ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯದ ಖನಿ ಅಂತರಗಂಗೆ

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚಿನ್ನದ ನಾಡು ಎನ್ನುವುದರ ಜೊತೆಗೆ ಬರದ ನಾಡು ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿರುವ ಕೋಲಾರ ಪ್ರವಾಸಕ್ಕೆ ಯೋಗ್ಯವಲ್ಲದ ಜಿಲ್ಲೆ ಎನ್ನುವ ಮಾತಿದೆ. ಆದರೆ, ಹಲವು ಅಪವಾದಗಳ ನಡುವೆಯೂ ಪ್ರವಾಸಿಗರನ್ನು ಆಕರ್ಷಿಸುವ ಬೆಟ್ಟ-ಗುಡ್ಡಗಳೊಂದಿಗೆ ಮಲೆನಾಡಿನ ಸೌಂದರ್ಯವನ್ನೇ ಹೋಲುವಂತಹ ತಾಣವೊಂದು ಈ ಜಿಲ್ಲೆಯಲ್ಲಿದೆ. ಅದೇ ಅಂತರಗಂಗೆ. ಅದಕ್ಕೆ ಹೊಂದಿಕೊಂಡಂತೆ ಬೆಟ್ಟ ಒಂದಿದೆ.  ಈ ಬೆಟ್ಟವು ಚಾರಣಿಗರ ತಾಣವೂ ಹೌದು.

ಕೋಲಾರಕ್ಕೆ ಹೊಂದಿಕೊಂಡಂತಿರುವ ಈ ಸ್ಥಳ ಪ್ರವಾಸಿಗರ ಹಾಟ್ ಫೇವರಿಟ್‌. ಜಿಲ್ಲಾ ಕೇಂದ್ರದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಅಂತರಗಂಗೆ ಬೆಟ್ಟವಿದೆ. ವಿಶೇಷವೆಂದರೆ ಈ ಬೆಟ್ಟದಲ್ಲಿ ಏಳು ಹಳ್ಳಿಗಳಿವೆ. ಅಂತರಗಂಗೆ ಬೆಟ್ಟಕ್ಕೆ ತನ್ನದೇ ಇತಿಹಾಸವಿದೆ. ಇಲ್ಲಿ ಭಗೀರಥನು ದೀರ್ಘ ಕಾಲ ತಪಸ್ಸು ಮಾಡಿ ಗಂಗೆಯನ್ನು ಒಲಿಸಿಕೊಂಡು, ಬಳಿಕ ಅದನ್ನು ಶಿವನ ಜಟೆಯ ಮೂಲಕ ಭೂಮಿಗೆ ಇಳಿಸಿಕೊಂಡ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ವಿಜೃಂಭಣೆಯಿಂದ ಇಲ್ಲಿ ಜಾತ್ರೆ ನಡೆಯುತ್ತದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಪ್ರವಾಸಿಗರು ಬರುತ್ತಾರೆ.

ಬೆಟ್ಟದ ಮೇಲೆ ಶಿವನ ದೇವಸ್ಥಾನ, ಅದರ ಪಕ್ಕದಲ್ಲೇ ಕಲ್ಯಾಣಿ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ಗಂಗೆ ಹರಿಯುವುದು ಇಲ್ಲಿನ ವಿಶೇಷ. ಈ ಕಾರಣಕ್ಕೆ ಈ ಪ್ರದೇಶಕ್ಕೆ ಅಂತರಗಂಗೆ ಎಂಬ ಹೆಸರು ಬಂದಿದೆ.
ಬಸವಣ್ಣನ ಬಾಯಿಯಿಂದ ಬರುವ ನೀರಿನ ಒರತೆಯು ಈವರೆಗೆ ಒಮ್ಮೊಯೂ ನಿಂತಿಲ್ಲ. ಈ ಬೆಟ್ಟದ ಸುತ್ತ  ವಾಸಿಸುತ್ತಿರುವ ನಿವಾಸಿಗಳ ಪ್ರಕಾರ, ಅಂತರಗಂಗೆ ವರ್ಷದ ಎಲ್ಲ ದಿನಗಳಲ್ಲಿಯೂ ಒಂದೇ ರೀತಿ ಹರಿಯುತ್ತದೆ.

ಈ ಭಾಗದಲ್ಲಿ ಕೊಳವೆ ಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಕಂಡು ಬರುತ್ತದೆ. ಆದರೆ, ಬಸವಣ್ಣನ ಬಾಯಿಂದ ಬರುವ ನೀರು ಶುದ್ಧ ಹಾಗೂ ಸಿಹಿಯಾಗಿರುತ್ತದೆ. ಸುತ್ತಮುತ್ತಲಿನ ಹಾಗೂ ಬೆಟ್ಟದ ಕೆಳಗಿರುವ ಹಳ್ಳಿಗಳ ಜನರು ಪ್ರತಿನಿತ್ಯ ಬೆಟ್ಟಕ್ಕೆ ಬಂದು ಕ್ಯಾನುಗಳಲ್ಲಿ ನೀರನ್ನು ತುಂಬಿಕೊಂಡು ಹೋಗುತ್ತಾರೆ. ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇರುವ ಅಂತರಗಂಗೆ ಬೆಟ್ಟದಲ್ಲಿ ಕೆಲವು ವನ್ಯಜೀವಿಗಳು ಸಂಚರಿಸುವುದರಿಂದ ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಚಾರಣಕ್ಕೆ ಅವಕಾಶವಿಲ್ಲ.

ಬೆಟ್ಟದ ಬುಡದಿಂದ ಹಲವು ಮೆಟ್ಟಿಲುಗಳನ್ನು ಏರಿ ಸಾಗಿದರೆ ಎಡಭಾಗದಲ್ಲಿ ತಟಸ್ಥವಾದ ಬೃಹದಾಕಾರವಾದ ಬಂಡೆ ಇದ್ದು, ಅಲ್ಲಿಂದ ಸುತ್ತಲಿನ ಬೆಟ್ಟದ ಪ್ರದೇಶ ನೋಡಲು ಹಾಗೂ ಕುಟುಂಬ ಸಮೇತವಾಗಿ ಸ್ವಲ್ಪ ಸಮಯವನ್ನು ಕಳೆಯಲು ಸೂಕ್ತ ಸ್ಥಳವಿದೆ. ಮೆಟ್ಟಿಲುಗಳ ಅರ್ಧ ಭಾಗ ಕ್ರಮಿಸಿದ ನಂತರ ಮಧ್ಯಭಾಗದಲ್ಲಿ ಶಿವನ ದೇವಾಲಯ ಮತ್ತು ನೀರಿನ ಒರತೆ ಸಿಗುತ್ತದೆ. ಅಲ್ಲಿಂದ ಮುಂದೆ ಚಾರಣ ಶುರುವಾಗುತ್ತದೆ. ಅಂತರಗಂಗೆ ಬೆಟ್ಟವು ಕಲ್ಲು ಬಂಡೆಗಳಿಂದ ಕೂಡಿರುವುದರಿಂದ ಜಾಗ್ರತೆಯಿಂದ ಏರಬೇಕು. ಬೆಟ್ಟ ಏರುವುದು ಸ್ವಲ್ಪ ಕಠಿಣವಾದರೂ,  ಏರಿದ ಮೇಲೆ ಸಿಗುವ ಅನುಭವ ಮಾತ್ರ ಬಣ್ಣಿಸಲಾಗದಂಥದು. 

ಕೋಲಾರ ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಅಧಿಕವಿರುವುದರಿಂದ ಹೆಚ್ಚು ಉಷ್ಣಾಂಶ ಇರುತ್ತದೆ. ಆದ್ದರಿಂದ ಚಾರಣಕ್ಕೆ ಹೋಗುವವರು  ಪೂರ್ವ ತಯಾರಿ ಮಾಡಿಕೊಳ್ಳುವುದು ಒಳಿತು. ಈ ಪ್ರದೇಶದಲ್ಲಿ ನೀರಿನ ಮೂಲಗಳು ಕಡಿಮೆ ಇರುವುದರಿಂದ ನೀರನ್ನು ಸಾಧ್ಯವಾದಷ್ಟೂ ದೇವಸ್ಥಾನದ ಬಳಿ ತುಂಬಿಕೊಂಡು ಹೋಗಬೇಕು.  ಅಂತರಗಂಗೆಯು ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು, ಗುಂಪುಗಳಲ್ಲಿ ಪ್ರವಾಸ ಕೈಗೊಳ್ಳುವುದು ಹೆಚ್ಚು ಸುರಕ್ಷಿತ. 

ಬೆಟ್ಟದಲ್ಲಿ ಯಾವುದೇ ರೀತಿಯ ಆಹಾರ ಸೌಲಭ್ಯಗಳು ಇಲ್ಲದೇ ಇರುವ ಕಾರಣ ಜಿಲ್ಲಾಕೇಂದ್ರದಲ್ಲಿ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ. ಬೆಟ್ಟದಿಂದ ಇಳಿದು ಬಂದ ಮೇಲೆ ಅಲ್ಲಿಂದ ತೆರಳುವ ಮುನ್ನಾ ಗಂಗರ ಕಾಲದಲ್ಲಿ ನಿರ್ಮಾಣವಾದ ಕೋಲಾರಮ್ಮ ಹಾಗೂ ಸೋಮೇಶ್ವರ ದೇವಾಲಯಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ.

ಹೋಗುವ ಮಾರ್ಗ
ಬೆಂಗಳೂರಿನಿಂದ ಕೋಲಾರ ಮಾರ್ಗವಾಗಿ ಸುಮಾರು 65 ಕಿ.ಮೀ. ಸಾಗಬೇಕು. ಕೇವಲ ಎರಡೂವೆರೆ ಗಂಟೆಯಲ್ಲಿ ಕೋಲಾರ ತಲುಪಬಹುದು. ಅಲ್ಲಿಂದ ನಾಲ್ಕು ಕಿ.ಮೀ. ಸಾಗಿದರೆ ಅಂತರಗಂಗೆಯ ಬುಡವನ್ನು ತಲುಪಬಹುದು. ಬೆಟ್ಟವನ್ನು ಹತ್ತಿ ಇಳಿಯಲು ಸುಮಾರು 5 ಗಂಟೆ ಅವಧಿ ಬೇಕಾಗುತ್ತದೆ. ನಗರದಿಂದ ಕೋಲಾರಕ್ಕೆ ಸಮರ್ಪಕವಾದ ವಾಹನ ವ್ಯವಸ್ಥೆಯಿದೆ. ಕೋಲಾರದಿಂದ ಅಂತರಗಂಗೆಗೆ ಆಟೊಗಳ ಮೂಲಕವೇ ಸಾಗಬೇಕು.

ಬೈಕ್‌ ಸವಾರರಿಗೆ
ಬೈಕ್‌ನಲ್ಲಿ ಹೋಗುವವರು ನಗರದ ಮೆಜೆಸ್ಟಿಕ್‌ನಿಂದ ಕೋಲಾರವನ್ನು ಸುಮಾರು ಎರಡು ತಾಸಿನಲ್ಲಿ ತಲುಪಬಹುದು ಹಾಗೂ ಕೋಲಾರದಿಂದ ಅಂತರಗಂಗೆಯನ್ನು 15 ನಿಮಿಷದಲ್ಲಿ ತಲುಪಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT