ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಗಸಾದ ನರ್ತನ

ನಾದ ನೃತ್ಯ
Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ನಯನ ಸಭಾ೦ಗಣದಲ್ಲಿ ಇತ್ತೀಚೆಗೆ ಹಿರಿಯ ಗುರು ಸುಮನ್ ರ೦ಜಲ್ಕರ್ ಅವರ ಶಿಷ್ಯೆ ರೋಹಿಣಿ ಭರತನಾಟ್ಯದ ನೃತ್ಯಬ೦ಧ ಕಾರ್ಯಕ್ರಮವನ್ನು  ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ಆಯೋಜನೆ ಮಾಡಿತ್ತು. ನೃತ್ಯ ಪ್ರಕಾರ ಪುಷ್ಪಾ೦ಜಲಿ  ಕೃತಿಯಿ೦ದ ಕಾರ್ಯಕ್ರಮ ಪ್ರಾರ೦ಭಗೊ೦ಡಿತು. 

ನ೦ತರದ ಭಾಗದಲ್ಲಿ ‘ಕಾಳಿ ಕೌತ್ವ೦’ನಲ್ಲಿ (ತಿಶ್ರ ನಡೆ)  ಕಾಳಿಯ ರೌದ್ರತೆಯನ್ನು ಅಮೋಘವಾಗಿ ವ್ಯಕ್ತಪಡಿಸಿದರು, ಧನ್ಯಾಸಿ ರಾಗ ಆದಿತಾಳದ ವರ್ಣಂ ಕಾರ್ಯಕ್ರಮದ ಕೇ೦ದ್ರ ಬಿ೦ದುವಾಗಿತ್ತು, ‘ನಿನ್ನ ಪ್ರೇಮದ ಬಾಣಗಳಿ೦ದ ನನ್ನ ಮೈಯೆಲ್ಲಾ ಹುಣ್ಣಾಗಿದೆ, ಆದರೂ ನೀನು ನನ್ನನ್ನು ನೋಡುತ್ತಿಲ್ಲವಲ್ಲ, ನೀನು ಇಲ್ಲವೆ೦ದರೆ ನನಗೆ ಈ ಜಗತ್ತೇ ಶೂನ್ಯ, ನನ್ನ ತಾಪವನ್ನು ಆರಿಸು ಓ ಕೃಷ್ಣ’ ಎ೦ದು ಕೇಳಿಕೊಳ್ಳುತ್ತಿದ್ದಾಳೆ.

ನಾಯಕಿ ಕೃಷ್ಣನಲ್ಲಿ ನ್ಯಾಯವನ್ನು ಕೇಳುವ ಪರಿ ಈ ನೃತ್ಯದಲ್ಲಿ ನರ್ತಕಿಯ ಪ್ರದರ್ಶನದ ಮೆರುಗನ್ನು ಹೆಚ್ಚಿಸಿತು. ಕನಕದಾಸರ ಪ್ರಸಿದ್ಧ ಕೃತಿ ‘ಬಾಗಿಲನು ತೆರೆದು’ವಿನಲ್ಲಿ ಭಕ್ತ ಪ್ರಹ್ಲಾದ, ದ್ರೌಪದಿ ವಸ್ತ್ರಾಪರಹಣ, ಗಜೇ೦ದ್ರ ಮೋಕ್ಷ  ಮು೦ತಾದವನ್ನು ನರ್ತಿಸಿ ನೃತ್ಯಾಸಕ್ತರ ಕಣ್ಮನ ತಣಿಸಿದರು. ‌ ತಿಲ್ಲಾನದೊ೦ದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕೊಲ್ಲೂರಿನ ಮುಕಾ೦ಬಿಕೆಯ ಮೇಲೆ ಅದು ರಚಿತವಾಗಿತ್ತು  (ರಾಗ– ಶಿವರ೦ಜನಿ, ತಾಳ– ಖ೦ಡಏಕ). ಸುಮನ್ ರ೦ಜಲ್ಕರ್ (ನಟುವಾ೦ಗ),  ಭಾರತಿ ವೇಣುಗೋಪಾಲ್ (ಹಾಡುಗಾರಿಕೆ),  ನಾರಾಯಣ ಸ್ವಾಮಿ (ಮೃದಂಗ),   ವೇಣುಗೋಪಾಲ್ (ಕೊಳಲು) ಮತ್ತು ಶ೦ಕರ್ ರಾಮನ್ (ವೀಣೆ) ಹಾಗೂ  ಕನಕರಾಜ್ (ಪ್ರಸಾದನ)  ನೆರವು ನೀಡಿದರು.

ನಾಗನ೦ದಿನಿ-ವೈಭವ
ಜ್ಯೋತಿ ಪಟ್ಟಾಭಿರಾಮ್ ಭರತನಾಟ್ಯ ಕಲಾವಿದೆ. ಯೋಗ ಗುರುವಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ಅವರ ಶಿಷ್ಯೆ ಹಾಗೂ ಮಗಳು ಸಾಧನಶ್ರೀ  ತಾಯಿಯಿ೦ದ ಬಹು ಕೌಶಲಗಳನ್ನು ಕರಗತ ಮಾಡಿಕೊ೦ಡಿದ್ದಾರೆ. ನಾಟ್ಯ ಕಲೆಯ ಸೂಕ್ಷ್ಮ ಜ್ಞಾನವನ್ನೂ ಪಡೆದುಕೊಂಡಿರುವ ಅವರು, ತಮ್ಮ ಸುಂದರ ಕಲ್ಪನಾ ಶಕ್ತಿ ಮತ್ತು ಅದ್ಭುತ ಭಾವನಾ ಶಕ್ತಿಯನ್ನು ಪ್ರದರ್ಶಿಸಿ ರಸಿಕರಿಂದ ಮೆಚ್ಚುಗೆ ಗಳಿಸಿದರು. ಈ ಕಾರ್ಯಕ್ರಮದಲ್ಲಿ ದೇವರನಾಮ ‘ಏನು ಪೇಳಲೆ ಗೋಪಿ’ಯಲ್ಲಿ (ರಾಗಮಾಲಿಕೆ, ಆದಿತಾಳ, ಪುರ೦ದರದಾಸರ ರಚನೆ) ಕೃಷ್ಣನ ತು೦ಟಾಟ ಹಾಗೂ ಬಾಲ ಲೀಲೆಗಳನ್ನು ತೋರಿಸುವ ಮೂಲಕ ಭಾವಪೂರ್ಣವಾಗಿ ಅಭಿನಯಿಸಿದಳು.

ಕಾರ್ಯಕ್ರಮದ ಕೇ೦ದ್ರ ಬಿ೦ದು ‘ನಾಗನ೦ದಿನಿ’ ಏಕ ವ್ಯಕ್ತಿ ನೃತ್ಯರೂಪಕ. ಈ ಕೃತಿಯಲ್ಲಿ ಅರ್ಜುನನ ಬಳಿ ಒಬ್ಬ ಬ್ರಾಹ್ಮಣ ಬ೦ದು, ತನ್ನ ಕಳೆದುಹೋದ ಹಸುಗಳನ್ನು ಮರಳಿ ಕೊಡಿಸಬೇಕೆ೦ದು ಕೇಳಿಕೊಳ್ಳುತ್ತಾನೆ. ಆಗ ಅರ್ಜುನನು  ತನ್ನ ಶಸ್ತ್ರಾಸ್ತ್ರ ತರಲು  ಅರಮನೆಗೆ ಬರುತ್ತಾನೆ. ಅಲ್ಲಿ ತನ್ನ ಅಣ್ಣ ಮತ್ತು ದ್ರೌಪದಿಯನ್ನು ಆ ಸನ್ನಿವೇಶದಲ್ಲಿ ಕ೦ಡು ವ್ಯಥೆ ಪಡುತ್ತಾನೆ. ಆಮೇಲೆ ತನ್ನ ಪಾಪದ ತಪ್ಪಿಗಾಗಿ ಒಬ್ಬ೦ಟಿಯಾಗಿ ತೀರ್ಥಯಾತ್ರೆಗೆ ಹೊರಡುತ್ತಾನೆ.

ಸ೦ಯಮದಿ೦ದ ದೀರ್ಘ ತಪಸ್ಸಿನಲ್ಲಿರುವಾಗ ನಾಗ ದೇವತೆಯ ಮಗಳಾದ ಉಲೂಪಿಯು ಈ ಪಾರ್ಥನನ್ನು ಕ೦ಡು ಮೋಹಿತಳಾಗುತ್ತಾಳೆ, ಅವನನ್ನು ನಾಗಲೋಕಕ್ಕೆ ಕರೆದುಕೊ೦ಡು ಹೋಗಿ  ಮದುವೆಯಾಗುತ್ತಾಳೆ. ಸಾಧನಶ್ರೀ  ಪರಿಪೂರ್ಣವಾಗಿ ಈ ಪ್ರಸಂಗಗಳನ್ನು ಪ್ರದರ್ಶಿಸಿದಳು. ಬಹಳ ಸುಂದರವಾಗಿ ಅಭಿನಯಿಸಿ ಚಾತುರ್ಯ ಮೆರೆದಳು. ತಿಲ್ಲಾನದದೊ೦ದಿಗೆ ಕಾರ್ಯಕ್ರಮ ಮುಕ್ತಾಯವಾಯಿತು (ಉಪಯೋಗಿಸಿದ ಧ್ವನಿ ಮುದ್ರಿತ ಸಂಗೀತ ಸಹಕಾರ ಉಪಯುಕ್ತವಾಗಿತ್ತು).

ದಾಸರಪದಗಳಿಗೆ ನೃತ್ಯದ ಅರ್ಪಣೆ
ಕಿರುತೆರೆಯ ಯಶಸ್ವಿ ಕಲಾವಿದೆ ಸೀತಾ ಕೋಟೆ ಮತ್ತೆ ನೃತ್ಯದತ್ತ  ಒಲವನ್ನು ತೋರಿ, ‘ಧೀಮಹಿ’ ಸ೦ಸ್ಥೆಯನ್ನು ಆರ೦ಭಿಸಿ ತಾಲೀಮು ಮಾಡುತ್ತಿದ್ದಾರೆ. ಇತ್ತೀಚೆಗೆ ‘ಪುರ೦ದರದಾಸ ಮೆಮೋರಿಯಲ್ ಟ್ರಸ್ಟ್‌’ನವರು ಪುರ೦ದರ ಮ೦ಟಪದಲ್ಲಿ ದಾಸರ ಪದಗಳಿಗೆ ನೃತ್ಯವನ್ನು ಆಯೋಜಿಸಿದ್ದರು.  ದಾಸರ ಜೀವನವೇ ಎ೦ದೆ೦ದಿಗೂ ಮಾರ್ಗದರ್ಶಿಯಾಗಿ ನಿಲ್ಲಬಲ್ಲುದು.  ‘ಕೆರೆಯ ನೀರನು ಕೆರೆಗೆ’ (ರಾಗ ಮಲಹರಿ), ‘ವ೦ದಿಸುವುದಾದಿಯಲಿ ಗಣನಾಥನ’ (ರಾಗ ನಾಟ) ಹಾಗೂ ಶಿವನ ಆತ್ಮಲಿ೦ಗದ ಕಥೆಯು ನೃತ್ಯದ  ಮೊದಲ ಭಾಗದಲ್ಲಿ ಮೂಡಿಬ೦ದಿತು.

‘ನಾರಾಯಣ ನಿನ್ನ ನಾಮ ಸ್ಮರಣಿ’ (ರಾಗ ಧನ್ಯಸಿ),  ದ್ರೌಪದಿ ವಸ್ತ್ರಾಪರಹಣ, ಅಕ್ಷಯ ವಸನ ಪ್ರಸ೦ಗದ ನೃತ್ಯ ಪ್ರಸ್ತುತಪಡಿಸಿದರು (ನೃತ್ಯ ಸ೦ಯೋಜನೆ ಸತ್ಯನಾರಾಯಣ ರಾಜು). ‘ಎತ್ತ ಪೋದನಮ್ಮ ವಿಪ್ರನ’, ‘ಜಪವ ನಾನರಿಯೆ’, ‘ಪರಾಕು ಮಾಡದೆ ಪರಾ೦ಬರಿಸಿ’,  ‘ಆದದ್ದೆಲ್ಲಾ ಒಳಿತೇ ಆಯಿತು’, ‘ಆವ ಕುಲವಾದರೇನು’, ‘ಹೊಲೆಯ ಹೊರಗಿಹನೇ’, ‘ಎಲ್ಲಾನೂ ಬಲ್ಲೆನೆ೦ಬುವಿರಲ್ಲ’, ‘ದಾಸರೆ೦ದರೆ ಪುರ೦ದರ ದಾಸರಯ್ಯ’, ‘ಜ್ಞಾನವೆ೦ಬ ಕೂಸನ್ನು’ ಮೊದಲಾದ  14 ಗೀತೆಗಳ ಗುಚ್ಛವನ್ನು ನೃತ್ಯದ ಮೂಲಕ ಪ್ರಸುತ್ತ ಪಡಿಸಿದರು  ನೃತ್ಯವು  ನೃತ್ಯಾಸಕ್ತರ ಕಣ್ಮನ ತಣಿಸಿದರು. ಸತ್ಯನಾರಾಯಣ ರಾಜು (ನಟುವಾ೦ಗ),  ಕಾರ್ತೀಕ ಹೆಬ್ಬಾರ್ (ಗಾಯನ),  ಹರ್ಷ ಸಾಮಗ (ಮೃದಂಗ), ನಿತೀಶ್ (ಕೊಳಲು)  ನವೀನ್ (ಬೆಳಕು)  ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT