ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಯುದ್ಧದ ಆತಂಕದಲ್ಲಿ ಜಗತ್ತು

ಹ್ಯಾಕರ್‌ಗಳು ಭಯೋತ್ಪಾದಕರು: ಫ್ಲಾರಿಡಾ ವಿವಿ ಪ್ರಾಧ್ಯಾಪಕ ಅಯ್ಯಂಗಾರ್‌ ಆತಂಕ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡು ವಿಮಾನ­ಗಳು ಕೆಳಗಿಳಿಯಲು ಸಿದ್ಧ­ವಾಗಿವೆ ಎಂದಿಟ್ಟು­ಕೊಳ್ಳಿ. ನಿಲ್ದಾಣ­ದಲ್ಲಿ ವಿಮಾನದ ಮಾರ್ಗವನ್ನು ನಿಯಂತ್ರಿ­ಸುವ ಅಧಿಕಾರಿ­ಗಳನ್ನೇ ತಮ್ಮ ಚಾಕಚಕ್ಯತೆ ಮೂಲಕ ಗೊಂದ­ಲಕ್ಕೆ ಒಳಪಡಿಸಿ ಅಪಘಾತಕ್ಕೆ ಕಾರಣವಾಗುವ ಸೈಬರ್‌ ವಂಚಕರು (ಹ್ಯಾಕರ್ಸ್‌) ಈ ಜಗತ್ತಿನಲ್ಲಿದ್ದಾರೆ. ಇದರಿಂದ ಭಾರಿ ಸಾವು ನೋವು ಸಂಭವಿ­ಸುವ ಸಾಧ್ಯತೆ ಇರುತ್ತದೆ’

‘ಭಾರತದ ಒಂದು ಭಾಗ­ವನ್ನು ಪಾಕಿಸ್ತಾನದ ಸೇನೆ ಆಕ್ರಮಿ­ಸಿಕೊಂಡಿದೆ ಎಂದು ಎಲ್ಲರಿಗೆ ಇಮೇಲ್‌ ಬರು­ತ್ತದೆ ಎಂದಿಟ್ಟು­ಕೊಳ್ಳಿ. ಆಗ ಜನ ದಂಗೆ ಏಳ­ಬಹುದು. ನಂತರದ ಪರಿಣಾ­ಮ­­ವನ್ನು ನೀವೇ ಊಹಿಸಿ’
–ಈ ರೀತಿಯ ಉದಾಹ­ರಣೆ ಮೂಲಕ ಸೈಬರ್‌ ಅಪರಾ­ಧದ ಕರಾಳ ಮುಖ­ವನ್ನು ತೆರೆದಿಟ್ಟಿದ್ದು ಫ್ಲಾರಿಡಾ ಅಂತರರಾಷ್ಟ್ರೀಯ ವಿ.ವಿ ಪ್ರಾಧ್ಯಾಪಕ ಡಾ. ಎಸ್‌.­ಸೀತಾರಾಮ್‌ ಅಯ್ಯಂಗಾರ್‌.

‘ಬೆಂಗಳೂರು ವಿಜ್ಞಾನ ವೇದಿಕೆ’ ನಗರದಲ್ಲಿ ಬುಧವಾರ ಆಯೋಜಿ­ಸಿದ್ದ ‘ಸೈಬರ್‌ ಭದ್ರತೆ ಸುರಕ್ಷಿತವೇ?’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಸೈಬರ್‌ ಅಪರಾಧ ಈಗ ಸೈಬರ್‌ ಯುದ್ಧಕ್ಕೆ ಕಾರಣ­­ವಾ­ಗುವ ಆತಂಕ ಸೃಷ್ಟಿಸಿದೆ. ಇನ್ನು ದೇಶಗಳ ನಡುವೆ ಸಾಂಪ್ರ­ದಾ­ಯಿಕ ಯುದ್ಧ ನಡೆಯುವು­ದಿಲ್ಲ. ಬದಲಾಗಿ ಸೈಬರ್‌ ಯುದ್ಧ ಜರುಗುವ ಸಾಧ್ಯತೆಗಳಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿಜ್ಞಾನಿಗಳು, ಪ್ರೊಫೆಸರ್‌­ಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಆತಂಕಭರಿತ ಧ್ವನಿಯಲ್ಲಿಯೇ ಪ್ರಶ್ನೆಗಳ ಮೂಲಕ ತಮ್ಮ ಅನುಮಾನ ಬಗೆಹರಿಸಿ ಕೊಳ್ಳಲು ಪ್ರಯತ್ನಿಸಿ­ದರು. ಪವರ್‌ ಪಾಯಿಂಟ್‌ ನೆರವಿನಿಂದ ಅವರು ಉದಾಹರ­ಣೆ­, ಚಿತ್ರ ಹಾಗೂ ಗ್ರಾಫಿಕ್ಸ್‌ ಮೂಲಕ ಅಯ್ಯಂಗಾರ್‌, ತಮ್ಮ ಅನುಭವದ ಬುತ್ತಿಯನ್ನು ಸಭಿಕರಿಗೆ ಉಣಬಡಿಸಿದರು.

ವೆಬ್‌ ಪೇಜ್‌ಗೇ ಕನ್ನ: ‘ನಾನು ಇತ್ತೀಚೆಗಷ್ಟೇ ‘ಮ್ಯಾಥಮೆಟಿಕ್ಸ್‌ ಥಿಯರಿ’ ಎಂಬ ಪುಸ್ತಕ ಬರೆದಿದ್ದೇನೆ. ಅದು ವೆಬ್‌ಪೇಜ್‌ನಲ್ಲೂ ಲಭ್ಯ­ವಿದೆ. ಆದರೆ ಈ ವಂಚ­ಕರು ಆ ವೆಬ್‌ಪೇಜ್‌ಗೆ ಕನ್ನ ಹಾಕಿ ಪುಸ್ತಕ ಬರೆದವರ ಹೆಸರನ್ನೇ ಬದಲಾಯಿಸಿದ್ದಾರೆ’ ಎಂದಾಗ ಸಭಾಂಗಣ­ದಲ್ಲಿ ಜೋರು ನಗು.

‘ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಹಣಕಾಸು ವ್ಯವಹಾರ­ದಲ್ಲಿ ತೊಡಗಿರುವವರು ಈ ಸೈಬರ್‌ ಕಳ್ಳರ ವಂಚನೆಗೆ ಒಳಗಾಗುತ್ತಿ­ದ್ದಾರೆ. ಕೋಟ್ಯಂತರ ಹಣ ಕಳೆದುಕೊಂಡ ಉದಾಹರಣೆ­ಗಳಿವೆ. ಷೇರುಪೇಟೆಯ ಕೆಲ ಮಾಹಿತಿಯನ್ನು ಮೊದಲೇ ಕಲೆಹಾಕಿ ಮಾರುಕಟ್ಟೆಯ ಏರುಪೇರಿಗೆ ಕಾರಣರಾಗು­ತ್ತಿ­ದ್ದಾರೆ’ ಎಂದು ಹೇಳಿದರು.

‘ಬ್ಯಾಂಕ್‌ಗಳು ಮಾತ್ರವಲ್ಲ; ಸೈಬರ್‌ ಕಳ್ಳರಿಂದಾಗಿ ದೇಶದ ರಕ್ಷಣಾ, ಇಂಧನ ಹಾಗೂ ದೂರಸಂಪರಕ ವ್ಯವಸ್ಥೆ ಭಾರಿ ಅಪಾಯಕ್ಕೆ ಸಿಲುಕಿವೆ. ತಪ್ಪು ಮಾಹಿತಿ ನೀಡುವ ಮೂಲಕ ಜನರ ದಿಕ್ಕುತಪ್ಪಿಸು­ತ್ತಿದ್ದಾರೆ. ಆನ್‌ಲೈನ್‌ ವ್ಯವಸ್ಥೆ­ಯನ್ನೇ ಹಾಳುಗೆಡುವುತ್ತಿ­ದ್ದಾರೆ.

ರಹಸ್ಯ ಹಾಗೂ ಪ್ರಮುಖ ಯೋಜನೆಯ ಅಂಶ­ಗಳನ್ನು ಕದಿಯುತ್ತಿದ್ದಾರೆ. ದತ್ತಾಂಶ­ಗಳನ್ನು ನಾಶಪಡಿಸುತ್ತಿದ್ದಾರೆ. ಇರಾನ್‌ ಅಣ್ವಸ್ತ್ರ ಯೋಜನೆಯ ಪ್ರಮುಖ ಮಾಹಿತಿಯನ್ನೇ ಹಾಳುಗೆಡುವಿ­ದ್ದರು. ಪದವಿ ಕೂಡ ಓದದ­ವರು ಇಂಥ ಕೃತ್ಯ ಎಸಗುವ ಕೌಶಲ ಹೊಂದಿದ್ದಾರೆ’ ಎಂದು ಅವರು ವಿವರಿಸಿದರು.

‘ಸೈಬರ್‌ ಕಳ್ಳರ ಬಗ್ಗೆ ಅಮೆರಿಕ ಕೂಡ ಭಯಭೀತ­ವಾಗಿದೆ. ಸೈಬರ್‌ ಭದ್ರತೆಗಾಗಿ ಸಾವಿರಾರು ಕೋಟಿ ಹಣ ವ್ಯಯಿಸುತ್ತಿದೆ. ಸೈಬರ್‌ ಕಳ್ಳರನ್ನು ನಿಯಂತ್ರಿಸಲು  ಸಂಶೋಧನೆಗಳು, ಅಧ್ಯಯನದ ಮೂಲಕ ಹೊಸ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತ­ದಲ್ಲೂ ಹೆಚ್ಚಿನ ಸಂಶೋಧನೆ ನಡೆಯಬೇಕು. ವಿವಿ­ಗಳಲ್ಲಿ ಸೈಬರ್‌ ಭದ್ರತೆಗೆ ಸಂಬಂಧಿಸಿದ ಹೊಸ ಕೋರ್ಸ್‌ಗೆ ಅವಕಾಶ ಕಲ್ಪಿಸಬೇಕು. ಪಠ್ಯದಲ್ಲಿ ಬದಲಾ­­ವಣೆ ಮಾಡಬೇಕು. ಅದಕ್ಕಾಗಿ ಯುವ ವಿಜ್ಞಾನಿ­ಗಳನ್ನು ಪ್ರೋತ್ಸಾಹಿಸಬೇಕು’ ಎಂದು ಅಯ್ಯಂಗಾರ್‌ ಪ್ರತಿಪಾದಿಸಿದರು.

‘ರಹಸ್ಯ ಮಾಹಿತಿಗಳನ್ನು ನಮಗೆ ಅರ್ಥವಾಗುವ ಕೋಡ್‌ಗಳಲ್ಲಿ ಮತ್ತೊಬ್ಬರಿಗೆ ರವಾನಿಸಿ ಈ ಕೃತ್ಯಕ್ಕೆ ಕಡಿವಾಣ ಹಾಕಬಹುದು. ಅನುಮಾನ ಬಂದಾಗ ಕೂಡಲೇ ಜಾಗೃತರಾಗಿ ಮಾಹಿತಿ­ ಬದಲಾ­ಯಿ­­ಸಬೇಕು. ಸೈಬರ್‌ ಕಳ್ಳರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಆದರೆ ಸುಖಾಸುಮ್ಮನೇ ಆರ್ಥಿಕ ನಷ್ಟ ಅನುಭವಿಸ­ಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT