ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾಟ್‌ ಫಿಕ್ಸಿಂಗ್: ಕಾಲಾವಕಾಶ ಪಡೆಯಲು ನಿರ್ಧಾರ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸಲು  ಮತ್ತಷ್ಟು ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳಲು ಮುಕುಲ್‌ ಮುದ್ಗಲ್‌ ನೇತೃತ್ವದ ಸಮಿತಿ ನಿರ್ಧರಿಸಿದೆ.

ಸ್ಪಾಟ್‌ ಫಿಕ್ಸಿಂಗ್‌್ ಪ್ರಕರಣ ಬೆಳಕಿಗೆ ಬಂದಾಗ ಸುಪ್ರೀಂ ಕೋರ್ಟ್‌್ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಾರಥ್ಯದಲ್ಲಿ ಸಮಿತಿ ರಚಿಸಿ ಆಗಸ್ಟ್‌್ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ತನಿಖೆ ಪೂರ್ಣಗೊಳ್ಳದ ಕಾರಣ ಕಾಲಾವಕಾಶ ಕೇಳಲು ಸಮಿತಿ ನಿರ್ಧರಿಸಿದೆ.

‘ತನಿಖೆಯನ್ನು ಪೂರ್ಣಗೊಳಿಸಲು ನಮಗೆ ಕಾಲಾವಕಾಶದ ಅಗತ್ಯವಿದೆ. ಆದ್ದರಿಂದ ಆಗಸ್ಟ್‌ 27ರಂದು ಸಭೆ ಸೇರಿ  ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಇಂಗ್ಲೆಂಡ್‌ಗೆ ತೆರಳಿ ಭಾರತ ಕ್ರಿಕೆಟ್‌ ತಂಡದ ಕೆಲ ಆಟಗಾರರನ್ನು ವಿಚಾರಣೆಗೆ ಒಳಪಡಿಸುವ ವಿಚಾರ ನಮ್ಮ ಮುಂದೆ ಇಲ್ಲ’ ಎಂದು ಮುದ್ಗಲ್‌ ಸ್ಪಷ್ಟಪಡಿಸಿದರು.

ಮಾಧ್ಯಮಗಳ ವರದಿಗೆ ಆಕ್ರೋಶ: ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮುಖ್ಯಸ್ಥ ಎನ್‌. ಶ್ರೀನಿವಾಸನ್‌ ಮತ್ತು ಅವರ ಅಳಿಯ ಗುರುನಾಥ್ ಮೇಯಪ್ಪನ್‌ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ ಸುದ್ದಿ ಸುಳ್ಳು ಎಂದು ಅವರು ಹೇಳಿದರು.

ಇದೇ ತಿಂಗಳು 15 ಮತ್ತು 16ರಂದು ಮುದ್ಗಲ್‌ ಸಮಿತಿಯ ಸದಸ್ಯರು ಶ್ರೀನಿವಾಸನ್‌ ಮತ್ತು ಮೇಯಪ್ಪನ್‌ ಅವರನ್ನು ಭೇಟಿಯಾಗಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಮುದ್ಗಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇಟ್‌ಲಿಫ್ಟಿಂಗ್‌: ಕವಿತಾ ದೇವಿಗೆ ಸ್ಥಾನ
ನವದೆಹಲಿ (ಪಿಟಿಐ): ಮುಂಬರುವ ಏಷ್ಯನ್‌ ಕ್ರೀಡಾಕೂಟಕ್ಕೆ ಬುಧವಾರ ಭಾರತ ವೇಟ್‌ಲಿಫ್ಟಿಂಗ್‌ ತಂಡವನ್ನು ಪ್ರಕಟಿಸಲಾಗಿದ್ದು, ಮಹಿಳೆಯರ 75 ಕೆ.ಜಿ.ವಿಭಾಗದ ಸ್ಪರ್ಧಿ ಕವಿತಾ ದೇವಿಗೆ   ಸ್ಥಾನ ನೀಡಲಾಗಿದೆ.
ಉಳಿದಂತೆ  ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕೂಟದಲ್ಲಿ ಸ್ಪರ್ಧಿಸಿದ್ದ ಒಂಬತ್ತು ಮಂದಿಯೂ ತಂಡದಲ್ಲಿ ಮುಂದುವರಿದಿದ್ದಾರೆ.

ಕಾಮನ್‌ವೆಲ್ತ್‌ ಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಲಿಫ್ಟರ್‌ಗಳು ಒಟ್ಟು ಏಳು ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿ ಪ್ರತ್ಯೇಕವಾಗಿ ಆಯ್ಕೆ ಟ್ರಯಲ್ಸ್‌ ನಡೆಸದೇ ತಲಾ 5 ಮಂದಿ ಪುರುಷರ ಮತ್ತು ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿದೆ. 

‘ಆಗಸ್ಟ್‌ 3 ರಂದು ಕಾಮನ್‌ವೆಲ್ತ್‌ ಕೂಟ ಮುಕ್ತಾಯವಾಗಿದೆ. ಸೆಪ್ಟೆಂಬರ್‌ 19ರಿಂದ ಏಷ್ಯನ್‌ ಕೂಟ ಆರಂಭವಾಗಲಿದೆ. ಈ ನಡುವೆ  ಲಿಫ್ಟರ್‌ಗಳಿಗೆ ಕೇವಲ ಒಂದು ತಿಂಗಳ ಬಿಡುವಿತ್ತು.  ಹೀಗಾಗಿ ಈ ಬಾರಿ ಏಷ್ಯನ್‌ ಕೂಟಕ್ಕೆ ಪ್ರತ್ಯೇಕವಾಗಿ ಆಯ್ಕೆ ಟ್ರಯಲ್ಸ್‌ ನಡೆಸಲು ಸಾಧ್ಯವಾಗಲಿಲ್ಲ’ ಎಂದು ಮಹಿಳಾ ತಂಡದ ಕೋಚ್‌ ಹಂಸ ಶರ್ಮಾ ತಿಳಿಸಿದ್ದಾರೆ.

ತಂಡ ಇಂತಿದೆ: ಪುರುಷರು: ಸುಖೇನ್‌ ಡೇ (56 ಕೆ.ಜಿ ವಿಭಾಗ), ರುಸ್ತಮ್‌ ಸರಂಗ್‌ (62 ಕೆ.ಜಿ), ಸತೀಶ್‌ ಶಿವಲಿಂಗಮ್‌ (77 ಕೆ.ಜಿ), ಕೆ.ರವಿ ಕುಮಾರ್‌ (77 ಕೆ.ಜಿ) ಮತ್ತು ವಿಕಾಸ್‌ ಠಾಕೂರ್‌ (85 ಕೆ.ಜಿ). ಮಹಿಳಾ ತಂಡ: ಖುಮುಕ್‌ಚಾಮ್‌ ಸಂಜಿತಾ ಚಾನು (48 ಕೆ.ಜಿ), ಸಾಯಿಕೋಮ್‌ ಮೀರಾಬಾಯಿ ಚಾನು (48 ಕೆ.ಜಿ), ಪೂನಂ ಯಾದವ್‌ (63 ಕೆ.ಜಿ), ವಂದನಾ ಗುಪ್ತಾ (63 ಕೆ.ಜಿ) ಮತ್ತು  ಕವಿತಾ ದೇವಿ (75 ಕೆ.ಜಿ).

ಬೆಂಗಳೂರಿನ ಅಭಿನಯ್‌ಗೆ 3ನೇ ಸ್ಥಾನ 
ಬೆಂಗಳೂರು: ಬಿ. ಅಭಿನಯ್‌ ಈಚೆಗೆ ಇಂಗ್ಲೆಂಡ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆದ ನಿಸಾನ್‌ ಜಿ.ಟಿ. ಅಕಾಡೆಮಿ ಅಂತರರಾಷ್ಟ್ರೀಯ ರೇಸ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಭಾರತ, ಮೆಕ್ಸಿಕೊ, ಥಾಯ್ಲೆಂಡ್‌ನಲ್ಲಿ ನಡೆದ ರೇಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಅಭಿನಯ್‌ ಪಾಲ್ಗೊಂಡಿದ್ದರು. ಸಿಲ್ವರ್‌ ಸ್ಟೋನ್‌ನಲ್ಲಿ ನಡೆದ ರೇಸ್‌ನಲ್ಲಿ ಆರು ರಾಷ್ಟ್ರಗಳ 27 ಅಂತರರಾಷ್ಟ್ರೀಯ ಸ್ಪರ್ಧಿಗಳು  ಭಾಗವಹಿಸಿದ್ದರು.

ಆಸ್ಟ್ರೇಲಿಯದ ಜಾನ್‌ ಮುಗ್ಲೆಟನ್‌ ಮತ್ತು ಮೆಕ್ಸಿಕೊದ ರಿಚರ್ಡ್‌ ಸಾಂಚೆಜ್‌ ಕ್ರಮವಾಗಿ ಮೊದಲ ಎರಡು ಸ್ಥಾನ ತಮ್ಮದಾಗಿಸಿಕೊಂಡರು. ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಭಿನಯ್‌, ‘ವಿಶ್ವದ ಖ್ಯಾತ ಸ್ಪರ್ಧಿಗಳ ಜೊತೆ ಪೈಪೋಟಿ ನಡೆಸುವ ಅವಕಾಶ ಲಭಿಸಿದ್ದರಿಂದ ಉತ್ತಮ ಅನುಭವ ಪಡೆಯಲು ಸಾಧ್ಯವಾಯಿತು. ಮುಂದೆಯೂ ಹೆಚ್ಚೆಚ್ಚು ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಬೇಕೆನ್ನುವ ಗುರಿಯಿದೆ. ಶುಕ್ರವಾರ ಚೆನ್ನೈಯಲ್ಲಿ ಆರಂಭವಾಗಲಿರುವ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೇಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ಸದ್ಯದ ನನ್ನ ಆಸೆ’ ಎಂದರು.

ಅ.15ರಿಂದ ಐಎಸ್‌ಎಲ್‌ ಪಂದ್ಯ
ಕೊಚ್ಚಿ (ಪಿಟಿಐ): ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ನ ಏಳು ಪಂದ್ಯಗಳನ್ನು ಅಕ್ಟೋಬರ್‌ 15 ರಿಂದ ಕೊಚ್ಚಿಯ ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಉಳಿದ ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 26, ನವೆಂಬರ್‌ 4, 7, 12, 23 ಮತ್ತು 30 ರಂದು ನಡೆಯಲಿವೆ ಎಂದು ಕೇರಳ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷರಾದ ಕೆ.ಎಂ.ಐ. ಮಾತೆರ್‌ ತಿಳಿಸಿದ್ದಾರೆ.

ಜ್ಯುಪಿಟರ್‌ ಕ್ರಿಕೆಟ್‌ ಸಂಸ್ಥೆ ಚಾಂಪಿಯನ್‌
ಬೆಂಗಳೂರು:  ಜ್ಯುಪಿಟರ್‌ ಕ್ರಿಕೆಟ್‌ ಸಂಸ್ಥೆ ತಂಡ   ಕರ್ನಾಟಕ ರಾಜ್ಯ  ಕ್ರಿಕೆಟ್‌ ಸಂಸ್ಥೆ ಆಶ್ರಯದಲ್ಲಿ   ನಾಸುರ್‌ ಸ್ಮಾರಕ  ಶೀಲ್ಡ್‌ಗಾಗಿ ನಡೆದ ಮೂರನೇ ಡಿವಿಷನ್‌ ಕ್ರಿಕೆಟ್‌ ಲೀಗ್‌  ಗುಂಪು–1ರ ಟೂರ್ನಿಯಲ್ಲಿ  ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಬುಧವಾರ ಮುಕ್ತಾಯವಾದ  ಕ್ಯಾವಲಿಯರ್ಸ್‌ ಕ್ರಿಕೆಟ್ ಕ್ಲಬ್‌ ಎದುರಿನ ಅಂತಿಮ ಲೀಗ್‌ ಪಂದ್ಯದಲ್ಲಿ ಜ್ಯುಪಿಟರ್‌ ಕ್ರಿಕೆಟ್‌ ಸಂಸ್ಥೆ 2 ವಿಕೆಟ್‌ ಜಯ ಸಾಧಿಸಿತು.ಮೊದಲು ಬ್ಯಾಟ್‌ ಮಾಡಿದ  ಕ್ಯಾವಲಿಯರ್ಸ್‌ ಕ್ರಿಕೆಟ್‌ ಕ್ಲಬ್‌ 41 ಓವರ್‌ಗಳಲ್ಲಿ  90ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿ ಬೆನ್ನಟ್ಟಿದ ಜ್ಯುಪಿಟರ್‌ ಕ್ರಿಕೆಟ್‌ ಸಂಸ್ಥೆ 21.3 ಓವರ್‌ಗಳಲ್ಲಿ  8 ವಿಕೆಟ್‌ಗೆ  91ರನ್‌ ಗಳಿಸಿ ಸಂಭ್ರಮಿಸಿತು.

ಇದರೊಂದಿಗೆ ಟೂರ್ನಿಯಲ್ಲಿ  ಆಡಿದ 11 ಪಂದ್ಯಗಳ ಪೈಕಿ 8 ಜಯ,  ಹಾಗೂ 3 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ  ಒಟ್ಟು  32 ಪಾಯಿಂಟ್ಸ್‌ ಕಲೆಹಾಕಿ ಅಗ್ರ ಸ್ಥಾನದೊಂದಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.

ಸ್ನೂಕರ್‌: ಬೆಂಗಳೂರು ಸಿಟಿ ಇನ್ಸ್‌ಟ್ಯೂಟ್‌ಗೆ ಜಯ
ಬೆಂಗಳೂರು: ಬೆಂಗಳೂರು ಸಿಟಿ ಇನ್ಸ್‌ಟ್ಯೂಟ್‌ ತಂಡ ಇಲ್ಲಿ ನಡೆಯುತ್ತಿರುವ ಗೋಪಾಲ್‌ ಎನ್‌. ಚುಗ್‌ ಸ್ಮಾರಕ ಅಂತರ ಕ್ಲಬ್‌ ಸ್ನೂಕರ್ ಮತ್ತು ಬಿಲಿಯರ್ಡ್ಸ್‌ ಟೂರ್ನಿಯ ಸ್ನೂಕರ್‌ ಪೈಪೋಟಿಯಲ್ಲಿ 2–0 ರಲ್ಲಿ ಬೆಂಗಳೂರು ಕ್ಲಬ್‌ ‘ಎ’ ತಂಡವನ್ನು ಮಣಿಸಿತು. ಸ್ನೂಕರ್‌ ವಿಭಾಗದ ಮೊದಲ ಪಂದ್ಯದಲ್ಲಿ ಬೆಂಗಳೂರು ಸಿಟಿ ಇನ್ಸ್‌ಟ್ಯೂಟ್‌ ತಂಡದ ಎ.ಆರ್‌ ಅರ್ಜುನ್‌ 95–49 ರಲ್ಲಿ ರಾಹುಲ್‌ ಸೋಧಾ ಎದುರು ಗೆದ್ದರು.

ಬಿಲಿಯರ್ಡ್ಸ್‌ ವಿಭಾಗದ ಪಂದ್ಯದಲ್ಲೂ ಬೆಂಗಳೂರು ಸಿಟಿ ಇನ್ಸ್‌ಟ್ಯೂಟ್‌ ತಂಡದ ಎಸ್‌.ಎನ್‌ ನಾಗೇಶ್‌ 100–00 ರಲ್ಲಿ ನಿರವ್‌ ಪಾರೇಖ್‌ ಎದುರು ಸುಲಭವಾಗಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT