ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಮಾಟಿಸ್ ಸೂತ್ರ

ಅಂತರಂಗದ ಶೋಧಕ್ಕೆ
Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ರಂಗಭೂಮಿ, ನೃತ್ಯ, ಸಂಗೀತ ಹೀಗೆ ಎಲ್ಲಾ ಪ್ರಕಾರಗಳ ಕಲಾ ಅಭಿವ್ಯಕ್ತಿಗೆ ಸೂಕ್ಷ್ಮ ಸಂವೇದನೆ ಅಗತ್ಯ. ಅಭಿನಯದಲ್ಲಿ ಭಾವಾಭಿವ್ಯಕ್ತಿಗೆ ಸುತ್ತಲಿನ ಪರಿಸರ ಮತ್ತು  ಜೊತೆಗಾರರೊಂದಿಗಿನ ಸಂವಹನ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ನಗರದ ಶೂನ್ಯ ಸೆಂಟರ್‌ನಲ್ಲಿ ಇತ್ತೀಚೆಗೆ ಕಮ್ಯುನಿಕೇಟಿವ್ ಕಾರ್ಯಗಾರ ನಡೆಯಿತು. ‘ಕಾಸ್ಮೋಸ್’ ಎಂಬ ವಿಶೇಷ ವಿಷಯದ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟಿದ್ದು ಗ್ರೀಸ್ ಮೂಲದ ಸ್ಟಮಾಟಿಸ್ ಎಫ್ಸಾತಾಥಿಯೊ. ಇದೇ ಮೊದಲ ಬಾರಿಗೆ ಭಾರತದಲ್ಲಿ ಸ್ಟಮಾಟಿಸ್ ಅವರ ಉಪನ್ಯಾಸ ಆಯೋಜನೆ ಆಗಿತ್ತು. ಇವರು ಗ್ರೀಸ್, ರಷ್ಯಾ, ದಕ್ಷಿಣ ಸೈಬೀರಿಯಾ, ಇರಾನ್ ಪ್ರಾಂತ್ಯದ ಕುರ್ದಿಸ್ತಾನದಲ್ಲೂ ಹಲವು ಕಾರ್ಯಗಾರಗಳನ್ನು ನಡೆಸಿದ್ದಾರೆ.

ಕಾಸ್ಮೋಸ್ ಯೋಜನೆ : ಸರಳವಾಗಿ ಹೇಳುವುದಾದರೆ ‘ಸಂಪರ್ಕ ಸಾಧಿಸುವುದು’ ಈ ಯೋಜನೆಯ ಉದ್ದೇಶ. ನಾಟಕ, ಮಾನವಶಾಸ್ತ್ರ, ಆಧ್ಯಾತ್ಮಿಕ ಚೌಕಟ್ಟಿನಲ್ಲಿ ಮಾನವ ಬಂಧಗಳ ಸಂಪರ್ಕ, ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುವ ಆಯಾಮವೇ ಕಾಸ್ಮೋಸ್ ಕಾರ್ಯಾಗಾರ.  ಪರಿಸರ ಮತ್ತು ಮಾನವನ ನಡುವಿನ ಅಂತರಸಂಪರ್ಕಗಳನ್ನು ಅನ್ವೇಷಿಸುವ ಗುರಿಯನ್ನು ಕಾರ್ಯಗಾರ ಹೊಂದಿತ್ತು. ನಿರ್ದೇಶಕ ಸ್ಟಮಾಟಿಸ್ ಈ ವಿಚಾರವಾಗಿ ವಿವಿಧ ಮೌಖಿಕ ಮತ್ತು ಪ್ರಯೋಗಿಕ ತರಗತಿಗಳನ್ನು ನಡೆಸಿದರು. ರಂಗಭೂಮಿ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನ, ಖಾಲಿ ವಾತಾವರಣದ ಸೂಕ್ಷ್ಮ ಗ್ರಹಿಕೆ, ಶೂನ್ಯದೊಂದಿಗೆ ಮಾನವ ಸಂಪರ್ಕ, ಆಧ್ಯಾತ್ಮಿಕ ಸಾಧ್ಯತೆ ಮತ್ತು ‘ತೆರೆದುಕೊಳ್ಳುವಿಕೆ’ ಕ್ರಿಯೆ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಾಗಾರದ ಮೊದಲ ಎರಡು ಹಂತಗಳಲ್ಲಿ ತಮ್ಮ ಒಳಗನ್ನು ಹುಡುಕಲು, ಅಂತರಾಳವನ್ನು  ವೀಕ್ಷಿಸಲು ಸಹಾಯವಾಗುವಂಥ ವ್ಯಾಯಾಮವನ್ನು ಸ್ಟಮಾಟಿಸ್ ವಿದ್ಯಾರ್ಥಿಗಳಿಗೆ ಮಾಡಿಸಿದರು. ‘ನನಗೆ ಭಾರತೀಯ ಸ್ಥಳೀಯ ಆಚರಣೆ,  ಸಂಪ್ರದಾಯಗಳಲ್ಲಿನ ಮಾನವ ಬದುಕು ಮತ್ತು ಸಂಬಂಧ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಬಗೆ ಒಂದು ವಿಶಿಷ್ಟ ಅನುಭವವನ್ನು ನೀಡಿದೆ, ಇಲ್ಲಿನ ದೈವಿಕ ಪರಿಕಲ್ಪನೆ ವಿಭಿನ್ನ  ಬಗೆಯದು. ಆಧ್ಯಾತ್ಮಿಕವಾಗಿಯೂ ಹಲವು ಸಾಧನೆಯ ಹೆಬ್ಬಾಗಿಲು ಭಾರತ’ ಎನ್ನುತ್ತಾರೆ ಸ್ಟಮಾಟಿಸ್.

‘ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದಕ್ಷಿಣ ಭಾರತ ಕುತೂಹಲಕಾರಿಯಾದ ಪ್ರದೇಶ. ಇಲ್ಲಿನ ಕಲಾ ಪರಂಪರೆ ಬಹಳ ಶಕ್ತಿಯುತವಾಗಿದೆ. ಸಂಪ್ರದಾಯ ಕಲೆಗಳನ್ನು  ಕ್ರಿಯಾತ್ಮಕ ಮತ್ತು ಪ್ರಯೋಗಶೀಲತೆಯಿಂದ ದುಡಿಸಿಕೊಳ್ಳುವಂಥ ಹೊಸ ಆವಿಷ್ಕಾರವನ್ನು  ಇಲ್ಲಿನ ಕಲಾವಿದರು ಮಾಡುತ್ತಿದ್ದಾರೆ’ ಎನ್ನುವ ಅಭಿಪ್ರಾಯ ಸ್ಟಮಾಟಿಸ್‌ ಅವರದ್ದು. ಮೂರನೇ ಮತ್ತು ಕೊನೆಯ ಹಂತದಲ್ಲಿ ‘ಸಂಪರ್ಕ’ ಸಾಧಿಸುವ ಒಂದು ಮುಕ್ತ ಕಾರ್ಯಾಗಾರ ನಡೆಯುತ್ತದೆ. ಸ್ಟಮಾಟಿಸ್ ಪ್ರಕಾರ ರಂಗಭೂಮಿಯ ಚಟುವಟಿಕೆಯಲ್ಲಿ ‘ಸಂಪರ್ಕ’ ಸಾಧಿಸುವುದು ಎಂದರೆ, ನಮ್ಮ ಒಳಗಿನ ಹೊರಗಿನ ಖಾಲಿತನವನ್ನು ತಲುಪುವುದು ಮತ್ತು ಅರ್ಥಮಾಡಿಕೊಳ್ಳುವುದು.

ಮನಸ್ಸಿನ ಶಕ್ತಿಕೇಂದ್ರ ಅಂದರೆ ಆತ್ಮವಿಶ್ವಾಸವನ್ನು ತಲುಪುವ  ಸೇತುವೆಗಳನ್ನು ನಮ್ಮಲ್ಲೇ ನಿರ್ಮಿಸಿಕೊಳ್ಳುವುದು, ಉದ್ವೇಗ ಕ್ರಿಯೆಯನ್ನು ಸಂಭಾಳಿಸುವುದು, ಗುಪ್ತ ಸ್ವರೂಪವನ್ನು ಮುಕ್ತವಾಗಿ ತೋರ್ಪಡಿಸುವುದನ್ನು ಈ ಹಂತದಲ್ಲಿ ಹೇಳಿಕೊಡಲಾಗುತ್ತದೆ. ದೈನಂದಿನ ವರ್ತನೆಯಲ್ಲಿ ವ್ಯಕ್ತಿಯ  ಕೆಲಸದ ಚೌಕಟ್ಟು, ಭಾವನೆಗಳ ಸಹಭಾಗಿತ್ವವನ್ನು ಸ್ಟಮಾಟಿಸ್ ಅರ್ಥಮಾಡಿಸುತ್ತಾರೆ. ವ್ಯಕ್ತಿಯೊಬ್ಬ ತನ್ನ ಒಳಗಿನ ಸಂಪರ್ಕ ಕೊಂಡಿಯನ್ನು ಮತ್ತು ಅದರ ಸ್ವರೂಪವನ್ನು ತಿಳಿದಾಗ ಮತ್ತು ತನ್ನನ್ನು ತಾನೇ ಅರ್ಥ ಮಾಡಿಕೊಂಡಾಗ ಇತರರನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಇಂತಹ ವಿಚಾರಗಳಲ್ಲಿ ಪರಿಸರ ಕೂಡ ನಮ್ಮೊಂದಿಗೆ ಪ್ರತಿಕ್ರಿಯಿಸುತ್ತಿರುತ್ತದೆ. ಅದನ್ನು ತಿಳಿದುಕೊಳ್ಳುವ ಬಗೆಯನ್ನು ಬಿಡಿಸಿ ಹೇಳಿಕೊಡುತ್ತಾರೆ.

ಸುತ್ತುವರಿದಿರುವ ಬ್ರಹ್ಮಾಂಡ, ಜೊತೆಗೆ ಸಮಯ ಮತ್ತು ಸ್ಥಳ ಮನುಷ್ಯನ ಮೇಲೆ ಹೇಗೆ ಪ್ರಭಾವ ಬೀರುತ್ತದೆ, ಆ ಸ್ವರೂಪವನ್ನು ಹೇಗೆ ಕಲಾ ಅಭಿವ್ಯಕ್ತಿಗೆ ಬಳಸಿಕೊಳ್ಳಬಹುದು ಎನ್ನುವುದು ಮುಖ್ಯವಾಗುತ್ತದೆಯಂತೆ. ದೇಹದಲ್ಲಿ ಶಕ್ತಿಯನ್ನು ಕ್ರೋಢೀಕರಿಸುವುದು, ಅದನ್ನು ಅವಶ್ಯಕತೆ ಇರುವ ಒಂದು ಕ್ರಿಯೆಗೆ ಬಳಸುವುದು, ಹಾಡುವಾಗ ಧ್ವನಿಗೆ, ನೃತ್ಯಕ್ಕೆ, ಅಭಿನಯಕ್ಕೆ, ಹೀಗೆ ವಿಂಗಡಿಸಿ ಶಕ್ತಿಯನ್ನು ಬಳಸಿಕೊಳ್ಳುವುದು ಮತ್ತು ಹೀಗೆ ವಿಭಾಗಿಸಿ ನಮ್ಮ ಕೆಲಸವನ್ನು ಮಾಡುವುದರಿಂದ ದೇಹ ಶಕ್ತಿಯನ್ನು ಉಳಿತಾಯ ಮಾಡಬಹುದು. ಇಂತಹ ಹಲವು ವಿಭಿನ್ನ ಬಗೆಯ ರಂಗ ತರಬೇತಿಯನ್ನು ಆವಿಷ್ಕರಿಸಿರುವ ಸ್ಟಮಾಟಿಸ್ ಎಫ್ಸಾತಾಥಿಯೊ, ಗ್ರೀಸ್‌ನಲ್ಲಿ ತಮ್ಮದೇ ಶಾಲೆಯನ್ನು ತೆರೆದಿದ್ದಾರೆ, ಹಾಗೆಯೇ ವಿಶ್ವದಾದ್ಯಂತ ತರಗತಿಗಳನ್ನು ನಡೆಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT