ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರ ಪ್ರದರ್ಶನವೇ ಸವಾಲು

Last Updated 21 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ಭಾರತದಲ್ಲಿ ಆರಂಭವಾದ ಪ್ರತಿ ಲೀಗ್‌ ಕೂಡ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ಐಪಿಎಲ್‌, ಐಬಿಎಲ್‌, ಐಎಸ್‌ಎಲ್‌ ಹೀಗೆ ಎಲ್ಲಾ ಟೂರ್ನಿಗಳು ಆಟಗಾರರರ ‘ಬೆಲೆ’ಯನ್ನು ಸಾಕಷ್ಟು ಎತ್ತರಕ್ಕೆ ಏರಿಸಿವೆ. ಹಾಕಿ ಲೀಗ್‌ ಕೂಡ ಇದರಿಂದ ಹೊರತಲ್ಲ.

ಆದರೆ ಕಬಡ್ಡಿ ಲೀಗ್‌ ಸಂಭ್ರಮದಲ್ಲಿದ್ದ ಭಾರತದ ಕ್ರೀಡಾ ಪ್ರೇಮಿಗಳಿಗೆ ಹಾಕಿ ಇಂಡಿಯಾ ಲೀಗ್‌ ನಡೆದ ಬಗ್ಗೆ ಹೆಚ್ಚು ಗೊತ್ತೇ ಆಗಲಿಲ್ಲ. ಮುಂಬರುವ ಅಜ್ಲನ್‌ ಷಾ ಕಪ್‌ ಮತ್ತು ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳಲು ಲೀಗ್ ಪ್ರಮುಖ ವೇದಿಕೆಯಾಗಿತ್ತು.

ಈ ಲೀಗ್‌ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಾರ ಪಡೆಯಲಿಲ್ಲ. ಟೂರ್ನಿಯಲ್ಲಿ  ಉತ್ತರ ಭಾರತದ ತಂಡಗಳೇ ಇದ್ದವು. ಒಂದು ದಿನದ  (ಭಾನುವಾರ) ಹಿಂದೆಯಷ್ಟೇ ಮುಗಿದ  ಲೀಗ್‌ ನಾಲ್ಕನೇ ಆವೃತ್ತಿ ಹಲವು ಕಾರಣಗಳಿಂದಾಗಿ ಮಹತ್ವ ಪಡೆದುಕೊಂಡಿತ್ತು.

ಲೀಗ್ ಇದ್ದ ಕಾರಣ ಶಿಲ್ಲಾಂಗ್ ಮತ್ತು ಗುವಾಹಟಿಯಲ್ಲಿ ನಡೆದ 12ನೇ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರು ಪಾಲ್ಗೊಳ್ಳಲಿಲ್ಲ. ಆದ್ದರಿಂದ ಭಾರತ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಸೋಲು ಕಂಡಿತು.  ಇದರಿಂದ ಆತಿಥೇಯ ತಂಡ ಟೀಕೆಗೂ ಗುರಿಯಾಯಿತು.

‘ಕೂಟದಲ್ಲಿ ಪಾಲ್ಗೊಳ್ಳಲು ದ್ವಿತೀಯ ದರ್ಜೆಯ ತಂಡವನ್ನು ಕಳುಹಿಸಿದ ಹಾಕಿ ಇಂಡಿಯಾದ ನಿರ್ಧಾರ ಸರಿಯಲ್ಲ. ಇದೇನಾ ದೇಶ
ಪ್ರೇಮ’ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಯಾದವ್‌ ಚಾಟಿ ಬೀಸಿದ್ದರು.ಈ ವಿವಾದಗಳೆಲ್ಲಾ ಏನೇ ಇರಲಿ. ಲೀಗ್‌ನ ನಾಲ್ಕನೇ ಆವೃತ್ತಿ ಹಾಕಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದ್ದಂತೂ ನಿಜ. ಹಲವಾರು ವಿದೇಶಿ ಆಟಗಾರರು ಪಾಲ್ಗೊಂಡಿ
ದ್ದರಿಂದ ಭಾರತದ ಯುವ ಆಟಗಾರರಿಗೂ  ಅನುಕೂಲವಾಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಕರ್ನಾಟಕದ ವಿ.ಆರ್‌. ರಘುನಾಥ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ   ಮಾತನಾಡಿದ್ದಾರೆ.  ರಘುನಾಥ್‌  ಮೊದಲ ಆವೃತ್ತಿಯಿಂದ ಉತ್ತರ ಪ್ರದೇಶ ವಿಜರ್ಡ್ಸ್ ತಂಡದ ನಾಯಕರಾಗಿದ್ದಾರೆ.

* ಹಿಂದಿನ ಆವೃತ್ತಿಗಳಲ್ಲಿ ಸೆಮಿಫೈನಲ್‌ ತಲುಪಿದ್ದ ನಿಮ್ಮ ತಂಡ ಈ ಬಾರಿ ಲೀಗ್‌ನಿಂದಲೇ ಹೊರಬೀಳಲು ಕಾರಣವೇನು?
ಲೀಗ್‌ ಆರಂಭದ ಪಂದ್ಯದಿಂದಲೂ ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಆದರೆ ಸ್ಥಿರ ಆಟ ಮುಂದುವರಿಸಲು ನಮ್ಮಿಂದ ಆಗಲಿಲ್ಲ. ಆದ್ದರಿಂದ ಲೀಗ್‌ನಿಂದಲೇ ಹೊರಬೀಳಬೇಕಾಯಿತು. 
ಹಿಂದಿನ ಪಂದ್ಯಗಳಲ್ಲಿ ಆದ ತಪ್ಪುಗಳನ್ನು ತಿದ್ದಿಕೊಂಡು ಆಡಲು ಯತ್ನಿಸಿದೆವು. ಮುಂದಿನ ಆವೃತ್ತಿಯಲ್ಲಿ ಇದಕ್ಕಿಂತಲೂ ಗುಣಮಟ್ಟದ ಆಟವಾಡಲು ಒತ್ತು ನೀಡುತ್ತೇವೆ.

* ಯಾವುದಾದರೂ ವಿಭಾಗದ ದೌರ್ಬಲ್ಯ ಈ ನಿರಾಸೆಗೆ ಕಾರಣವೇ?
ಹಾಗೇನು ಖಂಡಿತಾ ಇಲ್ಲ. ಹಾಕಿ ತಂಡ ಕ್ರೀಡೆ. ಡಿಫೆಂಡರ್‌, ಫುಲ್‌ ಬ್ಯಾಕ್‌,  ಡ್ರ್ಯಾಗ್‌ ಫ್ಲಿಕ್ಕರ್‌ ಹೀಗೆ ಪ್ರತಿ ವಿಭಾಗವೂ ಮುಖ್ಯವೇ. ಪ್ರತಿ ಸೋಲು ಹಾಗೂ ಗೆಲುವಿಗೆ ತಂಡದ ಒಟ್ಟು ಪ್ರದರ್ಶನವೇ ಕಾರಣವಾಗಿರುತ್ತದೆ. ಆದ್ದರಿಂದ ಯಾರನ್ನೂ ಟೀಕಿಸುವುದಿಲ್ಲ.

* ಯಾವ ತಂಡಗಳಿಂದ ಕಠಿಣ ಸವಾಲು ಎದುರಾಯಿತು?
ರಾಂಚಿ ರೇಸ್‌, ಪಂಜಾಬ್ ವಾರಿಯರ್ಸ್‌, ಡೆಲ್ಲಿ ವೇವ್‌ರೈಡರ್ಸ್‌, ಕಳಿಂಗ ಲ್ಯಾನ್ಸರ್ಸ್‌, ದಬಾಂಗ್ ಮುಂಬೈ ಇವೆಲ್ಲವೂ ಬಲಿಷ್ಠ ತಂಡಗಳೇ ಆಗಿವೆ. ಆದ್ದರಿಂದ ಪ್ರತಿ ಪಂದ್ಯ ಸವಾಲಿನಿಂದ ಕೂಡಿತ್ತು. ಈ ಕಾರಣಕ್ಕಾಗಿ ಇಂಥದ್ದೇ ಬಲಿಷ್ಠ ತಂಡ ಎಂದು ನಿರ್ಧರಿಸುವುದು ಕಷ್ಟ. ಪಂದ್ಯದ ದಿನ ಚೆನ್ನಾಗಿ ಆಡುವವರಿಗೆ ಮಾತ್ರ ಗೆಲುವು ಲಭಿಸುತ್ತದೆ. ಉದಾಹರಣೆಗೆ ಕಳಿಂಗ ತಂಡವನ್ನೇ ನೋಡಿ. ಮೊದಲ ಮೂರೂ ವರ್ಷ ಲೀಗ್ ಹಂತದಲ್ಲಿಯೇ ಸೋತಿದ್ದ ಕಳಿಂಗ ಈ ಬಾರಿ ನಾಕೌಟ್‌ ತಲುಪಿತು. ಆದ್ದರಿಂದ ಪ್ರತಿ ತಂಡವೂ ಬಲಿಷ್ಠವೇ.

* ಹೊಸ ಲೀಗ್‌ನಿಂದಾಗಿ ಆಟಗಾರರಿಗೆ ಆಗಿರುವ ಪ್ರಯೋಜನವೇನು?
ತುಂಬಾ ಅನುಕೂಲವಾಗಿದೆ. ಭಾರತದಲ್ಲಿ ಸಾಕಷ್ಟು ಲೀಗ್‌ಗಳು ಆರಂಭವಾದಾಗ ಹಾಕಿಗೂ ಒಂದು ಲೀಗ್ ಬೇಕು ಎಂದು ಆಟಗಾರರಿಗೆ ಅನಿಸಿತ್ತು.  ಒಂದು ರಾಷ್ಟ್ರೀಯ ತಂಡದಲ್ಲಿ  ಎಷ್ಟು ಆಟಗಾರರು ತಾನೆ ಆಡಲು ಸಾಧ್ಯ. ಹಾಕಿ ಲೀಗ್‌ನಲ್ಲಾದರೆ ನೂರಾರು ಆಟಗಾರರಿಗೆ ಅವಕಾಶ ಲಭಿಸುತ್ತದೆಯಲ್ಲವೇ

* ಹಾಕಿ ಲೀಗ್ ವೇಳೆಯೇ ಭಾರತದಲ್ಲಿ ದಕ್ಷಿಣ ಏಷ್ಯನ್‌ ಕ್ರೀಡಾಕೂಟ ನಡೆಯಿತು. ರಾಷ್ಟ್ರೀಯ ತಂಡದಲ್ಲಿ ಆಡುವುದು ಬಿಟ್ಟು ಲೀಗ್‌ನಲ್ಲಿ ಆಡಿದ ಆಟಗಾರರ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ  ಅಸಮಾಧಾನ ವ್ಯಕ್ತಪಡಿಸಿದ್ದರಲ್ಲಾ. ಈ ಬಗ್ಗೆ ಹೇಳಿ?
ಇದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ.

* ಫೀಲ್ಡ್‌ ಗೋಲು ನಿಯಮದಲ್ಲಿ ಆದ ಬದಲಾವಣೆ ನಿಮ್ಮ ತಂಡದ ನಿರಾಸೆಗೆ ಕಾರಣವಾಯಿತೆ?
ಈ ನಿಯಮ ಎಲ್ಲಾ ತಂಡಗಳಿಗೂ ಅನ್ವಯವಾಗಿತ್ತಲ್ಲ. ಆದ್ದರಿಂದ ಸಮಸ್ಯೆ ಆಗಲಿಲ್ಲ. ಆದರೆ ಕೊನೆಯ ಲೀಗ್‌ ಪಂದ್ಯದಲ್ಲಿ ದಬಾಂಗ್ ಮುಂಬೈ ಎದುರು ಸೋತ ಕಾರಣ ನಮ್ಮ ಹೋರಾಟ ಅಂತ್ಯ ಕಂಡಿತು. ಮುಂಬೈ ಮಹತ್ವದ ಪಂದ್ಯದಲ್ಲಿ ಮೂರು ಫೀಲ್ಡ್‌ ಗೋಲುಗಳನ್ನು ಬಾರಿಸಿ ಗೆಲುವು ಪಡೆದುಕೊಂಡಿತು. ಹೊಸ ನಿಯಮದಿಂದಾಗಿ ಎಲ್ಲಾ ತಂಡಗಳಿಗೂ ಅನುಕೂಲವೇ ಆಗಿದೆ.

* ಹಾಕಿ ಲೀಗ್ ದಕ್ಷಿಣ ಭಾರತದಲ್ಲಿ  ಹೆಚ್ಚು ಸುದ್ದಿಯಾಗಲಿಲ್ಲವಲ್ಲ...
ಹೌದು. ಈ ಬಗ್ಗೆ ನನಗೂ ಬೇಸರವಿದೆ. ಭುವನೇಶ್ವರ, ಚಂಡೀಗಡ, ಲಖನೌ, ರಾಂಚಿ, ಮುಂಬೈ, ದೆಹಲಿಗಳಲ್ಲಿ ನಡೆದ ಪಂದ್ಯಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಭುವನೇಶ್ವರದಲ್ಲಿ ಪಂದ್ಯ ವೀಕ್ಷಿಸಲು ಜನ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು.
ಆದರೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಾರ ಲಭಿಸಲಿಲ್ಲ. ದಕ್ಷಿಣದ ಒಂದೂ ತಂಡ ಇಲ್ಲದ ಕಾರಣ ಹೀಗಾಗಿರಬಹುದು. ಬೆಂಗಳೂರು ಅಥವಾ ಚೆನ್ನೈನ ತಂಡ ಇದ್ದಿದ್ದರೆ ಹಾಕಿ ಲೀಗ್‌ ಮತ್ತಷ್ಟು ಖ್ಯಾತಿ ಪಡೆಯುತ್ತಿತ್ತು.

* ಒಲಿಂಪಿಕ್ಸ್‌ ಸಿದ್ಧತೆಗೆ ಹಾಕಿ ಲೀಗ್ ಹೇಗೆ ನೆರವಾಯಿತು?
ಹಾಕಿಯಲ್ಲಿ ಬಲಿಷ್ಠ ರಾಷ್ಟ್ರಗಳೆನಿಸಿರುವ ಆಸ್ಟ್ರೇಲಿಯಾ, ಜರ್ಮನಿ, ನೆದರ್ಲೆಂಡ್ಸ್‌, ಮಲೇಷ್ಯಾ, ಸ್ಕಾಟ್ಲೆಂಡ್‌, ಸ್ಪೇನ್‌ ದೇಶಗಳ ಆಟಗಾರರು ಪಾಲ್ಗೊಂಡಿದ್ದರು. ಕೆಲ ವಿದೇಶಿ ಆಟಗಾರರ ಜೊತೆ ಮತ್ತು ಅವರ ಎದುರು ಆಡಲು ಅವಕಾಶ ಲಭಿಸಿತು. ಮುಂದೆ ಅಜ್ಲನ್ ಷಾ ಕಪ್‌ ಸೇರಿದಂತೆ ಹಲವಾರು ಪ್ರಮುಖ ಟೂರ್ನಿಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಒಲಿಂಪಿಕ್ಸ್‌ ಇದೆ. ಆ ಕೂಟಕ್ಕೆ ಸಜ್ಜಾಗಲು ವಿದೇಶಿ ಆಟಗಾರರ ಜೊತೆ ಆಡಿದ ಅನುಭವ ನೆರವಾಗಲಿದೆ.  ಹೊಸ ಕೌಶಲಗಳನ್ನು ಕಲಿಯಲು ಸಾಧ್ಯವಾಯಿತು.

* ಎರಡು ವರ್ಷಗಳ ಮೊದಲೇ ಭಾರತ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. ಈ ಬಾರಿಯಾದರೂ ಪದಕ  ನಿರೀಕ್ಷೆ ಮಾಡಬಹುದೇ?
2014ರಲ್ಲಿ ನಮ್ಮ ತಂಡ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ ಬಳಿಕ ಹಲವಾರು ಟೂರ್ನಿಗಳನ್ನು ಆಡಿದೆ. ಶ್ರೇಷ್ಠ ತಂಡಗಳ ಎದುರು ಗೆಲುವು ಕೂಡ ಪಡೆದಿದೆ. ಪದಕ ಗೆಲ್ಲಬೇಕೆಂಬುದು ಪ್ರತಿಯೊಬ್ಬರ ಆಸೆ.  ಆದರೆ ಸ್ಥಿರ ಪ್ರದರ್ಶನ ಉಳಿಸಿಕೊಳ್ಳುವ ಸವಾಲು ಇದೆ. ಒಲಿಂಪಿಕ್ಸ್‌ಗೆ ಇನ್ನು ಆರು ತಿಂಗಳು ಸಮಯ ಇರುವುದರಿಂದ ಈಗಲೇ ಏನು ಹೇಳುವುದಿಲ್ಲ.

****
ರಘುನಾಥ್‌ ಬಗ್ಗೆ...
ಡ್ರ್ಯಾಗ್‌ ಫ್ಲಿಕ್‌ ಪರಿಣತ ರಘುನಾಥ್‌ ಹಲವಾರು ಅಂತರರಾಷ್ಟ್ರೀಯ ಹಾಕಿ ಟೂರ್ನಿಗಳಲ್ಲಿ ಆಡಿದ್ದಾರೆ.
2005ರಲ್ಲಿ ಪಾಕಿಸ್ತಾನ ವಿರುದ್ಧದ  ಹಾಕಿ ಸರಣಿಗೆ ರಘುನಾಥ್‌ ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿದ್ದರು. 2013ರ ಏಷ್ಯಾಕಪ್‌ನಲ್ಲಿ ಆರು ಗೋಲು ಬಾರಿಸಿ ‘ಟೂರ್ನಿಯ ಶ್ರೇಷ್ಠ ಆಟಗಾರ’ ಗೌರವ ಪಡೆದಿದ್ದರು.

ಭಾರತ ತಂಡ 2014ರ ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಮತ್ತು ಇಂಚೆನ್ ಏಷ್ಯನ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನದ ಪದಕ  ಜಯಿಸಿತ್ತು. 2007ರ ಏಷ್ಯಾಕಪ್‌ನಲ್ಲೂ ಮೊದಲ ಸ್ಥಾನ ಪಡೆದಿತ್ತು. ಆಗ ರಘುನಾಥ್‌ ತಂಡದಲ್ಲಿದ್ದರು.

ಹಾಕಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ಉತ್ತರ ಪ್ರದೇಶ ವಿಜರ್ಡ್ಸ್‌ ತಂಡ ಮೂರನೇ ಸ್ಥಾನ ಪಡೆದಿತ್ತು. ಈ ತಂಡಕ್ಕೆ ರಘುನಾಥ್‌ ನಾಯಕ. ರಾಜ್ಯದ ಆಟಗಾರ 14 ಪಂದ್ಯಗಳಿಂದ 9 ಗೋಲುಗಳನ್ನು ಬಾರಿಸಿದ್ದರು. ಎರಡನೇ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿ ಎಂಟು ಗೋಲು ಕಲೆ ಹಾಕಿದ್ದರು.

ರಘುನಾಥ್‌ 2003ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಸಬ್‌ ಜೂನಿಯರ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ಆಗ ಭಾರತ ಪ್ರಶಸ್ತಿ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT