ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತರೆ ಅಪರಾಧಿಗಳಂತೆ ನೋಡುತ್ತಾರೆ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಗುವಾಹಟಿ: ‘ರಾಜ್ಯ ತಂಡ ಸತತ ಎರಡು ರಣಜಿ ಟ್ರೋಫಿ ಗೆದ್ದಿರುವುದು ಮರೆಯಲಾಗದ ಸಂದರ್ಭ. ಸದಾ ಹೀಗೆ ಗೆಲ್ಲುತ್ತಾ ಹೋದಾಗ ಎಲ್ಲವೂ ಸುಂದರವಾಗಿರುತ್ತದೆ. ಆದರೆ ಒಮ್ಮೆ  ಸೋತುಬಿಟ್ಟರೆ ಎಲ್ಲರೂ ನಮ್ಮನ್ನು ಅಪರಾಧಿಗಳಂತೆ ನೋಡಲು ಆರಂಭಿಸುತ್ತಾರೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಲ್ಲವೇ, ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕಲ್ಲವೇ...’

ಹೀಗೆ ಪ್ರಶ್ನಿಸಿದ್ದು ರಾಜ್ಯ ತಂಡದ ಮಾಜಿ ಆಟಗಾರ ಮತ್ತು ಈಗಿನ ಬ್ಯಾಟಿಂಗ್ ಕೋಚ್‌ ಜೆ. ಅರುಣ್‌ ಕುಮಾರ್‌. ಅರುಣ್‌ ಅವರು 2012ರಿಂದ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ. 109 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು ಒಟ್ಟು 7208 ರನ್‌ ಗಳಿಸಿದ್ದಾರೆ.
ಅರುಣ್‌ ಮಾರ್ಗದರ್ಶನದಲ್ಲಿ ರಾಜ್ಯ ತಂಡ ಎರಡು ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ವಿಶೇಷವೆಂದರೆ 2005ರಿಂದ 2007ರ ವರೆಗೆ ಅರುಣ್‌ ಅಸ್ಸಾಂ ತಂಡದಲ್ಲೂ ಆಡಿದ್ದರು.  ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ರಣಜಿ ಟೂರ್ನಿಗೆ ರಾಜ್ಯ ತಂಡ ಹೇಗೆ ಸಜ್ಜಾಗಿದೆ?
ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ತಂಡವನ್ನು ಸಜ್ಜು ಮಾಡಿದ್ದೇವೆ. ಹಿಂದಿನ ಎರಡು ವರ್ಷಗಳಿಂದ ದೇಶಿ ಟೂರ್ನಿಗಳಲ್ಲಿ ನೀಡುತ್ತಿರುವ ಪ್ರದರ್ಶನ ಆಟಗಾರರ ವಿಶ್ವಾಸ ಹೆಚ್ಚಿಸಿದೆ.

* ತಂಡದ ಸಕಾರಾತ್ಮಕ ಅಂಶಗಳೇನು?
ಹೊಸ ಆಟಗಾರರು ಬಂದಿದ್ದಾರೆ. ಪ್ರಸಿದ್ಧ ಕೃಷ್ಣ, ಸುಚಿತ್‌ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಉತ್ತಮ ಆಟವಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ತಂಡದ ಬೆಂಚ್‌ಸ್ಟ್ರಂಥ್ ಚೆನ್ನಾಗಿರುವುದು ಪ್ರಮುಖ ಅಂಶ.

* ಈ ಬಾರಿಯೂ ಟ್ರೋಫಿ ಉಳಿಸಿಕೊಳ್ಳುವ ಒತ್ತಡವಿದೆಯೇ?
ಅದು ಸಹಜ. ಇದ್ದೇ ಇರುತ್ತದೆ. ಆದರೆ ಆಟಗಾರರ ಮೇಲೆ ಒತ್ತಡ ಹೇರಲು ಆಗುವುದಿಲ್ಲವಲ್ಲ. ಸೋಲು ಗೆಲುವು ಅದು ಬೇರೆ ಮಾತು. ಗುಣಮಟ್ಟದ ಆಟವಾಡಬೇಕೆನ್ನುವುದಷ್ಟೇ ನನ್ನ ಆಸೆ.

* ಅಸ್ಸಾಂ ತಂಡ ಈಗ ಹೇಗಿದೆ?
ಸಾಕಷ್ಟು ಸುಧಾರಣೆಯಾಗಿದೆ. ಆದರೆ ಇನ್ನೂ ಬಹಳ ವೇಗವಾಗಿ ಬೆಳೆಯಬೇಕಿದೆ. ಅಸ್ಸಾಂ ಪೂರ್ತಿ ಹುಡುಕಿದರು 25ರಿಂದ 30 ವೃತ್ತಿಪರ ಆಟಗಾರರು ಸಿಗುವುದಿಲ್ಲ. ನಮ್ಮಲ್ಲಿ ಈ ರೀತಿಯ ಪರಿಸ್ಥಿತಿಯಿಲ್ಲ. ಬೆಂಗಳೂರಿನಲ್ಲಿಯೇ 500ಕ್ಕಿಂತಲೂ ಹೆಚ್ಚು ಆಟಗಾರರು ಸಿಗುತ್ತಾರೆ.

* ಆಗಿನ ಅಸ್ಸಾಂ ತಂಡಕ್ಕೂ ಈಗಿನ ತಂಡಕ್ಕೂ ಏನು ವ್ಯತ್ಯಾಸವೆನಿಸುತ್ತದೆ?
ಈಗ ತಂಡ ಚೆನ್ನಾಗಿದೆ. ಬೇರೆ ರಾಜ್ಯಗಳ ಆಟಗಾರರು ಅಸ್ಸಾಂಗೆ ಬಂದು ಆಡುತ್ತಿದ್ದಾರೆ. ನಾಲ್ಕೈದು ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಸ್ಸಾಂ ಕ್ರಿಕೆಟ್‌ ಸಂಸ್ಥೆ ಮೊದಲು ಹೆಚ್ಚು ಪಂದ್ಯಗಳನ್ನು ಆಯೋಜಿಸುವತ್ತ ಗಮನ ಹರಿಸಬೇಕು.

* ಅಸ್ಸಾಂ ಪರ ಆಡುವಾಗ ಆಗಿನ ದಿನಗಳ ಬಗ್ಗೆ ಹೇಳಿ?
ಇಲ್ಲಿ ಸಾಕಷ್ಟು ಮಧುರ ನೆನಪುಗಳಿವೆ. 2006ರಲ್ಲಿ ರೈಲ್ವೇಸ್‌ ಎದುರಿನ ಪಂದ್ಯವನ್ನು ಎಂದಿಗೂ ಮರೆಯಲಾರೆ. ಆ ಪಂದ್ಯದಲ್ಲಿ 138 ರನ್‌ ಗಳಿಸಿದ್ದೆ.  ಆಗ ನಾನೇ ನಾಯಕನಾಗಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿದ್ದಷ್ಟು ದಿನ ಸುಂದರ ಪರಿಸರ, ಗುವಾಹಟಿಯ ಸುತ್ತಲು ಇದ್ದ ಸ್ಥಳಗಳನ್ನು ನೋಡಿ ಆನಂದಿಸಿದ್ದೇನೆ.

* ಭಾರತ ಮತ್ತು ಭಾರತ ‘ಎ’ ತಂಡದಲ್ಲಿ ರಾಜ್ಯದ ಆಟಗಾರರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗುತ್ತಿದೆ. ಏನಿದರ ಗುಟ್ಟು?
ರಾಜ್ಯ ತಂಡದಲ್ಲಿ ಪ್ರತಿಯೊಬ್ಬ ಆಟಗಾರನಿಗೂ ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವ ಛಲವಿದೆ. ಅದಕ್ಕೆ ಬೇಕಾದ ಸಾಮರ್ಥ್ಯವೂ ಅವರಲ್ಲಿದೆ. ಈ ರೀತಿಯ ಆರೋಗ್ಯಕರ ಪೈಪೋಟಿ ಮತ್ತು ಆಟಗಾರರಲ್ಲಿನ ವಿಶ್ವಾಸ ಅವರನ್ನು ಎತ್ತರಕ್ಕೆ ಕೊಂಡೊಯ್ಯತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT