ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಸಿಂಧುಗೆ ಸೋಲು

ಏಷ್ಯಾ ಬ್ಯಾಡ್ಮಿಂಟನ್‌: ಭಾರತದ ಸವಾಲು ಅಂತ್ಯ
Last Updated 24 ಏಪ್ರಿಲ್ 2015, 19:34 IST
ಅಕ್ಷರ ಗಾತ್ರ

ವುಹಾನ್‌, ಚೀನಾ (ಪಿಟಿಐ): ಭಾರತದ ಸೈನಾ ನೆಹ್ವಾಲ್‌ ಹಾಗೂ ಪಿ.ವಿ ಸಿಂಧು ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಸೈನಾ 21–16, 13–21, 18–21ರಲ್ಲಿ ಐದನೇ ಶ್ರೇಯಾಂಕದ ಚೀನಾದ ಆಟಗಾರ್ತಿ ಜು ಯಿಂಗ್‌ ತಾಯ್‌ ಎದುರು ಸೋಲು ಕಂಡರು.

ಭಾರತದ ಆಟಗಾರ್ತಿ ಜೂ ಎದುರು ಈವರೆಗೂ ಐದು ಬಾರಿ ಆಡಿದ್ದಾರೆ. ಆದರೆ ಒಮ್ಮೆಯೂ ಗೆಲುವು ಒಲಿದಿಲ್ಲ.

ಮೊದಲ ಗೇಮ್‌ನಲ್ಲೇ ಸೈನಾ 6–10ರಲ್ಲಿ ಹಿನ್ನಡೆ ಹೊಂದಿದ್ದರು. ನಂತರ ತಿರುಗೇಟು ನೀಡಿದ ಹೈದರಾಬಾದ್‌ನ ಆಟಗಾರ್ತಿ 11–11ರಲ್ಲಿ ಸಮಬಲ ಸಾಧಿಸಿ ಭರವಸೆ ಗಿಟ್ಟಿಸಿಕೊಂಡರು. ನಂತರ 16–14ರಲ್ಲಿ ಮುನ್ನಡೆ ಪಡೆದರು. ಅಂತಿಮವಾಗಿ ಐದು ಗೇಮ್‌ ಪಾಯಿಂಟ್ಸ್‌ ಗಿಟ್ಟಿಸಿಕೊಂಡ ಸೈನಾ ಆರಂಭಿಕ ಗೇಮ್‌ ಗೆಲ್ಲುವಲ್ಲಿ ಸಫಲರಾದರು.

ಎರಡನೇ ಗೇಮ್‌ನಲ್ಲಿ ಜು ಸೈನಾಗೆ ಪುಟಿದೇಳಲು ಅವಕಾಶ ನೀಡಲೇ ಇಲ್ಲ. ಅಂತಿಮ ಹಂತದವರೆಗೂ ಅಂತರ ಕಾಯ್ದುಕೊಂಡರು. ಒಂದು ಹಂತದಲ್ಲಿ ಜು 14–7ರಲ್ಲಿ ಮುನ್ನಡೆ ಹೊಂದಿದ್ದರು.

ನಿರ್ಣಾಯಕ ಗೇಮ್‌ನಲ್ಲಿ ಜು ಪ್ರಾರಂಭದಲ್ಲೇ 5–1ರಲ್ಲಿ ಮುನ್ನಡೆ ಕಾಪಾಡಿಕೊಂಡರು. ನಂತರ ಪ್ರಯಾಸದಿಂದ ಸೈನಾ 17–17ರಲ್ಲಿ ಸಮಬಲ ಸಾಧಿಸಿದರು. ಈ ಹಂತದಲ್ಲಿ  ಚುರುಕುತನದಿಂದ ಆಡಿದ ಜು ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸಿಂಧುಗೆ ಸೋಲು: ಎಂಟನೇ ಶ್ರೇಯಾಂಕದ ಸಿಂಧು ಗಾಯದ ಸಮಸ್ಯೆಯಿಂದ ಮರಳಿದ ಬಳಿಕ ಆಡಿದ ಮೊದಲ ಟೂರ್ನಿ ಇದಾಗಿದೆ.
ಇನ್ನೊಂದು ಸೆಮಿಫೈನಲ್‌ನಲ್ಲಿ ಸಿಂಧು 21–11, 19–21, 8–21ರಲ್ಲಿ ಅಗ್ರ ಶ್ರೇಯಾಂಕದ ಲೀ ಕ್ಸುರುಯ್‌ ಎದುರು ಸೋಲು ಕಂಡರು.
ದಿಟ್ಟ ಆರಂಭ ಪಡೆದ ಸಿಂಧು 8–1ರಲ್ಲಿ ಮುನ್ನಡೆ  ಪಡೆದರು. ಈ ಅಂತರವನ್ನು ದಾಟಲು ಸಾಧ್ಯವಾಗದ ಲೀ ಮೊದಲ ಗೇಮ್‌ನಲ್ಲಿ ಸುಲಭವಾಗಿ ಶರಣಾದರು.

ಎರಡನೇ ಗೇಮ್‌ನಲ್ಲೂ ಸಿಂಧು 7–3ರಲ್ಲಿ ಮುನ್ನಡೆ ಗಿಟ್ಟಿಸಿಕೊಂಡು ವಿಶ್ವಾಸದಲ್ಲಿ ಆಡಿದರು. ಆದರೆ ಲೀ 9–9 ರಲ್ಲಿ ಸಲಬಲ ಸಾಧಿಸಿದರು. ನಂತರ 17–13ರಲ್ಲಿ ಮುನ್ನಡೆ ಪಡೆದರು. ಸಿಂಧು 19–20ಕ್ಕೆ ಅಂತರ ತಗ್ಗಿಸಿದರು. ನಂತರದ  ಪಾಯಿಂಟ್ಸ್‌ ಗಿಟ್ಟಿಸಿಕೊಂಡ ಲೀ ಗೇಮ್‌ ಗೆದ್ದರು.

ನಿರ್ಣಾಯಕ ಗೇಮ್‌ನಲ್ಲಿ ಲೀ ತಮ್ಮ ನೈಜ ಆಟದಿಂದ ಗಮನ ಸೆಳೆದರು. ಸಿಂಧುಗೆ ಪ್ರಬಲ ಪೈಪೋಟಿ ನೀಡಿದರು. ಚೇತರಿಸಿಕೊಳ್ಳಲು ಸಾಧ್ಯವಾಗದೆ ಭಾರತದ ಆಟಗಾರ್ತಿ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT