ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್‌ನಲ್ಲಿ ಚಾಂಪಿಯನ್‌ ‘ಮಾರ್ಕರ್‌’

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಲ್ಲಾ ಶೇಖರ್‌ ಕಳೆದ ಐದು ವರ್ಷಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ನಡೆದ ಸ್ನೂಕರ್‌–ಬಿಲಿಯರ್ಡ್ಸ್‌  ಪಿಯನ್‌ಷಿಪ್‌ಗಳಲ್ಲಿ ಗಳಿಸಿದ ಪ್ರಶಸ್ತಿಗಳ ಸಂಖ್ಯೆ ಆರು. ಹದಿನಾಲ್ಕು ಬಾರಿ ಸೆಮಿಫೈನಲ್‌ ಹಂತ ತಲುಪಿರುವ ಅವರು ಒಮ್ಮೆಯೂ ಮೊದಲ ಸುತ್ತಿನಲ್ಲಿ ಸೋಲು ಕಾಣದ ಸರದಾರನಾಗಿ ಗಮನ ಸೆಳೆದಿದ್ದಾರೆ. ಶೇಖರ್‌ ಇಷ್ಟೆಲ್ಲ ಸಾಧನೆ ಮಾಡಿದ್ದು ‘ಏಕಲವ್ಯ’ನಂತೆಯೇ ! ಬಣ್ಣ–ಬಣ್ಣದ ಈ ಚೆಂಡಿನಾಟದಲ್ಲಿ ಅವರ ಕೋಚ್‌ ಸ್ವತಃ ಅವರೇ.

ನಗರದ ಬೀದಿಗಳಲ್ಲಿ  ಚಾಪೆ ಮಾರುವುದು ಶೇಖರ್‌ ತಂದೆಯ ವೃತ್ತಿ. ತಾಯಿ ಖಾಸಗಿ ಶಾಲೆಯಲ್ಲಿ ಆಯಾ. 30 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಹುಬ್ಬಳ್ಳಿಗೆ ಬಂದವರು ಇವರು. ಹುಬ್ಬಳ್ಳಿಯಲ್ಲಿ ಹುಟ್ಟಿದ ಶೇಖರ್‌ ಕಲಿತದ್ದು ಎಸ್‌ಎಸ್‌ಎಲ್‌ಸಿ. ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಕಾರಣ ಉದ್ಯೋಗ ಅರಸುತ್ತಿದ್ದ ಅವರ ಭಾಗ್ಯದ ಬಾಗಿಲು ತೆರೆದದ್ದು ಹುಬ್ಬಳ್ಳಿಯ ಆಲ್‌ ಬಾಲ್ಸ್‌ ಸ್ನೂಕರ್‌ ಪಾಯಿಂಟ್‌ ಎಂಬ ಕ್ಲಬ್‌. ರೈಲ್ವೆಯ ಅಂದಿನ ಖ್ಯಾತ ಬಿಲಿಯರ್ಡ್ಸ್‌ ಆಟಗಾರ ನಾರಾಯಣ ನಾಯ್ಡು, ಇವರ ನೆರೆಮನೆಯವರು. ಅವರ ಮೂಲಕ ಈ ಕ್ಲಬ್‌ನಲ್ಲಿ ಕೆಲಸಕ್ಕೆ ಸೇರಿದ ಶೇಖರ್‌ ‘ಮಾರ್ಕರ್‌’ ಆಗಿ ಸೇವೆ ಸಲ್ಲಿಸಿದರು.

ಆದರೆ ಕೆಲಸಕ್ಕಷ್ಟೆ ಅಂಟಿಕೊಳ್ಳದೆ ಸ್ನೂಕರ್‌ ತಂತ್ರಗಳನ್ನು ಕಲಿತುಕೊಂಡರು. ಟೇಬಲ್‌ಗಳ ಸಮೀಪ ಕಳೆದ  ಒಂದೂವರೆ ವರ್ಷದ ಅನುಭವದಿಂದ ಉತ್ತಮ ಸ್ನೂಕರ್‌ ಆಟಗಾರನಾಗಿ ಮಿಂಚಿದರು. ಈ ಕ್ಲಬ್ ನಿಂತು ಹೋದ ನಂತರ ಮತ್ತೆ ಅದೃಷ್ಟ ದೇವತೆಯ ರೂಪದಲ್ಲಿ ಬಂದವರು ನೈರುತ್ಯ ರೈಲ್ವೆಯ ಉತ್ತರ ಸಂಸ್ಥೆಯಲ್ಲಿ ಬಿಲಿಯರ್ಡ್ಸ್‌ ಕಾರ್ಯದರ್ಶಿಯಾಗಿದ್ದ ಬಿ.ಒ.ಕಾರ್ನರ್‌. ಅವರ ಮೂಲಕ 2001ರಲ್ಲಿ ‘ಉತ್ತರ’ ಸಂಸ್ಥೆಯಲ್ಲಿ ಮಾರ್ಕರ್‌ ಆಗಿ ಸೇರಿಕೊಂಡರು.

ಅವಕಾಶ ಸಿಕ್ಕಿದಾಗಲೆಲ್ಲ ಇಲ್ಲಿ ಹಿರಿಯರಿಗೆ ‘ಎದುರಾಳಿ’ಯ ರೂಪದಲ್ಲಿ ಸಾಥ್‌ ನೀಡಿದ ಶೇಖರ್‌ ತಮ್ಮ ಚಾಣಾಕ್ಷ ಆಟದ ಮೂಲಕ ಗಮನ ಸೆಳೆದರು. ಮೆಚ್ಚುಗೆಯ ನುಡಿ ಕೇಳಿ ಬಂದ ಹಿನ್ನೆಲೆಯಲ್ಲಿ ಟೇಬಲ್‌ಗಳು ಖಾಲಿ ಇದ್ದಾಗ ಕಠಿಣ ಅಭ್ಯಾಸ ನಡೆಸಿದರು. 2004ರಲ್ಲಿ ಇಲ್ಲೇ ನಡೆದ ರಾಜ್ಯ ಮಟ್ಟದ ಮುಕ್ತ ಟೂರ್ನಿಯಲ್ಲಿ ರನ್ನರ್‌ ಅಪ್‌ ಎತ್ತರಕ್ಕೇರಿದರು.

2008ರಲ್ಲಿ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಹಮ್ಮಿಕೊಂಡಿದ್ದ ಸೆಲ್ವರಾಜ್‌ ಸ್ಮಾರಕ ಮುಕ್ತ ಟೂರ್ನಿಯಲ್ಲಿ ಪಾಲ್ಗೊಂಡು ಸೆಮಿಫೈನಲ್‌ ಹಂತದ ವರೆಗೆ ಹೋರಾಡಿದರು. ಈ ಎರಡು ಟೂರ್ನಿಗಳಿಂದ ಗಳಿಸಿದ ವಿಶ್ವಾಸ 2010ರಲ್ಲಿ ಹೊಸಪೇಟೆಯಲ್ಲಿ ನಡೆದ ವಿಜಯನಗರ ಸ್ನೂಕರ್‌ ಕ್ಲಬ್‌ ಆಶ್ರಯದ ಟೂರ್ನಿಯ ಪ್ರಶಸ್ತಿ ಬಗಲಿಗೆ ಹಾಕಿಕೊಳ್ಳಲು ನೆರವಾಯಿತು. ನಂತರ ಗೆಲುವಿನ ಸರಮಾಲೆಗಳು ಅವರ ಕೊರಳಿಗೆ ಬಿದ್ದವು. 2011ರಲ್ಲಿ ಗಂಗಾವತಿ ಕ್ಯೂ ಝೋನ್‌, 2012ರಲ್ಲಿ ರೈಲ್ವೆ ಉತ್ತರ ಸಂಸ್ಥೆಯ ಟೂರ್ನಿ, 2013ರಲ್ಲಿ ಬಳ್ಳಾರಿಯಲ್ಲಿ ನಡೆದ ಸ್ಕೈ ಮ್ಯಾಕ್ಸ್‌ ಹಾಗೂ ಈ ವರ್ಷ ವಿಜಾಪುರದಲ್ಲಿ ನಡೆದ ವಿಜಾಪುರ ರಾಯಲ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಬಾಚಿಕೊಂಡರು. 2012ರ ರೈಲ್ವೆ ಉತ್ತರ ಸಂಸ್ಥೆಯ ಟೂರ್ನಿಯಲ್ಲಿ ಬಿಲಿಯರ್ಡ್ಸ್‌ನಲ್ಲಿ ರನ್ನರ್‌ ಅಪ್‌ ಸ್ಥಾನವೂ ಇವರಿಗೇ ಸಿಕ್ಕಿತ್ತು.

ಗೌರವ ತಂದುಕೊಟ್ಟ ಆಟ: ‘ನಮ್ಮದು ಬಡ ಕುಟುಂಬ. ಆದರೂ ಛಲದಿಂದ ಈ ಸಾಧನೆ ಮಾಡಿದ್ದೇನೆ. ಇಲ್ಲಿ ಯಾರೂ ನನ್ನನ್ನು ಕೆಲಸಗಾರ ಎಂಬ ಭಾವನೆಯಿಂದ ನೋಡುವುದಿಲ್ಲ. ಹೊರಗೆ ಟೂರ್ನಿಗಳಿಗೆ ಹೋದಾಗ ಎಲ್ಲರೂ ಗೌರವದಿಂದ ಕಾಣುತ್ತಾರೆ. ದೊಡ್ಡವರು ‘ಸರ್‌’ ಎಂದು ಕರೆಯುವಾಗ, ಆಯೋಜಕರು ಆಹ್ವಾನ ನೀಡುವಾಗ ನಿಜಕ್ಕೂ ರೋಮಾಂಚನವಾಗುತ್ತದೆ’ ಎಂದು ಹೇಳಿ ಶೇಖರ್‌ ಭಾವುಕರಾಗುತ್ತಾರೆ.

‘ಇದು ಅತ್ಯಂತ ಸೂಕ್ಷ್ಮ, ನಾಜೂಕಿನ ಆಟ. ಏಕಾಗ್ರತೆ ಮತ್ತು ಆಸಕ್ತಿ ಇಲ್ಲಿ ಮುಖ್ಯ. ಈ ಗುಣಗಳನ್ನು ಅಳವಡಿಸಿಕೊಂಡದ್ದೇ ನನ್ನ ಯಶಸ್ಸಿಗೆ ಕಾರಣ. ಈ ಆಟದ ಪ್ರತಿಯೊಂದು ತಂತ್ರವೂ ನನ್ನ ತಲೆಯಲ್ಲಿ ತುಂಬಿದೆ. ಆದ್ದರಿಂದ ಸುಲಭವಾಗಿ ಆಡಲು ಸಾಧ್ಯವಾಗುತ್ತಿದೆ’ ಎಂದು ಯಶೋಗಾಥೆಯನ್ನು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT