ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ಕಲಿಸಿದ ಗೆಲುವಿನ ಪಾಠ...

Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ಅಜಯ್‌ ಜಯರಾಮ್‌ ಇತ್ತೀಚಿನ ವರ್ಷಗಳಲ್ಲಿ ಬ್ಯಾಡ್ಮಿಂಟನ್‌ ರಂಗದಲ್ಲಿ ಭರವಸೆ ಮೂಡಿಸಿದ್ದಾರೆ. 2014ರಲ್ಲಿ  ಡಚ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಅವರು ಹೋದ ವಾರ ಕೊರಿಯಾ ಓಪನ್ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದರು. ಅಜಯ್‌ ಮೂಲತಃ ತಮಿಳುನಾಡಿನವರು. ಈಗ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ಸಾಧನೆಯ ಹಾದಿಯ ಬಗ್ಗೆ  ಅಜಯ್‌ ಜಯರಾಮ್‌ ‘ಆಟ ಅಂಕ’ಕ್ಕೆ ಬರೆದಿದ್ದಾರೆ.

ಹೋದ ವಾರ ಕೊರಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಾಗ ಸಾಕಷ್ಟು ಅಭಿನಂದನೆಗಳು ಹರಿದು ಬಂದವು. ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತವಾದವು. ಈ ಟೂರ್ನಿಯಲ್ಲಿ ಪದಕ ಜಯಿಸಿದ್ದಕ್ಕಿಂತ ಹೆಚ್ಚಾಗಿ ಬಲಿಷ್ಠ ಆಟಗಾರರ ಎದುರು ಗೆಲುವು ಪಡೆದದ್ದು ನನ್ನ ಖುಷಿ ಹೆಚ್ಚಿಸಿದೆ.

ಹಾಗಂದ ಮಾತ್ರಕ್ಕೆ ಹಿಂದೆ ಯಾವತ್ತೂ ಬಲಿಷ್ಠ ಆಟಗಾರನನ್ನು ಮಣಿಸಿಯೇ ಇಲ್ಲ ಎಂದರ್ಥವಲ್ಲ. ಹೋದ ವರ್ಷದ ಡಚ್‌ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ ಎದುರು ಗೆಲುವು ಪಡೆದಿದ್ದೆ. ರಾಜೀವ್‌ ಆ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದರು. ಮೂರನೇ ಶ್ರೇಯಾಂಕ ಹೊಂದಿದ್ದ ಇಂಡೊನೇಷ್ಯಾದ ಹಯೊಮ್‌ ರುಂಬಾಕಾ ಎದುರು ಕ್ವಾರ್ಟರ್‌ ಫೈನಲ್‌ನಲ್ಲಿ ಜಯ ಸಾಧಿಸಿದ್ದೆ. 2015ರ ಕೊರಿಯಾ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನ ಹೊಂದಿರುವ ಚೀನಾ ತೈಪೆಯ ಚಾನ್ ಟಿನ್‌ ಚೇನ್ ಎದುರು ಜಯ ಸಾಧಿಸಿದ್ದೆ.

ಬ್ಯಾಡ್ಮಿಂಟನ್‌ನಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಹೊತ್ತ ನನಗೆ ಬಲಿಷ್ಠ ಆಟಗಾರರ ಎದುರಿನ ಪ್ರತಿ ಗೆಲುವು ಸ್ಫೂರ್ತಿಯಾಗಿವೆ. ಇದಕ್ಕೆ ಸಣ್ಣ ಹಿನ್ನೆಲೆಯೂ ಇದೆ. ಮನೆಯ ಹತ್ತಿರವೇ ಬ್ಯಾಡ್ಮಿಂಟನ್‌ ಅಕಾಡೆಮಿ ಇದ್ದಿದ್ದರಿಂದ ಈ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಂಡೆ. ಪೋಷಕರ ಬೆಂಬಲವೂ ಇತ್ತು. ಆದರೆ, ಭವಿಷ್ಯದಲ್ಲಿ ವೃತ್ತಿಪರ ಆಟಗಾರನಾಗಿ ಬೆಳೆಯಬೇಕು ಎನ್ನುವ ಯಾವ ಯೋಚನೆಯೂ ಆಗ ಇರಲಿಲ್ಲ. ಬ್ಯಾಡ್ಮಿಂಟನ್‌ ಸೇರಿದ ಮೂರ್ನಾಲ್ಕು ವರ್ಷಗಳ ಬಳಿಕ ನನ್ನ ಸಾಮರ್ಥ್ಯ ಹೆಚ್ಚಿಸಲು ಹಿರಿಯ ಆಟಗಾರರ ಜೊತೆ ಪಂದ್ಯಗಳನ್ನು ಆಡಿಸುತ್ತಿದ್ದರು. ಪ್ರತಿ ಪಂದ್ಯದಲ್ಲಿ ಸೋಲುತ್ತಲೇ ಇದ್ದೆ. ಪದೇ ಪದೇ ಸೋಲುತ್ತಿದ್ದರಿಂದ ಹತಾಶೆಗೆ ಒಳಗಾಗುತ್ತಿದ್ದೆ. ಆದ್ದರಿಂದ ಪ್ರಶಸ್ತಿ ಜಯಿಸದಿದ್ದರೂ ಪರವಾಗಿಲ್ಲ. ಬಲಿಷ್ಠ ಆಟಗಾರನ ಎದುರು ಗೆಲ್ಲಲೇಬೇಕು ಎನ್ನುವ ಅದೊಂದು ವಿಚಿತ್ರ ಆಸೆ ನನ್ನಲ್ಲಿದೆ. ಆದ್ದರಿಂದ ಕೊರಿಯಾ ಓಪನ್‌ನಲ್ಲಿ ಜಯಿಸಿದ ಬೆಳ್ಳಿ ಸಂತೋಷವನ್ನು ಇಮ್ಮಡಿಸಿದೆ.

ನಮ್ಮ ಅಕಾಡೆಮಿಯಲ್ಲಿ ಪ್ರಕಾಶ್ ಪಡುಕೋಣೆ, ಸೈಯದ್‌ ಮೋದಿ, ಗೋಪಿಚಂದ್ ಅವರ ಸಾಧನೆಯ ಬಗ್ಗೆ ಹೇಳುತ್ತಿದ್ದರು. ಅವರಂತೆ ನೀವೂ ಆಗಬೇಕೆನ್ನುತ್ತಿದ್ದರು. ನಾನು ಮೊದಲಿನಿಂದಲೂ ಪ್ರಕಾಶ್‌ ಪಡುಕೋಣೆ ಸರ್‌ ಅವರ ಅಪ್ಪಟ ಅಭಿಮಾನಿ. ಅಪ್ರತಿಮ ಸಾಧನೆ ಮಾಡಿರುವ ಅವರು ನನಗೆ ಸ್ಫೂರ್ತಿ. ಅದೃಷ್ಟವೆಂದರೆ ಐದಾರು ವರ್ಷ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅವಕಾಶ ಲಭಿಸಿತು.

ಪ್ರಕಾಶ್ ಸರ್‌ ಅಕಾಡೆಮಿಯಲ್ಲಿ ಹಲವಾರು ಕೌಶಲಗಳನ್ನು ಕಲಿತ ನಂತರ ಟಾಮ್‌ ಜಾನ್‌ ಅಕಾಡೆಮಿಗೆ ಸೇರಿಕೊಂಡೆ. ಇಂಗ್ಲೆಂಡ್ ಬ್ಯಾಡ್ಮಿಂಟನ್ ತಂಡಕ್ಕೆ ಕೋಚ್‌ ಕೂಡ ಆಗಿದ್ದ ಟಾಮ್ ಜಾನ್‌ ಅದೊಂದು ಸಲ ಹೈದರಾಬಾದ್‌ಗೆ ಬಂದಿದ್ದರು. ಬಳಿಕ ಅವರ ಬಳಿ ಒಂದು ವಾರ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಾಗ ಅವರ ತರಬೇತಿಯ ವಿಧಾನ ಆಕರ್ಷಿಸಿತು. ಆದ್ದರಿಂದ ಟಾಮ್‌ ಜಾನ್‌ ಬಳಿ ತರಬೇತಿ ಮುಂದುವರಿಸಿದೆ. ಪೋರ್ಚುಗಲ್‌ ಹಾಗೂ ಫ್ರಾನ್ಸ್‌ನ ಪ್ರಮುಖ ಕ್ಲಬ್‌ಗಳಲ್ಲಿ ತರಬೇತಿ ಪಡೆಯುವಾಗ ಬಲಿಷ್ಠ ಆಟಗಾರರ ಜೊತೆ ಆಡಲು ಅವಕಾಶ ಸಿಗುತ್ತಿತ್ತು. ಆದ್ದರಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕು ಎನ್ನುವ ಆಸೆ ಹೆಚ್ಚಿತು.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆನ್ನುವುದು ಪ್ರತಿ ಕ್ರೀಡಾಪಟುವಿನ ಕನಸು. ನಾನೂ ಇದರಿಂದ ಹೊರತಲ್ಲ. ಆದರೆ, ವಿಶ್ವ ಮಟ್ಟದ ಕ್ರೀಡಾಕೂಟಕ್ಕೆ ತಕ್ಕ ಆಟವನ್ನು ಕಲಿಯಬೇಕಲ್ಲವೇ. ಆದ್ದರಿಂದ ಹೆಚ್ಚು ಪಂದ್ಯಗಳನ್ನು ಆಡಲು ಇಷ್ಟ ಪಡುತ್ತೇನೆ. ತಾಳ್ಮೆಯಿಂದ ಮತ್ತು ಸ್ಥಿರತೆ ಉಳಿಸಿಕೊಂಡು ಆಡಲು ಒತ್ತು ಕೊಡುತ್ತೇನೆ. ಇನ್ನೊಂದು ವಿಷಯವನ್ನು ನಿಮ್ಮೆದುರು ಹಂಚಿಕೊಳ್ಳಬೇಕು.

ಎಲ್ಲಿಯೇ ಟೂರ್ನಿ ಆಡಲು ಹೋಗಲಿ ಅಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಸೈನಾ ನೆಹ್ವಾಲ್‌. ಪಿ.ವಿ. ಸಿಂಧು ವಿಶ್ವ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಮುಟ್ಟಕ್ಕೆ ಬೆಳೆಯಲು ಈಗಿನ ಪುರುಷರ ವಿಭಾಗಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ. ಆದರೆ, ನನಗೆ ಹಾಗೇನು ಅನಿಸುತ್ತಿಲ್ಲ.  ಪರುಪಳ್ಳಿ ಕಶ್ಯಪ್‌ ಹಲವಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ವರೆಗೂ ಹೋಗಿದ್ದರು. ಗುರುಸಾಯಿದತ್‌, ಕೆ. ಶ್ರೀಕಾಂತ್‌, ಎಚ್‌.ಎಸ್. ಪ್ರಣಯ್‌, ಅರವಿಂದ್ ಭಟ್‌ ಹೀಗೆ ಅನೇಕ ಆಟಗಾರರು ಪುರುಷರ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದಾರೆ.

ಪ್ರಕಾಶ್‌ ಪಡುಕೋಣೆ, ಟಾಮ್ ಜಾನ್, ಗೋಪಿಚಂದ್‌ ಅಕಾಡೆಮಿ ಭಾರತದಲ್ಲಿ ಬ್ಯಾಡ್ಮಿಂಟನ್‌ ಬೆಳವಣಿಗೆಗೆ ನೆರವಾಗಿದೆ. ಸಾಕಷ್ಟು ಆಟಗಾರರನ್ನು ರೂಪಿಸಿವೆ. ಅಕಾಡೆಮಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ಭಾರತ ವಿಶ್ವದಲ್ಲಿಯೇ ನಂಬರ್‌ ಒನ್‌ ಆಗುವುದರಲ್ಲಿ ಅನುಮಾನವೇನಿಲ್ಲ.

ಬಲ ಹೆಚ್ಚಿಸಿದ ಐಬಿಎಲ್‌: ಮೂರು ವರ್ಷಗಳ ಹಿಂದೆ ನಡೆದ ಐಬಿಎಲ್‌ ಭಾರತದ ಬ್ಯಾಡ್ಮಿಂಟನ್‌ ರಂಗದಲ್ಲಿ ನವಚೈತನ್ಯ ಮೂಡಿಸಿತು ಎನ್ನುವ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ. ಐಬಿಎಲ್‌ನಲ್ಲಿ ವೈಯಕ್ತಿಕ ಪ್ರದರ್ಶನದ ಜೊತೆಗೆ ತಂಡದ ಗೆಲುವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿತ್ತು. ವಿದೇಶಿ ಆಟಗಾರರ ಜೊತೆ ಆಡಲು ಅವಕಾಶ ಲಭಿಸಿದ್ದರಿಂದ ನಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ಐಬಿಎಲ್‌ ಮತ್ತೆ ಆರಂಭವಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದು ಕೂಡ ಸಂತೋಷದ ಸುದ್ದಿಯೇ.

ಪ್ರತಿ ಕ್ರೀಡಾಪಟುವಿನ ಬದುಕಿನಲ್ಲಿ ಇರುವಂತೆ ನನಗೂ ಗಾಯದ ಸಮಸ್ಯೆ ಪರಿಪರಿಯಾಗಿ ಕಾಡಿತು. ಹೋದ ವರ್ಷ ಡಚ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಮೊದಲು ಭುಜದ ನೋವಿನಿಂದ ಬಳಲಿದ್ದೆ. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದೆ. ಹೀಗಾಗಿ ಏಳು ತಿಂಗಳು ರ‍್ಯಾಕೆಟ್‌ ಕೂಡ ಕೈಯಲ್ಲಿ ಹಿಡಿಯಲಾಗದ ಪರಿಸ್ಥಿತಿ. ಇದೇ ವೇಳೆ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳು ನಡೆದವು. ಈ ಕ್ರೀಡಾ ಕೂಟಗಳಲ್ಲಿ ಆಡಲಾಗದ ಬೇಸರ ಕಾಡಿತು. ಗಾಯದ ಸಮಸ್ಯೆ ಕ್ರೀಡೆಯಲ್ಲಿ ಸಹಜವಲ್ಲವೇ ಎಂದುಕೊಂಡು ಸುಮ್ಮನಾಗುತ್ತೇನೆ. ಈಗ ಎಲ್ಲಾ ನೋವಿನಿಂದ ಚೇತರಿಸಿಕೊಂಡಿದ್ದೇನೆ. ಮತ್ತಷ್ಟು ಪ್ರಶಸ್ತಿಗಳನ್ನು ಜಯಿಸುವ ವಿಶ್ವಾಸ ಗಳಿಸಿಕೊಂಡಿದ್ದೇನೆ. ಬ್ಯಾಡ್ಮಿಂಟನ್‌ ಆಡಲು ಆರಂಭಿಸಿದಾಗಿನಿಂದ ಕಂಡ ಏರಿಳಿತಗಳು ಸಾಧನೆಯ ಹಾದಿಯನ್ನು ತೋರಿಸಿಕೊಟ್ಟಿವೆ. 

ಮೊದಲ ಭಾರತೀಯ
ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ಹೋದ ವರ್ಷ ಗ್ರ್ಯಾಂಡ್‌ ಪ್ರಿಕ್ಸ್‌ ಟೂರ್ನಿಯ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಿತು. 21 ಪಾಯಿಂಟ್ಸ್‌ನ ಮೂರು ಗೇಮ್‌ ಬದಲು, 11 ಪಾಯಿಂಟ್ಸ್‌ನ ಐದು ಗೇಮ್‌ಗಳನ್ನು ಆಡಿಸಿತು. ಈ ಬದಲಾವಣೆ ಡಚ್‌ ಓಪನ್‌ ಟೂರ್ನಿಗೂ ಅನ್ವಯವಾಗಿತ್ತು. ಆ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಮೊದಲ ಭಾರತೀಯ ಎನ್ನುವ ಕೀರ್ತಿ ಅಜಯ್‌ ಹೆಸರಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT