ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕೋತ್ತರ ಪದವಿ ಪಡೆದ 78ರ ವೃದ್ಧ!

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೈಸೂರು: ‘ನಿವೃತ್ತಿಯ ಬಳಿಕ ಕಾಲ ಹರಣ ಮಾಡಲು ಇಷ್ಟ ಇರಲಿಲ್ಲ. ಸಮಯದ ಸದು­ಪಯೋಗ ಮಾಡಿಕೊ ಳ್ಳಲು ವೃದ್ಧಾಪ್ಯ ನಿಜಕ್ಕೂ ವರ. ಜ್ಞಾನದಾಹ ತಣಿಸಿಕೊಳ್ಳುವ ಏಕಮಾತ್ರ ಉದ್ದೇಶ­ದಿಂದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದೆ. ನಿತ್ಯ 10 ಗಂಟೆ ಅಧ್ಯಯನದಲ್ಲಿ ತೊಡಗಿಕೊಂಡೆ’ ಎನ್ನುವಾಗ 78ರ  ಕೃಷ್ಣಪ್ಪ ಅವರ ಮುಖದಲ್ಲಿ ಮಂದಹಾಸ ಹೊಮ್ಮುತ್ತಿತ್ತು.

ಇಲ್ಲಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸ-­ವದಲ್ಲಿ ಗುರುವಾರ ಪದವಿ ಪಡೆದ 28,007 ವಿದ್ಯಾರ್ಥಿಗಳಲ್ಲಿ ಕೃಷ್ಣಪ್ಪ ಅತ್ಯಂತ ಹಿರಿಯರು. ನಿವೃತ್ತಿಯ ಬಳಿಕವೂ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಅವರ ಜೀವನೋತ್ಸಾಹವನ್ನು ವಿಶ್ವವಿದ್ಯಾಲಯ ಗೌರವಿಸಿತು.

ಕೃಷ್ಣಪ್ಪ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂ­ಕಿನ ಶೆಟ್ಟಿಕೆರೆ ಗ್ರಾಮದವರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂ­ಕಿನ ದಿಂಡಿಗಾ ಇವರ ಕರ್ಮಭೂಮಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1962ರಲ್ಲಿ ಶಿಕ್ಷಕರಾಗಿ ನೇಮಕಗೊಂಡ ಅವರು, ಸತತ 33 ವರ್ಷ ಸೇವೆ ಸಲ್ಲಿಸಿದ್ದಾರೆ. ಪತ್ನಿ ಹುಚ್ಚಮ್ಮ ಕೂಡ ಶಿಕ್ಷಕಿ. 1972ರಲ್ಲಿ ಮೈಸೂರು ವಿಶ್ವವಿ ದ್ಯಾಲಯದಿಂದ ಬಿ.ಎ. ಪದವಿ, 1975ರಲ್ಲಿ ಬಿ.ಇಡಿ ಪದವಿಯನ್ನು ಕೃಷ್ಣಪ್ಪ ಗಳಿಸಿದ್ದಾರೆ.

‘ಮೊದಲಿನಿಂದಲೂ ಸಾಹಿತ್ಯವೆಂದರೆ ಪ್ರೇಮ. ಎಲ್ಲ ಬಗೆಯ ಸಾಹಿತ್ಯವನ್ನು ಓದಿದ್ದೇನೆ. ಭಗವದ್ಗೀತೆ, ಉಪನಿಷತ್ತು­ಗಳ ಮೇಲಿನ ಅಭಿಮಾನ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಲು ಉತ್ತೇಜನ ನೀಡಿತು. ಸಂಸ್ಕೃತದ ಒಳ ಹೊಕ್ಕ ಬಳಿಕ ತತ್ವಶಾಸ್ತ್ರ ಅಧ್ಯಯನ ಮಾಡುವ ತುಡಿತ ಶುರುವಾಗಿದೆ. ಆದರೆ, ಈ ವಿಷಯದಲ್ಲಿ ಕೆಎಸ್‌ಒಯು ಸ್ನಾತಕೋತ್ತರ ಪದವಿ ನೀಡುತ್ತಿಲ್ಲ. ಹೀಗಾಗಿ, ಶೈಕ್ಷಣಿಕ ಅಧ್ಯಯನವನ್ನು ಇಲ್ಲಿಗೆ ಕೊನೆಗೊಳಿಸಲು ತೀರ್ಮಾನಿ­ಸಿದ್ದೇನೆ’ ಎಂದರು.

‘ನಮಗೆ ಮಕ್ಕಳಿಲ್ಲ. ಶಾಲಾ ವಿದ್ಯಾ ರ್ಥಿಗಳನ್ನೇ ಮಕ್ಕಳಂತೆ ಕಂಡಿದ್ದೇವೆ. ಜೀವನಕ್ಕೆ ಹೆಚ್ಚು ಉಳಿತಾಯ ಮಾಡುವ ಅಗತ್ಯವಿಲ್ಲ. ಪತ್ನಿಗೆ ₹18 ಸಾವಿರ, ನನಗೆ ₹20 ಸಾವಿರ ನಿವೃತ್ತಿ ವೇತನ ಬರುತ್ತಿದೆ. ಒಬ್ಬರ ಸಂಬಳ ಸಂಸಾರಕ್ಕೆ ಸಾಕಾಗು­ತ್ತದೆ. ಮತ್ತೊಬ್ಬರ ವೇತನವನ್ನು ಸಾಮಾಜಿಕ ಕಾರ್ಯಗಳಿಗೆ ತೊಡಗಿ­ಸುತ್ತೇವೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಡಿಪಾಗಿಟ್ಟಿದ್ದೇವೆ. ವೇದಾಂತ, ಭಗವದ್ಗೀತೆ, ಉಪನಿಷತ್ತು, ರಾಮಕೃಷ್ಣ ಪರಮಹಂಸ ಸೇರಿದಂತೆ ವಿವಿಧ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ನೀಡುತ್ತೇವೆ. ತುರುವೇಕೆರೆಯಲ್ಲಿ ವಾಸಕ್ಕಾಗಿ ಒಂದು ಸಣ್ಣ ಮನೆ ಕಟ್ಟಿಕೊ­ಳ್ಳುತ್ತಿದ್ದೇವೆ’ ಎನ್ನುತ್ತಾರೆ ಕೃಷ್ಣಪ್ಪ.

ಪಿಎಚ್‌.ಡಿ ಪಡೆದ ವೃದ್ಧ
ಬೆಳಗಾವಿಯ ಶಿವಬಸವಯ್ಯ ಸಿ. ಹಿರೇಮಠ ಪಿ.ಎಚ್‌ಡಿ ಪಡೆದ ಹಿರಿಯ ಸಂಶೋಧನಾ ವಿದ್ಯಾರ್ಥಿ. ಹಿಂದಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು, ಸಾಂಸ್ಕೃತಿಕ ನಗರಿಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಬಯಕೆಯನ್ನು ನಿವೃತ್ತಿಯ ಬಳಿಕ ಈಡೇರಿಸಿ ಕೊಂಡಿದ್ದಾರೆ.
‘ಲಖನೌ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಪಿ.ಎಚ್‌ಡಿ ಪಡೆದಿ ದ್ದೇನೆ. ಆದರೆ, ಮೈಸೂರಿನಲ್ಲಿ ಅಧ್ಯ ಯನ ಮಾಡಬೇಕು ಎಂಬ ಕಾರಣ ಕ್ಕಾಗಿ ಕೆಎಸ್‌ಒಯುನಲ್ಲಿ ಸಂಶೋ ಧನೆಗೆ ಪ್ರವೇಶ ಗಿಟ್ಟಿಸಿಕೊಂಡೆ.

‘ವಿಶ್ವನಾಥ ತಿವಾರಿ ಕಾವ್ಯದಲ್ಲಿ ಸಾಮಾಜಿಕ ಅಭಿವ್ಯಕ್ತಿ’ ಕುರಿತು ಮಂಡಿಸಿದ ಮಹಾ­ಪ್ರಬಂಧಕ್ಕೆ ವಿಶ್ವವಿ ದ್ಯಾಲಯ ಪಿಎಚ್‌.ಡಿ ಪದವಿ ನೀಡಿದೆ. ಅಧ್ಯಯನದಲ್ಲಿ ನಿರಂತರ ವಾಗಿ ತೊಡಗಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪ್ರಾಧ್ಯಾಪಕನಾಗಿದ್ದಾಗಲೇ ಕಾನೂನು ವಿಷಯದಲ್ಲಿ ಪದವಿ ಹಾಗೂ ಎಂ.ಫಿಲ್‌ ಪಡೆದಿದ್ದೇನೆ’ ಎಂದು 61ರ ಹರೆಯದ ಶಿವಬಸವಯ್ಯ ಅಭಿಪ್ರಾಯ ಹಂಚಿ ಕೊಂಡರು.

ವೈದೇಹಿ, ಸೂರಪ್ಪಗೆ ಗೌರವ ಡಾಕ್ಟರೇಟ್
ಮೈಸೂರು: ಹಿರಿಯ ಲೇಖಕಿ ವೈದೇಹಿ ಮತ್ತು ಪಂಜಾಬಿನ ರೂಪಾರ್‌ನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ನಿರ್ದೇಶಕ ಪ್ರೊ.ಎಂ.ಕೆ. ಸೂರಪ್ಪ  ಅವರಿಗೆ ಇಲ್ಲಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಗುರುವಾರ ‘ಗೌರವ ಡಾಕ್ಟರೇಟ್’ ಪ್ರದಾನ ಮಾಡ­ಲಾಯಿತು.

ಈ ಬಾರಿಯ ಒಟ್ಟು ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವುದಾಗಿ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಅದರಲ್ಲಿ  ಕನ್ನಡ ಚಲನಚಿತ್ರ ನಿರ್ದೇಶಕ ಎಸ್. ಸಿದ್ದಲಿಂಗಯ್ಯ ಅವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲಿಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆ, ಕಾದಂಬರಿ, ಕವನ, ಮಕ್ಕಳ ನಾಟಕಗಳು, ಅನುವಾದ ಕೃತಿಗಳ ಮೂಲಕ ಚಿರಪರಿಚಿತರಾಗಿರುವ ವೈದೇಹಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ 1970ರಲ್ಲಿ ಬಿ.ಎಸ್ಸಿ ಪದವಿ ಗಳಿಸಿದ್ದ ಪ್ರೊ.ಎಂ.ಕೆ. ಸೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯಿ ರೂಡಾ­ವಾಲಾ ಅವರು ‘ಗೌರವ ಡಾಕ್ಟರೇಟ್’ ನೀಡಿ ಸನ್ಮಾನಿಸಿದರು.

ನಂತರ ಮಾತನಾಡಿದ ವೈದೇಹಿ, ‘ಇದು ನಾ ಕಂಡ ಪ್ರಪಂಚದ ಎಲ್ಲ ಮಹಿಳೆಯರ ಹೋರಾಟಕ್ಕೆ ಸಂದ ಗೌರವ’ ಎಂದರು.
ಗೌರವ ಸ್ವೀಕರಿಸಿದ ಪ್ರೊ.ಎಂ.ಕೆ. ಸೂರಪ್ಪ, ‘ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಬೇಕು. ದೇಶದ ಯಾವುದೋ ಮೂಲೆಯ ಹಳ್ಳಿಯಲ್ಲಿರುವ ಪ್ರತಿಭಾವಂತರಿಗೆ ತಲುಪಬೇಕು. ಬಿಲ್‌ ಗೇಟ್ಸ್‌ ಮತ್ತು ಸ್ಟೀವ್ ಜಾಬ್ಸ್ ಅವರಂತಹ ಪ್ರತಿಭೆಗಳು ನಮ್ಮ ಹಳ್ಳಿಗಾಡಿನಲ್ಲಿವೆ. ಶಿಕ್ಷಣದ ಮೂಲಕ ಅವು ಬೆಳೆಯಬೇಕು’ ಎಂದು ಆಶಿಸಿದರು.

34 ಚಿನ್ನದ ಪದಕ: ಒಟ್ಟು 34 ಚಿನ್ನದ ಪದಕಗಳು ಮತ್ತು 24 ನಗದು ಪ್ರಶಸ್ತಿಗಳನ್ನು 37 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಅದರಲ್ಲಿ 24 ಮಹಿಳಾ ಅಭ್ಯರ್ಥಿಗಳು ಇದ್ದರು. ಸಮಾರಂಭದಲ್ಲಿ ಒಟ್ಟು 18,757 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ­ಗಳನ್ನು ಪ್ರದಾನ ಮಾಡಲಾ­ಯಿತು. 9,231 ಅಭ್ಯರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 5,511 ಮಹಿಳೆಯರು ಸೇರಿದ್ದಾರೆ. 1,371 ಡಿಪ್ಲೊಮಾ ವಿಷಯಗಳಿಗೆ ಪದವಿಗಳನ್ನು ಪ್ರದಾನ ಮಾಡಲಾ­ಗುತ್ತಿದೆ. 11 ವಿವಿಧ ವಿಷಯಗಳಲ್ಲಿ 19 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 7 ಮಹಿಳೆಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT