ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾನದ ಕೋಣೆ ಸಾಮಗ್ರಿ ಆನ್‌ಲೈನ್‌ ಖರೀದಿ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮನೆ ಕಟ್ಟಿ ನೋಡು, ಅಂತ ಹೇಳ್ತಾರಲ್ಲ, ಎಲ್ಲರೂ ನೋಡುವಂತೆ ಕಟ್ಟಬೇಕಾ ಅನ್ನೋದು? ಜಿಜ್ಞಾಸೆಯ ಮಾತು. ಮನೆ ಕಟ್ಟುವುದರಲ್ಲಿಯೇ ಅರ್ಧ ಸುಸ್ತಾದವರು, ಮನೆಯ ಅತ್ಯಗತ್ಯಗಳನ್ನು ಪೂರೈಸುವಲ್ಲಿ ಒಂದು ನಿರಾಸಕ್ತಿಯ ಹಂತಕ್ಕೆ ಬಂದಿರುತ್ತಾರೆ.

ಬಾಳಿಕೆ ಬರುವಂತಹದ್ದು, ಶಾಶ್ವತವಾಗಿರುವಂತಹದ್ದು ಎನ್ನುವ ಎರಡು ಪದಗಳು ಮನದಾಳದಲ್ಲಿ ಬೇರೂರಿರುತ್ತವೆ. ಕನಿಷ್ಠ ಇನ್ನೈದು ವರ್ಷಗಳಾದರೂ ಯಾವುದೇ ಹೊಸ ಖರ್ಚು ಬಾರದಿರಲಿ ಎಂಬ ಒಂದಂಶದ ಕಾಳಜಿ ಮನಸಿನಲ್ಲಿರುತ್ತದೆ.

ಆದರೆ, ಈ ಆಶಯದ ಎಳೆಯ ಲಾಭವನ್ನು ಪಡೆದುಕೊಳ್ಳುವವರು ಪ್ಲಂಬರ್‌ ಮತ್ತು ಎಲೆಕ್ಟ್ರಿಷಿಯನ್‌ಗಳು. ಮನೆಯ ನಲ್ಲಿ ಮತ್ತು ಎಲೆಕ್ಟ್ರಿಕ್‌ ಸ್ವಿಚ್‌ಗಳ ಅಳವಡಿಕೆಯಲ್ಲಿ ಸ್ವಲ್ಪ ಮೈಮರೆತರೂ ಹಣ ಸೋರಿಕೆಯಾಗುವುದು ಖಂಡಿತ.

ಈ ನಿಟ್ಟಿನಲ್ಲಿ ಹಣ ನೀರಿನಂತೆ ಸೋರುವುದೇ ಬಾತ್‌ರೂಮಿಗೆ ಬೇಕಾಗುವ ಪರಿಕರಗಳಲ್ಲಿ. ನಲ್ಲಿ ಖರೀದಿಗೆ ಹಣ ಖರ್ಚಾದರೂ ಚಿಂತೆ ಇಲ್ಲ, ಸಮಯ ಖರ್ಚಾಗಬಾರದು ಎನ್ನುವ ಮನಸ್ಥಿತಿ ಸಾಮಾನ್ಯವಾಗಿರುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ಜಾಗೃತರಾದರೆ ಉತ್ತಮ ಗುಣಮಟ್ಟ ಮತ್ತು ಉತ್ತಮ ಬೆಲೆಗೆ, ಮನೆಗೆ ಅಗತ್ಯವಿರುವಂತಹ ಪರಿಕರಗಳನ್ನು ಖರೀದಿಸಬಹುದು.

ಆನ್‌ಲೈನ್‌ ಮಾರ್ಕೆಟಿಂಗ್‌ ಈ ನಿಟ್ಟಿನಲ್ಲಿ ಸಹಾಯಕವೆನಿಸಬಹುದು. ಅಂಗಡಿಯಲ್ಲಿ ನೋಡಿ, ಆನ್‌ಲೈನ್‌ನಲ್ಲಿ ಖರೀದಿಸಿ ಎನ್ನುವುದು ‘ಹಾರ್ಡ್‌ವೇರ್‌ ಡಾಟ್‌.ಕಾಂ’ನವರ ಪ್ರಚಾರದ ಸಾಲು. ಬ್ರ್ಯಾಂಡೆಡ್‌ ಉತ್ಪನ್ನಗಳ ಖರೀದಿ ಮಾಡುವುದಾದರೆ ಆನ್‌ಲೈನ್‌ ಖರೀದಿ ಅತ್ಯುತ್ತಮ ಆಯ್ಕೆ ಆಗಬಲ್ಲದು. ಒಂದು ವಾರದಿಂದ ಒಂದು ತಿಂಗಳ ಅವಧಿಯವರೆಗೆ ಹಿಂದಿರುಗಿಸುವ ಅನುಕೂಲವನ್ನೂ ಕೆಲವು ಮಾರುಕಟ್ಟೆಗಳು ನೀಡಿವೆ.

ಟ್ರೆಂಡ್‌, ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಯ ಆಯ್ಕೆ ಗ್ರಾಹಕರಿಗಿರುವುದು ಆನ್‌ಲೈನ್‌ ಖರೀದಿಯಲ್ಲಿ. ನೀವು ಇಂಟರ್‌ನೆಟ್‌ ಸ್ನೇಹಿಯಾಗಿದ್ದಲ್ಲಿ ಅಗಾಧವಾದ ಆಯ್ಕೆಗಳೇ ನಿಮ್ಮ ಮುಂದೆ ಇವೆ. 45 ರೂಪಾಯಿಯಿಂದ ಆರಂಭಿಸಿ, 16 ಸಾವಿರ ರೂಪಾಯಿವರೆಗೂ ಬೆಲೆ ಬಾಳುವಂತಹ ನಲ್ಲಿಗಳು ಈ ಅಂತರ್ಜಾಲ ತಾಣದಲ್ಲಿ ಲಭ್ಯ.

ಪ್ಯಾರಿ, ಜಾಗ್ವಾರ್‌, ಹಿಂಡ್‌ವೇರ್‌, ಜಾನ್ಸನ್‌, ಬಟರ್‌ಫ್ಲೈ ಮುಂತಾದ ಹತ್ತು ಹಲವು ಬ್ರ್ಯಾಂಡ್‌ಗಳು ಲಭ್ಯ. ಒಂದರಿಂದ ಏಳು ವರ್ಷಗಳವರೆಗೂ ಗ್ಯಾರಂಟಿ ಇರುತ್ತವೆ. ಒಂದು ವರ್ಷದ ವಾರಂಟಿಯ ಮೂಲಕ ಗುಣಮಟ್ಟದ ಖಾತ್ರಿಯನ್ನೂ ನೀಡಲಾಗುತ್ತದೆ.

ನಲ್ಲಿಗಳನ್ನು ಬಿಟ್ಟರೆ ಹೆಚ್ಚು ಹಣ ವ್ಯಯವಾಗುವುದು, ಟವಲ್‌ ಇಳಿಬಿಡುವ ಹಿಡಿಕೆಗಾಗಿ. ಪ್ರತಿ ಮನೆಯ ಅಗತ್ಯಗಳಿವು. ಹುಕ್‌ ಇರುವ, ಹ್ಯಾಂಡಲ್‌ ಇರುವ ಬಟ್ಟೆ ಇಳಿಬಿಡುವ ಹಿಡಿಕೆಗಳಂತೂ  ಅಗತ್ಯದ ಪಟ್ಟಿಯಲ್ಲಿ ಆದ್ಯತೆಯ ಸ್ಥಾನ ಪಡೆದ ಪರಿಕರಗಳು. ಪ್ರತಿ ಬಾತ್‌ರೂಮಿನಲ್ಲಿಯೂ ಒಂದು ಟವಲ್‌ ಹಿಡಿಕೆ, ಹುಕ್‌ ಹಿಡಿಕೆ ಬೇಕೇಬೇಕು.

ನಿಮ್ಮ ಮನೆಯ ಸ್ನಾನದ ಕೋಣೆಯ ಉದ್ದ ಅಗಲ ನೋಡಿಕೊಂಡು, ಬಾಗಿಲಿನ ಹಿಂದೆ, ಗೀಸರ್‌ ಇರುವ ಗೋಡೆಯ ಮುಂದೆ ಇವನ್ನು ಅಳವಡಿಸಲು ಯೋಜಿಸಬಹುದು.

ಸೋಪು ಇಡಲು, ಬ್ರಷ್‌ ಹೋಲ್ಡರ್‌, ಕನ್ನಡಿ ಸ್ಟ್ಯಾಂಡ್‌ ಬದಲಿಗೆ ಕನ್ನಡಿ ಇರುವ ಆರ್ಗನೈಸರ್‌ ಅನ್ನೇ ಕೊಳ್ಳಬಹುದು. ನಿಜಕ್ಕೂ ಇದು ಉತ್ತಮ ಆಯ್ಕೆಯೂ ಆಗ ಬಲ್ಲದು. ಸ್ನಾನದ ಕೋಣೆಯ ಅಗತ್ಯದ ಸಾಮಗ್ರಿಗಳನ್ನೆಲ್ಲಾ ಇದರಲ್ಲಿ ಮುಚ್ಚಿಡಬಹುದು. ನೈರ್ಮಲ್ಯದ ದೃಷ್ಟಿಯಿಂದಲೂ ಇದರ ಬಳಕೆ ಒಳಿತು. ಗಣನೀಯ ಪ್ರಮಾಣದಲ್ಲಿ ಜಾಗವೂ ಉಳಿತಾಯವಾಗುತ್ತದೆ. ಅಲ್ಲದೇ, ಪ್ರತಿಯೊಂದಕ್ಕೂ ಗೊಡೆ ಕೊರೆಯುವುದೂ ತಪ್ಪುತ್ತದೆ.

ಈ ಅಗತ್ಯಗಳನ್ನು ಮನಗಂಡು ಕೆಲವು ಆನ್‌ಲೈನ್‌ ಶಾಪ್‌ಗಳು ಕೊಂಬೊ ಸಾಧನಗಳನ್ನು ಪರಿಚಯಿಸಿವೆ. ಒಂದು ಬಾತ್‌ರೂಮ್‌ಗೆ ಅಗತ್ಯವಿರುವ ಎರಡು ಸೋಪು ಡಿಶ್‌ಗಳು, ಒಂದು ಬ್ರಶ್‌ ಹೋಲ್ಡರ್‌, ಎರಡು ಟವಲ್ ಹಿಡಿಕೆಗಳಿರುವ ಕೊಂಬೊ ಸಾಧನಗಳು ಸಿಕ್ಕೇ ಸಿಗುತ್ತವೆ.

ಆನ್‌ಲೈನ್‌ ಖರೀದಿಯಲ್ಲಿ ಬೆಲೆ ನೋಡಿಕೊಂಡು, ಸ್ಥಳೀಯ ಅಂಗಡಿಯಲ್ಲಿಯೂ ನಿಮ್ಮ ಬಜೆಟ್‌ಗೆ ಹೊಂದುವಂತಹ ಶಾಪಿಂಗ್‌ ಮಾಡಬಹುದು. ಆನ್‌ಲೈನ್‌ ಖರೀದಿಯ ಮೇಲೆ ನಂಬಿಕೆ ಇರದೇ ಇದ್ದಲ್ಲಿ, ಬೆಲೆ ನಿಷ್ಕರ್ಷಕ್ಕೆ ಅನುಕೂಲವಾಗುವಂತೆ ಒಮ್ಮೆ ಪರಿಶೀಲಿಸಲು ಈ ಅಂತರ್ಜಾಲ ತಾಣಗಳು ಬಹಳ ಅನುಕೂಲಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ಲಂಬರ್‌ ಅಥವಾ ಗುತ್ತಿಗೆದಾರರು ಹೆಚ್ಚಾಗಿ ಬ್ರ್ಯಾಂಡೆಡ್‌ ಉತ್ಪನ್ನಗಳನ್ನೇ ಶಿಫಾರಸು ಮಾಡುತ್ತಾರೆ. ಆದರೆ ನಿಮ್ಮ ಮನೆಗೆ ಉಪ್ಪು ನೀರು ಅಥವಾ ಗಡಸು ನೀರಿನ ಬಳಕೆ ಇದ್ದಲ್ಲಿ ಯಾವುದೇ ಉತ್ಪನ್ನವಾದರೂ ಎರಡು ವರ್ಷಕ್ಕೆ ಒಮ್ಮೆ ಬದಲಿಸಲೇಬೇಕಾಗುತ್ತದೆ. ಗಡಸು ನೀರು ಇರುವ ಪ್ರದೇಶದಲ್ಲಿ ಮನೆ ಕಟ್ಟಿದ್ದರಂತೂ ನಲ್ಲಿ ಜೋಡಣೆಗಳ ವಿಭಾಗದಲ್ಲಿ ಅಗತ್ಯ ಎನಿಸಿದಾಗಲೆಲ್ಲಾ ಬದಲಿಸಲು ಅವಕಾಶವಿರುವಂತಹ ಉತ್ಪನ್ನಗಳನ್ನೇ ಬಳಸುವುದು ಒಳಿತು.

ಸ್ನ್ಯಾಪ್‌ಡೀಲ್‌, ಇ ಬೇ.ಇನ್‌ ಮೊದಲಾದ ಅಂತರ್ಜಾಲ ಮಾರುಕಟ್ಟೆಗಳಲ್ಲಿ ಈ ಸಾಧನಗಳ ಖರೀದಿಗೆ ಸಾಕಷ್ಟು ಆಯ್ಕೆಗಳೂ ಲಭ್ಯ ಇವೆ. ಆಯ್ಕೆ ಮತ್ತು ತೀರ್ಮಾನಗಳೆರಡೂ ಇಲ್ಲಿ ನಿಮ್ಮನ್ನೇ ಅವಲಂಬಿಸಿವೆ. ನಿಮ್ಮ ಗುತ್ತಿಗೆದಾರ ಅಥವಾ ಪ್ಲಂಬರ್‌ನದಲ್ಲ ಎನ್ನುವುದೇ ವಿಶೇಷ.

ಇಷ್ಟಕ್ಕೂ ಬಚ್ಚಲು ಮನೆಗೇಕೆ ಇಷ್ಟೊಂದು ಪ್ರಾಶಸ್ತ್ಯ? ದಿನಕ್ಕೆ ಒಮ್ಮೆ ಸ್ನಾನಕ್ಕೆ, ಒಂದೆರಡು ಸಲ ಶೌಚಕ್ಕೆ ಹೋದರೆ ಮುಗಿಯಿತಲ್ಲಾ. ನೀರು ಬಂದರೆ ಸಾಕು, ನಲ್ಲಿ ಯಾವುದಾದರೇನು? ಎಂಬ ಪ್ರಶ್ನೆಗಳು ಬಂದೇ ಬರುತ್ತವೆ.

ಆದರೆ ಧಾವಂತದ ಬದುಕಿನಲ್ಲಿ, ನಾವು, ನಮಗೆಂದೇ ಮೀಸಲಿಟ್ಟ ಸಮಯವೆಂದರೆ ಬಹುಶಃ ಅದು ಬಚ್ಚಲು ಮನೆಯಲ್ಲಿಯೇ ಆಗಿರಬಹುದು. ಅಲ್ಲಿ ಕಣ್ಣಿಗೆ ತಂಪೆನಿಸುವ, ಸ್ನಾನದಿಂದ ಹಿತಾನುಭವ ದೊರೆಯುವಂತಾಗಬೇಕು. ಅಲ್ಲಿಂದ ಒಂದು ದಿನ ಹುಟ್ಟುತ್ತದೆ. ಆ ದಿನ ಉತ್ಸಾಹದಿಂದಿರಲು, ಹುಮ್ಮಸ್ಸಿನಿಂದ ಆರಂಭವಾಗಲು ಚಂದದ ತಯಾರಿ ಅತ್ಯಗತ್ಯ. ಅದಕ್ಕೆ ಸ್ನಾನದ ಕೋಣೆಯ ಅಂದ, ತಾಳಿಕೆ, ಬಾಳಿಕೆ ಎಲ್ಲವೂ ನಿಮ್ಮ ದೈನಂದಿನ ಬದುಕನ್ನು ನಿರ್ಧರಿಸುತ್ತದೆ.

ಆನ್‌ಲೈನ್‌ ಖರೀದಿಗೆ ಅಥವಾ ಪರಿಶೀಲನೆಗೆ ಒಮ್ಮೆ ಭೇಟಿ ಕೊಡಬಹುದಾದ ತಾಣಗಳು
* www.bathfittingsonline.com/

* www.hardwarebajaar.com/
* www.fabfurnish.com
* www.snapdeal.com/products/home-kitchen-sanitary-bathroom-fittings
* www.yebhi.com/online-shopping/bath
   accessories.html
* www.ebay.in/sch/Other-Bath-Room-Accessories
* www.homeshop18.com/bathroom-accessories

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT