ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೂಟರ್ ವರ್ಗಕ್ಕೆ ಹೊಸ ಸೇರ್ಪಡೆ ಗಸ್ಟೊ

Last Updated 2 ಏಪ್ರಿಲ್ 2015, 9:12 IST
ಅಕ್ಷರ ಗಾತ್ರ

ಹೀಂದ್ರಾ ಅಂಡ್ ಮಹೀಂದ್ರಾ ದ್ವಿಚಕ್ರವಾಹನ ಕ್ಷೇತ್ರಕ್ಕೆ ಬಂದ ಮೇಲೆ ಅರ್ಥಾತ್ ಕೈನೆಟಿಕ್  ಕಂಪೆನಿಯನ್ನು ಕೊಂಡಮೇಲೆ ನಿರಂತರ ಪ್ರಯೋಗಕ್ಕೆ ಇಳಿದಿದೆ. ಪ್ರಯೋಗದಲ್ಲಿ ಸಿಹಿಯನ್ನೂ ಉಂಡಿದೆ, ಕಹಿಯನ್ನೂ ಕಂಡಿದೆ. ಸ್ಟಾಲಿನ್, ಫ್ಲೈಟ್ ಮೊದಲಾದ ಉತ್ಪನ್ನಗಳು ಉತ್ತಮವಾಗಿದ್ದರೂ,ಗಣನೀಯ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆದದ್ದು ಕಡಿಮೆ.

ಏಕೆಂದರೆ, ತನ್ನ ಪ್ರತಿಸ್ಪರ್ಧಿಗಳಿಗಿಂತ ಆಧುನಿಕವಲ್ಲದ ವಿನ್ಯಾಸ ಇವುಗಳನ್ನು ಮಾರುಕಟ್ಟೆ ಯಿಂದ ಹಿಂದೆ ಸರಿಯುವಂತೆ ಮಾಡಿತ್ತು. ಇದರಾಚೆಗೆ ಮ್ಯಾಜಿಕ್ ಮಾಡಿದ್ದು, ಸೆಂಚುರೊ ಮಾತ್ರ. ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದ ಬೈಕ್ ಇದು. ಉತ್ತಮ ಮೈಲೇಜ್, ಗಟ್ಟಿಮುಟ್ಟು ದೇಹ, ರೈಡಿಂಗ್ ಕ್ವಾಲಿಟಿ,ಎಂಜಿನ್‌ಗೆ ತಕ್ಕ ಶಕ್ತಿ, ವಿಭಿನ್ನ ಮತ್ತು ಹೊಸ ಸೌಲಭ್ಯಗಳು ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದ್ದವು. ಆದರೆ ವಿನ್ಯಾಸ ಮಾತ್ರ ಔಟ್‌ಡೇಟೆಡ್ ಎಂಬಂತಿತ್ತು.

ಮಹೀಂದ್ರಾ ಗಸ್ಟೊ ಎಂಬ ಗಿಯರ್ ಲೆಸ್ ಸ್ಕೂಟರ್ ಬಿಡುಗಡೆ ಮಾಡಿದಾಗಲೂ ಇಂಥದ್ದೇ ನಿರೀಕ್ಷೆ ಇತ್ತು. ಮೊದಲು ಇದರ ಎಂಜಿನ್ ಸಾಮರ್ಥ್ಯದತ್ತ ಗಮನ ಹರಿಸೋಣ. ಗಸ್ಟೊನಲ್ಲಿ ಸಂಪೂರ್ಣವಾಗಿ ಮಹೀಂದ್ರಾ ಅಭಿವೃದ್ಧಿ ಪಡಿಸಿದ 109 ಸಿ.ಸಿ ಸಾಮರ್ಥ್ಯದ ಎಂಟೆಕ್ ಎಂಜಿನ್ ಇದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 8 ಬಿಎಚ್‌ಪಿ ಶಕ್ತಿ, 5500 ಆರ್‌ಪಿಎಂನಲ್ಲಿ 9 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

ಎಲ್ಲ ಗಿಯರ್‌ಲೆಸ್‌ ಸ್ಕೂಟರ್‌ಗಳಲ್ಲಿರುವಂತೆ ಇದರಲ್ಲೂ ಸಿವಿಟಿ ಟ್ರಾನ್ಸ್‌ಮಿಷನ್ ಇದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 1275 ಎಂಎಂ ವೀಲ್‌ಬೇಸ್‌, 12 ಇಂಚಿನ ವೀಲ್, ಟ್ಯೂಬ್‌ಲೆಸ್ ಟೈರ್ ಇದರ ವಿಶೇಷತೆ. ತನ್ನ ವರ್ಗದಲ್ಲೇ ಹೆಚ್ಚಿನ ತೂಕದ ಸ್ಕೂಟರ್ ಇದು ಎಂದು ಮಹೀಂದ್ರಾ ಹೇಳಿದೆ. ಗ್ರೌಂಡ್ ಕ್ಲಿಯರೆನ್ಸ್, ವೀಲ್‌ಬೇಸ್‌ ಈ ವರ್ಗದಲ್ಲೇ ಹೆಚ್ಚು. ಇಂತಿಪ್ಪ ಗಸ್ಟೊವನ್ನು 150 ಕಿ.ಮೀ ಚಲಾಯಿಸುವ ಅವಕಾಶ ದೊರೆತಿತ್ತು. ನಗರ, ಹೆದ್ದಾರಿ, ಹಳ್ಳ-ಗುಂಡಿ ತುಂಬಿದ  ರಸ್ತೆಗಳಲ್ಲಿ ಚಲಾಯಿಸಿದ ಮೇಲೆ ಗಸ್ಟೊವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನದ್ದೇನೂ ಉಳಿದಿರಲಿಲ್ಲ.

ಮೂರು ದಿನ ನನ್ನ ಬಳಿ ಇದ್ದ ಗಸ್ಟೊ ಬೆಳ್ಳಂಬೆಳಿಗ್ಗೆ ಓಡಲು ಕೊಂಚ ತ್ರಾಸ ಪಡುತ್ತಿತ್ತು. ಅಂದರೆ ಕೋಲ್ಡ್ ಸ್ಟಾರ್ಟ್ ಸಮಸ್ಯೆ ಇತ್ತು. ನಾಲ್ಕೈದು ಕಿ.ಮೀ ಚಲಾಯಿಸಿದ ಮೇಲೆ ಎಂಜಿನ್‌ನಲ್ಲಿ ಆಯಿಲ್ ಚೆನ್ನಾಗಿ ಓಡಾಡಿದ ಮೇಲೆ ಎಂಜಿನ್ ನಯವಾಗುತ್ತಿತ್ತು. ನನಗೆ ನೀಡಿದ್ದ ಗಸ್ಟೊ ಸಂಪೂರ್ಣ ಹೊಸತು, 13 ಕಿ.ಮೀ ಓಡಿತ್ತು. ಕೊಂಚ ಹಳತಾದ ಮೇಲೆ ಈ ಸಮಸ್ಯೆ ತಕ್ಕಮಟ್ಟಿಗೆ ಹತೋಟಿಗೆ ಬರುತ್ತದೆ. ಆಗ ಎಂಜಿನ್ ಅನ್ನು ಹೆಚ್ಚು ವಾರ್ಮ್ ಅಪ್ ಮಾಡಬೇಕಿರುವುದಿಲ್ಲ.

ಗಸ್ಟೊ ತೂಕ ಹೆಚ್ಚಾಗಿರುವುದರಿಂದ ನಿಂತಲ್ಲಿಂದ ಕದಲಲು ಥ್ರೋಟಲ್‍ ಅನ್ನು ಹೆಚ್ಚು ತಿರುವಬೇಕು. ಲೋಎಂಡ್ ಟಾರ್ಕ್ ಕಡಿಮೆ ಇರುವುದರಿಂದಲೂ (ಗರಿಷ್ಠ ಟಾರ್ಕ್ ದೊರೆಯುವುದೇ 5500 ಆರ್‌ಪಿಎಂನಲ್ಲಿ) ಗಸ್ಟೊ ಕಡಿಮೆ ವೇಗದಲ್ಲಿ ತುಂಬಾ ಕೊಸರಾಡುತ್ತದೆ. ಟ್ರಾಫಿಕ್ ಮಧ್ಯೆ ಚಲಾಯಿಸುವಾಗ ಥಟ್ಟನೆ ನಿಲ್ಲಿಸಿ, ಥಟ್ಟನೆ ಚಲಾಯಿಸಲು ನಾವೂ ಕೊಂಚ ಕಷ್ಟಪಡಬೇಕು. ಆದರೆ ಪ್ರತಿಗಂಟೆಗೆ 40 ಕಿ.ಮೀ ವೇಗ ದಾಟಿದ ಮೇಲೆ ಎಂಜಿನ್ ಕೊಂಚ ನಯವಾಗುತ್ತದೆ ಮತ್ತು ಎಂಜಿನ್‌ನ ಶಕ್ತಿ ಅರಿವಿಗೆ ಬರುತ್ತದೆ.

ಗಸ್ಟೊ ಫ್ರೇಮ್ ವಿನ್ಯಾಸ ಉತ್ತಮವಾಗಿಲ್ಲ ಎಂದೇ ಹೇಳಬಹುದು. ಉದ್ದನೆಯ ವೀಲ್‌ಬೇಸ್‌ ಇದ್ದರೂ, ಫೋರ್ಕ್ ಕೇಂದ್ರ ಹೆಚ್ಚು ಮುಂಚಾಚಿರುವುದರಿಂದ, ಹ್ಯಾಂಡಲ್ ಬಾರ್ ಹೆಚ್ಚು ಮೇಲಕ್ಕೆ ಹೋಗಿದೆ. ಒಂದು ಸ್ಕೂಟರ್‌ಗೆ ಇಷ್ಟು ಎತ್ತರದಲ್ಲಿ ಹ್ಯಾಂಡಲ್‍ ಬಾರ್ ಅಳವಡಿಸಿದರೆ ಅದರಿಂದ ತೊಂದರೆಯೇ ಹೆಚ್ಚು. ಇದರಿಂದ ಕ್ರೂಸರ್‍ ಬೈಕ್‍ ಹ್ಯಾಂಡಲ್ ಹಿಡಿದ ಅನುಭವವಾಗುತ್ತದೆ. ಇದರಿಂದ ಚಾಲಕನಿಗೆ ರಸ್ತೆ ಹಿಡಿತ ತಪ್ಪಿದಂಥ ಅನುಭವವಾಗುತ್ತದೆ. ನಿಜಕ್ಕೂ ಇದು ಹಿನ್ನಡೆಯೇ ಸರಿ. ಸೀಟ್ ಎತ್ತರ ಬದಲಾಯಿಸುವ ಆಯ್ಕೆ ಇರುವುದರಿಂದ ಈ ಸಮಸ್ಯೆಯನ್ನು ಕೊಂಚ ಸುಧಾರಿಸಬಹುದು. ಆದರೆ ಇದರಿಂದ ರೈಡ್ ಕ್ವಾಲಿಟಿ ಬದಲಾಗುವುದಿಲ್ಲ.

ಹಳ್ಳ-ಗುಂಡಿ ತುಂಬಿದ ಹಳ್ಳಿಗಾಡಿನ ರಸ್ತೆಯಲ್ಲೂ ಇದೇ ಅನುಭವವಾಗುತ್ತದೆ. ಎರಡೂ ಪರಿಸ್ಥಿತಿಯಲ್ಲಿ ಗಸ್ಟೊವನ್ನು ಸರಾಗವಾಗಿ, ಚುರುಕಾಗಿ ಚಲಾಯಿಸಲು ಪ್ರೇರಣೆಯೇ ಬರುವುದಿಲ್ಲ. ಹೆದ್ದಾರಿಯಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಚಲಾಯಿಸಲು ಗಸ್ಟೊ ಅತ್ಯುತ್ತಮವಾಗಿದೆ. 60ರ ವೇಗ ದಾಟಿದರೂ ಆ ವೇಗದ ಅನುಭವವಾಗುವುದಿಲ್ಲ. ಅಷ್ಟು ಅತ್ಯುತ್ತಮವಾದ ಏರೊ ಡೈನಾಮಿಕ್  ವಿನ್ಯಾಸ ಗಸ್ಟೊಗಿದೆ. ಪ್ರತಿ ಗಂಟೆಗೆ 85 ಕಿ.ಮೀ ವೇಗದಲ್ಲಿ ಚಲಾಯಿಸುವಾಗಲೂ ಇದೇ ಮಾತು ಹೇಳಬಹುದು.

ಆದರೆ ಈ ವೇಗದಲ್ಲಿ ಹೆಚ್ಚು ದೂರ ಗಸ್ಟೊ ಚಲಾಯಿಸಲು ಸಾಧ್ಯವಿಲ್ಲ. ಎಂಜಿನ್‌ಗೆ ಆ ಶಕ್ತಿ ಇಲ್ಲ. 50 ಕಿ.ಮೀ ವೇಗ ದಾಟಿದೊಡನೆ ವೇಗವರ್ಧನೆ ಗಣನೀಯವಾಗಿ ಕುಗ್ಗುತ್ತದೆ. ಹೆದ್ದಾರಿಯಲ್ಲಿ ಒಂದು ಆಟೊವನ್ನು ಹಿಂದಿಕ್ಕಲೂ ಹತ್ತಾರು ಬಾರಿ ಯೋಚಿಸಬೇಕಾದ, ನಾಲ್ಕಾರು ಬಾರಿ ಹಿಂದೆ ನೋಡಿ, ರಸ್ತೆ ಖಾಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನನಗಂತೂ ಎತ್ತರಿಸಿದ ಹ್ಯಾಂಡಲ್ ಬಾರ್‌ನಿಂದ ಬೆನ್ನು, ಭುಜ ನೋವಾಯಿತು. ಅಲ್ಲದೆ, 15-20 ಕಿ.ಮೀ ಒಮ್ಮೆ ಬ್ರೇಕ್ ನೀಡಿ, ಸುಧಾರಿಸಿಕೊಂಡು ಹೋಗಬೇಕಾಯಿತು. ಇದೇ ಎಂಜಿನ್‍ ಅನ್ನು ಸೂಕ್ತವಾಗಿ ಟ್ಯೂನ್ ಮಾಡಿದರೆ ಮತ್ತು ವಾಹನದ ತೂಕ ಇಳಿಸಿದರೆ ಈ ಸಮಸ್ಯೆ ಸುಧಾರಿಸಬಹುದು.

ಗಮನ ಸೆಳೆಯದ ವಿನ್ಯಾಸ
ಆದರೆ ಹೊರ ವಿನ್ಯಾಸ ಮಾತ್ರ ಗಮನ ಸೆಳೆಯುವುದಿಲ್ಲ. ಹಿಂಬದಿಯಿಂದ ನೋಡಲು ಉತ್ತಮವಾಗಿದ್ದರೂ, ಅಕ್ಕಪಕ್ಕದಿಂದ, ಮುಂಭಾಗದಿಂದ ಅಷ್ಟೇನು ಆಕರ್ಷಕವಾಗಿಲ್ಲ. ವಿಎಕ್ಸ್, ಡಿಎಕ್ಸ್ ಮತ್ತು ಎಚ್‍ಎಕ್ಸ್ ಆವೃತ್ತಿಯಲ್ಲಿ ಲಭ್ಯವಿರುವ ಗಸ್ಟೊ ಎಕ್ಸ್ ಷೋರೂಂ ಬೆಲೆ 48 ಸಾವಿರದಿಂದ 52 ಸಾವಿರದವರೆಗೆ ಇದೆ.
*
ಹೆಚ್ಚೇ ಸೌಲಭ್ಯ
ಸೆಂಚುರೋದಲ್ಲಿ ಇರುವಂತೆ ಗಸ್ಟೊದಲ್ಲೂ ಫ್ಲಿಪ್ ರಿಮೋಟ್ ಕೀ ಇದೆ. ರಿಮೋಟ್‌ನಲ್ಲಿ ಟಾರ್ಚ್ ಇದೆ. ಫೈಂಡ್‍ ಮೀ ಇಂಡಿಕೇಟರ್‌ಗಳು ವಿಶೇಷ ಅನುಭವ ನೀಡುತ್ತವೆ. ಹೆಲ್ಮೆಟ್‌ ಸಿಗಿಸಲು ಸೀಟಿನಡಿ ನೀಡಿರುವ ಸಣ್ಣ ಹುಕ್ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಕನ್ಸೋಲ್ ಬಳಿ ನೀಡಿರುವ ಗ್ಲೋ ಪೌಚ್, ವಾಷಿಂಗ್ ಕ್ಲಾತ್, ಮೊಬೈಲ್, ಪರ್ಸ್ ಇಟ್ಟುಕೊಳ್ಳಲು ಉಪಯೋಗಕ್ಕೆ ಬರುತ್ತದೆ. ವಿಸ್ತಾರವಾದ ಫುಟ್‌ಬೋರ್ಡ್, ಅದರ ಮೇಲಿರುವ ಮ್ಯಾಟ್ ಒರಟಾದ ವಸ್ತುಗಳನ್ನು ಸಾಗಿಸಲೂ ಉಪಯೋಗಕ್ಕೆ ಬರುತ್ತದೆ. ಹೆಡ್‌ಲ್ಯಾಂಪ್‌ ಮತ್ತು ಟೇಲ್ ಲ್ಯಾಂಪ್‌ಗಳೊಂದಿಗೆ ನೀಡಿರುವ ಎಲ್‍ಇಡಿ ಗೈಡ್ ಲ್ಯಾಂಪ್‌ಗಳು, ಇಗ್ನಿಷನ್ ಬಂದ್ ಮಾಡಿದ ಮೇಲೂ ಕತ್ತಲಲ್ಲಿ ನಿಮಗೆ ಕೊಂಚಕಾಲ ಬೆಳಕು ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT