ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೇಟಿಂಗ್‌ ಮೂಡಿದೆ ಹೊಸ ಭರವಸೆ

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಶ್ವ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಹದಿನೈದು ಪದಕ, ಹಲವು ವಿಶ್ವ ದಾಖಲೆಗಳನ್ನು ಮಾಡಿರುವ ಅಮೆರಿಕದ ಜಾಯ್ ಮಾಂಟಿಯಾ ಭಾರತದ ಸ್ಕೇಟರ್‌ಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶಿಬಿರ ಮುಗಿಸಿರುವ ಅವರು ಪುಣೆ, ಅಹಮದಾಬಾದ್‌ ಮತ್ತು ಮುಂಬೈಯಲ್ಲಿ ಕಾಲ್ಚಳಕ ತೋರಿಸಲಿದ್ದಾರೆ.

29 ವರ್ಷದ ಮಾಂಟಿಯಾ ಬೆಂಗಳೂರಿನಲ್ಲಿ ಒಂದು ವಾರ ತರಬೇತಿ ನೀಡಿದರು. ನೂರಾರು ಸ್ಕೇಟರ್‌ಗಳು ಅವರಿಂದ ಹಲವು ವಿಷಯಗಳನ್ನು ತಿಳಿದುಕೊಂಡರು. ಮಕ್ಕಳಿಗೆ ಕೌಶಲಗಳನ್ನು ಮಾಂಟಿಯಾ ಹೇಳಿಕೊಟ್ಟರು. ವಿಶ್ವ ಮಟ್ಟದಲ್ಲಿ ಭಾರತ ಸ್ಕೇಟಿಂಗ್‌ನಲ್ಲಿ ಹೇಳಿಕೊಳ್ಳು ವಂಥ ಸಾಧನೆ ಮಾಡಿಲ್ಲ. ಈ ಕ್ರೀಡೆ ಇಲ್ಲಿ ವೃತ್ತಿಪರತೆಗಿಂತ ಹೆಚ್ಚಾಗಿ ಹವ್ಯಾಸವಾಗಿ ಬಿಟ್ಟಿದೆ.

ಅದರಲ್ಲೂ ರೋಲರ್‌ ಸ್ಕೇಟಿಂಗ್‌ ಎಲ್ಲರಿಗೂ ಅಚ್ಚುಮೆಚ್ಚು. ಮುಸ್ಸೋರಿಯಲ್ಲಿ ಭಾರತದ ಅತಿ ದೊಡ್ಡ ಸ್ಕೇಟಿಂಗ್‌  ರಿಂಕ್‌ ಇದೆ. 2010ರ ಏಷ್ಯನ್‌ ಕ್ರೀಡಾಕೂಟದಲ್ಲಿ  ಅನೂಪ್‌ ಕುಮಾರ್‌ ಮತ್ತು ಅವನಿ ಭರತ್‌ ಕಂಚು ಜಯಿಸಿದ್ದು ಭಾರತದ ಇದುವರೆಗಿನ ದೊಡ್ಡ ಸಾಧನೆ ಎನಿಸಿದೆ. ಸ್ಕೇಟಿಂಗ್‌ನಲ್ಲಿ ಭಾರತ ಎತ್ತರಕ್ಕೇರಬೇಕಾದರೆ ಪರಿಣತರಿಂದ ತರಬೇತಿ ಅಗತ್ಯವಿದೆ. ಆದ್ದರಿಂದ ಮಾಂಟಿಯಾ ಇಲ್ಲಿಗೆ ಬಂದಿರುವುದು ಹೊಸ ಭರವಸೆಗೆ ಕಾರಣವಾಗಿದೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 15 ಪದಕ ಗೆದ್ದ ಸಾಧನೆ ಬಗ್ಗೆ ಹೇಳಿ.
ಮೊದಲ ಬಾರಿಗೆ ಗೆದ್ದ ಪದಕ ಯಾವಾಗಲೂ ನೆನಪಿನಲ್ಲಿ ಉಳಿದಿರುತ್ತದೆ. ಮೊದಲ ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಕನಿಷ್ಠ ನಾಲ್ಕು ಪದಕಗಳನ್ನು ಗೆಲ್ಲಬಹುದು ಎನ್ನುವ ಭರವಸೆಯಿತ್ತು. ಆದರೆ, ಹತ್ತು ಪದಕಗಳು ನನ್ನ ಕೊರಳೇರಿದವು.

ಸ್ಕೇಟರ್‌ ಆದದ್ದು ಹೇಗೆ.
ಮೊದಲು ಆಸಕ್ತಿ ಇದ್ದದ್ದು ಅಥ್ಲೆಟಿಕ್ಸ್‌ನಲ್ಲಿ. ವೇಗವಾಗಿ ಓಡುತ್ತಿದ್ದೆ. ದೇಹವನ್ನು ಸುಲಭವಾಗಿ ಭಾಗಿಸುತ್ತಿದ್ದೆ. ಒಲಿಂಪಿಯನ್‌ಗಳಾದ ಅಮೆರಿಕದ ಸ್ಕಾಟ್‌ ಅಲೆನ್, ರೊನಾಲ್ಡ್‌ ರಾಬರ್ಟ್‌ಸನ್‌,  ವಿಕ್ಟರ್‌ ಪೆಟ್ರೆಂಕೊ, ಫ್ರಾನ್ಸ್‌ನ ಪ್ಯಾಟ್ರಿಕ್‌ ಪೆರಾ ಅವರು ಸ್ಕೇಟಿಂಗ್‌ನಲ್ಲಿ ತೋರುತ್ತಿದ್ದ ಚುರುಕುತನ ನೋಡಿ ಅಚ್ಚರಿಗೆ ಒಳಗಾಗಿದ್ದೆ. ಅವರಿಂದ ಪ್ರಭಾವಿತನಾಗಿ ಸ್ಕೇಟರ್‌ ಆದೆ.

ಭಾರತದಲ್ಲಿ ಸ್ಕೇಟಿಂಗ್ ಬೆಳವಣಿಗೆ ಹೇಗಿದೆ?
ಆರರಿಂದ 14 ವರ್ಷದ ಒಳಗಿನ ಮಕ್ಕಳು ಈ ಕ್ರೀಡೆಯತ್ತ ಹೆಚ್ಚು ಆಕರ್ಷಿತ ರಾಗುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆ ಅಷ್ಟಕಷ್ಟೇ. ಆದರೆ, ತುಂಬಾ ಪ್ರತಿಭಾವಂತ ಸ್ಕೇಟರ್‌ಗಳಿದ್ದಾರೆ. ವಿಶ್ವ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಇನ್‌ಲೈನ್‌ ಸ್ಕೇಟಿಂಗ್‌ನಲ್ಲಿ ಪರಿಣತಿ ಹೊಂದುವುದು ಅಗತ್ಯವಿದೆ. ಡಬಲ್‌ ಫುಷ್‌ ಮತ್ತು ಕ್ರಾಸಿಂಗ್‌ ವಿಭಾಗದಲ್ಲಿ ಹೆಚ್ಚು ಗಮನ ಹರಿಸಬೇಕಿದೆ.

ಈ ಕ್ರೀಡೆ ಆರ್ಥಿಕವಾಗಿ ದುಬಾರಿಯೇ?
ಹೌದು. ಸ್ಕೇಟಿಂಗ್ ಮಾಡುವಾಗ ಬಳಸುವ ರಕ್ಷಣಾ ಪರಿಕರ ಖರೀದಿಗೆ ಹೆಚ್ಚು ವೆಚ್ಚವಾಗುತ್ತದೆ. 

ನಿಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ಯಾವುದು?
ಒಲಿಂಪಿಯನ್‌ ಎನಿಸಿಕೊಳ್ಳಬೇಕು ಎನ್ನುವುದು ಪ್ರತಿ ಕ್ರೀಡಾಪಟುವಿನ ಸಹಜ ಕನಸು. ಆ ಆಸೆ ಈಡೇರಿದ್ದಕ್ಕೆ ಖುಷಿಯಾಗಿದೆ. ಹೋದ ವರ್ಷ ಸೋಚಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಕ್ಷಣ

ಭಾರತದ ಪ್ರವಾಸದ ಬಗ್ಗೆ ಹೇಳಿ?
ಇಲ್ಲಿ ದಿನಗಳು ಹೇಗೆ ಕಳೆಯುತ್ತಿವೆ ಎಂಬುದೇ ತಿಳಿಯುತ್ತಿಲ್ಲ. ಚಿಕ್ಕವರೊಂದಿಗೆ ಬೆರೆತಾಗ ತುಂಬಾ ಖುಷಿಯಾಗುತ್ತದೆ. ಬೆಂಗಳೂರಿನಲ್ಲಿ ಮಕ್ಕಳಿಗೆ ಕೇವಲ ಸ್ಕೇಟಿಂಗ್ ಹೇಳಿಕೊಡಲಿಲ್ಲ. ಕೊಂಚ ತಮಾಷೆ, ತುಂಟತನ, ಹರಟೆ, ಮಕ್ಕಳಿಂದಲೇ ವಿವಿಧ ದೈಹಿಕ ಕಸರತ್ತುಗಳನ್ನು ಮಾಡಿಸುವುದು ಹೀಗೆ ಹಲವು ಕೆಲಸಗಳನ್ನು ಮಾಡಿದೆ.


ಫೇಸ್‌ಬುಕ್‌ನಿಂದ ಬೆಳೆದ ಬಾಂಧವ್ಯ
ಒಲಿಂಪಿಯನ್ ಮಾಂಟಿಯಾ ಭಾರತದೊಂದಿಗೆ ಸಂಪರ್ಕ ಬೆಳೆಸಿದ್ದು ಮತ್ತು ಇಲ್ಲಿ ತರಬೇತಿ ನೀಡಲು ಬಂದ ಕಥೆ ಕುತೂಹಲಕಾರಿಯಾಗಿದೆ. ಇದಕ್ಕೆ ಸೇತುವೆಯಾಗಿದ್ದು ಫೇಸ್‌ಬುಕ್‌.‌

ಏಳು ಸಲ ಅಂತರರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಬಿ.ಜೆ. ವಿಕ್ರಮ್‌ 2004ರಲ್ಲಿ ಇಟಲಿಯಲ್ಲಿ ನಡೆದ ವಿಶ್ವ ಮಟ್ಟದ ಟೂರ್ನಿಯಲ್ಲೂ ಸ್ಪರ್ಧಿಸಿದ್ದರು. ವಿಕ್ರಮ್‌ ಹನ್ನೊಂದು ವರ್ಷಗಳ ಹಿಂದೆ ಮಾಂಟಿಯಾ ಅವರನ್ನು ಭೇಟಿಯಾಗಿದ್ದರು.

ವರ್ಷಗಳು ಉರುಳಿದಂತೆಲ್ಲಾ ಇವರ ಪರಿಚಯ ಸ್ನೇಹವಾಗಿ, ಆತ್ಮೀಯ ಗೆಳೆಯರಾದರು. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಾಗ ಮಾಂಟಿಯಾ ಮತ್ತು ವಿಕ್ರಮ್‌ ಆಗಾಗ್ಗೆ ಭೇಟಿಯಾಗುತ್ತಿದ್ದರು. ಮಾಂಟಿಯಾ ಸ್ಕೇಟಿಂಗ್‌ ಮೋಡಿಯಿಂದ ಪ್ರಭಾವಿತಗೊಂಡಿದ್ದ ಬೆಂಗಳೂರಿನ ಸ್ಕೇಟರ್‌ ಅಮೆರಿಕದಲ್ಲಿ ಮಾಂಟಿಯಾ ಅವರ ಕೋಚ್‌ ಬಳಿ ತರಬೇತಿ ಪಡೆದರು.
ಮಾಂಟಿಯಾ ಕೋಚ್‌ ರೀನೆ ಹೆಲ್ಡ್‌ಬ್ರಾಂಡ್‌ ಅವರೂ ಪರಿಚಯವಾಗಿದ್ದು ಫೇಸ್‌ಬುಕ್ ಮೂಲಕ. ಅವರಿಗೆ ಸಂದೇಶ ಕಳುಹಿಸಿದ ವಿಕ್ರಮ್‌, ‘ನಿಮ್ಮ ಬಳಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸಿದ್ದರು. ಈ ಕೋರಿಕೆಗೆ ಸ್ಪಂದಿಸಿದ್ದ ರೀನೆ ಹೆಲ್ಡ್‌ಬ್ರಾಂಡ್‌ ಮೂರು ತಿಂಗಳು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ತರಬೇತಿ ನೀಡಿದ್ದರು.

ಮಾಂಟಿಯಾ ಮತ್ತು ವಿಕ್ರಮ್‌ ಒಂದೇ ಕೋಚ್‌ ಬಳಿ ತರಬೇತಿ ಪಡೆಯುತ್ತಿದ್ದ ಕಾರಣ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಇದೇ ವೇಳೆ ಭಾರತಕ್ಕೆ ಬರುವಂತೆ ಮಾಂಟಿಯಾ ಅವರನ್ನು ಒತ್ತಾಯಿಸಿದರು. ಆದರೆ, ಹಲವು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣ ಅವರು ಬರಲು ತಡ ಮಾಡಿದರು. ಈಗ ನಾಲ್ಕು ವಾರ ಭಾರತದಲ್ಲಿಯೇ ತಂಗಲಿದ್ದಾರೆ.
‘ಕೆಲ ವರ್ಷಗಳ ಬಿಡುವಿನ ಬಳಿಕ ಮಾಂಟಿಯಾ ಅವರು ಬಂದಿದ್ದಾರೆ.

ಬೆಂಗಳೂರಿನಲ್ಲಿ ಒಂದು ವಾರ ನಮ್ಮೊಂದಿಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರೊಂದಿಗೆ ಕೆಲ ಸಮಯವಾದರೂ ಕಳೆಯಬೇಕು ಎಂಬುದು ಪ್ರತಿ ಸ್ಕೇಟರ್‌ನ ದೊಡ್ಡ ಕನಸಾಗಿರುತ್ತದೆ’ ಎಂದು ವಿಕ್ರಮ್‌ ಸಂತೋಷ ಹಂಚಿಕೊಂಡರು. ವಿಕ್ರಮ್‌ 2007ರಲ್ಲಿ ಭಾರತ ಸ್ಕೇಟಿಂಗ್‌ ತಂಡಕ್ಕೆ ನಾಯಕರಾಗಿದ್ದರು. ಹೋದ ವರ್ಷ ಚೀನಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಂಡಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಜಯಿಸಿದ್ದಾರೆ.

‘ಮಾಂಟಿಯಾ ಅದ್ಭುತ ಪ್ರತಿಭಾನ್ವಿತರು ಎನ್ನುವುದರಲ್ಲಿ ಅನುಮಾನವಿಲ್ಲ. ಅವರನ್ನು ನೋಡಬೇಕೆಂದು ಜಗತ್ತಿನ ಸಾಕಷ್ಟು ಸ್ಕೇಟಿಂಗ್‌ ಪ್ರೇಮಿಗಳು ಕಾಯುತ್ತಿರುತ್ತಾರೆ. ಅವರು ಭಾರತಕ್ಕೆ ಬಂದಿದ್ದು ನಮ್ಮೆಲ್ಲರ ಅದೃಷ್ಟ. ಒಟ್ಟು ನಾಲ್ಕು ಕಡೆ ಒಂದು ತಿಂಗಳು ಪ್ರವಾಸ ಮಾಡಲಿದ್ದಾರೆ. ಸ್ಕೇಟಿಂಗ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಯುವಕರು ಕಾಯುತ್ತಿದ್ದಾರೆ. ಅವರಿಗೆ ಮಾಂಟಿಯಾ ಸ್ಫೂರ್ತಿಯಾಗಬಲ್ಲರು’ ಎಂದು ವಿಕ್ರಮ್‌ ಹೇಳುತ್ತಾರೆ. ಮಾಂಟಿಯಾ ಉದ್ಯಾನನಗರಿಗೆ ಬಂದಾಗ ಅವರ ವಾಸ್ತವ್ಯ ಮತ್ತು ನಿರ್ವಹಣೆಯನ್ನು ವಿಕ್ರಮ್‌ ನೋಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT