ಥೆ ಜಗತ್ತಿನ ನೂರಾರು ರಾಷ್ಟ್ರಗಳಿಗೆ ವಿಸ್ತರಣೆಯಾಗುವವರೆಗಿನ ಪರಿಶ್ರಮ, ಮಾನವತೆಯೆಡೆಗಿನ ಅವರ ತುಡಿತಕ್ಕೆ ಯಾರೂ ಸಾಟಿಯಾಗಲಾರರು. ಆಗ್ನೇಯ ಯುರೋಪಿನ ಮೆಸಿಡೋನಿಯ ಗಣರಾಜ್ಯದಲ್ಲಿ ಹುಟ್ಟಿ ತಾಯ್ನಾಡಲ್ಲಿ ಬಾಲ್ಯ ಕಳೆಯುವಷ್ಟರಲ್ಲಿ ತೆರೆಸಾ ಅವರಿಗೆ ತಮ್ಮ ಬದುಕಿನ ಹಾದಿ ಸ್ಪಷ್ಟವಾಗಿತ್ತು.

ಬಹಳ ಚಿಕ್ಕ ವಯಸ್ಸಿನಲ್ಲೇ ಬಂಗಾಳದಲ್ಲಿ ಕ್ರೈಸ್ತ ಮಿಷನರಿಗಳ ಸೇವೆಯನ್ನು ಕೇಳಿ ತಿಳಿದು ಪ್ರಭಾವಿತರಾಗಿದ್ದ ತೆರೆಸಾ, ಧಾರ್ಮಿಕ ಬದುಕಿಗೆ ತಮ್ಮನ್ನು ಒಡ್ಡಿಕೊಳ್ಳಲು ನಿರ್ಧರಿಸಿದ್ದರು. 1928ರಲ್ಲಿ ಇಂಗ್ಲಿಷ್‌ ಕಲಿಯುವ ಸಲುವಾಗಿ ಐರ್ಲೆಂಡ್‌ನ ಸಿಸ್ಟರ್ಸ್‌ ಆಫ್‌ ಲೊರೆಟೊ ಸಂಸ್ಥೆಯನ್ನು ಸೇರಿದಾಗ ಅವರಿಗೆ 18 ವರ್ಷ. ಆ ಸಂಸ್ಥೆಯ ಸದಸ್ಯರು ಭಾರತದಲ್ಲಿ ಶಾಲಾ ಮಕ್ಕಳಿಗೆ ಇಂಗ್ಲಿಷ್‌ ಕಲಿಸುತ್ತಿದ್ದರು. ಮರು ವರ್ಷವೇ ಭಾರತಕ್ಕೆ ಬಂದಿಳಿದ ತೆರೆಸಾ ಡಾರ್ಜಿಲಿಂಗ್‌ನಲ್ಲಿ ಕ್ರೈಸ್ತ ದೀಕ್ಷೆಯ ತರಬೇತಿ ಪಡೆದುಕೊಂಡರು. ಬಳಿಕ ಕ್ರೈಸ್ತ ಸನ್ಯಾಸಿನಿಯಾಗಿ ಕೋಲ್ಕತ್ತಾದ ಲೊರೆಟೊ ಕಾನ್ವೆಂಟ್‌ನಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸಿದರು.

ಆ ವೃತ್ತಿಯಲ್ಲಿ ಅವರು ಸಂತಸ ಕಂಡರಾದರೂ 1943ರಲ್ಲಿ ಬಂಗಾಳ ಕಂಡ ಭೀಕರ ಕ್ಷಾಮ, 1946ರಲ್ಲಿ ನಡೆದ ಕೋಮು ಗಲಭೆಯಲ್ಲಿನ ಸಾವುನೋವು ಅವರ ಮೇಲೆ ಅಪಾರ ಪ್ರಭಾವ ಬೀರಿದವು. ಎಂದಿನಂತೆ ಆ ವರ್ಷವೂ ಕೋಲ್ಕತ್ತಾದಿಂದ ಡಾರ್ಜಿಲಿಂಗ್‌ನ ಲೊರೆಟೊ ಕಾನ್ವೆಂಟ್‌ಗೆ ವಾರ್ಷಿಕ ಏಕಾಂತ ವಾಸಕ್ಕೆಂದು ತೆರಳುತ್ತಿದ್ದ ತೆರೆಸಾ ಅವರ ಪಯಣ ಹಿಂದಿನ ವರ್ಷಗಳಂತಿರಲಿಲ್ಲ. ಆ ಪಯಣದಲ್ಲಿ ತಮ್ಮ ಬದುಕಿನ ಹಾದಿ ಬೇರೆಯೇ ಇದ್ದುದನ್ನು ಅವರು ಕಂಡುಕೊಂಡರು. ತೆರೆಸಾ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿರುವಂತೆ, ಅಂದು ಅವರು ತಮ್ಮ ಆತ್ಮದ ಕರೆಗೆ ಓಗೊಟ್ಟರು. ಆದರೆ ಅದಕ್ಕಾಗಿ ಅವರು ಮಾಡಬೇಕಾದ ತ್ಯಾಗ ಬಹು ದೊಡ್ಡದಿತ್ತು. ಮುಂದಿನ ಹಾದಿ ಬಲು ಕಠಿಣವಿತ್ತು.

ಶಿಕ್ಷಕ ವೃತ್ತಿ ತೊರೆದು ಕಡುಬಡವರಿಗಾಗಿ ಸ್ವತಃ ಮಿಷನರಿ ಆರಂಭಿಸುವ ಹೆಬ್ಬಯಕೆಯನ್ನು ತಮ್ಮ ಗುರುಗಳ ಮುಂದೆ ನಿಂತು ದಿಟ್ಟವಾಗಿ ಅವರು ನಿವೇದಿಸಿಕೊಂಡದ್ದೇ ಒಂದು ಅಪೂರ್ವವಾದ ನಿರ್ಣಾಯಕ ಕ್ಷಣ. ಯಾರೇನೇ ಹೇಳಿದರೂ ಅವರ ನಿರ್ಧಾರ ಮಾತ್ರ ಅಚಲವಾಗಿತ್ತು. ಕ್ರಮೇಣ ಹತ್ತು ಹನ್ನೆರಡು ಸನ್ಯಾಸಿನಿಯರು ಅವರ ಜೊತೆಗೂಡಿದರು. ನಂತರ ನಡೆದದ್ದೆಲ್ಲ ಈಗ ಇತಿಹಾಸ. ಹೀಗೆ ತೆರೆಸಾ ‘ಮಿಷನರೀಸ್‌ ಆಫ್‌ ಚಾರಿಟಿ’ ಮೂಲಕ ಬಡವರು, ರೋಗಿಗಳು, ನಿರ್ಗತಿಕರು ಹಾಗೂ ಅನಾಥರ ಸೇವೆಗಿಳಿದರು.

ಮರಣಶಯ್ಯೆಯಲ್ಲಿದ್ದ ಏಡ್ಸ್‌ ಪೀಡಿತರು, ಕುಷ್ಠರೋಗಿಗಳು, ಕ್ಯಾನ್ಸರ್‌ಪೀಡಿತರೆಲ್ಲರಿಗೂ ಕೋಲ್ಕತ್ತಾದ ಅವರ ‘ನಿರ್ಮಲ ಹೃದಯ ನಿವಾಸ’ದ ಬಾಗಿಲು ಎಂದಿಗೂ ಮುಚ್ಚಲೇ ಇಲ್ಲ. ಸದ್ಯ ಅವರ ಸಂಸ್ಥೆಯಲ್ಲಿ ಸುಮಾರು 4 ಸಾವಿರ ಸನ್ಯಾಸಿನಿಯರಿದ್ದು 123 ದೇಶಗಳ 610 ನೆಲೆಗಳ ಮೂಲಕ ಸೇವಾ ತತ್ಪರರಾಗಿದ್ದಾರೆ. ‘ನಾವೆಲ್ಲ ಸಮಾಜ ಸೇವಕರಲ್ಲ, ದೇವರ ಸಾಮ್ರಾಜ್ಯದ ಸೇವಕರು. ಅವನ  ಸಾಮ್ರಾಜ್ಯಕ್ಕಾಗಿ ಕೆಲಸ ಮಾಡಬೇಕಾದವರು. ಬಹಳ ಮುಖ್ಯವಾಗಿ ನಮ್ಮಲ್ಲಿ ಪ್ರಾರ್ಥನೆ, ನಂಬಿಕೆ, ಪ್ರೀತಿ ಇರಬೇಕು’ ಎಂಬ ಅವರ ಮಾತು ಎಂದೆಂದಿಗೂ ಪ್ರಸ್ತುತ.

ತಮ್ಮ ಸೇವಾ ಕೈಂಕರ್ಯದ ಆರಂಭದಲ್ಲಿ ಹೆಚ್ಚಾಗಿ ನೋವನ್ನೇ ಕಂಡುಂಡರೂ ಅವನ್ನೆಲ್ಲ ಮೆಟ್ಟಿ ನಿಂತವರು ತೆರೆಸಾ. ಸಲ್ಲದ ಅಪವಾದಗಳಿಂದ ತೆರೆಸಾ ಸಹ ಮುಕ್ತರಾದವರಲ್ಲ. ಸೇವೆಗೆ ಯಾವುದೇ ಧರ್ಮದ ಹಂಗಿಲ್ಲ. ಆದರೆ ರಾಜಕೀಯ ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಕೆಲವು ಹಿತಾಸಕ್ತಿಗಳು ವಿಷ ಬೀಜ ಬಿತ್ತುತ್ತಲೇ ಇರುತ್ತವೆ. ಸಮಾಜದ ಕಟ್ಟಕಡೆಯ ಜನರನ್ನು ಮೇಲೆತ್ತಬೇಕಾದ ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದು ಬಗೆದ ತೆರೆಸಾ ಅವರಿಗೆ ಅವೆಲ್ಲ ಬೃಹತ್‌ ಸಮಸ್ಯೆಗಳಾಗಿ ಕಾಡಲೇ ಇಲ್ಲ.

ತೆರೆಸಾ ನಮ್ಮೆಲ್ಲರಂತೆ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದವರೇ ಅಲ್ಲ. ಅತ್ಯಂತ ಸರಳವಾದದ್ದನ್ನೇ ಅನನ್ಯ ಭಕ್ತಿ ಮತ್ತು ಸೇವಾ ಮನೋಭಾವದಿಂದ ವಿಭಿನ್ನವಾಗಿ ಮಾಡಿದರು ಅಷ್ಟೆ. ಹಾಗಾಗಿಯೇ ಅವರು ನಮ್ಮೆಲ್ಲರಿಗಿಂತಲೂ ವಿಭಿನ್ನ ಮತ್ತು ವಿಶಿಷ್ಟ. ಚಿರಸ್ಮರಣೀಯರು ಸಹ. 1979ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ಪಡೆದಿದ್ದ ತೆರೆಸಾ 1997ರಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ವಿಧಿವಶರಾದರು.

‘ಕೊಳೆಗೇರಿಯ ಸಂತ’ರೆಂದೇ ಪ್ರಸಿದ್ಧರಾಗಿದ್ದ ತೆರೆಸಾ ಅವರು ನಿಧನರಾದ 19 ವರ್ಷಗಳ ಬಳಿಕ ಅವರಿಗೆ ಸಂತ ಪದವಿ ನೀಡಲು ಇದೀಗ ವ್ಯಾಟಿಕನ್‌ ಚರ್ಚ್‌ ಮುಂದಾಗಿದೆ. ಬರುವ ಸೆಪ್ಟೆಂಬರ್‌ 4ರಂದು ಪದವಿ ಪ್ರದಾನ ಮಾಡುವುದಾಗಿ ಪೋಪ್‌ ಫ್ರಾನ್ಸಿಸ್‌ ಘೋಷಿಸಿದ್ದಾರೆ. ಕೆಲವು ಮಂದಿ ತಮ್ಮ ಸಾತ್ವಿಕತೆಯಿಂದ ಬದುಕಿನುದ್ದಕ್ಕೂ ಸಂತರಂತೆಯೇ  ಜೀವಿಸುತ್ತಾರೆ. ಆದರೆ ಅವರೆಲ್ಲರನ್ನೂ ಸಂತರೆಂದು ಯಾರೂ ಘೋಷಿಸಿರುವುದಿಲ್ಲ.

ಹಾಗೆಯೇ ಸಂತ ಪದವಿ ಇಲ್ಲದೆಯೇ ತೆರೆಸಾ ಜೀವಂತವಾಗಿದ್ದಾಗಲೇ ಸಂತರೆಂಬ ಜನಮನ್ನಣೆ ಗಳಿಸಿದ್ದರು. ಈಗ ಅವರಿಗೆ ಚರ್ಚ್‌ ನೀಡುತ್ತಿರುವ ಸಂತ ಪದವಿ ಕೇವಲ ಔಪಚಾರಿಕವಾದುದು. ಚರ್ಚ್‌ನ ಅಧಿಕೃತ ದಾಖಲೆಗಳಲ್ಲಿ ಗುರುತಿಸುವುದಕ್ಕೆ ಅದೊಂದು ಸಾಧನ ಮಾತ್ರ. ಸಂತರೆಂದು ಘೋಷಿಸಿದ ಮಾತ್ರಕ್ಕೆ ಅವರ ಮೇಲಿನ ಗೌರವಾದರ ಹೆಚ್ಚುತ್ತದೆ ಎಂಬ ಭಾವನೆಯೂ ತಪ್ಪು. ಅದಾಗಲೇ ಅವರ ಮೇಲಿರುವ ನಮ್ಮ ಭಕ್ತಿಯನ್ನು, ಪ್ರೀತಿಯನ್ನು ತೋರ್ಪಡಿಸಲು ಇದು  ಮತ್ತೊಮ್ಮೆ ನಮಗೆ ಸಿಕ್ಕಿರುವ ಅವಕಾಶ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT