ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ಆಗಲಿ ‘ಜನಶಕ್ತಿ’

Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸೌರಶಕ್ತಿ ಎಂದರೆ ಸೂರ್ಯನ ಬೆಳಕಿ­ನಿಂದ ದೊರೆಯುವ ಶಕ್ತಿ. ನೀರಿ­ನಿಂದ ಉತ್ಪಾದಿಸುವ ಜಲ ವಿದ್ಯುತ್ ಅತ್ಯಂತ ಕಡಿಮೆ ಖರ್ಚಿ­ನಿಂದ ದೊರೆಯುವ ಇಂಧನ.  ಆದರೆ ಗಾಳಿಯಿಂದ ಉತ್ಪಾದಿ­ಸುವ ವಿದ್ಯುತ್ ಮತ್ತು ಸೌರ ವಿದ್ಯುತ್‌ಗೆ ಅಪಾರ ಬಂಡವಾಳ ಬೇಕು. 

ಗಾಳಿ ವಿದ್ಯುತ್‌ಗೆ ಚಕ್ರ ತಿರುಗಲು ಪ್ರಬಲವಾದ ಗಾಳಿಯ ಅಲೆ ಇರ­ಬೇಕು. ಸೌರಶಕ್ತಿಗೆ ಅಪಾರ ಪ್ರಮಾಣದ ಜಾಗ ಬೇಕಲ್ಲದೆ, ಸೂರ್ಯನ ಪ್ರಖರ ಬೆಳಕು ಸಹ ಇರಬೇಕು.  ಮೋಡ ಇದ್ದಾಗ ಹೆಚ್ಚಿನ ವಿದ್ಯುತ್ ಉತ್ಪಾ­ದನೆ ಸಾಧ್ಯವಿಲ್ಲ. ರಾತ್ರಿ ಹೊತ್ತು ಸೌರ  ವಿದ್ಯುತ್ ಉತ್ಪಾದನೆ ಆಗು­ವು­ದಿಲ್ಲ. ಆದರೆ ನೀರಿನ ಕೊರತೆ ಮತ್ತು ಗಾಳಿಯ ಅಭಾವದಿಂದ ಸೌರ ವಿದ್ಯುತ್‌ ಉತ್ಪಾದನೆ ಈಗೀಗ ನಮ್ಮ ಸರ್ಕಾರಗಳ  ಗಮನ ಸೆಳೆಯುತ್ತಿದೆ.  ಈಗಾಗಲೇ ಹಲವಾರು ಮುಂದು­ವರಿದ ರಾಷ್ಟ್ರಗಳು ಆಧುನಿಕ ತಂತ್ರ­ಜ್ಞಾನ­ವನ್ನು ಬಳಸಿ­ಕೊಂಡು ಸೌರಶಕ್ತಿ ಉತ್ಪಾದನೆಗೆ ಹೆಚ್ಚು ಗಮನ ಹರಿಸಿವೆ.

ಸೌರಶಕ್ತಿಯಲ್ಲಿ ಫೋಟೊ ವೋಲ್ಟಾಯಿಕ್ ಮತ್ತು ಥರ್ಮಲ್ ಎಂಬ ಎರಡು ವಿಧಾನಗಳಿವೆ.  ಮೊದಲನೆಯ­ದರಲ್ಲಿ ಸೂರ್ಯನ ಬೆಳಕಿದ್ದಾಗ ಮಾತ್ರ ವಿದ್ಯುತ್‌ ಉತ್ಪಾ­ದನೆ ಸಾಧ್ಯ.  ಥರ್ಮಲ್‌ ವಿಧಾನದಲ್ಲಿ ಬೆಳಗಿನ ಹೊತ್ತು ಸೂರ್ಯನ ಬಿಸಿಲನ್ನು ನೀರು, ಉಪ್ಪು, ಮರಳಿನಲ್ಲಿ ಶೇಖ­ರಿಸಿ ರಾತ್ರಿಯೂ ವಿದ್ಯುತ್ ಉತ್ಪಾದನೆ  ಮಾಡಬಹುದು. ಆದರೆ ಮತ್ತೆ ಈ ವಿಧಾನ ಹೆಚ್ಚು ತುಟ್ಟಿಯಾಗುತ್ತದೆ.

ಕಳೆದ 2-–-3 ದಶಕಗಳಲ್ಲಿ ಬಿಸಿ ನೀರಿಗಾಗಿ ಸೋಲಾರ್ ವಾಟರ್ ಹೀಟರ್ ಬಳಸುವುದನ್ನು ಕಲಿತು­ಕೊಂಡಿ­­ದ್ದೇವೆ. ಸರ್ಕಾರ ಇದಕ್ಕೆ ಮೊದಲಿ­ನಿಂದಲೂ ಸಬ್ಸಿಡಿ, ವಿದ್ಯುತ್‌ ಶುಲ್ಕದಲ್ಲಿ ರಿಯಾಯಿತಿ ಕೊಡುತ್ತಾ ಬಂದಿದೆ. ಹಾಗಿದ್ದರೂ ಇನ್ನೂ ಸಂಪೂರ್ಣವಾಗಿ ಎಲ್ಲ ಮನೆಗಳಲ್ಲೂ ಇವು ಬಳಕೆಗೆ ಬಂದಿಲ್ಲ.  ಏಕೆಂದರೆ ಇವನ್ನು ಅಳವಡಿಸಿಕೊಳ್ಳುವಾಗ ಹೆಚ್ಚಿನ ಬಂಡ­­ವಾಳ ಹೂಡ­ಬೇಕಾಗುತ್ತದೆ. 

ಆದ್ದರಿಂದ ಬಹು­­ತೇ­ಕರು ಎಂದಿನಂತೆ ವಿದ್ಯುತ್ ಗೀಸರ್‌ಗಳನ್ನೇ ಬಳಸು­ತ್ತಿ­ದ್ದಾರೆ. ಹೊಸ ಮನೆ­ಗಳನ್ನು ಕಟ್ಟುವಾಗ ಇವುಗಳ ಅಳ­ವಡಿಕೆ ಕಡ್ಡಾಯ­ಗೊಳಿಸಬೇಕು. ಅದರಿಂದ ಬೆಳಗಿನ ಹೊತ್ತಿ­ನಲ್ಲಾ­ಗುವ ಲೋ ವೋಲ್ಟೇಜ್ ಕೊರತೆ ತಪ್ಪಿಸಬಹು­ದಲ್ಲದೆ ಭಾರಿ ಪ್ರಮಾಣದ ವಿದ್ಯುತ್ ಉಳಿಸಬಹುದು. ಕೆಲ­ವೆಡೆ ಸಂಚಾರ ದೀಪ,  ಬೀದಿ ದೀಪ­ಗಳಿಗೆ ಸೋಲಾರ್ ಬಳಸ­ಲಾಗುತ್ತಿದೆ. ಅದೇನೂ ಹೇಳಿ­ಕೊಳ್ಳು­­ವಂತ ಯಶಸ್ಸು ಪಡೆ­ದಿಲ್ಲ. ಹಳ್ಳಿಗಳು ಹಾಗೂ ನಗರಗಳಲ್ಲಿ ಸಾಧ್ಯ­ವಿ­ರುವ ಎಲ್ಲ ಕಡೆ ಸೋಲಾರ್ ಬೀದಿ ದೀಪಗಳನ್ನು ಹಾಕ­ಬೇಕು.

ಇಲ್ಲಿದೆ ಭಾರಿ ಯೋಜನೆ
ಅಮೆರಿಕದ ಕ್ಯಾಲಿಫೋರ್ನಿಯಾದ ಮೊಜಾವೇ ಮರುಭೂಮಿಯಲ್ಲಿ ಜಗತ್ತಿನ ಅತಿ ದೊಡ್ಡದಾದ ಎರಡು ಸೋಲಾರ್ ಥರ್ಮಲ್ ವಿದ್ಯುತ್‌ ಉತ್ಪಾದನಾ ಸ್ಥಾವರ­ಗಳಿವೆ.  220 ಕೋಟಿ ಡಾಲರ್ (ಸುಮಾರು
₨ 13,200 ಕೋಟಿ) ವೆಚ್ಚದಲ್ಲಿ  392 ಮೆಗಾವಾಟ್‌ ಸಾಮರ್ಥ್ಯದ ಮೊದಲ ಯೋಜನೆ ಕಳೆದ ಫೆಬ್ರುವರಿಯಲ್ಲಿ ಆರಂಭವಾಗಿದೆ.
ಅಲ್ಲೇ ಇರುವ, ಕೆಲ ವರ್ಷ ಹಳೆಯದಾದ 354 ಮೆಗಾವಾಟ್‌ ಸಾಮ­ರ್ಥ್ಯದ ಥರ್ಮಲ್ ಸ್ಥಾವರ ಜಗತ್ತಿನ ಎರಡನೇ ಅತಿ ದೊಡ್ಡದು. ಇಲ್ಲಿ ರಾತ್ರಿ­ಯಲ್ಲೂ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ಉತ್ತರ ಕೇಪ್‌ಟೌನ್ ಆಫ್ ಡಿಆರ್ ಎಂಬಲ್ಲಿ  270 ಹೆಕ್ಟೇರ್‌ ಪ್ರದೇಶದಲ್ಲಿ 85 ಮೆಗಾವಾಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಯೋಜನೆಗಳ ಬೆನ್ನುಹತ್ತಿ: ಸೌರ ವಿದ್ಯುತ್‌ ಉತ್ಪಾದನೆಯತ್ತ ರಾಜ್ಯ ಈಗಷ್ಟೇ ಕಣ್ಣು ಬಿಡುತ್ತಿದೆ. ಮೇಲ್ಛಾವಣಿ  ಸೋಲಾರ್
ಯೋಜನೆಯನ್ನು ಕೆಲ ತಿಂಗಳ ಹಿಂದೆ ಪ್ರಕಟಿ­ಸಿದ್ದ ಬೆಸ್ಕಾಂನ ಜಾಹೀರಾತಿಗೆ ಜನ­ರಿಂದ ಉತ್ಸಾಹ ಕಂಡು­ಬರಲಿಲ್ಲ. ಹೀಗಾಗಿ ಸೌರ ನೀತಿ­ಯನ್ನೇ ಪುನರ್ ಪರಿಶೀಲಿಸಿ ಮತ್ತೊಮ್ಮೆ ಯೋಜನೆ­ಯನ್ನು ಜನರ ಮುಂದಿ­ಡಲು ಸಿದ್ಧತೆ ನಡೆಯುತ್ತಿದೆ.

ಅದೇ ರೀತಿ ರೈತರ 5 ಎಕರೆ ಜಮೀನಿನಲ್ಲಿ 1 ಮೆಗಾ­ವಾಟ್ ವಿದ್ಯುತ್ ಉತ್ಪಾದಿಸುವ ಇತ್ತೀಚಿನ ವಿವಾದಾತ್ಮಕ­ವಾದ ಆನ್‌ಲೈನ್‌ ಯೋಜನೆ ವಾಸ್ತವಿಕ­ವಾಗಿಲ್ಲ. ಕನಿಷ್ಠ 5 ಎಕರೆ ಜಮೀನು, ₨ 12 ಸಾವಿರ  ಅರ್ಜಿ ಶುಲ್ಕ, ₨ 1.12 ಲಕ್ಷ ಪ್ರೋಸೆಸಿಂಗ್ ಶುಲ್ಕ, ₨ 10 ಲಕ್ಷ  ಬ್ಯಾಂಕ್ ಗ್ಯಾರಂಟಿ ಕೊಟ್ಟು ಒಪ್ಪಂದ ಮಾಡಿ­ಕೊಂಡು ₨ 7–8 ಕೋಟಿ  ಬ್ಯಾಂಕ್ ಸಾಲದ ಮೂಲಕ ಬಂಡವಾಳ ಹೂಡಿ 1 ಮೆಗಾ­ವಾಟ್ ವಿದ್ಯುತ್ ಉತ್ಪಾದಿಸಿ, 1 ಯುನಿಟ್‌ಗೆ ₨ 7ರಿಂದ   9ಕ್ಕೆ ಅದನ್ನು ಮಾರಿ ವರ್ಷಕ್ಕೆ ಕೋಟಿ ರೂಪಾಯಿ ಆದಾಯ ಗಳಿಸುವ ಪ್ರಸ್ತಾವ ಈ ಯೋಜನೆಯಲ್ಲಿದೆ. ಇದ­ರಲ್ಲಿ ಭಾಗವಹಿಸಲು ಎಷ್ಟು ರೈತರು ಇಷ್ಟ­ಪಡು­ತ್ತಾರೆ ಎಂಬುದೇ ಸ್ಪಷ್ಟವಾ­ಗಿಲ್ಲ. ಈ ಎಲ್ಲ ಕಾರಣ­ಗಳಿಂದ, ಸೌರ ವಿದ್ಯುತ್‌ಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಯೋಜನೆ ರೂಪಿಸಿದರೂ ಅದು ಜನಸ್ನೇಹಿ ಆಗಿರುವಂತೆ ನೋಡಿಕೊಳ್ಳ­ಬೇಕಾದದ್ದು ಅತ್ಯಗತ್ಯ.

ಭಾರತದಲ್ಲಿ ಎಲ್ಲಿವೆ?
ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ 5 ಮೆಗಾ­ವಾಟ್ ಸೋಲಾರ್ ವಿದ್ಯುತ್‌ ಅನ್ನು 2011­ರಿಂದ ಉತ್ಪಾದಿಸಲಾ ಗುತ್ತಿದೆ. ಇದು ದೇಶದಲ್ಲೇ ಅತಿ ದೊಡ್ಡ ಘಟಕ.  ಇತರೆಡೆ ಇರುವ ಇದಕ್ಕಿಂತ ದೊಡ್ಡದಾದ ಯೋಜನೆ­ಗಳು ಒಂದೇ ಸ್ಥಳದಲ್ಲಿ ಇಲ್ಲ ಮತ್ತು ಇನ್ನೂ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿಲ್ಲ. ಅವುಗಳೆಂದರೆ, ಗುಜರಾತಿನ ಅಮ್ರೇಲಿ, ಆನಂದ್, ಬಸಕಾಂತ್, ಭರೂಚ್, ಜಾಮ್ ನಗರ, ಕಛ್ ಮೊದ­ಲಾದ ಜಿಲ್ಲೆಗಳ 2000 ಹೆಕ್ಟೇರ್ ಪ್ರದೇಶದಲ್ಲಿ 969 ಮೆಗಾವಾಟ್ ಉತ್ಪಾದನೆ ಉದ್ದೇಶದ ಸೋಲಾರ್ ಪಾರ್ಕ್‌ ಏಷ್ಯಾದಲ್ಲೇ ಅತಿ ದೊಡ್ಡದು.  2012­ರಿಂದ ಹಂತ ಹಂತವಾಗಿ ಕಾರ್ಯಾರಂಭ ಮಾಡಿರುವ ಈ ಘಟಕಗಳ ಉತ್ಪಾದನಾ ಸಾಮರ್ಥ್ಯ 605 ಮೆಗಾವಾಟ್‌ನಿಂದ ಈಗ 805 ಮೆಗಾವಾಟ್‌ ತಲುಪಿದೆ.

ರಾಜಸ್ತಾನದ ಸಾಂಬಾರ್ ಲೇಕ್‌ನಲ್ಲಿ 4 ಸಾವಿರ ಮೆಗಾ­ವಾಟ್‌ ಸಾಮರ್ಥ್ಯದ, ವಿಶ್ವದಲ್ಲೇ ಅತಿ ದೊಡ್ಡ­ ಸ್ಥಾವರ ನಿರ್ಮಿಸಲು ಉದ್ದೇಶಿಸ­ಲಾಗಿದೆ.  ಥಾರ್ ಮರುಭೂಮಿಯಲ್ಲಿ 700ರಿಂದ 2100 ಗಿಗಾ­ವಾಟ್ ಉತ್ಪಾ­ದಿಸುವ 1,900 ಕೋಟಿ ಡಾಲರ್ (ಸುಮಾರು 1.14 ಲಕ್ಷ ಕೋಟಿ) ವೆಚ್ಚದ ಯೋಜನೆಗೆ 2009ರಲ್ಲಿ ಚಾಲನೆ ನೀಡಲಾಗಿದೆ. ಮಧ್ಯ ಪ್ರದೇಶದ ನೇಮುಚ್ ಜಿಲ್ಲೆಯ ಭಗವಾನ್‌­ಪುರದಲ್ಲಿ 305 ಹೆಕ್ಟೇರ್‌ನಲ್ಲಿ 130 ಮೆಗಾ­ವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ.  ರೇವಾ ಜಿಲ್ಲೆ­ಯಲ್ಲಿ ₨ 4 ಸಾವಿರ ಕೋಟಿ ವೆಚ್ಚದ 700 ಮೆಗಾವಾಟ್ ಸಾಮರ್ಥ್ಯದ ಯೋಜನೆ ನಿರ್ಮಾಣ ಹಂತ­ದಲ್ಲಿದೆ.  ಆಂಧ್ರದ ವಿವಿಧೆಡೆ 3 ಸಾವಿರ ಮೆಗಾ­ವಾಟ್‌ ಸಾಮರ್ಥ್ಯದ ಯೋಜನೆಗೆ ಕೇಂದ್ರ ಪುನರ್‌ಬಳಕೆ ಇಂಧನ ಸಚಿವಾಲಯ ಕರಡು ಮಾರ್ಗಸೂಚಿ ಸಿದ್ಧಪಡಿಸಿದೆ.
­ (ಲೇಖಕರು ಪ್ರಗತಿಪರ ಕೃಷಿಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT