ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ, ರಾಹುಲ್‌ಗೆ ‘ಸುಪ್ರೀಂ’ನಲ್ಲಿ ಹಿನ್ನಡೆ

ಕ್ರಿಮಿನಲ್ ಪ್ರಕರಣ ಕೈಬಿಡಲು ನಕಾರ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ  ದೆಹಲಿ  ಹೈಕೋರ್ಟ್‌ನಲ್ಲಿ ನಡೆಯುತ್ತಿರುವ  ಕ್ರಿಮಿನಲ್‌ ವಿಚಾರಣೆ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್‌ ಅಧ್ಯಕ್ಷೆ  ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು  ನ್ಯಾಯಾಲಯ ಸ್ಪಷ್ಟಪಡಿಸಿತು. ಆದರೆ, ಇದೇ ವೇಳೆ ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದು ಹಾಜರಾತಿಯಿಂದ ಸೋನಿಯಾ ಹಾಗೂ ರಾಹುಲ್‌ ಅವರಿಗೆ  ವಿನಾಯಿತಿ ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಎಸ್‌. ಖೇಹರ್‌ ಮತ್ತು  ಸಿ.ನಾಗಪ್ಪನ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಖುದ್ದು ಹಾಜರಾತಿಗೆ ವಿನಾಯಿತಿ ನೀಡಲು ಸಮ್ಮತಿಸಿತು. ಅವರು ಎಲ್ಲಿಯೂ ಓಡಿ ಹೋಗುವುದಿಲ್ಲ. ಅಗತ್ಯವೆನಿಸಿದಾಗ ಯಾವುದೇ ಹಂತದಲ್ಲಿ ಖುದ್ದು ಹಾಜರಾಗುವಂತೆ ವಿಚಾರಣಾ ನ್ಯಾಯಾಲಯ ಆದೇಶಿಸಬಹುದು ಎಂದು ಪೀಠ ತಿಳಿಸಿತು.

ಈ ಪ್ರಕರಣದಲ್ಲಿ ಮನವಿದಾರರು ಹೊಂದಿರುವ ಸ್ಥಾನಮಾನಗಳನ್ನು ಪರಿಗಣಿಸಿದಾಗ ವಿಚಾರಣೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಪೀಠ ಅಭಿಪ್ರಾಯಪಟ್ಟಿತು.

ಫೆ.20ರಂದು ವಿಚಾರಣಾ ನ್ಯಾಯಾಲಯಕ್ಕೆ ಸೋನಿಯಾ ಮತ್ತು ರಾಹುಲ್‌  ಹಾಜರಾಗಬೇಕಾಗಿತ್ತು.  ಈ ಮಧ್ಯೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿರುವುದಕ್ಕೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ  ಕೆಲ ವಿಷಯಗಳಲ್ಲಿ ಆರೋಪಿಗಳ ವಿರುದ್ಧ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು   ಒಪ್ಪಲು ಸಾಧ್ಯವಿಲ್ಲ ಎಂದು  ಪೀಠ ತಿಳಿಸಿತು. ವಿಚಾರಣೆ ಪಾರದರ್ಶಕವಾಗಿರ ಬೇಕು. ಸಾಕ್ಷ್ಯಗಳನ್ನು ದಾಖಲಿಸಿದ ನಂತರ ತನ್ನ ಅಭಿಪ್ರಾಯ ದಾಖಲಿಸುವುದನ್ನು ವಿಚಾರಣಾ ನ್ಯಾಯಾಲಯಕ್ಕೆ ಬಿಡಬೇಕಾಗಿತ್ತು. ಹೀಗಾಗಿ ಈ ಬಗ್ಗೆ ಕೈಗೊಂಡಿರುವ ಅಭಿಪ್ರಾಯಗಳನ್ನು ಕೈಬಿಡಬೇಕು ಎಂದು ನಿರ್ದೇಶನ ನೀಡಿತು. ದೋಷಾರೋಪ ಪಟ್ಟಿ ಸಲ್ಲಿಸುವ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಸೋನಿಯಾ ಮತ್ತು ರಾಹುಲ್‌ ಪ್ರಸ್ತಾಪಿಸಿ ಮನವಿ ಸಲ್ಲಿಸಬಹುದು ಎಂದು ಸೂಚಿಸಿತು.

ಸೋನಿಯಾ ಮತ್ತು ರಾಹುಲ್‌ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ತಮಗೆ ವಂಚನೆಯಾಗಿದೆ ಎಂದು ಯಾರಾದರೂ ದೂರು ಸಲ್ಲಿಸಿದ್ದಾರೆಯೇ? ದೂರು ಇಲ್ಲದೆ ಇದ್ದಾಗ ವಂಚನೆ ಅಥವಾ ವಿಶ್ವಾಸಘಾತವಾಗಿದೆ ಎಂಬ ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ ಎಂದು  ಪ್ರಶ್ನಿಸಿದರು. ವಿಚಾರಣಾ ನ್ಯಾಯಾಲಯದಲ್ಲಿ ಈ ಎಲ್ಲ ಅಂಶಗಳನ್ನು ಪ್ರಸ್ತಾಪಿಸುವಂತೆ ಕಪಿಲ್‌ ಸಿಬಲ್‌ ಅವರಿಗೆ ಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT