ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ದಾಳಿ ತಡೆಗೆ ಉಚಿತ ತಂತ್ರಾಂಶ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸೈಬರ್‌ ದಾಳಿ ಇತ್ತೀಚೆಗೆ ಸಾಮಾನ್ಯವಾಗಿದೆ. ಜಾಗತಿಕ ಮಟ್ಟದ ಬಹುದೊಡ್ಡ ಸಮಸ್ಯೆಯೂ ಹೌದು.
ರಕ್ಷಣಾ ಸಚಿವಾಲಯ, ಭದ್ರತಾ ಸಂಸ್ಥೆಗಳು,  ಬ್ಯಾಂಕ್‌ಗಳು, ವೈಯಕ್ತಿಕ ಕಂಪ್ಯೂಟರ್ ಹೀಗೆ ಸೈಬರ್‌ ದಾಳಿಗೆ ತುತ್ತಾಗದ ಇರುವ ಕ್ಷೇತ್ರವೇ ಇಲ್ಲ ಎಂಬಂತಾಗಿದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ದೇಶಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿಗಳ ಸೋರಿಕೆ ಆತಂಕ ಕೂಡಾ ದೇಶಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಇದನ್ನು ಮನಗಂಡ ಜರ್ಮನಿಯ ವಿಶ್ವವಿದ್ಯಾಲಯವೊಂದರ ತಂತ್ರಜ್ಞರು ಸೈಬರ್‌ ದಾಳಿ ತಡೆಗೆ ‘TCP Stealth’ ಎಂಬ ಉಚಿತ ತಂತ್ರಾಂಶ ರೂಪಿಸಿದ್ದಾರೆ.

ಇದು ಇಂಟರ್‌ನೆಟ್‌ನಲ್ಲಿ ಶೋಧ ಕಾರ್ಯ ನಡೆಸುವ ಮೂಲಕ ದಾಳಿ ತಡೆಯುತ್ತದೆ ಎನ್ನುತ್ತಾರೆ ಅವರು.
ಇಂಗ್ಲೆಂಡ್‌, ಆಸ್ಟ್ರೇಲಿಯ, ಅಮೆರಿಕ, ಕೆನಡಾ ಮತ್ತು ನ್ಯೂಜಿಲೆಂಡ್‌ ದೇಶಗಳ ರಹಸ್ಯ ಸೇವೆಗಳ ಒಕ್ಕೂಟವಾದ ‘Five Eyes’ ನಲ್ಲಿ ಬಳಕೆ ಮಾಡಲಾಗುವುದು ಎಂದು ಆನ್‌ಲೈನ್‌ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿದೆ.

ಈ ಉಚಿತ ತಂತ್ರಾಂಶಕ್ಕೆ ಒಂದು ಸಂಕೇತ ಸಂಖ್ಯೆ ಇದ್ದು, ಅದನ್ನು ಕ್ಲೈಂಟ್‌ ಮತ್ತು ಸರ್ವರ್‌ ಕಂಪ್ಯೂಟರ್‌ ಬಳಕೆದಾರರಿಗೆ ಮಾತ್ರ ತಿಳಿದಿರುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಸೀಕ್ರೆಟ್‌ ಟೋಕನ್‌ ಸೃಷ್ಟಿಯಾಗುತ್ತದೆ. ಸರ್ವರ್‌ ಜತೆ ಸಂಪರ್ಕ ಸಾಧಿಸುವಾಗ ಈ ಸೀಕ್ರೆಟ್‌ ಟೋಕನ್‌ ಬಳಸಿಕೊಳ್ಳಲಾಗುತ್ತದೆ. ಟೋಕನ್‌ ತಪ್ಪಾಗಿದ್ದರೆ ಸರ್ವರ್‌ನಿಂದ ಸಂಪರ್ಕ ಸಿಗುವುದಿಲ್ಲ.

ಹೇಗೆ, ಯಾವ ಸಂದರ್ಭದಲ್ಲಿ ಸೈಬರ್‌ ದಾಳಿಗೆ ಒಳಗಾಗಿದ್ದೇವೆ ಎಂಬುದೇ ತಿಳಿಯುವುದಿಲ್ಲ. ಅಷ್ಟು ನಾಜೂಕಾಗಿ ದಾಳಿಕೋರರು ಕಾರ್ಯಾಚರಿಸುತ್ತಿದ್ದಾರೆ. ಉನ್ನತ ಮಟ್ಟದ ತಂತ್ರಜ್ಞಾನ ಬಳಸುತ್ತಿರುವ ಅಮೆರಿಕದಂತಹಾ ದೇಶಗಳೇ ಈ ಸೈಬರ್‌ ದಾಳಿ ತಡೆಗೆ ಪರದಾಡುತ್ತಿವೆ.

ಇನ್ನು ಭಾರತಕ್ಕೆ ಬಂದರಂತೂ ಲೆಕ್ಕವಿಲ್ಲದಷ್ಟು ಸೈಬರ್‌ ಅಪರಾಧ  ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ದೇಶದಲ್ಲಿ ಬಹಳ ತಡವಾಗಿ ಸೈಬರ್‌ ನೀತಿ ಜಾರಿಗೆ ಬಂದಿದೆಯಾದರೂ ಅದರ ಪರಿಣಾಮಕಾರಿ ಬಳಕೆ ಇನ್ನೂ ಸಾಧ್ಯವಾಗುತ್ತಿಲ್ಲ.

ಆಡಳಿತಾತ್ಮಕ ಮಟ್ಟದಲ್ಲಿ ಮತ್ತು ಜಾಗೃತಿ ಕೊರತೆಯಿಂದಾಗಿ ಸೈಬರ್‌ ಅಪರಾಧ ಪ್ರಕರಣಗಳನ್ನು ಬೇಧಿಸಲಾಗುತ್ತಿಲ್ಲ.
ಈಗಲೂ ಹಲವು ವಂಚಕರು ಸೈಬರ್‌ ಕೇಂದ್ರಗಳನ್ನು ತಮ್ಮ ದಾಳಿಯ ಮೂಲವಾಗಿ ಬಳಸುತ್ತಿದ್ದಾರೆ. ಸೈಬರ್‌ ಕೇಂದ್ರಗಳಲ್ಲಿ ಸೈಬರ್‌ ನೀತಿ ಕಟ್ಟುನಿಟ್ಟಾಗಿ ಜಾರಿಯಲ್ಲಿರದಿರುವುದು ಮತ್ತು ಸೇವೆ ನೀಡುವವರ ಬೇಜವಾಬ್ದಾರಿತನವೂ ಇದಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಸೈಬರ್‌ ಅಪರಾಧ ತಂಡ ಕಟ್ಟುನಿಟ್ಟಾಗಿ ನಿಯಮ ಪಾಲಿಸದಿರುವುದೂ ಅಪರಾಧ ಹೆಚ್ಚುತ್ತಿರುವುದಕ್ಕೆ ಕಾರಣ ಎನ್ನುವುದು ಹಲವು ತಜ್ಞರ ಅಭಿಪ್ರಾಯ.

ಸೈಬರ್‌ ಕೇಂದ್ರಗಳ ರಕ್ಷಣೆಗೆಂದು ನಿಯಂತ್ರಕ ತಂತ್ರಾಂಶಗಳನ್ನು ಬಳಸುವ ಅಗತ್ಯವಿದೆ. ಆದರೆ ಕಿರಿಕಿರಿ ಉಂಟುಮಾಡುವ ಜಾಹೀರಾತುಗಳು ಅಥವಾ ಸರ್ವರ್‌ ಕಾರ್ಯಾಚರಣೆ ವೇಗವನ್ನೇ ತಗ್ಗಿಸುತ್ತದೆ ಎಂಬ ಕಾರಣಕ್ಕೆ ದೇಶದ ಹಲವು ಸೈಬರ್‌ ಕೇಂದ್ರಗಳಲ್ಲಿ ನಿಯಂತ್ರಕ ತಂತ್ರಾಂಶಗಳನ್ನು ಬಳಕೆ ಮಾಡುತ್ತಿಲ್ಲ.

ವೈಯಕ್ತಿಕ ಬಳಕೆದಾರ ಹಲವು ಬಾರಿ ವಂಚನೆಗೆ ಒಳಗಾದರೂ ಕೂಡಾ ಎಚ್ಚೆತ್ತುಕೊಳ್ಳುತ್ತಿಲ್ಲ. ಒಟ್ಟಾರೆ ಬಳಕೆದಾರರ ನಿರ್ಲಕ್ಷ್ಯ ಅಥವಾ ಸೂಕ್ತ ಮಾಹಿತಿ ಕೊರತೆಯಿಂದಲೋ ಅಥವಾ ದಾಳಿಕೋರರ ಅತಿ ಬುದ್ದಿವಂತಿಕೆಯಿಂದಲೋ ಸೈಬರ್‌ ದಾಳಿ ಪ್ರಮಾಣ ಹೆಚ್ಚುತ್ತಲೇ ಇದೆ.

ಈ ಎಲ್ಲಾ ದೃಷ್ಟಿಯಿಂದ ನೋಡಿದರೆ ಈ  ತಂತ್ರಾಂಶ ಉಚಿತ ಆಗಿರುವುದರಿಂದ ಹಲವರ ಗಮನ ಸೆಳೆಯಲಿದ್ದು, ಸೈಬರ್‌ ದಾಳಿ ತಡೆಗೆ ಹೆಚ್ಚು ಪರಿಣಾಮಕಾರಿ ಆಗುವ ನಿರೀಕ್ಷೆ ಮಾಡಬಹುದು.

ಬೃಹತ್‌ ಪ್ರಮಾಣದಲ್ಲಿ ಬಳಕೆ ಮಾಡಲು  ಅನುಕೂಲವಾಗುವಂತೆ ತಂತ್ರಾಂಶವನ್ನು ರೂಪಿಸಲಾಗುತ್ತಿದೆ. ಆ ಬಳಿಕವಷ್ಟೇ ಸಾರ್ವಜನಿಕ ಬಳಕೆಗೆ ಲಭ್ಯವಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT