ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟ್ಲೆಂಡ್‌: ಏಕತೆಗೆ ಬಲ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬ್ರಿಟನ್‌ನಿಂದ ಸ್ಕಾಟ್ಲೆಂಡ್‌ನ ವಿಮೋಚನೆಗಾಗಿ ಇತ್ತೀಚೆಗೆ ನಡೆದ ಜನ­ಮತ­ಗಣನೆಯಲ್ಲಿ ಪ್ರತ್ಯೇಕತಾವಾದಿಗಳಿಗೆ ಸೋಲುಂಟಾಗಿದೆ. ಅಖಂಡ ಯುನೈ­-ಟೆಡ್‌ ಕಿಂಗ್‌ಡಂನ ಭಾಗವಾಗಿಯೇ ಇರುವುದರ ಪರವಾಗಿ ಶೇ 55ಕ್ಕೂ ಹೆಚ್ಚು ಜನ ಮತ ಚಲಾಯಿಸಿದ್ದಾರೆ. ಅವರ ಈ ನಡೆ ಬ್ರಿಟನ್‌ ಮಾತ್ರವಲ್ಲ, ವಿಮೋಚನೆಯ ಕೂಗು ಕೇಳಿಬರುತ್ತಿರುವ ವಿಶ್ವದ ಇತರ ಭಾಗ­ಗಳಿಗೂ ತಕ್ಕ ಸಂದೇಶವನ್ನೇ ರವಾನಿಸಿದೆ.

ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮ­ರಾನ್‌ ಬೀಸುವ ದೊಣ್ಣೆ­ಯಿಂದ  ಪಾರಾಗಿದ್ದಾರೆ. ಒಂದು ವೇಳೆ ಜನಾ­ಭಿ­­ಪ್ರಾಯ ವಿಮೋ­ಚ­ನೆಯ ಪರವಾಗಿಯೇ ಇದ್ದಿದ್ದರೆ ಬ್ರಿಟನ್‌ ಐತಿಹಾಸಿಕ ಬದ­ಲಾ­ವ­ಣೆಗಳಿಗೆ ಸಾಕ್ಷಿಯಾಗುತ್ತಿತ್ತು. ದೇಶದ ಆರ್ಥಿಕ ಸ್ಥಿತಿಗತಿಗೆ ಹೊಡೆತ ಬೀಳು­­ತ್ತಿತ್ತು. ಅಷ್ಟೇ ಅಲ್ಲ, ಸ್ಕಾಟ್ಲೆಂಡ್‌ ಸಹ ಸ್ವಾತಂತ್ರ್ಯ ಸಿಕ್ಕ ಖುಷಿಯನ್ನು ಮುಕ್ತ­­ವಾಗಿ ಅನುಭ­ವಿಸಲು ಸಾಧ್ಯವಾಗುತ್ತಿರಲಿಲ್ಲ.

ಹೊಸ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಾಗ ಎದು­ರಿಸಬೇಕಾದ ಆರ್ಥಿಕ ಅಡಚಣೆಗಳು, ಅಂತರ­ರಾಷ್ಟ್ರೀಯ ಬಿಕ್ಕಟ್ಟು­ಗಳನ್ನು ಎದು­ರಿಸುವಷ್ಟು ಮಾನಸಿಕ ಸಿದ್ಧತೆಯನ್ನು ಅದಿನ್ನೂ ಮಾಡಿ­ಕೊಂಡಿರಲಿಲ್ಲ. ಹೀಗಾಗಿ ಜನಾಭಿಪ್ರಾಯದ ಫಲಿತಾಂಶ­ವನ್ನು ಇಡೀ ದೇಶ ಕಾತರದಿಂದ ಎದುರು ನೋಡುತ್ತಿತ್ತು. ಬ್ರಿಟನ್‌ ಮತ್ತು ಸ್ಕಾಟ್ಲೆಂಡ್‌ನ ಸಂಬಂಧಕ್ಕೆ ಶತ­ಮಾನ­ಗಳ ಇತಿ­ಹಾಸ ಇದೆ.

1706ರ ತನಕ ಸ್ವತಂತ್ರ ದೇಶ­ವಾಗಿದ್ದ ಸ್ಕಾಟ್ಲೆಂಡ್‌ ವಿವಿಧ ಸ್ಥಿತ್ಯಂ­ತ­ರಗ­ಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ, ಮುನ್ನೂರು ವರ್ಷಗಳ ಹಿಂದೆ ಯುನೈಟೆಡ್‌ ಕಿಂಗ್‌ಡಂನ ತೆಕ್ಕೆಗೆ ಬಂತು. ಆದರೆ ನಂತರದ ದಿನಗಳಲ್ಲಿ ಅಲ್ಲಿನ ಆರ್ಥಿಕತೆ ಗರಿಗೆದರಿತು.  ಬೌದ್ಧಿಕ ವಲಯ ಮತ್ತು ಪ್ರವಾಸಿ ತಾಣಗಳು ಬೆಳಕಿಗೆ ಬಂದವು. ಲೇಬರ್‌ ಪಕ್ಷದ ಪ್ರಭಾವದಿಂದ ರಾಜಕೀಯವಾಗಿಯೂ ಈ ಪ್ರದೇಶ ಪ್ರಬಲ­ವಾ­ಯಿತು. ಇಲ್ಲಿನ ಖ್ಯಾತ ತೈಲ ಭಂಡಾರಗಳು ಹಾಗೂ ಪರಮಾಣು ಘಟಕಗಳ ಮೇಲೆ ಬ್ರಿಟನ್‌ನ ಹಿಡಿತ ಇದ್ದರೂ ಶಿಕ್ಷಣ, ಪೊಲೀಸ್‌, ನ್ಯಾಯಾಂಗ ವ್ಯವಸ್ಥೆ, ನೀರು ಪೂರೈಕೆ ಎಲ್ಲವನ್ನೂ ಸ್ಕಾಟ್ಲೆಂಡ್‌  ಸ್ವತಂತ್ರ­ವಾಗಿಯೇ ನಿರ್ವಹಿಸುತ್ತಿದೆ.

ಒಂದು ವೇಳೆ ಪ್ರತ್ಯೇಕಗೊಂಡರೆ ಬ್ರಿಟನ್‌ನ ಆರ್ಥಿಕ ಸ್ಥಿತಿಯನ್ನೇ ದುರ್ಬಲ­ಗೊಳಿಸುವಷ್ಟು ಪ್ರಭಾವ ಈಗ ಅದಕ್ಕಿದೆ. ಆದರೂ ಬ್ರಿಟನ್‌ ತಮ್ಮ ಇತರ ಬೇಡಿಕೆಗಳನ್ನು ಅಲಕ್ಷಿಸುತ್ತಿದೆ ಎಂಬ ಕೊರಗು ಮೂಲ­ನಿವಾಸಿಗಳಿಗೆ ಇದ್ದೇ ಇದೆ. ಅದರಿಂದಲೇ ಸ್ಕಾಟ್ಲೆಂಡ್‌ನ ಆಂತರ್ಯ­ದಲ್ಲಿ ಆಗಾಗ್ಗೆ ಪ್ರತ್ಯೇಕತೆಯ ಕೂಗು ಕೇಳಿಬರುತ್ತಲೇ ಇರುತ್ತದೆ.

ಈ ಬಾರಿ ಪ್ರತ್ಯೇಕ ರಾಷ್ಟ್ರದ ಪರ ಮತ್ತು ವಿರೋಧಿ ಗುಂಪಿನ ನಡುವೆ ಹೆಚ್ಚಿನ ಅಂತರ ಇಲ್ಲದಿದ್ದುದು ಗಮನಾರ್ಹ. ಇಂತಹದ್ದೊಂದು ಆತಂಕ ಇದ್ದು­­ದರಿಂದಲೇ ಆಡಳಿತಾರೂಢ ಕನ್ಸರ್ವೆಟಿವ್‌ ಪಕ್ಷ, ವಿರೋಧಿ ಲೇಬರ್‌ ಪಕ್ಷ ಮತ್ತು ಲಿಬರಲ್‌ ಡೆಮೊಕ್ರಾಟ್‌ ಪಕ್ಷಗಳು ಒಗ್ಗಟ್ಟಿನಿಂದ ಪ್ರತ್ಯೇಕತಾ ವಿರೋಧಿ­­ಗಳ ಗುಂಪನ್ನು ಮುನ್ನಡೆಸಿದ್ದವು. ಆದರೆ ಈಗ ತಮಗೆ ಸಿಕ್ಕ  ಗೆಲು­ವನ್ನು ಅವು ಶಾಶ್ವತ ಎಂದುಕೊಳ್ಳುವಂತೇನೂ ಇಲ್ಲ.  ಇನ್ನು ಒಂದು ವರ್ಷ­ದಲ್ಲಿ ದೇಶ ಮಹಾ ಚುನಾವಣೆ ಎದುರಿಸಲಿದೆ. ಹೀಗಾಗಿ ವಿಕೇಂದ್ರೀ­ಕರಣ ಮತ್ತು ಇನ್ನಷ್ಟು ಸ್ವಾಯತ್ತತೆಗೆ ಬದ್ಧವಾಗುವುದಾಗಿ ಸ್ಕಾಟ್ಲೆಂಡ್‌ಗೆ ನೀಡಿದ್ದ ಭರವಸೆಯನ್ನು ಈಡೇರಿಸಲೇಬೇಕಾದ ಅತಿ ದೊಡ್ಡ ಸವಾಲು ಈಗ ಅವುಗಳ ಮುಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT