ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಶ್ರೀಕಾಂತ್‌ ಪ್ರಮುಖ ಆಕರ್ಷಣೆ

ಇಂದಿನಿಂದ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಭಾನುವಾರವಷ್ಟೇ ಇಂಡಿಯಾ ಓಪನ್‌ ಸೂಪರ್‌ ಸರಣಿ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ.

ಮಂಗಳವಾರದಿಂದ ಆರಂಭವಾಗ ಲಿರುವ ಮಲೇಷ್ಯಾ ಓಪನ್‌ ಸೂಪರ್‌ ಸರಣಿ ಟೂರ್ನಿಯ ಸಿಂಗಲ್ಸ್‌ ವಿಭಾಗಗಳಲ್ಲಿ ಸೈನಾ ಮತ್ತು ಶ್ರೀಕಾಂತ್‌ ಪ್ರಶಸ್ತಿ  ಗೆಲ್ಲುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಈಗ ಭಾರತದ  ಸ್ಪರ್ಧಿಗಳತ್ತ ನೆಟ್ಟಿದೆ.

ಇಂಡಿಯಾ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕೆಲ ಸಮಯದಲ್ಲೇ ಸೈನಾ ಮತ್ತು ಶ್ರೀಕಾಂತ್‌ ಮಲೇಷ್ಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದ್ದು, ಪ್ರಧಾನ ಸುತ್ತಿನ ಹೋರಾಟಗಳು ಬುಧವಾರದಿಂದ ನಡೆಯಲಿವೆ.
ಹೀಗಾಗಿ ಎರಡು ದಿನಗಳ ಈ ಚುಟುಕು ಅವಧಿಯಲ್ಲಿ ಭಾರತದ ಸ್ಪರ್ಧಿಗಳು  ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಸೈನಾ ಅವರಿಂದ ಈ ವರ್ಷದ ಆರಂಭದಿಂದಲೂ ಅಮೋಘ ಆಟ ಮೂಡಿಬರುತ್ತಿದೆ. ಅವರು ವಿಶ್ವದ ಬಲಿಷ್ಠ ಆಟಗಾರ್ತಿಯರ ಎದುರು ಲೀಲಾಜಾಲವಾಗಿ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಹೀಗಿದ್ದರೂ ಇಲ್ಲಿ ಅವರ ಪ್ರಶಸ್ತಿಯ ಹಾದಿ ಸುಲಭದ್ದಂತೂ ಅಲ್ಲ. 

ಏಕೆಂದರೆ ಹೈದರಾಬಾದ್‌ನ ಆಟಗಾರ್ತಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ ಅಲ್ಲಿ ಏಳನೇ ಶ್ರೇಯಾಂಕಿತೆ ಚೀನಾ ತೈಪೆಯ ಬಲಿಷ್ಠ ಆಟಗಾರ್ತಿ ತಿಯಾ ಜು ಯಿಂಗ್‌  ಅವರಿಂದ ಕಠಿಣ ಪೈಪೋಟಿ ಎದುರಾಗಲಿದೆ. ಆ ನಂತರದ ಹಂತಗಳಲ್ಲೂ  ಅವರಿಗೆ ಚೀನಾದ ಲಿ ಕ್ಸುಯೆರುಯಿ ಮತ್ತು ವಾಂಗ್‌ ಯಿಹಾನ್‌ ಅವರಿಂದ ನಿಸ್ಸಂದೇಹವಾಗಿ ಪ್ರಬಲ ಸವಾಲು ಎದುರಾಗಲಿದೆ.

‘ಹಿಂದಿನ ಮೂರು ತಿಂಗಳ ಅವಧಿಯಲ್ಲಿ ನಾನು ಮೂರು ಪ್ರಮುಖ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದೇನೆ. ಇದರರ್ಥ ನಾನು ಈಗ ಸಾಕಷ್ಟು ಕಲಿಯುತ್ತಿದ್ದೇನೆ. ಯಾವುದೇ ಟೂರ್ನಿ ಯನ್ನೂ ಹಗುರವಾಗಿ ಪರಿಗಣಿಸುತ್ತಿಲ್ಲ. ಪ್ರತಿ ಟೂರ್ನಿಯೂ ಸವಾಲಿನಿಂದ ಕೂಡಿರುತ್ತದೆ. ಹೀಗಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ನಾನು ಸಾಕಷ್ಟು ತಯಾರಿ ನಡೆಸಬೇಕು’ ಎಂದು ಸೈನಾ ನುಡಿದಿದ್ದಾರೆ.

ಶ್ರೀಕಾಂತ್‌–ಔಸೆಫ್‌ ಹೋರಾಟ:  ಸತತವಾಗಿ ಸ್ವಿಸ್‌ ಓಪನ್‌ ಮತ್ತು ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಕೆ.ಶ್ರೀಕಾಂತ್‌ಗೂ ಈ ಟೂರ್ನಿಯಲ್ಲಿ ಅಗ್ನಿ ಪರೀಕ್ಷೆ ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT