ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹ ಮಾಡಬೇಕಿಂಥವರ...

Last Updated 15 ಮೇ 2015, 19:30 IST
ಅಕ್ಷರ ಗಾತ್ರ

ಅಪಾರ ಸ್ನೇಹಿತರ ಬಳಗ ಹೊಂದಿದವರು ಹೆಚ್ಚು ಕಾಲ ಬದುಕುತ್ತಾರೆ. ಏಕೆಂದರೆ ಅವರು ಹೆಚ್ಚು ನಗುತ್ತಾರೆ, ಕಡಿಮೆ ಚಿಂತೆ ಮಾಡುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಮೂವರು ಆಪ್ತಮಿತ್ರರಿರುವರು ನಿಜಕ್ಕೂ ಅತ್ಯಂತ ಶ್ರೀಮಂತರು. ಬಸ್‌ನಲ್ಲಿ, ಮಕ್ಕಳ ಶಾಲೆಯಲ್ಲಿ, ಕಚೇರಿಯಲ್ಲಿ, ಹೊಸ ಊರಿನ ಅಕ್ಕ ಪಕ್ಕದವರಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಹಿಂಜರಿಕೆ ತೊರೆಯಬೇಕು.

ಮುಗುಳ್ನಗು, ಸೌಜನ್ಯದ ಮಾತು ನೆರೆಹೊರೆಯವರಲ್ಲಿ, ಸಹಪಾಠಿಗಳಲ್ಲಿ, ಸಹೋದ್ಯೋಗಿಗಳಲ್ಲಿ ಸ್ನೇಹ ಸಂಪಾದಿಸಿ ಕೊಡಬಹುದು. ಅತ್ತ ಕಡೆಯಿಂದ ಅಂತಹ ಪ್ರತಿಕ್ರಿಯೆ ಬರದಿದ್ದರೆ, ಅದೇ ಮುಗುಳ್ನಗು ಉಳಿಸಿಕೊಂಡು ಇದ್ದುಬಿಡಬಹುದು. ನಾವು ನೀಡುವ ಎಲ್ಲವನ್ನೂ ಸ್ವೀಕರಿಸಬಹುದಾದ ಸ್ನೇಹಮಯ ವ್ಯಕ್ತಿಗಾಗಿ ನಮ್ಮ ಶೋಧವನ್ನು ಮುಂದುವರಿಸಬಹುದು.

ನಾವಂತೂ ಸಂಘಜೀವಿ. ಏನೇ ಆಗಲಿ, ಆಪ್ತರು ಅಂತಿಲ್ಲದಿದ್ದರೂ ಕನಿಷ್ಠ ಆರು ಸ್ನೇಹಿತರಾದರೂ ಉತ್ತಮ ಸ್ನೇಹಿತರು ಬೇಕು ಬದುಕು ಸವೆಯಲು, ಸವಿಯಲು. ಅವರಲ್ಲಿ ಆತ್ಮೀಯರು ಸಿಕ್ಕರೂ ಸಿಗಬಹುದು ಜೀವನಪೂರ್ತಿ ಸ್ನೇಹ ಕಾಯ್ದುಕೊಳ್ಳುವ ಸಹೃದಯಿ ಇದ್ದರೂ ಇರಬಹುದು.

1. ಆಪ್ತಮಿತ್ರ: ಮನೆಯ ಪಕ್ಕದವರೊ, ಆಫೀಸಿನಲ್ಲಿ ಪಕ್ಕ ಕುಳಿತುಕೊಳ್ಳುವವರೊ, ಶಾಲೆಯ ಸ್ನೇಹಿತರೊ ಅಂತೂ ಒಬ್ಬ ಸ್ನೇಹಿತರಾದರೂ ಇರಬೇಕು. ಅದೂ ಇಲ್ಲದೆ ಇದೆಂಥ ಜೀವನ? ದಿನವೂ ಒಡನಾಡ ಲಾಗದಿದ್ದರೂ ಒಡಲಾಳದ ಮಾತು ಹಂಚಿ ಕೊಳ್ಳುವಷ್ಟು ಆತ್ಮೀಯರೊಬ್ಬರಿರಲೇಬೇಕು. ಅವರು ಆತ್ಮಮಿತ್ರರೂ ಆಗಬಹುದು.

2. ಸ್ಕೂಲ್‌ ಫ್ರೆಂಡ್‌: ನಮ್ಮ ಶಾಲಾ ದಿನಗಳ ಸ್ನೇಹ ಈಗಲೂ ಇದೆ. ಆದರೆ ಮಗಳ ಶಾಲೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಅಲ್ಲೊಬ್ಬ ಸ್ನೇಹಿತರಿರಬೇಕಲ್ಲ. ಯಾರದು? ಅವಳ ಟೀಚರ್‌ಗಳಲ್ಲೊಬ್ಬರೆ? ಮಗಳ ಆತ್ಮೀಯ ಸ್ನೇಹಿತರ ತಂದೆ ಅಥವಾ ತಾಯಿ? ಸುತ್ತುಬಳಸಿನ ಹಾದಿಯೇಕೆ ಬೇಕು? ಎಲ್ಲಕ್ಕಿಂತ ಉತ್ತಮ ಹಾದಿ ಎಂದರೆ ಮಗಳ ಆತ್ಮೀಯ ಸ್ನೇಹಿತೆಯನ್ನೇ ನಮ್ಮ ಪುಟ್ಟ ಸ್ನೇಹಿತೆಯನ್ನಾಗಿ ಮಾಡಿಕೊಳ್ಳುವುದು. ಅವಳು ಅಷ್ಟೇನೂ ಕಷ್ಟಪಟ್ಟು ಓದುತ್ತಿಲ್ಲವೆ? ಪೇರೆಂಟ್‌ ಮೀಟಿಂಗ್‌ನಲ್ಲಿ ನಾವು ವಾದ ಮಾಡಿದ ಟೀಚರ್‌ ಅವಳನ್ನೇ ಗುರಿಯಾಗಿಸಿ ಪರೋಕ್ಷವಾಗಿ ಏನಾದರೂ ಹೇಳಿ ಕ್ಲಾಸಿನಲ್ಲಿ ಎಲ್ಲರೆದುರು ಅವಮಾನ ಮಾಡುತ್ತಾರೆಯೆ? ಎಲ್ಲ ಮಾಹಿತಿ ಲಭ್ಯ, ನಮ್ಮ ಪ್ರತ್ಯಕ್ಷದರ್ಶಿಯಿಂದ!

3. ಎಂದೆಂದೂ ಸ್ನೇಹಿತೆ: ಬಾಲವಾಡಿ ಯಿಂದಲೂ ಜತೆಗೇ ಬೆಳೆದವರೊಡನೆ ಇರುವ ಸಲಿಗೆ, ಸ್ನೇಹ ಅಷ್ಟು ಬೇಗ ಕಳೆದು ಹೋಗುವುದಿಲ್ಲ. ಅವರು ನಮ್ಮನ್ನು ಅರ್ಥ ಮಾಡಿಕೊಳ್ಳುವಷ್ಟು ಚೆನ್ನಾಗಿ ಇನ್ನಾರಾದರೂ ಅರ್ಥಮಾಡಿಕೊಳ್ಳುವುದು ಕಷ್ಟ.
ಇಂಥ ಸ್ನೇಹ ಅತ್ಯಮೂಲ್ಯ. ನಮ್ಮೊಡನೆಯೇ ಬೆಳೆದವರು, ಏನೇ ಬಂದರೂ ನಮ್ಮ ಕೈಬಿಡುವುದಿಲ್ಲ. ಇಂಥ ಬಾಲ್ಯಸ್ನೇಹಿತರು ಒಂಥರ ಸಹೋದರ/ರಿಯಂತೆ. ಅಂದು ಇಂದು ಮುಂದು ಇನ್ನು ಎಂದೆಂದೂ ಇರುವ ಸ್ನೇಹವಿದು.

4. ಹವ್ಯಾಸಿ ಗೆಳೆತನ: ಬಾಲ್ಯ ಸ್ನೇಹಿತೆಯೇನೊ ಸರಿ, ಆದರೆ ನಮಗೆ ಡಾನ್ಸ್‌ ಇಷ್ಟವಾದಂತೆ, ಅವಳಿಗೆ ಅಷ್ಟೇನೂ ಆಸಕ್ತಿಯಿಲ್ಲವಲ್ಲ. ಬೆಳೆಯುತ್ತ ಇಬ್ಬರ ಆಯ್ಕೆ, ಅಭಿರುಚಿ, ಕಾಲೇಜು, ಉದ್ಯೋಗ, ಊರು ಬದಲಾಯಿತಲ್ಲ? ಆಫೀಸಿನ ಸ್ನೇಹಿತರು ನಮ್ಮೊಡನೆ ಹೊರಹೋಗಲು ತುಂಬ ಬಿಜಿ. ಆದರೂ ಪರವಾಗಿಲ್ಲ. ಇವರನ್ನೇ ಹಿಡಿದಿಟ್ಟುಕೊಳ್ಳಬೇಕು, ಸ್ನೇಹಬಂಧನದಲ್ಲಿ.  ಸಂಗೀತ ಕಚೇರಿ, ನಾಟಕ, ಸಿನಿಮಾ ಆಗಾಗ ಟ್ರೆಕಿಂಗ್‌, ಸ್ವಿಮಿಂಗ್‌ಗೆ ಜತೆಯಾಗಲು ಈ ಸ್ನೇಹಿತೆಯೇ ಸರಿ. ಸಮಾನ ಆಸಕ್ತಿ ಇರುವುದು ನಮ್ಮಿಬ್ಬರಲ್ಲೇ ತಾನೆ? ಅದಕ್ಕೇ ಅಲ್ಲವೆ ಒಂದೇ ತರಹದ ಉದ್ಯೋಗ ಆರಿಸಿದ್ದು?

5. ಹೇಳ್ಕೊಳ್ಳಾಕ್‌ ಒಬ್ರಾದ್ರೂ: ನಮ್ಮವ ಬಹಳ ದಿನಗಳಿಂದ ಕಾಡಿಸ್ತಾನೇ ಇದಾನೆ. ಯಾರತ್ರ ಅಂತ ಹೇಳೋದು? ಮ್ಯಾಗಜೀನ್‌ಗಳಲ್ಲಿ ಬರುವ ಕೌನ್ಸೆಲಿಂಗ್‌ ಆಂಟಿಗಳ ವಿವರಣೆ ನಮಗೆಲ್ಲ ಸರಿಹೊಂದೋ ಥರದ್ದಲ್ಲ. ಮತ್ತೆ ಹೇಳ್ಕೊಳ್ಳೋದು ಎಲ್ಲಿ? ಇದಾಳಲ್ಲ  ಈ ಸ್ನೇಹಿತೆ. ಪ್ರಾಮಾಣಿಕ ಸ್ನೇಹ ನಿಭಾಯಿಸೋಳು. ಬರೀ ಮೇಲು ಮೇಲಿನ ಸಿಹಿ ಮಾತನ್ನಾಡದಂಥ ನಿಜವಾದ ಸ್ನೇಹಿತೆಯೊಬ್ಬಳಿದ್ರೆ ಹೇಳಿಕೊಂಡು ಹಗುರಾಗಬಹುದು.

6. ಖುಷಿಯಲಿ: ಈ ಸ್ನೇಹಿತೆ ಜತೆಗಿದ್ದರೆ ನಗಿಸದೇ ಇದ್ದರೂ, ಕೇಳುವ ಕಿವಿಯಾಗಬಲ್ಲಳು. ಬರೀ ಕೇಳಿಸಿಕೊಳ್ಳುವುದರಿಂದಲೇ ಅದೆಷ್ಟು ಉತ್ತಮ ಭಾವ ಇತ್ತ ಹರಿದುಬಿಡಬಲ್ಲಳು ಎಂಬ ಸತ್ಯ ತಿಳಿದವಳು. ಬೆನ್ನು ನೇವರಿಸಿದಂತಹ ಸಾಂತ್ವನ, ಸದಾ ನಮ್ಮ ತಲೆಯ ಮೇಲೊಂದು ಕೈ ಇಟ್ಟಂತಹ ಭರವಸೆಯ ಅನುಭವ ನೀಡಬಲ್ಲದು ಈ ಗುಣ ಎಂದು ಗೊತ್ತು ಅವಳಿಗೆ. ಇಂಥ ಸ್ನೇಹವೂ ಬೇಕು.
*
ಆಪ್ತಮಿತ್ರರ ಮಾತು

ನಿರೀಕ್ಷೆಗಳಿಲ್ಲದ ಆಪ್ತತೆ
ಸ್ವಪ್ನಾ ಜೋಶಿ ಮತ್ತು ಸುಮಾ ಭಂಡಾರಿ ಶಾಲಾದಿನಗಳಿಂದಲೂ ನನ್ನ ಆಪ್ತ ಗೆಳತಿಯರು. ನನ್ನ ಆಪ್ತ ವಲಯಕ್ಕೆ ನಂತರ ಸೇರ್ಪಡೆ ಗೊಂಡವರು ಪದ್ಮಜಾ ಕೃಷ್ಣಪ್ರಸಾದ್. ನನ್ನ ಸ್ನೇಹದ ದುರುಪಯೋಗ ಪಡಿಸಿಕೊಂಡವರೂ ಇದ್ದಾರೆ. ಆದರೆ, ಗೆಳೆತನಕ್ಕೆ ದೊಡ್ಡ ದ್ರೋಹ ಬಗೆದವರು ಯಾರೂ ಇಲ್ಲ. ನಂಬಿಕೆ ಕಳೆದುಕೊಂಡವರಿಂದ ದೂರವಾದರೆ ಒಳಿತು. ಯಾವುದೇ ನಿರೀಕ್ಷೆಗಳಿಲ್ಲದ ಆಪ್ತತೆ ಗೆಳೆತನ. ನಮ್ಮ ನೋವನ್ನು ಹೇಳಿಕೊಳ್ಳದೇ ಗುರುತಿಸಿ ಸಾಂತ್ವನ ಹೇಳುವವರು, ನಮ್ಮ ನಡೆ ನುಡಿ ಇಷ್ಟವಾದರೆ ಇಷ್ಟ ಎಂದು, ಇಲ್ಲವಾದರೆ ಇಷ್ಟವಿಲ್ಲ ಎಂದು ಹೇಳುವವರು ನಿಜವಾದ ಗೆಳೆಯರು.
- ಸುಧಾ ಬೆಳವಾಡಿ,
ಚಲನಚಿತ್ರ ಕಲಾವಿದೆ

*

ನಿಯಮಗಳಿಲ್ಲದ ಬಂಧ


ಬಿಂದು, ಲಾಸ್ಯ ಮತ್ತು ಶಶಾಂಕ್ ನನ್ನ ಆಪ್ತ ಗೆಳೆಯರು. ಬಿಂದು ಮತ್ತು ಲಾಸ್ಯ ಬಾಲ್ಯದಿಂದಲೂ ಜತೆಗಿರುವವರು. ಶಶಾಂಕ್ ಗೆಳೆತನ ಪಿಯುಸಿಯಲ್ಲಿ ಸಿಕ್ಕಿದ್ದು. ನನ್ನ ಜೀವನದಲ್ಲಿ ಸ್ನೇಹಕ್ಕೆ ದ್ರೋಹ ಬಗೆದವರು ಯಾರೂ ಇಲ್ಲ. ನಮ್ಮಂತೆಯೇ ಯೋಚಿಸುವವರು,  ನಮ್ಮ ಅಭಿರುಚಿಗಳೇ ಅವರವೂ ಆಗಿರುವಂಥವರೇ ನಮಗೆ ಆಪ್ತರಾಗುತ್ತಾರೆ. ಅಂಥ ಆಪ್ತರು ಸ್ನೇಹಕ್ಕೆ ದ್ರೋಹಬಗೆಯುವುದಿಲ್ಲ ಎಂಬುದು ನನ್ನ ನಂಬಿಕೆ. ಈವರೆಗೆ ನನ್ನ ಸ್ನೇಹಕ್ಕೆ     ದ್ರೋಹ ಬಗೆದವರು ಯಾರೂ ಇಲ್ಲ. ಸ್ನೇಹದಲ್ಲಿ ಜಗಳ, ಮುನಿಸು ಇರುವುದು ಸಹಜ. ನಾನು, ಬಿಂದು ಸುಮಾರು ದಿನ ಮಾತು ಬಿಟ್ಟು ಹಠ ಸಾಧಿಸಿದ್ದೇವೆ. ಮತ್ತೆ ಒಂದಾಗಿದ್ದೇವೆ. ಶಶಾಂಕ್ ಅಮೆರಿಕದಲ್ಲಿದ್ದಾನೆ. ಆದರೂ ಆಪ್ತತೆ ಇದ್ದೇ ಇದೆ. ಎಷ್ಟೇ ದೂರದಲ್ಲಿದ್ದರೂ ಸದಾ ನಮ್ಮೊಂದಿಗಿದ್ದಾರೆ ಎಂಬ ಭಾವ ಸ್ನೇಹ.
-ಮೇಘನಾ ರಾಜ್,
ನಟಿ

*

ಎಲ್ಲ ಕಾಲಕ್ಕೂ 'ಆಗು'ವ ಮಿತ್ರ 
ತಾಯಿ ಮಗುವಿನ ಸಂಬಂಧವೊಂದನ್ನು ಬಿಟ್ಟು ಉಳಿದೆಲ್ಲ ಸಂಬಂಧಗಳಲ್ಲೂ ಸ್ವಾರ್ಥ ಇದೆ. ಸ್ನೇಹದಲ್ಲೂ ಸ್ವಾರ್ಥವಿದೆ. ಆದರೆ, ಎಲ್ಲ ಕಾಲಕ್ಕೂ ಆಗುವವರು ಮಾತ್ರ ಆಪ್ತ ಗೆಳೆಯರಾಗುತ್ತಾರೆ. ಅಂಥ ನನ್ನ ಆಪ್ತಮಿತ್ರ ಪ್ರಕಾಶ್ ರೈ. ಎಷ್ಟೋ ಮಂದಿ ತುಂಬಾ ಆಪ್ತರಾಗಿದ್ದವರು ಕಷ್ಟ ಕಾಲದಲ್ಲಿ ನನ್ನಿಂದ ದೂರಾಗಿದ್ದಾರೆ. ನನ್ನ ಪರಮ ವೈರಿಗಳು ಎಂದುಕೊಂಡಿದ್ದವರು ಕಷ್ಟ ಕಾಲದಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ನಾನು ಸೋತಾಗ ಜತೆಗಿದ್ದು ಸಂತೈಸುವ, ಗೆದ್ದಾಗ ತಾನೇ ಗೆದ್ದಂತೆ ಖುಷಿಪಡುವ ಜೀವ ಪ್ರಕಾಶ್ ರೈ. ನಾವು ಒಬ್ಬರಿಗೊಬ್ಬರು ಸದಾ ಜತೆಗಿದ್ದೇವೆ. ಎಲ್ಲ ಕಾಲಕ್ಕೂ ಜತೆಗಿರುವುದೇ ಆಪ್ತ ಗೆಳೆತನ.
- ಬಿ. ಸುರೇಶ,
ಚಲನಚಿತ್ರ ನಿರ್ದೇಶಕ
*

ಕಷ್ಟ ಹಂಚಿಕೊಳ್ಳುವವರು


ಮೂಡಿಗೆರೆಯ ಸೀತಮ್ಮ, ಕೆ.ಸಿ.ಮಂಜುಳಾ ನನ್ನ ಪ್ರಾಣಮಿತ್ರರು. ಶೋಭಾ ಎಂಬ ಆಪ್ತ ಗೆಳತಿ ಈಗ ಬದುಕಿಲ್ಲ. ಮಂಜುಳಾ ಕಾಲೇಜು ದಿನಗಳಿಂದಲೂ ನನ್ನೊಂದಿಗಿದ್ದರೆ, ಸೀತಮ್ಮ ಶಾಲಾ ದಿನಗಳ ಗೆಳತಿ. ನಾನು ಸೀತಮ್ಮ ಅಕ್ಕತಂಗಿಯರಂತಿದ್ದೆವು. ಈಗಲೂ ಇವರಿಬ್ಬರೂ ನನ್ನ ಸಂಪರ್ಕದಲ್ಲಿದ್ದಾರೆ. ತಾರಾದೇವಿ ನಾನು ತುಂಬಾ ಆಪ್ತರಾಗಿದ್ದೆವು. ಆದರೆ ರಾಜಕೀಯದ ಕಾರಣದಿಂದ ನಮ್ಮ ಸ್ನೇಹ ಒಡೆಯಿತು. ಆದರೂ ಅಲ್ಲಲ್ಲಿ ನಾವು ವೇದಿಕೆ ಹಂಚಿಕೊಳ್ಳುವುದು ಅನಿವಾರ್ಯ. ಬಿಂಬಾ ರಾಯ್ಕರ್ ನನಗಿಂತ ಹಿರಿಯರು. ಆದರೂ ಅವರೊಂದಿಗೆ ಆಪ್ತ ಸ್ನೇಹವಿದೆ. ನಮ್ಮನ್ನು ಹೆಚ್ಚು ಅರ್ಥ ಮಾಡಿಕೊಳ್ಳುವವರು, ನಮ್ಮ ಸುಖಕ್ಕಿಂತ ಹೆಚ್ಚಾಗಿ ಕಷ್ಟದಲ್ಲಿ ಜತೆಗಿರುವವರು ಆಪ್ತ ಗೆಳೆಯರಾಗುತ್ತಾರೆ. ಉದ್ದೇಶ ಇಟ್ಟುಕೊಂಡು ನಮ್ಮೊಂದಿಗೆ ಸ್ನೇಹ ಸಂಪಾದಿಸಲು ಬರುವವರು ಸ್ನೇಹಿತರೇ ಅಲ್ಲ.
- ಮೋಟಮ್ಮ,
ವಿಧಾನ ಪರಿಷತ್ ಸದಸ್ಯೆ

*

ಇಷ್ಟಾನಿಷ್ಟಗಳೆಲ್ಲಾ ಒಂದೇ
ವೀಣಾ ತಿರುಮಲಾಚಾರ್, ಸುನಂದಾ ಕುಲಕರ್ಣಿ ಮತ್ತು ವಿದ್ಯಾ ಕುಡವಿ ನನ್ನ ಮೂವರು ಆಪ್ತ ಗೆಳತಿಯರು. ನಾವೆಲ್ಲರೂ ಒಟ್ಟಿಗೇ ಓದಿದವರು, ಒಟ್ಟಿಗೇ ಕೆಲಸ ಮಾಡಿದವರು. ಒಬ್ಬರಿಗೊಬ್ಬರು ಸ್ಪಂದಿಸುವುದು ಒಳ್ಳೆಯ ಗೆಳೆತನ. ನನ್ನ ಸ್ನೇಹಕ್ಕೆ ದ್ರೋಹ ಬಗೆದವರೊಬ್ಬರು ಇದ್ದಾರೆ. ಅವರ ಹೆಸರು ಹೇಳುವುದು ಬೇಡ. ಅವರು ದ್ರೋಹ ಮಾಡಿದ ಸಂದರ್ಭದಲ್ಲಿ ಜಗತ್ತು ಹೀಗೂ ಇರಲು ಸಾಧ್ಯವೇ ಎನಿಸಿತ್ತು. ಅವರನ್ನು ಈಗ ಮನಸ್ಸಿನಿಂದ ತೆಗೆದುಹಾಕಿದ್ದೇನೆ. ನಮ್ಮ ಯೋಚನೆ, ನಮ್ಮ ಇಷ್ಟಾನಿಷ್ಟಗಳೆಲ್ಲಾ ಒಂದೇ ಆಗಿದ್ದವರು ಸಹಜವಾಗಿ ನಮ್ಮ ಸ್ನೇಹಿತರಾಗುತ್ತಾರೆ. ಸಹಜ ಸ್ನೇಹದಲ್ಲಿ ಪ್ರಾಮಾಣಿಕತೆ ಇದ್ದರೆ ಅವರು ಆಪ್ತ ಗೆಳೆಯರಾಗುತ್ತಾರೆ.
-ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ,
ಹೃದ್ರೋಗ ತಜ್ಞೆ

ನಿರೂಪಣೆ: ದಯಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT