ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈರಸ್ ಹಾಸ್ಯದ ವೈರಸ್!

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸದಾ ತನ್ನ ಮಾತುಗಳಿಂದ ಜನರನ್ನು ನಗೆ ಸಾಗರದಲ್ಲಿ ತೇಲಿಸುವ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌, ಹವ್ಯಾಸಿ ನಟ ಸೈರಸ್‌ ಬ್ರೋಚಾ ಪ್ರಸಿದ್ಧ ಹಾಸ್ಯ ನಿರೂಪಕರಲ್ಲಿ ಒಬ್ಬರು. ಆಡುವ ಪ್ರತಿ ಮಾತಿನಲ್ಲೂ ಹಾಸ್ಯ ಬೆರೆಸಿ ಪ್ರೇಕ್ಷಕರಿಗೆ ನಗೆಯೂಟ ಉಣಬಡಿಸುವುದು ಇವರ ವಿಶೇಷ.
ಕಾಮಿಡಿ ಸೆಂಟ್ರಲ್‌ ಇಂಗ್ಲಿಷ್‌ ಚಾನೆಲ್‌ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಎಲ್ಲೆಡೆ ಹಾಸ್ಯವನ್ನು ಪಸರಿಸಲು ‘ಸ್ಪ್ರೆಡ್‌ ದ ಚಿಯರ್‌’  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಗರದ ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿದ್ದ ಸೈರಸ್‌ ಬ್ರೋಚಾ ಅವರು ‘ಮೊಟ್ರೊ’ದೊಂದಿಗೆ ಕಳೆದ ಕೆಲ ಕ್ಷಣಗಳು ಇಲ್ಲಿವೆ....

ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಆಗಿದ್ದು ಹೇಗೆ?
ನಾನು ಎಂದೂ ಹಾಸ್ಯ ಕಲಾವಿದನಾಗಬೇಕು ಎಂದು ಬಯಸಿರಲಿಲ್ಲ ಅಥವಾ ಅದು ನನಗೆ ಇಷ್ಟವೂ ಆಗಿರಲಿಲ್ಲ. ಚಿಕ್ಕಂದಿನಿಂದಲೂ ನನಗೆ ಹಾಸ್ಯಪ್ರಜ್ಞೆ ಇದೆ. ಇದರಿಂದಾಗಿ ಶಾಲೆ ಹಾಗೂ ಕಾಲೇಜು ದಿನಗಳಲ್ಲಿ ತುಂಬಾ ತಮಾಷೆ ಮಾಡಿ ಎಲ್ಲರನ್ನೂ ನಗಿಸುತ್ತಿದ್ದೆ. ಆದರೆ ಅದೇ ನನ್ನ ವೃತ್ತಿಯಾಗುತ್ತದೆ ಎಂದು ತಿಳಿದಿರಲಿಲ್ಲ.

ನಿರೂಪಕನಾಗಿ ಕೆಲಸ ಮಾಡಿದ ಅನುಭವ ಹೇಗಿತ್ತು?
ನಿರೂಪಣೆಯ ಕೆಲಸ ಮಾಡಲು ಟ್ರೈ ಮಾಡಿದೆ. ನನಗೆ ಮ್ಯೂಸಿಕ್‌, ಹಾಲಿವುಡ್‌ ಅಥವಾ ಬಾಲಿವುಡ್‌ನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೂ ಮ್ಯೂಸಿಕ್‌ ಚಾನೆಲ್‌ನಲ್ಲಿ ಕೆಲಸ ಮಾಡಿದೆ. ಆದರೆ ಅದು ಸಾಧ್ಯವಾಗದೇ ಹೋದಾಗ ಅದನ್ನೇ ಹಾಸ್ಯಮಯವಾಗಿ ಮಾಡಲು ಪ್ರಾರಂಭಿಸಿದೆ. ಆಗಷ್ಟೇ ಎಫ್‌ಎಂ ವಾಹಿನಿಗಳು ಪ್ರಾರಂಭವಾಗಿದ್ದು, ನಾನು ರೇಡಿಯೊ ಜಾಕಿಯಾಗಿ ಕೆಲಸಕ್ಕೆ ಸೇರಿದೆ. ಆ ಕೆಲಸಕ್ಕೆ ಆಗ ಅಷ್ಟೊಂದು ಸ್ಪರ್ಧೆ ಇರಲಿಲ್ಲ. ಇದರಿಂದಾಗಿ ಈ ವೃತ್ತಿಯಲ್ಲಿ ಬದುಕುಳಿದೆ.   

ಎಂಟಿವಿ ಬಕ್ರಾ ಕಾರ್ಯಕ್ರಮ ಹುಟ್ಟಿದ್ದು ಹೇಗೆ?
ಎಂಟಿವಿ ಬಕ್ರಾ ಕಾರ್ಯಕ್ರಮ ಹುಟ್ಟಿದ ರೀತಿ ಹೇಳಿದರೆ ಯಾರೂ ನಂಬುವುದಿಲ್ಲ. ಎಂಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ದಿನ ನಟಿ ಮನಿಷಾ ಕೊಯಿರಾಲಾ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದೆವು. ಸಂಜೆ 4 ಗಂಟೆಗೆ ಬರಬೇಕಿದ್ದ ಅವರು 6 ಗಂಟೆಯಾದರೂ ಬರಲೇ ಇಲ್ಲ. ಈ ಮಧ್ಯೆ ಸ್ಟುಡಿಯೋದಲ್ಲಿ ಎಲ್ಲರೂ ಬೇಸರದಿಂದ ಕ್ಯಾಮೆರಾಮನ್‌ಗಳೊಂದಿಗೆ ಹೊರಗಡೆ ಹೋಗಿದ್ದೆವು. ಆಗ ಸುಮ್ಮನೆ ಟೈಮ್‌ಪಾಸ್‌ ಮಾಡಲು ಅಲ್ಲೇ ಹೋಗುತ್ತಿದ್ದ ಟ್ಯಾಕ್ಸಿ ನಿಲ್ಲಿಸಿ, ‘ಟೈಮ್‌ ಎಷ್ಟು’ ಎಂದು ತರಲೇ ಮಾಡುತ್ತಾ ಅದನ್ನು ಕ್ಯಾಮೆರಾದಲ್ಲಿ ರೆಕಾರ್ಡ್‌ ಮಾಡಿದೆವು. ಕಾಲೇಜು ದಿನಗಳಲ್ಲಿ ಟ್ಯಾಕ್ಸಿ ಚಾಲಕರ ವರ್ತನೆಯಿಂದ ಬೇಸತ್ತಿದ್ದ ನಾನು ಹಾಗೂ ನನ್ನ ಸ್ನೇಹಿತರು ಅವರಿಗೆ ಕಾಟ ಕೊಡಲು ಜೋರಾಗಿ ಹೋಗುವ ಟ್ಯಾಕ್ಸಿ ನಿಲ್ಲಿಸಿ, ಅವರನ್ನು ನಾನಾ ರೀತಿಯ ಪ್ರಶ್ನೆ ಕೇಳಿ ಕೆರಳಿಸಿ, ಬೈಗುಳ ತಿನ್ನುತ್ತಿದ್ದೆವು. ಅದನ್ನೇ ಅಂದು ಮಾಡಿ ರೆಕಾರ್ಡ್‌ ಮಾಡಿದೆವು. 

ನಂತರ ಮನಿಷಾ ಅವರ ಸಂದರ್ಶನ ಮಾಡಲಾಯಿತು. ಆದರೆ ಅದನ್ನು ಎಡಿಟ್‌ ಮಾಡುವಾಗ ನಾವು ಚಿತ್ರೀಕರಿಸಿದ್ದ ಟ್ಯಾಕ್ಸಿ ಚಾಲಕರ ವಿಡಿಯೊ ನೋಡಿದ ಎಡಿಟರ್‌, ಎಡಿಟ್‌ ರೂಮಿನಲ್ಲಿ ನಗಲು ಪ್ರಾರಂಭಿಸಿದರು. ಇದನ್ನು ನೋಡಿದ ಕಾರ್ಯಕ್ರಮ ನಿರ್ಮಾಪಕರು ಈ ಪರಿಕಲ್ಪನೆ ವಿಭಿನ್ನವಾಗಿದೆ, ಇದನ್ನೇ ಒಂದು ಕಾರ್ಯಕ್ರಮವನ್ನಾಗಿ ಮಾಡಬಹುದು ಎಂದರು. ಆಗಿನಿಂದ ಬಕ್ರಾ ಕಾರ್ಯಕ್ರಮ ಪ್ರಾರಂಭವಾಯಿತು. ಇದರಿಂದ ನನಗೆ ಒಳ್ಳೆಯ ಹೆಸರೂ ಬಂತು.

ನಿಮ್ಮ ರೋಲ್‌ಮಾಡೆಲ್‌ ಯಾರು?
ರಾಖಿ ಸಾವಂತ್.

ಕಾಮಿಡಿಯನ್‌ ಆಗಿರದಿದ್ದರೆ?
ನಾನು ವಕೀಲನಾಗಿರುತ್ತಿದ್ದೆ. ಮೊದಲು ಒಂದು ವರ್ಷ ಕಾನೂನು ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದೇನೆ. ನನ್ನ ಅಮ್ಮ ಶಿಕ್ಷಕಿ. ಸಂಬಂಧಿಕರಲ್ಲಿ ಸಾಕಷ್ಟು ಮಂದಿ ವಕೀಲರಿದ್ದಾರೆ. ಹೀಗಾಗಿಯೇ ನಾನು ವಕೀಲನಾಗುವ ಉದ್ದೇಶದಿಂದ ಕಾನೂನು ಅಭ್ಯಾಸ ಮಾಡಲು ಕಾಲೇಜಿಗೆ ಹೋದೆ. ಅದರ ಜೊತೆಜೊತೆಗೆ ಹವ್ಯಾಸವಾಗಿದ್ದ ನಟನೆಯನ್ನು ಮುಂದುವರೆಸಿದ್ದೆ. ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನನಗೆ ತುಂಬಾ ತಡವಾಗಿ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತು. ಆಗೊಮ್ಮೆ ಈಗೊಮ್ಮೆ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ.

ಬಾಲಿವುಡ್‌ನಲ್ಲಿ ಅವಕಾಶಗಳಿಗೆ ಕೊರತೆ ಇದೆಯೇ?
ಬಾಲಿವುಡ್‌ನಲ್ಲಿ ಅವಕಾಶಗಳಿಗೆ ಏನೂ ಕೊರತೆ ಇಲ್ಲ. ಆದರೆ ನೆಟ್‌ವರ್ಕಿಂಗ್‌ ಹಾಗೂ ಪರಿಚಯ ಇಲ್ಲದೇ ಹೋದರೆ ಅವಕಾಶ ಸಿಗುವುದೇ ಇಲ್ಲ. ಬಾಲಿವುಡ್‌ನಲ್ಲಿ ಕೆಲವೇ ಕೆಲವು ಕುಟುಂಬಗಳು ರಾಜ್ಯಭಾರ ಮಾಡುತ್ತಿವೆ. ಅದೊಂದು ಮಾಫಿಯಾ ಇದ್ದಂತೆ. ನನಗೆ ಬಾಲಿವುಡ್‌ನಲ್ಲಿ ಅವಕಾಶಗಳು ಸಿಗದ ಕಾರಣ ಜೀವನ ನಡೆಸಲು ಕಾಮಿಡಿ ಷೋಗಳನ್ನು ಮಾಡುತ್ತಿದ್ದೇನೆ.  

ಮುಂದಿನ ಪಯಣ ಯಾವುದು?
ಸದ್ಯಕ್ಕೆ ಅರ್ಜುನ್‌ ರಾಮ್‌ಪಾಲ್‌ ಹಾಗೂ ರಣಬೀರ್‌ ಕಪೂರ್‌ ಅಭಿನಯಿಸುತ್ತಿರುವ ‘ರಾಯ್‌’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಅದರಲ್ಲಿ ಎರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದೇನೆ. ಇತ್ತೀಚೆಗೆ ತೆರೆಕಂಡ ‘ಶೌಕೀನ್ಸ್‌’ನಲ್ಲೂ ಅಭಿನಯಿಸಿದ್ದೇನೆ. ಆದರೆ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ.

ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದೆ. ಆಗ ರಸ್ತೆಗಳೆಲ್ಲಾ ಹಾಳಾಗಿದ್ದವು. ಇದರಿಂದ ಪ್ರಯಾಣಕ್ಕೆ ತುಂಬಾ ತೊಂದರೆಯಾಗಿತ್ತು. ಆದರೆ ಈ ಬಾರಿ ಬೆಂಗಳೂರಿಗೆ ಬಂದಾಗ ಎಲ್ಲವೂ ಚೆನ್ನಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಮುಂಬೈಗೆ ಭೇಟಿ ನೀಡಿ, ಅಲ್ಲಿನ ಜನಪ್ರತಿನಿಧಿಗಳಿಗೆ ಸ್ವಲ್ಪ ಬುದ್ಧಿ ಹೇಳಿದರೆ ಅಲ್ಲಿನ ರಸ್ತೆಗಳಿಗೂ ಒಳ್ಳೆಯ ಕಾಲ ಬರಬಹುದು.
 
ರಾಜಕೀಯ ಪ್ರವೇಶಕ್ಕೆ ತಯಾರಿ ನಡೆಯುತ್ತಿದೆಯೇ?
ಬರವಣಿಗೆಯಲ್ಲಿ ಹಾಸ್ಯ ಬೆರೆಸುವ ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಪುಸ್ತಕವನ್ನೂ ಬರೆಯುತ್ತಿದ್ದೇನೆ. ಆದರೆ ರಾಜಕೀಯಕ್ಕೆ ಬರುವ ಅಲೋಚನೆ ಇಲ್ಲ. ‘ನೇತಾಗಿರಿ’ ಪುಸ್ತಕ ರಾಜಕೀಯಕ್ಕೆ ಸಂಬಂಧಿಸಿದ್ದು, ಅದರಲ್ಲಿ ಇರುವ ವಿಷಯಗಳೆಲ್ಲಾ ಕೇವಲ ಕಾಲ್ಪನಿಕ. ರಾಜಕೀಯಕ್ಕೆ ಸಂಬಂಧಿಸಿದ ಪುಸ್ತಕ ಬರೆದ ಕೂಡಲೇ ರಾಜಕಾರಣಿಯಾಗುವ ಆಲೋಚನೆ ಇದೆ ಎಂದಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT