ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಭಯ: ನಾಯ್ಡು ಬದಲು ನಿರ್ಮಲಾಗೆ ಟಿಕೆಟ್‌

ವಿಧಾನ ಪರಿಷತ್ತಿಗೆ ಸೋಮಣ್ಣ ಬಿಜೆಪಿ ಅಭ್ಯರ್ಥಿ
Last Updated 30 ಮೇ 2016, 0:12 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರನ್ನು ಕಣಕ್ಕಿಳಿಸುವ ತೀರ್ಮಾನದಿಂದ ಹಿಂದೆ ಸರಿದಿರುವ ಬಿಜೆಪಿ, ಅವರ ಬದಲು ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದೆ.

ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಪಕ್ಷಕ್ಕೆ ಕಷ್ಟವಲ್ಲ. ಆದರೆ, ವೆಂಕಯ್ಯ ನಾಯ್ಡು ಅವರಂತಹ ಹಿರಿಯ ನಾಯಕರನ್ನು ಕಣಕ್ಕೆ ಇಳಿಸಿ, ತೀರಾ ಸಣ್ಣ ಅಂತರದಲ್ಲಿ ಸೋಲು ಕಂಡರೆ ಮುಖಭಂಗ ಅನುಭವಿಸಬೇಕಾಗುತ್ತದೆ. ಹೀಗಾಗಿ ನಾಯ್ಡು ಅವರನ್ನು ರಾಜಸ್ತಾನ ವಿಧಾನಸಭೆಯಿಂದ ರಾಜ್ಯಸಭೆಗೆ ಕಳುಹಿಸುವುದು ಉತ್ತಮ, ಕರ್ನಾಟಕಕ್ಕಿಂತ ರಾಜಸ್ತಾನವೇ ಸುರಕ್ಷಿತ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಬಂದಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆಗೆ ಆಯ್ಕೆಯಾಗಲು 45 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳು ಬೇಕು. ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 44. ಕೆಜೆಪಿಯ ಗುರು ಪಾಟೀಲ ಶಿರವಾಳ, ಬಿಎಸ್‌ಆರ್‌ ಕಾಂಗ್ರೆಸ್ಸಿನ ಸುರೇಶ್‌ ಬಾಬು ಮತ್ತು ಎಸ್‌. ತಿಪ್ಪೇಸ್ವಾಮಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಇವರ ಮತಗಳು ಸೇರಿದರೆ, ಬಿಜೆಪಿಗೆ 47 ಮತಗಳು ಸಿಗುತ್ತವೆ. ಅಂದರೆ ಗೆಲುವಿಗೆ ಬೇಕಿರುವುದಕ್ಕಿಂತ ಎರಡು ಹೆಚ್ಚುವರಿ ಮತಗಳು ಮಾತ್ರ ಬಿಜೆಪಿ ಬಳಿ ಇದ್ದವು.

ಆದರೆ, ಶನಿವಾರ ರಾತ್ರಿ ನಡೆದ ಹಠಾತ್ ಬೆಳವಣಿಗೆಯಲ್ಲಿ ಗುರು ಪಾಟೀಲ ಅವರು ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ತೆರಳಿ ಕಾಂಗ್ರೆಸ್ಸಿನ ಮೂರನೆಯ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ. ಪಕ್ಷೇತರರನ್ನೇ ನೆಚ್ಚಿಕೊಂಡು ನಾಯ್ಡು ಅವರಂತಹ ಹಿರಿಯ ನಾಯಕರನ್ನು ಕಣಕ್ಕೆ ಇಳಿಸುವುದು ಉಚಿತವಲ್ಲ ಎಂಬ ಅಭಿಪ್ರಾಯ ಕೂಡ ಪಕ್ಷದ ಹಿರಿಯರಲ್ಲಿ ವ್ಯಕ್ತವಾಯಿತು ಎನ್ನಲಾಗಿದೆ.

ಆಂಧ್ರಪ್ರದೇಶ ಮೂಲದವರಾದ ನಾಯ್ಡು ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಬಾರದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ನಡೆದಿತ್ತು. ಆದರೆ, ನಾಯ್ಡು ಅವರನ್ನು ರಾಜಸ್ತಾನದಿಂದ ಅಭ್ಯರ್ಥಿಯನ್ನಾಗಿಸಲು ತೀರ್ಮಾನಿಸಿರುವುದಕ್ಕೆ ಈ ಅಭಿಯಾನ ಕಾರಣವಲ್ಲ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿರ್ಮಲಾ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ನಿರ್ಮಲಾ ಅವರು ತಮಿಳುನಾಡು ಮೂಲದವರು. ರಾಜ್ಯಸಭೆಯಲ್ಲಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಸೋಮಣ್ಣಗೆ ಟಿಕೆಟ್‌: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ. ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷವು ಇನ್ನೂ ತೀರ್ಮಾನ ಕೈಗೊಂಡಿಲ್ಲ.

ರಾಮಮೂರ್ತಿ ಕಾಂಗ್ರೆಸ್‌ನಿಂದ ನಾಮಪತ್ರ?: ಕೆ.ಸಿ. ರಾಮಮೂರ್ತಿ ಅವರು ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೂರನೆಯ ಅಭ್ಯರ್ಥಿಯಾಗಿ ಸೋಮವಾರ ಅಥವಾ ಮಂಗಳವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ನಂತರ ಕಾಂಗ್ರೆಸ್ ಬಳಿ 33 ಹೆಚ್ಚುವರಿ ಮತಗಳು ಇರಲಿವೆ. ಪಕ್ಷೇತರ ಶಾಸಕರ ಬೆಂಬಲ ತಮಗೆ ಇದೆ, ಗೆಲುವಿಗೆ ಬೇಕಿರುವ ಮತಗಳನ್ನು ಪಡೆಯುವುದು ಕಷ್ಟವಲ್ಲ ಎಂಬ ಲೆಕ್ಕಾಚಾರ ರಾಮಮೂರ್ತಿ ಅವರದು.
*
ತಮಿಳುನಾಡು ಮೂಲ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿ ಕರ್ತವ್ಯ ನಿರ್ವಹಿಸಿದವರು.

ತಮಿಳುನಾಡು ಮೂಲದ ನಿರ್ಮಲಾ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದವರು.

ಟಿ.ವಿ. ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಬಿಜೆಪಿಯನ್ನು ಸೈದ್ಧಾಂತಿಕ­ವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ನಿರ್ಮಲಾ  ಅವರ ಪತಿ ಆಂಧ್ರಪ್ರದೇಶ ಮೂಲದ ಡಾ.ಪಿ. ಪ್ರಭಾಕರ್. ಈ ಇಬ್ಬರೂ ಜೆಎನ್‌ಯುದಲ್ಲಿ ಸಹಪಾಠಿಗಳಾಗಿದ್ದರು. ಪ್ರಭಾಕರ ಅವರು ಪ್ರಸ್ತುತ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಾಧ್ಯಮ ಸಲಹೆಗಾರರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT