ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ಬೆಳಕಲಿ ಶುಕ್ರವಾಡಿ

Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಆ ಊರಲ್ಲಿ ಅಕ್ಷರಶಃ ಹಾಲು ಚೆಲ್ಲಿದ ಬೆಳದಿಂಗಳು. ಹೊತ್ತು ಮುಳುಗುವ ಹೊತ್ತಿಗೆ ತನ್ನಿಂದ ತಾನೇ ಹೊತ್ತಿಕೊಳ್ಳುವ ಬೀದಿ ದೀಪಗಳು ಬೆಳಿಗ್ಗೆ ಆರು ಗಂಟೆವರೆಗೆ ಬೆಳಕು ಚೆಲ್ಲುತ್ತವೆ. ಇತ್ತ ಬೀದಿ ದೀಪ ಬೆಳಗಲಾರಂಭಿಸುತ್ತಿದ್ದಂತೆ, ಅತ್ತ ಮನೆಯಲ್ಲಿ ಕುಳಿತಿದ್ದ ಮಕ್ಕಳು ಪುಸ್ತಕ, ನೋಟ್‌ಬುಕ್ ಹಿಡಿದುಕೊಂಡು ಅಂಗಳಕ್ಕೆ ಬರುತ್ತಾರೆ. ಊರ ಹಿರಿಯರಿಗೆ ಬೀದಿ ದೀಪದ ಕೆಳಗೆ ಕುಳಿತು ನೆರೆಹೊರೆಯ ಮನೆಯವರೊಡನೆ ಉಭಯ ಕುಶಲೋಪರಿ ನಡೆಸುವುದೇ ಚೆಂದ.

ಇವು ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ  ಶುಕ್ರವಾಡಿ ಗ್ರಾಮದಲ್ಲಿ ಕಂಡು ಬರುವ ದೃಶ್ಯ. ಕಲಬುರ್ಗಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶುಕ್ರವಾಡಿಯ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಈ ಹಿಂದೆ ಬಸ್ಸುಗಳು ಬಾರದ, ಮೂಲಸೌಲಭ್ಯಗಳಿಲ್ಲದ ಕುಗ್ರಾಮ ಎಂಬ ಅಪಖ್ಯಾತಿಗೆ ಒಳಗಾಗಿತ್ತು. ಆದರೀಗ ‘ಸೌರ ಬೀದಿ ದೀಪ’ಗಳನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಳಂದ ತಾಲ್ಲೂಕಿನ ತಡಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶುಕ್ರವಾಡಿ ಗ್ರಾಮದಲ್ಲೀಗ ಬೆಳಕಿನದ್ದೇ ಮಾತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆ ವತಿಯಿಂದ ₹15 ಲಕ್ಷ ವೆಚ್ಚದಲ್ಲಿ 50 ಸೌರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಇಡೀ ಊರು ಹುಣ್ಣಿಮೆಯಲ್ಲಿ ತೇಲಿದಂತೆ ಭಾಸವಾಗುತ್ತಿದೆ.

ಬೆಂಗಳೂರಿನ ದೀಪ ಸೋಲಾರ್ ಸಿಸ್ಟಮ್ಸ್‌ ಎಂಬ ಸಂಸ್ಥೆ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಐದು ವರ್ಷ ನಿರ್ವಹಣಾ ಜವಾಬ್ದಾರಿ ವಹಿಸಿಕೊಂಡಿದೆ. ಸುಸಜ್ಜಿತವಾಗಿ ವಿದ್ಯುತ್ ದೀಪಗಳನ್ನು ಅಳವಡಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯ ನಿರ್ವಹಣೆ ಹೀಗೆ
ಗ್ರಾಮದ ಹನುಮಾನ ಮಂದಿರ ಮುಂಭಾಗದಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡದ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಕಟ್ಟಡದ ಒಳಗೆ ಕೇಂದ್ರೀಕೃತ ಸೌರ ಘಟಕ ಸ್ಥಾಪಿಸಲಾಗಿದೆ. 

4ಕಿಲೋ ವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಇಲ್ಲಿ ಉತ್ಪಾದನೆ ಆಗುತ್ತದೆ. ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಊರ ಒಳಗಿನ ರಸ್ತೆ ಬದಿಯಲ್ಲಿ50 ವಿದ್ಯುತ್ ಕಂಬಗಳನ್ನು ನೆಟ್ಟು, ಅವುಗಳಿಗೆ ಇಲ್ಲಿಂದ ನೇರ ಸಂಪರ್ಕ ಕಲ್ಪಿಸಲಾಗಿದೆ. ಸಂಜೆ 6 ಗಂಟೆಗೆ ತನ್ನಿಂದ ತಾನೇ ಹೊತ್ತಿಕೊಳ್ಳುವ ದೀಪಗಳು ಬೆಳಿಗ್ಗೆ 6 ಗಂಟೆಗೆ ಬಂದ್ ಆಗುತ್ತವೆ. ಇದರಿಂದ ಇಡೀ ಗ್ರಾಮ 12 ಗಂಟೆ ನವವಧುವಿನಂತೆ ಕಂಗೊಳಿಸಲು ಸಾಧ್ಯವಾಗಿದೆ.

ಗುಟ್ಟು ಬಯಲು!
‘ನಮ್ಮೂರಿನ ಬಗ್ಗೆ ಬಹುತೇಕರಿಗೆ ಗೊತ್ತಿರಲಿಲ್ಲ. ಆರಂಭದಲ್ಲಿ ಇನ್ಫೊಸಿಸ್‌ ಸಂಸ್ಥೆಯವರು ಇಲ್ಲಿಗೆ ಬಂದು ಶೌಚಾಲಯ ಕಟ್ಟಿಸಿಕೊಳ್ಳುವಂತೆ ಮನವಿ ಮಾಡಿದರು. ಕೆಲವರು ಮುಂದಾದರಾದರೂ ಹಿಂಜರಿದವರೇ ಹೆಚ್ಚು. ಹಾಗಂತ ನಮ್ಮ ಪ್ರಯತ್ನ ನಿಲ್ಲಿಸಲಿಲ್ಲ.

  ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಸಹಾಯಧನ ಹೆಚ್ಚಿಸಿ, ಶೌಚಾಲಯ ಕಟ್ಟಿಸಿಕೊಳ್ಳಲು ಗ್ರಾಮಸ್ಥರಿಗೆ ಪ್ರೇರಣೆ ನೀಡಲಾಯಿತು. ಇಷ್ಟಾದರೂ ಬಹುತೇಕರು ಆಸಕ್ತಿ ತೋರಲಿಲ್ಲ. ಆಗ ಹುಟ್ಟಿಕೊಂಡಿದ್ದೇ ಸೌರ ದೀಪದ ಪರಿಕಲ್ಪನೆ. ಶೌಚಾಲಯ ಕಟ್ಟಿಸಿಕೊಂಡರೆ ಮನೆಗೊಂದು ಸೌರ ವಿದ್ಯುತ್ ದೀಪ ನೀಡಲಾಗುವುದು ಎಂಬ ಭರವಸೆ ನೀಡಲಾಯಿತು. ಇದರಿಂದ ಖುಷಿಯಾದ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರು. ಆದರೆ, ಪ್ರತಿಯೊಂದು ಮನೆಗೂ ಸೌರ ವಿದ್ಯುತ್ ಸಂಪರ್ಕ ಕೊಡುವುದು ಕಷ್ಟ ಸಾಧ್ಯ ಎಂದರಿತು ಬೀದಿ ಬದಿ ಅಳವಡಿಸುವ ಯೋಜನೆ ರೂಪಿಸಿ, ಕಾರ್ಯಗತಗೊಳಿಸಲಾಯಿತು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಬುರಾವ ಕೆ.ಪಾಟೀಲ ‘ಸೌರ ದೀಪ’ದ ಗುಟ್ಟನ್ನು ಬಯಲು ಮಾಡಿದರು.

ಮನೆಗಳಲ್ಲಿ ನಿತ್ಯ ಬೆಳಕು
ಶುಕ್ರವಾಡಿಯಲ್ಲಿ 147 ಮನೆಗಳಿದ್ದು, 597 ಮತದಾರರು ಹಾಗೂ 1,200 ಜನಸಂಖ್ಯೆ ಇದೆ. ಊರಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ 1ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸಕ್ಕೆ ಇಲ್ಲಿನ ವಿದ್ಯಾರ್ಥಿಗಳು ಏಳು ಕಿ.ಮೀ ಅಂತರದಲ್ಲಿರುವ ಆಳಂದಕ್ಕೆ ತೆರಳುತ್ತಾರೆ. ಸೌರ ಬೀದಿ ದೀಪ ಅಳವಡಿಸಿದ್ದರಿಂದ ಇಡೀ ಗ್ರಾಮದಲ್ಲಿ ನಿತ್ಯ ಬೆಳದಿಂಗಳ ಅನುಭವವಾಗುತ್ತದೆ.

ಈ ಮೊದಲು ಈ ಗ್ರಾಮ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಹೊಂದಿತ್ತು. ಆದಾಗ್ಯೂ, ಲೋಡ್ ಶೆಡ್ಡಿಂಗ್‌ನಿಂದಾಗಿ ಬೀದಿ ದೀಪಗಳು ಕೈಕೊಡುತ್ತಿದ್ದವು. ಇದೀಗ ಸೌರ ವಿದ್ಯುತ್ ದೀಪ ಅಳವಡಿಸಿದ್ದರಿಂದ ಈ ಸಮಸ್ಯೆ ನೀಗಿದೆ. ಮನೆಯಿಂದ ಹೊರ ಬಂದರೆ ಸಾಕು, ಊರ ತುಂಬ ಹರಡಿರುವ ಬೆಳಕನ್ನು ನೋಡುವುದೇ ಚೆಂದ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

 ಸೌರ ವಿದ್ಯುತ್ ದೀಪಗಳನ್ನು ಅಳವಡಿಸಿದ ಬಳಿಕ ಈ ಮೊದಲು ಇದ್ದ ವಿದ್ಯುತ್ ಚಾಲಿತ ದೀಪಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾಗುತ್ತಿದೆ. ಪರ ಊರುಗಳಿಂದ ಇಲ್ಲಿಗೆ ಬರುವವರು ಊರನ್ನು ನೋಡಿ ಬೆರಗಾಗುತ್ತಿದ್ದಾರೆ. ತಮ್ಮ ಊರಿನಲ್ಲೂ ಇಂಥದ್ದೇ ವ್ಯವಸ್ಥೆ ಇದ್ದರೆ ಹೇಗೆ ಎಂದು ಆಲೋಚಿಸುತ್ತ ಯೋಜನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿನ ಜನರ ಒಗ್ಗಟ್ಟು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮದವರು.

ಸೌರ ಘಟಕ ಹೀಗಿದೆ
ಈ ಸೌರವಿದ್ಯುತ್ ಘಟಕದಲ್ಲಿ 16 ಸೋಲಾರ್ ಮಾಡ್ಯೂಲ್, ಒಂದು ಮಾಡ್ಯೂಲ್ ಮೌಂಟಿಂಗ್ ಸ್ಟ್ರಕ್ಚರ್ ಸೆಟ್, ಎರಡು ಅರ್ರೇ ಜಂಕ್ಷನ್ ಬಾಕ್ಸ್, ತಲಾ ಒಂದು ಡಿಸಿ ಮತ್ತು ಎಸಿ ಬೋರ್ಡ್, ಆಂತರಿಕ ಸಂಪರ್ಕದ ಕೇಬಲ್, 24 ವಿಆರ್‌ಎಲ್‌ಎ ಜೆಲ್ ಬ್ಯಾಟರಿ, ಒಂದು ಸೋಲಾರ್ ಪಿಸಿಯು ಅಳವಡಿಸಲಾಗಿದೆ.

 ಈ ವಿದ್ಯುತ್ ಘಟಕದ ಮೂಲಕ ಪ್ರತಿ ಸೌರ ವಿದ್ಯುತ್ ಕಂಬಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ ಮತ್ತು ಪ್ರತಿ ಕಂಬ 20 ವಾಟ್ಸ್‌ ಲೆಡ್ ಹೊಂದಿರುತ್ತದೆ. ಈ ಕೇಂದ್ರೀಕೃತ ಸೋಲಾರ್ ವಿದ್ಯುತ್ ಘಟಕದಲ್ಲಿ ವಿದ್ಯುತ್ ಎಕ್ಸ್‌ಪೋರ್ಟಿಂಗ್ ವ್ಯವಸ್ಥೆ ಇಲ್ಲ. ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ತಲಾ 20 ವಾಟ್ಸ್‌ ಲೆಡ್‌ ಬೀದಿದೀಪಗಳಿಗಾಗಿ ಮಾತ್ರ ಉಪಯೋಗಿಸಲಾಗುತ್ತದೆ. ಈ ಘಟಕದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲಾಗುವುದಿಲ್ಲ.

ಬಯಲು ಶೌಚಮುಕ್ತ ಗ್ರಾಮ!
ಶುಕ್ರವಾಡಿ ಗ್ರಾಮದಲ್ಲಿರುವ ಎಲ್ಲ 147 ಮನೆಗಳಲ್ಲೂ ಸುಸಜ್ಜಿತ ಶೌಚಾಲಯಗಳನ್ನು ಕಾಣಬಹುದು. ಗ್ರಾಮಸ್ಥರ ಒಗ್ಗಟ್ಟು, ನೈರ್ಮಲ್ಯ ಕಾಳಜಿಯಿಂದಾಗಿ ಈ ಕಾರ್ಯ ಸಾಧ್ಯವಾಗಿದೆ. ಇದರಿಂದಾಗಿ ಈ ಗ್ರಾಮ ಬಯಲು ಶೌಚಮುಕ್ತ ಗ್ರಾಮ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಅದರ ಬೆನ್ನಲ್ಲೇ ಈಗ ರಾಜ್ಯದ ಮೊದಲ ‘ಸೌರ ಗ್ರಾಮ’ ಎಂಬ ಹಿರಿಮೆಗೂ ಈ ಊರು ಪಾತ್ರವಾಗಿದೆ.
***
ಬೆಳಕಿನ ಭಾಗ್ಯ
ಶುಕ್ರವಾಡಿ ಗ್ರಾಮಸ್ಥರಲ್ಲಿ ಪರಿಸರ ನೈರ್ಮಲ್ಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆರ್‌ಡಿಪಿಆರ್ ಇಲಾಖೆಯಿಂದ ಸೌರ ಬೀದಿ ದೀಪಗಳನ್ನು ಅಳವಡಿಸಿರುವುದು ಗ್ರಾಮಸ್ಥರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ₹50 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗುತ್ತಿದೆ. ಒಟ್ಟಾರೆ, ಸಮುದಾಯದ ಸಹಭಾಗಿತ್ವದಿಂದ ಶುಕ್ರವಾಡಿ ಗ್ರಾಮಕ್ಕೆ ಶುಕ್ರದೆಸೆ ಬಂದಂತಾಗಿದೆ’ ಎನ್ನುತ್ತಾರೆ ಶುಕ್ರವಾಡಿ ಗ್ರಾಮ ಪಂಚಾಯಿತಿ ಸದಸ್ಯ  ಬಾಬುವಾರ ಕೆ.ಪಾಟೀಲ.
***
ಗ್ರಾಮಸ್ಥರಿಗೆ ವರದಾನ
ತಡಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಕ್ರವಾಡಿಯಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸಿರುವುದು ಗ್ರಾಮಸ್ಥರಿಗೆ ವರದಾನವಾಗಿದೆ. ರಾತ್ರಿ ಹೊತ್ತಿನಲ್ಲಿ ಯಾವುದೇ ಭಯವಿಲ್ಲದೆ ಗ್ರಾಮದಲ್ಲಿ ಸಂಚರಿಸಬಹುದಾಗಿದೆ. ಅದರಲ್ಲೂ ಮಕ್ಕಳು ಮತ್ತು ವಯೋವೃದ್ಧರಿಗೆ ಇದರಿಂದ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣಮಂತರಾವ ಪಾಟೀಲ

ಪೂರಕ ಮಾಹಿತಿ: ಚಂದ್ರಕಾಂತ ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT