ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್‌: ಸೆಮಿಗೆ ಜೋಷ್ನಾಲಗ್ಗೆ

ದೀಪಿಕಾಗೆ ನಿರಾಸೆ
Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಹಾಂಕಾಂಗ್‌ (ಪಿಟಿಐ): ಅಪೂರ್ವ ಆಟ ಆಡಿದ ಭಾರತದ ಜೋಷ್ನಾ ಚಿಣ್ಣಪ್ಪ ಅವರು ಇಲ್ಲಿ ನಡೆಯುತ್ತಿರುವ ಪಿಎಸ್‌ಎ ಎಚ್‌ಕೆಎಫ್‌ಸಿ  ಅಂತರರಾಷ್ಟ್ರೀಯ ಸ್ಕ್ವಾಷ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಭಾರತದ ಮತ್ತೊಬ್ಬ ಸ್ಪರ್ಧಿ ದೀಪಿಕಾ ಪಳ್ಳಿಕಲ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎಂಟರ ಘಟ್ಟದ ಹೋರಾಟದಲ್ಲಿ ಜೋಷ್ನಾ  15–13, 11–6, 6–11, 9–11, 11–4ರಲ್ಲಿ  ಆಸ್ಟ್ರೇಲಿಯಾದ ರಚೆಲ್‌ ಗ್ರಿನ್‌ಹ್ಯಾಮ್‌ ಅವರನ್ನು ಪರಾಭವಗೊಳಿಸಿದರು.

ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸಿಕ್ಕ ಗೆಲುವುಗಳಿಂದ ವಿಶ್ವಾಸದ ಗಣಿ ಎನಿಸಿದ್ದ ಜೋಷ್ನಾ ಕ್ವಾರ್ಟರ್ ಫೈನಲ್‌ ಹೋರಾಟದಲ್ಲಿಯೂ ಶ್ರೇಷ್ಠ ಸಾಮರ್ಥ್ಯ ತೋರಿದರು.

ಭಾರತದ ಆಟಗಾರ್ತಿ ಮೊದಲ ಗೇಮ್‌ನಲ್ಲಿ  ಚುರುಕಿನ ರಿಟರ್ನ್‌ ಮತ್ತು ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಜಯ ಒಲಿಸಿಕೊಂಡರು.
ಎರಡನೇ ಗೇಮ್‌ನಲ್ಲಿಯೂ ಜೋಷ್ನಾ ಆಟ ಕಳೆಗಟ್ಟಿತು. ಪಾದರಸ ದಂತಹ ಚಲನೆಯ ಮೂಲಕ ಅಂಗಳ ದಲ್ಲಿ ಮಿಂಚು ಹರಿಸಿದ ಅವರು ನಿರಂ ತರವಾಗಿ ಪಾಯಿಂಟ್‌ ಬೇಟೆಯಾಡಿ  ಗೇಮ್‌ ತಮ್ಮದಾಗಿಸಿಕೊಂಡರು.

ಜೋಷ್ನಾ 2–0ರ ಮುನ್ನಡೆ ಗಳಿಸಿದ್ದರಿಂದ ಭಾರತದ ಆಟಗಾರ್ತಿ ನಿರಾಯಾಸವಾಗಿ ಪಂದ್ಯ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು.
ಆದರೆ  ಗ್ರೀನ್‌ಹ್ಯಾಮ್‌ ಈ ಊಹೆ ಯನ್ನು ತಲೆಕೆಳಗಾಗಿಸಿದರು. ಮೂರು ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಗುಣ ಮಟ್ಟದ ಆಟ ಆಡಿದ ಅವರು 2–2ರಲ್ಲಿ ಸಮಬಲ ಮಾಡಿಕೊಂಡರು.

ಹೀಗಾಗಿ ಐದನೇ ಮತ್ತು ನಿರ್ಣಾ ಯಕ ಗೇಮ್‌ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಗೇಮ್‌ನ ಆರಂಭದಿಂದಲೇ ಎಚ್ಚರಿಕೆಯ ಆಟ ಆಡಿದ ನಾಲ್ಕನೇ ಶ್ರೇಯಾಂಕಿತೆ ಜೋಷ್ನಾ, ಎದುರಾಳಿಗೆ ಯಾವ ಹಂತದಲ್ಲಿಯೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ಜೋಷ್ನಾ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಆಕರ್ಷಕ ರಿಟರ್ನ್‌ ಮತ್ತು ಡ್ರಾಪ್‌ಗಳಿಗೆ ನಿರುತ್ತರರಾದ ಆಸ್ಟ್ರೇಲಿಯಾದ ಆಟಗಾರ್ತಿ ಸುಲಭವಾಗಿ ಸೋಲೊಪ್ಪಿಕೊಂಡರು.

ಶುಕ್ರವಾರ ನಡೆಯುವ  ಸೆಮಿಫೈನಲ್‌ ಹೋರಾಟದಲ್ಲಿ ಜೋಷ್ನಾ, ಹಾಂಕಾಂಗ್‌ನ ಅನ್ನೀ ಅವು ಎದುರು ಆಡಲಿದ್ದಾರೆ.

ಮುಗ್ಗರಿಸಿದ ದೀಪಿಕಾ: ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ದೀಪಿಕಾ ಪಳ್ಳಿಕಲ್‌ ಅವರು ಕ್ವಾರ್ಟರ್ ಫೈನಲ್‌ನಲ್ಲಿಯೇ ಮುಗ್ಗರಿಸಿದರು.

ದೀಪಿಕಾ 8–11, 6–11, 8–11ರಲ್ಲಿ ನ್ಯೂಜಿಲೆಂಡ್‌ನ ಜೊಯೆಲ್ಲೆ ವಿರುದ್ಧ ಮಣಿದರು. ಭಾರತದ ಆಟಗಾರ್ತಿ ಈ ಪಂದ್ಯದಲ್ಲಿ ನೀರಸ ಆಟ ಆಡಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT