ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಯುಗದ ಜೀವನಚಕ್ರ

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಕ್‌ ಕ್ಲೈಂಬರ್‌ ಸಾಹಸಿ ಸಚಿನ್ ವೆಂಕಟೇಶಯ್ಯ ಅವರೊಂದಿಗೆ ಅರ್ಜುನ್‌ ಕಿಶೋರ್‌ ಚಂದ್ರ ಹಲವು ಬಾರಿ ರಾಕ್‌ ಕ್ಲೈಂಬಿಂಗ್‌ (ಕಲ್ಲಿನ ಬೆಟ್ಟಗಳನ್ನೇರುವುದು) ಚಟುವಟಿಕೆಗಳಲ್ಲಿ ಜೊತೆಯಾಗಿದ್ದಾರೆ. ಹೀಗೆ ಒಮ್ಮೆ ಸಾಹಸ ಚಟುವಟಿಕೆಗಳಲ್ಲಿ ತೊಡಗಿದ್ದಾಗ, ಇದೇ ವಸ್ತುವನ್ನಿಟ್ಟುಕೊಂಡು ಸಿನಿಮಾ ಏಕೆ ಮಾಡಬಾರದು ಎಂದು ಅವರಿಗನ್ನಿಸಿದೆ.  ಯೋಚನೆ ಹುಟ್ಟಿಕೊಂಡಿತು.

ಪಯಣದ ಕುರಿತ ವಸ್ತು ಹೊಳೆದಾಗ ಅವರು ಮೊದಲು ಸಿದ್ಧಪಡಿಸಿದ್ದು ಹಾಡುಗಳನ್ನು. ಸಾಹಿತ್ಯ ಹೊಳೆದಂತೆ ಹಾಡುಗಳನ್ನು ಹೊಸೆಯುತ್ತಾ ಹೋದರು. ಬಳಿಕ ಕಥೆಗೊಂದು ರೂಪ ನೀಡತೊಡಗಿದರು. ಸಿನಿಮಾಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದರೂ ಹಣ ಹೂಡುವವರು ಯಾರು ಎಂಬ ಪ್ರಶ್ನೆ ಬಂದಾಗ, ಮೊದಲು ಮೂಡಿದ ಆಲೋಚನೆ ‘ಕ್ರೌಡ್‌ಫಂಡಿಂಗ್‌’. ಹಣ ಸಂಗ್ರಹಿಸಲೆಂದೇ ಟೀಸರ್‌ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಅದನ್ನು ನೋಡಿ ಮೆಚ್ಚಿದವರು ಅಲ್ಪ ಸ್ವಲ್ಪ ಬಂಡವಾಳ ಹಾಕಿದರು. ‘ಲೈಫ್‌ 360’ಕ್ಕೆ ಚಾಲನೆಯೂ ಸಿಕ್ಕಿತು.

‘ತಿಥಿ’ಯ ಅನುಭವ
ಕಲೆ ಚಿಕ್ಕಂದಿನಿಂದಲೂ ಅರ್ಜುನ್‌ ಅವರ ಆಸಕ್ತಿ. ಪೆನ್ಸಿಲ್‌ ಸ್ಕೆಚ್, ಪೇಂಟಿಂಗ್‌, ಗ್ಲಾಸ್‌ ವರ್ಕ್‌ಗಳನ್ನು ಮಾಡುತ್ತಿದ್ದ ಅವರನ್ನು ನಿಧಾನವಾಗಿ ಸಿನಿಮಾ ಮಾಧ್ಯಮ ಸೆಳೆಯಿತು. ಇದಕ್ಕೆ ವೃತ್ತಿಯಲ್ಲಿ ಮಾಸ್ತರರಾಗಿರುವ ತಂದೆ ಕಾರಣ. ತಂದೆ ಬಿಡುವಿನ ವೇಳೆಯಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಣ್ಣ ಸಹ ರಂಗಭೂಮಿ, ಕಿರುತೆರೆಯ ಹಾದಿ ತುಳಿದಿದ್ದು ಅರ್ಜುನ್‌ ಕನಸಿಗೆ ಬಣ್ಣ ತುಂಬಿತು. ಛಾಯಾಗ್ರಾಹಕರಾಗಿರುವ ಅನಿಲ್‌ ಮತ್ತು ಅರ್ಜುನ್‌ ಇಬ್ಬರೂ ಕಾಲೇಜು ಸ್ನೇಹಿತರು. ಇಬ್ಬರೂ ಸೇರಿ ತಯಾರಿಸಿದ ‘ಮೌನ’ ಎಂಬ ಕಿರುಚಿತ್ರ ಅಂತರ್‌ ಕಾಲೇಜು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯಿತು. ಬಳಿಕ ಅವರ ಚಿತ್ತ ಸಂಪೂರ್ಣ ಸಿನಿಮಾದತ್ತ ಹರಿಯಿತು.

ಎಂಜಿಯರಿಂಗ್‌ ಮುಗಿಸಿ ಒಂದಷ್ಟು ಸಮಯ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ ಅರ್ಜುನ್‌, ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಿನಿಮಾಕ್ಕೆ ಕಾಲಿಡಲು ಮುಂದಾದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ‘ತಿಥಿ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ದುಡಿದು ಅನುಭವ ಗಟ್ಟಿಮಾಡಿಕೊಂಡರು. ಆದರೆ ಸಂಪೂರ್ಣವಾಗಿ ಸಿನಿಮಾದಲ್ಲಿಯೇ ತೊಡಗಿಕೊಳ್ಳುವುದು ಮನೆಯವರಲ್ಲಿ ಇಷ್ಟವಿರಲಿಲ್ಲ. ಹೀಗಾಗಿ ಮತ್ತೆ ಓದು ಮುಂದುವರಿಸಲು ಎಂ.ಟೆಕ್‌ಗೆ ಸೇರಿಕೊಂಡರು. ಕಾಲೇಜಿಗೆ ಹೋಗುವ ಜತೆಯಲ್ಲಿಯೇ ಚಿತ್ರೀಕರಣವನ್ನೂ ನಡೆಸಿದರು. ಈಗ ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿವೆ. ಅಕ್ಟೋಬರ್‌ನಲ್ಲಿ ತೆರೆಗೆ ತರುವ ಯೋಚನೆ ಚಿತ್ರತಂಡದ್ದು.

ಪಯಣದ ಕಥನ
ರಾಕ್‌ ಕ್ಲೈಂಬರ್‌ ಸಚಿನ್‌ ಹಾಗೂ ಅರ್ಜುನ್ ಸಂಬಂಧಿಗಳು. ಚಿಕ್ಕಂದಿನಿಂದಲೂ ಅವರೊಟ್ಟಿಗೆ ಸುತ್ತಾಡುತ್ತಿದ್ದರಿಂದ ಪ್ರವಾಸ, ಸಾಹಸದ ಆಸಕ್ತಿ ಸಹಜವಾಗಿಯೇ ಮೂಡಿತ್ತು. ಅದು ಈ ಚಿತ್ರಕ್ಕೆ ಪ್ರೇರಣೆ ನೀಡಿತು. ಅಂದಹಾಗೆ, ಸಚಿನ್‌ ‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್‌ಗೆ ಡ್ಯೂಪ್‌ ಆಗಿಯೂ ಕೆಲಸ ಮಾಡಿದ್ದವರು.

ಇಲ್ಲಿ ನಾಯಕನಿಗೆ ಸುಮ್ಮನೆ ಸುತ್ತಾಡುವ ಆಸೆ. ಆತನ ಪಯಣಕ್ಕೆ ಗುರಿಗಳಿಲ್ಲ. ನಿರ್ದಿಷ್ಟ ಸ್ಥಳಕ್ಕೆ ಹೋಗಬೇಕೆಂಬ ಉದ್ದೇಶವಿಲ್ಲ. ಆತನ ಪಯಣಕ್ಕೆ ಸಂಗಾತಿಯಾಗಿ ಬಾಲ್ಯದಿಂದಲೂ ಗೆಳೆಯನಂತಿರುವ ಸೈಕಲ್‌ ಇದೆ. ‘ಲೈಫ್‌ 360’ ಶೀರ್ಷಿಕೆ ಹಲವು ಅರ್ಥಗಳನ್ನು ನೀಡಬಲ್ಲದು ಎನ್ನುತ್ತಾರೆ ಅರ್ಜುನ್‌. ಅದನ್ನೊಂದು ವೃತ್ತದಂತೆ ಭಾವಿಸಬಹುದು. ಅದರ ಬಿಂದುಗಳು ಒಂದಕ್ಕೊಂದು ಸಂಧಿಸಲೇಬೇಕು. ಹಾಗೆಯೇ ಗುಂಡಗಿರುವ ಭೂಮಿಯಲ್ಲಿ ತಿರುಗುವ ಕಾಲಚಕ್ರದೊಂದಿಗೆ ಸಾಗುವ ನಾವು ಹಿಂದೆಂದೋ ಕಳೆದುಕೊಂಡವರನ್ನು ಮತ್ತೆಂದೋ ಸಂಧಿಸುತ್ತೇವೆ.

ಕಳೆದುಕೊಂಡಾಗ ದುಃಖಿಸಬಾರದು ಎಂಬುದನ್ನು ಸಿನಿಮಾ ಹೇಳುತ್ತದೆ. ಯಾವುದೇ ಕೆಲಸವಾದರೂ 360 ಡಿಗ್ರಿ ಪ್ರಕ್ರಿಯೆ. ನಮ್ಮ ಬದುಕಿನಲ್ಲಿ ನಡೆಯುವ ಪ್ರತಿ ಘಟನೆಗೂ 360 ಡಿಗ್ರಿ ಆಯಾಮವಿದೆ. ಅದು ಒಂದು ಹಂತಕ್ಕೆ ತಲುಪಿಸ ಬಳಿಕ ಪುನಃ ಶೂನ್ಯದಿಂದ ಪ್ರಾರಂಭಿಸುತ್ತೇವೆ’ ಎನ್ನುತ್ತಾರೆ ಅವರು.  

ನಾಯಕ ಸುತ್ತಾಡುತ್ತಾ ಬದುಕಿನ ಆಳವನ್ನು ತಿಳಿದುಕೊಳ್ಳುತ್ತಾನೆ. ಜೀವನದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದರೆ ಜೀವನ ತನ್ನೊಳಗಿನಿಂದ ತಪ್ಪಿಸಿಕೊಳ್ಳಬಾರದು ಎನ್ನುವುದಷ್ಟೇ ಆತನ ಪಯಣಕ್ಕೆ ಕಾರಣ. ಆ ಪಯಣದಲ್ಲಿ ಆತನಿಗೆ ಖುಷಿ ಇದೆ. ಪ್ರಕೃತಿಯೊಂದಿಗೆ ಕಳೆದುಹೋಗುವ ತವಕವಿದೆ ಎಂದವರು ವಿವರಿಸುತ್ತಾರೆ.

ಇಡೀ ಸಿನಿಮಾ ನಾನ್‌ಲೀನಿಯರ್‌ನಲ್ಲಿ ಸಾಗುತ್ತದೆ. ಪಯಣದ ನಡುವೆ ಎದುರಾಗುವ ಘಟನೆಗಳು, ಸಂಗತಿಗಳು ಆತನನ್ನು ಹಳೆಯ ಅನುಭವಗಳತ್ತ ಕರೆದುಕೊಂಡು ಹೋಗುತ್ತವೆ. ಫ್ಲ್ಯಾಷ್‌ಬ್ಯಾಕ್‌ನಲ್ಲಿ ತನ್ನ ಬದುಕಿನ ಘಟನೆಗಳೊಂದಿಗೆ ಅವುಗಳನ್ನು ಹೋಲಿಕೆ ಮಾಡುತ್ತಾನೆ. ಇಲ್ಲಿ ಆತ ಊರುಗಳನ್ನು ಸುತ್ತಾಡಿದರೂ ಕಥೆಯಲ್ಲಿ ಅದನ್ನು ಯಾವ ಊರು ಎಂದು ಹೇಳುವುದಿಲ್ಲ. ‘ಒಂದು ಊರಲ್ಲಿ ಒಬ್ಬ ರಾಜ ಇದ್ದ’ ಎಂದು ಹೇಳುವ ಕಥೆಯಲ್ಲಿ ಯಾವ ಊರು, ಯಾವ ರಾಜ ಎಂದು ಹೇಳುವುದಿಲ್ಲವಲ್ಲ ಹಾಗೆ. ಕಥೆ ಕೇಳುವವರು ಮನಸಿನಲ್ಲಿಯೇ ಚಿತ್ರಣ ಕಲ್ಪಿಸಿಕೊಳ್ಳುತ್ತಾರೆ.

ನಾಯಕ–ನಿರ್ದೇಶಕ
ನಿರ್ದೇಶನದ ಜತೆ ಅರ್ಜುನ್‌ ಚಿತ್ರದಲ್ಲಿ ನಾಯಕರಾಗಿ ಸಹ ಬಣ್ಣ ಹಚ್ಚಿದ್ದಾರೆ. ಅವರ ಜತೆ ಅನುಷಾ ರಂಗನಾಥ್‌ ಮತ್ತು ಪಾಯಲ್‌ ರಂಗನಾಥ್ ಎಂಬ ಇಬ್ಬರು ನಾಯಕಿಯರಿದ್ದಾರೆ. ಕಥೆ ಇಷ್ಟಪಟ್ಟು ನಟಿಸಿದ ‘ಸಿದ್ಲಿಂಗು’ ಶ್ರೀಧರ್‌ ಮತ್ತು ವೈಜನಾಥ್‌ ಬಿರಾದಾರ್‌ ಅವರ ಸಹಕಾರವನ್ನು ಅರ್ಜುನ್‌ ನೆನೆಸಿಕೊಳ್ಳುತ್ತಾರೆ. ಸರ್ದಾರ್ ಸತ್ಯ, ‘ಸಿಲ್ಲಿಲಲ್ಲಿ’ ಶ್ರೀನಿವಾಸ್‌, ‘ರೋಬೊ’ ರವಿ ಚಿತ್ರತಂಡದಲ್ಲಿದ್ದಾರೆ.

ಕ್ರೌಡ್‌ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣದಲ್ಲಿ ಶೇ 70ರಷ್ಟು ಚಿತ್ರೀಕರಣ ಸಾಧ್ಯವಾಗಿತ್ತು. ಮುಂದೇನು ಮಾಡುವುದು ಎಂದು ಚಿಂತಿಸುತ್ತಿದ್ದಾಗ ಸ್ನೇಹಿತರ ಮೂಲಕ ಪರಿಚಯವಾದರು ಉದ್ಯಮಿ ಎಸ್‌. ರಾಜಶೇಖರ್‌. ಕಥೆ ಮೆಚ್ಚಿಕೊಂಡ ಅವರು, ಕ್ರೌಡ್‌ ಫಂಡಿಂಗ್ ಮೂಲಕ ಈ ಹಿಂದೆ ಹೂಡಿದ್ದ ಹಣವನ್ನೂ ತಾವೇ ಭರಿಸಿ ಇಡೀ ಚಿತ್ರದ ನಿರ್ಮಾಣದ ಹೊಣೆ ವರ್ಗಾಯಿಸಿಕೊಂಡರು. ಹೀಗಾಗಿ ಸಿನಿಮಾ ಇನ್ನಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಅರ್ಜುನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT