ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆ ಆರಂಭವಾಗಲಿ... ಆದರೆ ಮುಂಚಿತವಾಗಿ!

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೆಲ್ಲ ದೇಶ ಭ್ರಷ್ಟಾಚಾರದ ಕಡಾಯಿಗೆ ತಳ್ಳಲ್ಪಡುತ್ತದೆ. ಪಕ್ಷಗಳಲ್ಲಿ ಬಂಡಾಯ, ಅಸಹನೆ, ಅಪರಾಧಕ್ಕೆ ಸಂಬಂಧ­ಪಟ್ಟ ಘಟನೆಗಳು ಅತೀ ಹೆಚ್ಚು ನಡೆಯುತ್ತವೆ.  ಹಲವು ಸಂದರ್ಭಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಕೊನೆ ಕ್ಷಣದಲ್ಲಿ ಘೋಷಿಸಲಾಗುತ್ತದೆ. ಇದ­ರಿಂದ ಮತದಾರರಿಗೆ ತಮ್ಮ ಭವಿಷ್ಯದ ನಾಯಕರ ಜತೆ ಮುಖಾಮುಖಿಯಾಗಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಕೂಡ ಲಭಿಸು­ವುದಿಲ್ಲ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ­ದಲ್ಲಿ ಈ ರೀತಿಯ ಗೊಂದಲಗಳ ಅಗತ್ಯ­ವಿದೆಯೇ? ಅಥವಾ ನಾವು ಕೆಲವು ಸುಧಾರಣೆ­ಗಳನ್ನು ತರಬೇಕಿದೆಯೇ? ಈ ಸಂದರ್ಭದಲ್ಲಿ ನಾವು ಭಾರತದ ಹತ್ತನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌. ಶೇಷನ್‌ ಅವರು ಮಾಡಿದ್ದ ಕ್ರಾಂತಿಕಾರಕ ಬದಲಾವಣೆಗಳನ್ನು ಮರೆಯಲು ಸಾಧ್ಯವಿಲ್ಲ. ಚುನಾವಣಾ ವೆಚ್ಚದ ಮೇಲೆ ನಿಗಾ ಮತ್ತು ಪ್ರಚಾರಕ್ಕಾಗಿ ಅವ್ಯಾಹತ­ವಾಗಿ ಪೋಸ್ಟರ್‌ ಮತ್ತು ವಾಹನಗಳ ಬಳಕೆ ಮೇಲೆ ಕೆಲ ಕಡಿವಾಣಗಳನ್ನು ಅವರು ಹಾಕಿದ್ದರು.

ಚುನಾವಣೆ ಹತ್ತಿರವಾಗುತ್ತಿದ್ದಂತೆ  ಜನರ ಖರೀದಿ ಮತ್ತು ಅಕ್ರಮ ಹಣ ವರ್ಗಾವಣೆ­ಯಂತಹ ಅಕ್ರಮ ಚಟುವಟಿಕೆಗಳು ಬಿರುಸು­ಗೊಳ್ಳು­ತ್ತವೆ. ಟಿಕೆಟ್‌ ಹಂಚಿಕೆಯ ಸಂದರ್ಭ­ದ­ಲ್ಲಂತೂ ಕೈಯಿಂದ ಕೈಗೆ ಕೋಟ್ಯಂತರ ರೂಪಾಯಿ ಹರಿದಾಡುತ್ತದೆ. ಅಭ್ಯರ್ಥಿಗಳು ಹಣ ಮಾಡಲು ಎದುರು ನೋಡುತ್ತಾರೆ ಅಥವಾ ಹಣ ಇರುವ ಅಭ್ಯರ್ಥಿಗಳನ್ನು ಪಕ್ಷಗಳು ಎದುರು ನೋಡುತ್ತವೆ!

ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಒಂದು ವೇಳೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ­ದರೆ ಈ ಭ್ರಷ್ಟ ಪ್ರಕ್ರಿಯೆ ಅಥವಾ ವ್ಯವಸ್ಥೆಯನ್ನು ಸ್ವಚ್ಛ ಮಾಡಬಹುದು. ಒಂದು ಅಂದಾಜಿನ ಪ್ರಕಾರ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಒಬ್ಬ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿ ಸುಮಾರು 12,000ದಿಂದ 14,000 ಗ್ರಾಮಗಳನ್ನು ಸಂಪ­ರ್ಕಿ­ಸ­ಬೇಕಾಗುತ್ತದೆ.

ಆತ ಅಥವಾ ಆಕೆ 10ರಿಂದ 15 ಲಕ್ಷ ಮತದಾರರೊಂದಿಗೆ ಸಂಪರ್ಕಕಕ್ಕೆ ಬರ­ಬೇಕಾಗುತ್ತದೆ. ಆ ಪೈಕಿ ಕನಿಷ್ಠ ಶೇ 10ರಷ್ಟು ಜನ­ರೊಂ­ದಿಗಾದರೂ ಕೈ ಕುಲುಕಲು ಅಭ್ಯರ್ಥಿಗೆ ಸಮಯ ಬೇಕಾಗುತ್ತದೆ. ಆದರೆ, ಕೇವಲ ಮೂರು ಅಥವಾ ನಾಲ್ಕು ವಾರಗಳಲ್ಲಿ ಇಷ್ಟೊಂದು ಜನರನ್ನು ಒಬ್ಬ ಅಭ್ಯರ್ಥಿ ತಲುಪು­ವು­ದಾದರೂ ಹೇಗೆ?

ಬಹಳ ಮುಂಚಿತವಾಗಿಯೇ ಅಭ್ಯರ್ಥಿಗಳ ಹೆಸರನ್ನು ಘೋಷಿಸುವುದರಿಂದ ಆ ಕ್ಷೇತ್ರದ ಮತ­ದಾರರು ತಾವು ಆಯ್ಕೆ ಮಾಡಲಿರುವ ವ್ಯಕ್ತಿಯ ಗುಣ ಮತ್ತು ವರ್ತನೆಯ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ. ಅಭ್ಯರ್ಥಿಯೂ ಎಲ್ಲ­ರನ್ನು ಸೂಕ್ತ ರೀತಿಯಲ್ಲಿ ತಲುಪಲು ಸಾಧ್ಯವಾ­ಗು­ತ್ತದೆ.

ಇದರಿಂದ ರಾಜಕೀಯ ಪಕ್ಷಗಳಿಗೂ ಸಹಾಯವಾಗುತ್ತದೆ. ಒಂದು ವೇಳೆ ಅಭ್ಯರ್ಥಿ ಅದಕ್ಷ ಎಂಬುದು ಸಾಬೀತಾದರೆ ಅಥವಾ ಜನ­ರಿಗೆ ಸಮ್ಮತವಾಗದಿದ್ದರೆ, ಆಕೆ ಅಥವಾ ಆತನ ವಿರುದ್ಧ ದೂರುಗಳಿದ್ದರೆ ಈ ಕುರಿತು ಮರು ಚಿಂತಿ­ಸಲು ಪಕ್ಷಕ್ಕೆ ಸಮಯ ಇರುತ್ತದೆ. ಮತ್ತು ಬೇರೊಬ್ಬ ಅಭ್ಯರ್ಥಿಯ ಹೆಸರನ್ನು ಘೋಷಿಸ­ಬಹುದು. ಇದರಿಂದ ಜನರು ತಮ್ಮ ಪ್ರತಿನಿಧಿ ಆಗುವವರ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯ­ವಾಗುತ್ತದೆ. ಇದಕ್ಕೆ ಸಮಯ ಅವರಿಗೆ ಇರುತ್ತದೆ.

ಒಬ್ಬ ನಾಯಕ ಜನರ ಹೃದಯವನ್ನು ಗೆಲ್ಲುವ ಮೂಲಕ ತಳಮಟ್ಟದಿಂದ ಮೇಲೆ ಬರಬೇಕೇ ಹೊರತು ಪಕ್ಷದ ಹೈಕಮಾಂಡ್‌ ಅಭ್ಯರ್ಥಿಯನ್ನು ಹೇರಬಾರದು. ಪ್ರಜಾಸತ್ತಾತ್ಮಕ  ರಾಷ್ಟ್ರದಲ್ಲಿ ಜನ­ಪ್ರತಿನಿಧಿಗಳಾಗುವವರು ನಾವು ಯಾರನ್ನು ಪ್ರತಿನಿಧಿಸಲಿದ್ದೇವೆ ಎನ್ನುವುದು ಅವರಿಗೆ ತಿಳಿದಿರ­ಬೇಕು. ಇದೇ ರೀತಿ ಜನರಿಗೆ ಕೂಡ ಅವರ ನಾಯ­ಕರು ಎಂಥವರು ಎನ್ನುವುದು ಗೊತ್ತಿರಬೇಕು.

ಈಗ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಟಿಕೆಟ್‌ ಹಂಚಿಕೆ ಮಾಡಲಾಗುತ್ತದೆ. ಎಷ್ಟೋ ಬಾರಿ ಅಭ್ಯರ್ಥಿಗಳ ಅಂತಿಮ ಪಟ್ಟಿ ನೋಡಿದ ಬಳಿಕ ಪಕ್ಷದ ಕಾರ್ಯಕರ್ತರು ತೀವ್ರ ನಿರಾಸೆಗೆ ಒಳ­ಗಾಗುತ್ತಾರೆ. ಪಕ್ಷಕ್ಕಾಗಿ ಸಾಕಷ್ಟು ಶ್ರಮ ವಹಿ­ಸಿ­ದರೂ ಅವರ ಕೂಗನ್ನು ಯಾರು ಕೇಳಿಸಿಕೊಳ್ಳುವುದಿಲ್ಲ. ಆಗ ಅವರು ಬಂಡಾಯ ಏಳುತ್ತಾರೆ.

ಯಾವಾಗಲೂ ಅಭ್ಯರ್ಥಿ ಸ್ಥಳೀಯ ವ್ಯಕ್ತಿ ಆಗಿ­ರಬೇಕೆಂದೇನೂ ಇಲ್ಲ. ಒಂದುವೇಳೆ ಹೊರಗಿ­ನ­ವರ ಹೆಸರನ್ನು ಪಕ್ಷ ಘೋಷಿಸಿದರೆ ಆ ಅಭ್ಯರ್ಥಿ ಆ ಕ್ಷೇತ್ರದಲ್ಲಿ ನೆಲೆಸಿರಬೇಕು. ಜನರನ್ನು ತಲುಪ­ಬೇಕು ಮತ್ತು ಅವರ ಸಂಪರ್ಕದಲ್ಲಿರಬೇಕು. ಇದಕ್ಕಾಗಿ ಸಮಯದ ಅಗತ್ಯ ಇರುತ್ತದೆ.

ಸದ್ಯ ಪರಿಸ್ಥಿತಿ ಹೇಗಿದೆಯೆಂದರೆ, ಜಾತಿ ಸಮೀ­ಕ­ರಣ, ಹಣ ಬಲ ಸೇರಿದಂತೆ ಇತರ ಅಂಶಗಳ ಆಧಾ­ರದ ಮೇಲೆ ಪಕ್ಷದ ಚುನಾವಣಾ ಸಮಿತಿ­ಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸು­ತ್ತವೆ. ಹಲವು ಸಂದರ್ಭಗಳಲ್ಲಂತೂ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ.

ಇದರಿಂದ ಎದುರಾಳಿಗೆ ಸುಲಭವಾಗಿ ಗೆಲುವು ದಕ್ಕುತ್ತದೆ. ದೀರ್ಘಕಾಲದಿಂದ ಪಕ್ಷಗಳ ಮಧ್ಯೆ ನಡೆದು­ಕೊಂಡು ಬಂದಿರುವ ಈ ಅಕ್ರಮ ಒಳ ‘ಒಪ್ಪಂದ’­ವನ್ನು ಜಗಜ್ಜಾಹೀರು ಮಾಡಬಹುದು ಮತ್ತು ತಡೆ­­ಯಬಹುದಾಗಿದೆ.  ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ವಿಕೇಂದ್ರೀಕರಣ ಆರಂಭಿ­ಸಿ­ದರೆ ಅದು ಮಾದರಿಯಾಗಬಲ್ಲದು.

ಅನೇಕ ವೇಳೆ ಟಿಕೆಟ್‌ ಹಂಚಿಕೆ ಹಣ ಮಾಡುವ ದಂಧೆಯಾಗಿರುತ್ತದೆ. ಕೆಲ ಸಂದರ್ಭ­ಗಳಲ್ಲಂತೂ ಎದುರಾಳಿ ಅಭ್ಯರ್ಥಿಯನ್ನು ಆತನ ವಿರೋಧಿಗಳೇ ಖರೀದಿಸುತ್ತಾರೆ. ಒಂದುವೇಳೆ ಟಿಕೆಟ್‌ ಹಂಚಿಕೆ ವ್ಯವಸ್ಥೆ ಸರಳಗೊಳಿಸಿದರೆ ಮತ್ತು ಮುಂಚಿತವಾಗಿ ಸೂಕ್ತ ರೀತಿಯಲ್ಲಿ ನಡೆದರೆ ಚುನಾವಣಾ ಪ್ರಕ್ರಿಯೆ ಕೂಡ ಬಹಳ ಸರಳ­ವಾಗುತ್ತದೆ. ಚುನಾವಣಾ ಸಂಬಂಧಿ ಹಲವು ಅಪರಾಧ ಮತ್ತು ಹಿಂಸಾಚಾರಗಳನ್ನು ತಡೆಯ­ಬಹುದು. ಇಂಡೊನೇಷ್ಯಾ­ದಲ್ಲಿ ಇಂದು ಚುನಾವಣೆ ನಡೆದಿದ್ದು, ಆ ದೇಶದಲ್ಲಿ ಕಳೆದ ಆಗಸ್ಟ್‌ನಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಬಹಳಷ್ಟು ಮುಂಚಿತವಾಗಿಯೇ ತಮ್ಮ ಪ್ರತಿ­ಸ್ಪರ್ಧಿ ಯಾರೆಂಬುದು ಒಂದುವೇಳೆ ಅಭ್ಯರ್ಥಿ­ಗಳಿಗೆ ಗೊತ್ತಾದರೆ ಕ್ಷೇತ್ರದ ಜನರ ಸೇವೆ ಮಾಡು­ವುದಕ್ಕೆ ಸಂಬಂಧಿಸಿದಂತೆ ಅವರಲ್ಲಿಯೇ ಸಕಾರಾ­ತ್ಮಕವಾದ ಸ್ಪರ್ಧೆಗೆ ಕಾರಣವಾಗುತ್ತದೆ.
ಇಡೀ ಒಂದು ರಾಷ್ಟ್ರ, ಅದರ ನಾಗರಿಕ ಸಮಾಜ, ಶಾಸಕಾಂಗ ಮತ್ತು ನ್ಯಾಯಾಂಗದ ಅಂಗಗಳು ಸೇರಿ ಆರೋಗ್ಯವಂತ ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣ ಮಾಡಬಹುದು.

ಉತ್ತಮ ಸರ್ಕಾರಕ್ಕಾಗಿ ನಮ್ಮ ಮನ ನಿಜವಾ­ಗಲೂ ಹಾತೊರೆದಿದೆಯೇ? ಎಂಬ ಪ್ರಶ್ನೆ ಎದು­ರಾಗುತ್ತದೆ. ಈ ಬಗ್ಗೆ ನಾವು ಗಂಭೀರವಾಗಿ­ದ್ದೇವೆಯೇ? ನಾವು ಎಂದೆಂದಿಗೂ ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣದಿಂದ ಹೊರ­ಬರಲು ಸಾಧ್ಯವಿಲ್ಲವೇ? ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚಾಗಿ ನಮ್ಮನ್ನು ಕಾಡುತ್ತಿವೆ. ಏನೇ ಇರಲಿ ಈ ಪ್ರಶ್ನೆಗಳನ್ನು ಸದಾ ನಮ್ಮನ್ನು ನಾವು ಕೇಳುತ್ತಲೇ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT