ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ ಕ್ಯಾನ್ಸರ್‌ ಹರಡದಂತೆ ತಡೆಗೆ ಸೂತ್ರ

ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಸಾಧನೆ
Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಹದ ಇತರ ಭಾಗಗಳಿಗೆ ಸ್ತನ ಕ್ಯಾನ್ಸರ್‌ ಹರಡುವುದನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಸೂತ್ರ­ವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಕಂಡುಹಿಡಿ­ದಿದ್ದಾರೆ.

‘ಸ್ತನ ಕ್ಯಾನ್ಸರ್‌ ಕೋಶಗಳಿಂದ ಇತರೆ ಜೀವಕೋಶ­ಗಳನ್ನು ಬೇರ್ಪಡಿಸಬೇಕು. ಅದಕ್ಕಾಗಿ ಎಎಂಪಿಕೆ ಕಿಣ್ವ ಹಾಗೂ ಪಿಇಎ 15 ಪ್ರೋಟಿನ್‌ ರಾಸಾಯ­ನಿಕ ಕ್ರಿಯೆ ಮೂಲಕ ಸ್ತನ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಇದರಿಂದ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್‌ ಹರಡುವುದನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ ಸಂಸ್ಥೆಯ ಸಂಶೋಧಕಿ ಹಾಗೂ ಆಣ್ವಿಕ ಸಂತಾನೋತ್ಪತ್ತಿ, ಅಭಿವೃದ್ಧಿ ಮತ್ತು ತಳಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣಿ ರಂಗರಾಜನ್‌.

‘ವಿಶ್ವದೆಲ್ಲೆಡೆ ಮಹಿಳೆಯರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಸ್ತನ ಕ್ಯಾನ್ಸರ್‌. ಈ ಸಮಸ್ಯೆಯನ್ನು ನಿಯಂತ್ರಿಸಲು ಹೆಚ್ಚು ಪರಿಣಾಮಕಾರಿ­ಯಾದ ಚಿಕಿತ್ಸೆ ಅಗತ್ಯವಿದೆ. ಈ ರೋಗಕ್ಕೆ ನಿಶ್ಚಿತ ಚಿಕಿತ್ಸೆ ಇಲ್ಲ. ಸದ್ಯ ನೀಡಲಾಗುತ್ತಿರುವ ಚಿಕಿತ್ಸೆ ದುಬಾರಿ­ಯಾಗಿದೆ’ ಎಂದು ಅವರು ಹೇಳುತ್ತಾರೆ.

ದೇಹದಲ್ಲಿನ ಎಲ್ಲಾ ಜೀವಕೋಶ­ಗಳು ಹಲವಾರು ಪ್ರೋಟಿನ್‌ಗಳಿಂದ ರಚಿಸಲಾಗಿರುವ ಮ್ಯಾಟ್ರಿಕ್ಸ್‌ಗಳಿಗೆ ಅಂಟಿಕೊಂಡಿರುತ್ತವೆ. ಜೀವಕೋಶಗಳಿಗೆ ಪೋಷ­ಕಾಂಶ ಹಾಗೂ ಉತ್ತೇಜನವನ್ನು ನೀಡಿ ಪೋಷಿಸುವ ಕಾರ್ಯವನ್ನು ಮೆಟ್ರಿಕ್ಸ್‌ ಮಾಡುತ್ತವೆ. ಅಲ್ಲದೇ, ಜೀವಕೋಶಗಳ ಬೆಳವಣಿಗೆ ಹಾಗೂ ಅವುಗಳ ಉಳಿವಿಗೂ ಇವು ಕಾರಣವಾಗಿವೆ. ಮ್ಯಾಟ್ರಿಕ್ಸ್‌ನಿಂದ ಕಳಚಿಕೊಳ್ಳುವ ಜೀವಕೋಶಗಳು ಸತ್ತು ಹೋಗುತ್ತವೆ.

ಆದಾಗ್ಯೂ, ಸ್ತನ ಕ್ಯಾನ್ಸರ್‌ನ ಜೀವಕೋಶಗಳು  ಮ್ಯಾಟ್ರಿಕ್ಸ್‌ನಿಂದ ಕಳಚಿಕೊಂಡರೂ ಜೀವಂತ­ವಾಗಿರುತ್ತವೆ. ಆಗ ಆ ಕ್ಯಾನ್ಸರ್‌್ ಕೋಶಗಳು ಮತ್ತಷ್ಟು ಬೆಳೆದು ದೇಹದ ಇತರ ಭಾಗಗಳಿಗೆ ಹರಡುತ್ತವೆ. 

ಅಷ್ಟೇ ಅಲ್ಲ, ಕೆಲ ಸಂಶೋಧನೆಗಳ ಪ್ರಕಾರ ಕಡಿಮೆ ಸಂಖ್ಯೆಯಲ್ಲಿರುವ ಸಾಮಾನ್ಯ ಜೀವಕೋಶಗಳು ಮ್ಯಾಟ್ರಿಕ್ಸ್‌ನಿಂದ ಬೇರ್ಪಟ್ಟ ಮೇಲೂ ಜೀವಂತ­ವಾಗಿರುತ್ತವೆ. ಇಂಥ ಜೀವಕೋಶಗಳು ಸದಾ ಸಕ್ರಿಯ­ವಾಗಿರುತ್ತವೆ. ಕ್ಯಾನ್ಸರ್‌ ಕೋಶಗಳು ಈ ಅಂಶಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತವೆ ಎಂಬುದು ಅವರ ವ್ಯಾಖ್ಯಾನ.

ಸ್ತನ ಕ್ಯಾನ್ಸರ್‌ ಚಿಕಿತ್ಸೆಗೆ ಐಐಎಸ್ಸಿ ಸಂಶೋಧಕರು ಕಂಡುಹಿಡಿದಿರುವ ಪ್ರೋಟಿನ್‌ ಕ್ರಿಯೆಯ ಸೂತ್ರವು ‘ಸ್ತನ ಕ್ಯಾನ್ಸರ್‌ ಸಂಶೋಧನೆ’ಯ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ.

‘ಎಎಂಪಿಕೆ ಪ್ರೋಟಿನ್‌ ಕಿಣ್ವವು ಒತ್ತಡದ ಸ್ಥಿತಿಯಲ್ಲಿ ಅಂದರೆ ಪೌಷ್ಟಿಕ ಮಟ್ಟ ಮತ್ತು ಆಮ್ಲಜನಕದ ಮಟ್ಟ ಕಡಿಮೆಯಿದ್ದಂಥ ಸಂದರ್ಭಗಳಲ್ಲಿ ದೇಹದಲ್ಲಿ ಸಕ್ರಿಯ­ವಾಗಿರುತ್ತದೆ. ಈ ಕಿಣ್ವವು ಮ್ಯಾಟ್ರಿಕ್ಸ್‌ನಿಂದ ಬೇರ್ಪಡುವ ಜೀವಕೋಶಗಳಿಗೆ ರಕ್ಷಣೆ ಒದಗಿಸುತ್ತದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ’ ಎನ್ನುತ್ತಾರೆ ಅನ್ನಪೂರ್ಣಿ.

‘ಎಎಂಪಿಕೆ ಕಿಣ್ವವನ್ನು ಗುರಿಯಾಗಿಟ್ಟುಕೊಂಡು ನಾವು ಕಂಡುಕೊಂಡ ಹಾದಿ ಎಂದರೆ ಪಿಇಎ 15 ಎಂಬ ಹೆಸರಿನ ಪ್ರೋಟಿನ್ ನೆರವು ಪಡೆಯುವುದು. ಮೆದುಳು ಹಾಗೂ ಬೆನ್ನುಹುರಿಯ ಜೀವಕೋಶಗಳಲ್ಲಿ ಈ ಪ್ರೋಟಿನ್‌ ಅಡಗಿರುತ್ತದೆ. ಈ ಪ್ರೋಟಿನ್‌ನ ಪ್ರಮುಖ ಕಾರ್ಯವೆಂದರೆ ಕ್ಯಾನ್ಸರ್‌ ಗಡ್ಡೆಗಳು ಬೆಳೆಯದಂತೆ ನೋಡಿಕೊಳ್ಳುವುದು. ಆದರೆ, ಕೆಲ ಪರಿವರ್ತನೆ ಮಾಡಿ ಗಮನಿಸಿದಾಗ ಈ ಪ್ರೋಟಿನ್‌, ಕ್ಯಾನ್ಸರ್‌ ಕೋಶಗಳ ಬೆಳವಣಿಗೆಗೆ ನೆರವಾಗುವಂಥ ವ್ಯತಿರಿಕ್ತ ಚಟು­ವಟಿಕೆಯಲ್ಲೂ ಭಾಗಿಯಾಗುತ್ತದೆ.

ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ­ಯಿಂದ ಪಡೆದ ಸ್ತನ ಕ್ಯಾನ್ಸರ್‌ನ ಕೋಶಗಳನ್ನು ಬಳಸಿ ಈ ಸಂಶೋಧನೆ ನಡೆಸಲಾಗಿದೆ. ಮ್ಯಾಟ್ರಿಕ್ಸ್‌­ನಿಂದ ಬೇರ್ಪಡುವ ಜೀವಕೋಶಗಳು ನಂತರ ಒತ್ತಡಕ್ಕೆ ಒಳಗಾ­ಗುತ್ತವೆ. ಜೀವಕೋಶಗಳು ಒತ್ತಡಕ್ಕೆ ಸಿಲುಕು­ವುದರಿಂದ ಎಎಂಪಿಕೆ ಕಿಣ್ವ ಸಕ್ರಿಯವಾಗುತ್ತದೆ. ಜೊತೆಗೆ ಪಿಇಎ 15 ಪ್ರೋಟಿನ್‌ ವರ್ತನೆಯಲ್ಲೂ ಮಾರ್ಪಾಡಾ­ಗುತ್ತದೆ. ಅಲ್ಲದೇ, ಮ್ಯಾಟ್ರಿಕ್ಸ್‌ನಿಂದ ಬೇರ್ಪಟ್ಟ ಜೀವಕೋಶಗಳಿಗೆ ಸಾವಿನ ಸಂಕೇತ ರವಾನಿಸುವ ಪ್ರೋಟಿನ್‌ಗೆ ಅಂಟಿಕೊಳ್ಳುತ್ತದೆ. ಈ ಮೂಲಕ ಪ್ರೋಟಿನ್‌­ಅನ್ನು  ನಿರ್ಲಿಪ್ತಗೊಳಿಸುತ್ತದೆ. ಮ್ಯಾಟ್ರಿಕ್ಸ್‌­ನಿಂದ ಕಳಚಿಕೊಂಡರೂ ಕ್ಯಾನ್ಸರ್‌ ಜೀವಕೋಶಗಳು ಜೀವಂತ­ವಾಗಿರಲು ಇದೇ ಪ್ರಮುಖ ಕಾರಣ.

ಗ್ಲುಕೋಸ್‌ ಕೊರತೆ ಸೇರಿದಂತೆ ಹಲವು ಒತ್ತಡದ ಸನ್ನಿವೇಶದಲ್ಲಿ ಎಎಂಪಿಕೆ ಕಿಣ್ವವು ದೇಹದಲ್ಲಿ ಸಕ್ರಿಯವಾಗಿರುತ್ತದೆ. ಹಾಗಾಗಿ ಎಎಂಪಿಕೆ ಕಿಣ್ವ ಹಾಗೂ ಪಿಇಎ 15 ಪ್ರೋಟಿನ್‌ನ ರಾಸಾಯನಿಕ ಪ್ರಕ್ರಿಯೆ­ಯಿಂದ ಕ್ಯಾನ್ಸರ್‌ ಕೋಶಗಳ ಬೆಳವಣಿಗೆ ಹೆಚ್ಚಾಗು­ತ್ತದೆ. ಈ ಅಂಶಗಳನ್ನು ಗುರಿಯಾಗಿ­ಟ್ಟು­ಕೊಂಡು ಸ್ತನ ಕ್ಯಾನ್ಸರ್‌ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಇದರಿಂದ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್‌ ಹರಡುವುದನ್ನು ನಿಯಂತ್ರಿಸ­ಬಹುದು ಎಂದು ಸಂಶೋಧಕಿ ಅನ್ನಪೂರ್ಣಿ ರಂಗರಾಜನ್ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT