ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್‌ ಸುಳಿಯಲ್ಲಿ ಬಸವಳಿದ ಆಮ್ಲಾ ಪಡೆ

ನಾಗಪುರ ಟೆಸ್ಟ್: ಒಂದೇ ದಿನ 20 ವಿಕೆಟ್ ಪತನ; ಭಾರತದ ಜಯಕ್ಕೆ ಎಂಟು ಮೆಟ್ಟಿಲು ಬಾಕಿ
Last Updated 27 ನವೆಂಬರ್ 2015, 11:29 IST
ಅಕ್ಷರ ಗಾತ್ರ

ನಾಗಪುರ: ‘ಅತ್ಯುತ್ತಮ ಪ್ರವಾಸಿ ಕ್ರಿಕೆಟ್ ತಂಡ’ ದಕ್ಷಿಣ ಆಫ್ರಿಕಾ ಎಂಟು ವರ್ಷಗಳ ನಂತರ ಸರಣಿ ಸೋಲಿನ ಕಹಿ ಉಣಿಸಲು ವೇದಿಕೆ ಸಿದ್ಧವಾಗಿದೆ. ಮಹಾತ್ಮಾ ಗಾಂಧಿ–ನೆಲ್ಸನ್ ಮಂಡೇಲಾ ಕ್ರಿಕೆಟ್ ಸರಣಿಯ ಮೂರನೇ ಟೆಸ್ಟ್‌ನ ಎರಡನೇ ದಿನ 20 ವಿಕೆಟ್‌ಗಳನ್ನು ನುಂಗಿದ ಜಮ್ತಾ ಅಂಗಳದಲ್ಲಿ ಭಾರತವು ಜಯಭೇರಿ ಬಾರಿಸಲು ಇನ್ನು ಎಂಟು ಮೆಟ್ಟಿಲುಗ ಳನ್ನು ಹತ್ತಬೇಕು.

ಒಂದೊಂದು ರನ್‌ ಗಳಿಸಲೂ ಹರ ಸಾಹಸ ಪಡಬೇಕಾದ ಪಿಚ್‌ನಲ್ಲಿ ಹಾಶೀಮ್ ಆಮ್ಲಾ ಬಳಗವು 310 ರನ್‌ಗಳ ಗುರಿ ಮುಟ್ಟಬೇಕು. ಗುರುವಾರ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 14 ಓವರ್‌ಗಳಲ್ಲಿ 31 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದು ಕೊಂಡಿದೆ. ಇನ್ನು ಎಂಟು ವಿಕೆಟ್‌ಗಳು ಉಳಿದಿವೆ. ಅದರಲ್ಲಿ 278 ರನ್ ಗಳಿಸಬೇಕು.

ಆದರೆ, ಇದು ಸುಲಭಸಾಧ್ಯವಲ್ಲ. ಬುಧವಾರ ಮೊದಲ ಇನಿಂಗ್ಸ್‌ನಲ್ಲಿ ಭಾರತ ಗಳಿಸಿದ 215 ರನ್ ಬಾಕಿ ತೀರಿ ಸಲು ಪ್ರವಾಸಿ ಬಳಗಕ್ಕೆ ಸಾಧ್ಯವಾಗಲಿಲ್ಲ. ಕೇವಲ 79 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡು ಭಾರತದ ಎದುರು ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಅತಿ ಕಡಿಮೆ ಮೊತ್ತಕ್ಕೆ ಕುಸಿದ ‘ದಾಖಲೆ’ ಬರೆಯಿತು. ಎರಡನೇ  ಇನಿಂಗ್ಸ್‌ನಲ್ಲಿ ಭಾರತ ತಂಡವೂ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 173 (46.3 ಓವರ್‌ಗಳು) ರನ್ ಗಳಿಸಿತು.   

ನಿನ್ನೆಯಂತೆಯೇ ಡೀನ್ ಎಲ್ಗರ್ (ಬ್ಯಾಟಿಂಗ್ 10) ಮತ್ತು ಹಾಶೀಮ್ ಆಮ್ಲಾ (ಬ್ಯಾಟಿಂಗ್ 03) ಕ್ರೀಸ್‌ ನಲ್ಲಿದ್ದಾರೆ.

ಅಶ್ವಿನ್‌–ಜಡೇಜಾ ‘ಭಯ’: ಸಮರ್ಥ ಬ್ಯಾಟಿಂಗ್ ಪಡೆ ಇದ್ದರೂ ದಕ್ಷಿಣ ಆಫ್ರಿಕಾ ಬಳಗವು ಮಾನಸಿಕವಾಗಿ ಸ್ಪಿನ್ ಭಯ ಎದುರಿಸುತ್ತಿದೆ. ಆ ಕಾರಣಕ್ಕೆ ಕಳಪೆ ಆಟ ಆಡುತ್ತಿದೆ ಎನ್ನುವುದಕ್ಕೆ ಗುರುವಾರದ ನಾಟಕೀಯ ತಿರುವುಗಳು ಸಾಕ್ಷಿಯಾದವು.

ದಕ್ಷಿಣ ಆಫ್ರಿಕಾ ತಂಡವು ಬೆಳಿಗ್ಗೆ ಬ್ಯಾಟಿಂಗ್ ಮಾಡಿದ 90 ನಿಮಿಷಗಳ ಅವಧಿಯಲ್ಲಿ  ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಮೋಡಿ ಆವರಿಸಿತು.  ಮೊಹಾಲಿ ಟೆಸ್ಟ್ ಮತ್ತು ಬೆಂಗಳೂರು ಪಂದ್ಯದ ಮೊದಲ ದಿನದ ಮಾದರಿ ಯಲ್ಲಿಯೇ ಇವರಿಬ್ಬರು ಸೃಷ್ಟಿಸಿದ ‘ತಿರುಗಣಿ’ ಮಡುವಿನಲ್ಲಿ ಎದುರಾಳಿ ತಂಡವು ಬಿದ್ದಿತು.

ಅವರ ಕೈಗಳಿಂದ ಬಿಡುಗಡೆಗೊಂಡ ಚೆಂಡು ಪಿಚ್‌ ಮೇಲೆ ಪುಟಿದು ಎಡ ಅಥವಾ ಬಲಕ್ಕೆ ತಿರುಗುತ್ತಿತ್ತು. ಅದರ ಚಲನೆಯನ್ನು ಗ್ರಹಿಸುವಲ್ಲಿ ಎಡವಿ ಔಟಾ ದರು. ದಿನದ ಮೊದಲ ಓವರ್‌ನಿಂದಲೇ  ದಕ್ಷಿಣ ಆಫ್ರಿಕಾ ತಂಡದ ಪತನ ಆರಂಭವಾಯಿತು. 

ಬುಧವಾರ ಸಂಜೆಯಿಂದ ಕ್ರೀಸ್‌ನ ಲ್ಲಿದ್ದ ಡೀನ್ ಎಲ್ಗರ್ ಎರಡನೇ ದಿನ ಬೆಳಿಗ್ಗೆ ಮೊದಲ ಓವರ್‌ನಲ್ಲಿ ಅಶ್ವಿನ್ ಎಸೆತವನ್ನು  ಕಟ್ ಮಾಡಿದ್ದು ಮುಳು ವಾಯಿತು. ಬ್ಯಾಟಿಗೆ ಮುತ್ತಿಕ್ಕಿದ ಚೆಂಡು ಸೀದಾ ಸ್ಟಂಪ್‌ಗೆ ಅಪ್ಪಳಿಸಿತು. ಅಲ್ಲಿಂದ ಬ್ಯಾಟ್ಸ್‌ಮನ್‌ಗಳ ‘ಪಥಸಂಚಲನ’ ಆರಂಭವಾಯಿತು. ಹಾಶೀಮ್ ಆಮ್ಲಾ (01), ಸೈಮನ್ ಹಾರ್ಮರ್ (13) ಮತ್ತು ಕೊನೆಯಲ್ಲಿ ಮಾರ್ನೆ ಮಾರ್ಕೆಲ್ (01) ಅವರ ವಿಕೆಟ್ ಪಡೆದ ‘ಚೆನ್ನೈ ಹುಡುಗ’ ನಗೆ ಬೀರಿದರು. ಅಶ್ವಿನ್ ಇದೇ ಸರಣಿಯಲ್ಲಿ ಎರಡನೇ ಬಾರಿ ಐದು ವಿಕೆಟ್‌ ಪಡೆದ ಸಾಧನೆ ಮಾಡಿದರು.

ಮೊಹಾಲಿ ಪಂದ್ಯಶ್ರೇಷ್ಠ ರವೀಂದ್ರ ಜಡೇಜಾ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ಚುರುಕು ಮುಟ್ಟಿಸಿದರು. ತಮ್ಮ ಎಡಗೈ ಸ್ಪಿನ್ ಮೋಡಿಯ ಮೂಲಕ ಜಡೇಜಾ ದಕ್ಷಿಣ ಆಫ್ರಿಕಾದ ‘ಸೂಪರ್‌ಮ್ಯಾನ್’ ಎ.ಬಿ. ಡಿವಿಲಿಯರ್ಸ್ ಅವರಿಗೆ ಖಾತೆ ತೆರಯಲೂ ಬಿಡಲಿಲ್ಲ. ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿ (10) ಅವರಿಗೂ ಪೆವಿಲಿಯನ್ ದಾರಿ ತೋರಿ ದರು.  ಡೇನ್ ವಿಲಾಸ್ ಅವರನ್ನೂ ಜಡೇಜಾ ಕ್ಲೀನ್‌ ಬೌಲ್ಡ್‌ ಮಾಡಿದರು. 

ಡುಮಿನಿ ದಿಟ್ಟತನ: ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನೆಲಕಚ್ಚಿ ಆಡುತ್ತಿದ್ದ ಜೆ.ಪಿ. ಡುಮಿನಿ (35; 71ನಿ, 65ಎ, 1ಬೌಂ, 2ಸಿ) ಮಾತ್ರ ಪ್ರತಿರೋಧ ಒಡ್ಡಿ ದರು. ಅಶ್ವಿನ್ ಬೌಲಿಂಗ್ ಮಾಡಿದ 18ನೇ ಓವರ್‌ನಲ್ಲಿ ಡುಮಿನಿ ಕೊಟ್ಟ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿದ್ದ ವಿರಾಟ್ ಕೊಹ್ಲಿ ನೆಲಕ್ಕೆ ಚೆಲ್ಲಿದರು. ನಂತರ ಜಡೇಜಾ ಓವರ್‌ನಲ್ಲಿ ಡುಮಿನಿ ಆಕರ್ಷಕ ಸಿಕ್ಡರ್ ಎತ್ತಿದರು.
28ನೇ ಓವರ್‌ನಲ್ಲಿ ಜಡೇಜಾ ಬದಲಿಗೆ ದಾಳಿಗಿಳಿದ ಅಮಿತ್ ಮಿಶ್ರಾ ಕೂಡ ಪರಿಣಾಮಕಾರಿ ದಾಳಿ ಆರಂಭಿ ಸಿದರು. ತಮ್ಮ ಮೂರನೇ ಓವರ್‌ನಲ್ಲಿ ಜೆ.ಪಿ. ಡುಮಿನಿಯನ್ನು ಎಲ್‌ಬಿ ಬಲೆಗೆ ಕೆಡವಿದರು.

ಬ್ಯಾಟಿಂಗ್ ದೌರ್ಬಲ್ಯ; ಇಮ್ರಾನ್ ಮಿಂಚು: ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಐದು ವಿಕೆಟ್ ಗಳಿಸಿ ಜಮ್ತಾ ಅಂಗಳ ವನ್ನು ಚುಂಬಿಸುವ ಮುನ್ನ ಭಾರತದ ಬ್ಯಾಟಿಂಗ್ ಪಡೆಯು ತನ್ನ ಕೆಲಸವನ್ನು ಮುಗಿಸಿತ್ತು. 173 ರನ್ ಗಳಿಸಿತು. ಆದರೆ, ಮತ್ತೊಮ್ಮೆ ತಂಡದ ಬ್ಯಾಟಿಂಗ್ ದೌರ್ಬಲ್ಯ ಬಹಿರಂಗವಾಯಿತು.  ಬಹು ತೇಕ ವಿಕೆಟ್‌ಗಳು ಪತನಗೊಂಡಿದ್ದು ಪಿಚ್ ಕಾರಣಕ್ಕೆ ಅಲ್ಲ. ಆದರೆ, ತಪ್ಪು ಹೊಡೆತಗಳನ್ನು ಆಡಿದ್ದಕ್ಕೆ ಎನ್ನುವು ದಂತೂ ಖಚಿತ.

ಮುರಳಿ ವಿಜಯ್ ಕೆಟ್ಟ ಹೊಡೆತಕ್ಕೆ ಯತ್ನಿಸಿ ವೇಗಿ ಮಾರ್ನೆ ಮಾರ್ಕೆಲ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಉತ್ತಮ ವಾಗಿ ಆಡುತ್ತಿದ್ದ ಶಿಖರ್ ಧವನ್  (39 ರನ್) ಅನಗತ್ಯವಾಗಿ ರಿವರ್ಸ್ ಸ್ವೀಪ್ ಆಡಲು ಹೋಗಿ ದಂಡ ತೆತ್ತರು. ಚೇತೇಶ್ವರ್ ಪೂಜಾರ (31) ಸುಂದರ ಆಟ ಪ್ರದರ್ಶಿಸಿ ಡುಮಿನಿಗೆ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ (16), ಅಜಿಂಕ್ಯ ರಹಾನೆ (09), ವೃದ್ಧಿಮಾನ್ ಸಹಾ (07) ಮತ್ತು ಕೊನೆಯಲ್ಲಿ ಅಮಿತ್ ಮಿಶ್ರಾ (14) ಇಮ್ರಾನ್ ತಾಹೀರ್‌ಗೆ ವಿಕೆಟ್ ಒಪ್ಪಿಸಿದರು.


ಚರ್ಚೆಗೆ ಗ್ರಾಸವಾದ ಜಮ್ತಾ ಪಿಚ್‌
 ಪ್ರಸಕ್ತ ಕ್ರಿಕೆಟ್ ಟೂರ್ನಿಯ ಏಕದಿನ ಸರಣಿಯ ಕೊನೆಯ ಪಂದ್ಯ ನಡೆದಿದ್ದ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಸೋತಿದ್ದಕ್ಕಿಂತ, ಪಿಚ್‌ ಹೆಚ್ಚು ಸುದ್ದಿ ಮಾಡಿತ್ತು. ಇದೀಗ ನಾಗಪುರದಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ದರೂ ಪಿಚ್  ಚರ್ಚೆಗೆ ಗ್ರಾಸವಾಗಿದೆ.

ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನ 12 ಮತ್ತು ಎರಡನೇ ದಿನ 20 ವಿಕೆಟ್‌ಗಳು ಪತನಗೊಂಡ ಜಮ್ತಾ ಅಂಗಳ ಈಗ ಹಲವು ಹಿರಿಯ ಕ್ರಿಕೆಟಿಗರು ಮತ್ತು ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ.

ನಮ್ಮ ಶಕ್ತಿಯಾದ ಸ್ಪಿನ್‌ಗೆ ಸಹಕಾರಿಯಾಗುವ ಪಿಚ್ ಸಿದ್ಧಗೊಳಿಸುವುದು ತಪ್ಪಲ್ಲ. ಆದರೆ,  ಮೊದಲ ದಿನದಿಂದಲೇ ಕಳಪೆ ಮಟ್ಟ ಅಂಗಳ ನೀಡುವುದು ಕ್ರೀಡಾಸ್ಪೂರ್ತಿಯಲ್ಲ ಎನ್ನುವ ವಾದ ಬಿಸಿಯೇರಿದೆ. ಇನ್ನೂ ಕೆಲವರು ಅಂಗಳ ಹೇಗಿದ್ದರೂ ಫಲಿತಾಂಶ ಹೊರ ಹೊಮ್ಮಬೇಕು ಎಂದು ವಾದಿಸಿದ್ದಾರೆ.

‘ಬೇರೆ ಯಾವ ದೇಶದಲ್ಲಿ ಕ್ರಿಕೆಟ್ ನಡೆದರೂ ಪಿಚ್ ಬಗ್ಗೆ ಯಾರೂ ಮಾತನಾಡುವುದಿಲ್ಲ ಮತ್ತು ಬರೆಯುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಆಡುವಾಗ ಮಾತ್ರ ಪಿಚ್ ಬಗ್ಗೆ ಪ್ರಶ್ನೆಗಳು, ಚರ್ಚೆ, ವಿಮರ್ಶೆಗಳು ನಡೆಯುತ್ತವೆ. ಲೇಖನಗಳು ಪ್ರಕಟವಾಗುತ್ತವೆ. ಆಟಗಾರರ ಸಾಮರ್ಥ್ಯಕ್ಕಿಂತ ಪಿಚ್ ಮಹತ್ವ ಪಡೆಯುತ್ತದೆ’ ಎಂದು ಮೊಹಾಲಿ ಯಲ್ಲಿಯೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ನಾಗಪುರದ ಪಿಚ್ ಈಗ ಮೊಹಾಲಿಗಿಂತಲೂ ಕಠಿಣವಾಗಿ ವರ್ತಿಸುತ್ತಿದೆ. 2010ರಲ್ಲಿ ಇಲ್ಲಿಯೇ ಭರ್ಜರಿ ಜಯ ದಾಖಲಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಅಲ್ಪಮೊತ್ತಕ್ಕೆ ಆಲ್‌ಔಟಾಗಿದೆ. ಈ ಅಂಗಳದಲ್ಲಿ ದ್ವಿಶತಕ ದಾಖಲಿಸಿದ್ದ ಹಾಶೀಮ್ ಆಮ್ಲಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಗಳಿಸಿ ಔಟಾಗಿದ್ದರು. ಎ.ಬಿ. ಡಿವಿಲಿಯರ್ಸ್ ಕೂಡ ವಿಫಲರಾಗಿದ್ದಾರೆ. ಅಲ್ಲದೇ ಆತಿಥೇಯ ತಂಡದ ಬ್ಯಾಟಿಂಗ್ ಪಡೆಯೂ  ಎರಡೂ ಇನಿಂಗ್ಸ್‌ಗಳಲ್ಲಿ (215 ಮತ್ತು 173) ರನ್ ಗಳಿಸಲು ಹರಸಾಹಸಪಟ್ಟಿದೆ.

ಸ್ಕೋರ್‌ಕಾರ್ಡ್‌
ಭಾರತ ಮೊದಲ ಇನಿಂಗ್ಸ್‌  215  (78.2 ಓವರ್‌ಗಳಲ್ಲಿ)

ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್‌  79 (33.1  ಓವರ್‌ಗಳಲ್ಲಿ)

(ಬುಧವಾರದ ಅಂತ್ಯಕ್ಕೆ 9 ಓವರ್‌ಗಳಲ್ಲಿ   2ವಿಕೆಟ್‌ಗೆ 11 )
ಡೀನ್ ಎಲ್ಗರ್ ಬಿ  ಅಶ್ವಿನ್  07
ಹಾಶೀಮ್ ಆಮ್ಲಾ ಸಿ ಅಜಿಂಕ್ಯ ರಹಾನೆ ಬಿ ಅಶ್ವಿನ್  01
ಎ.ಬಿ. ಡಿವಿಲಿಯರ್ಸ್ ಸಿ ಮತ್ತು ಬಿ ರವೀಂದ್ರ ಜಡೇಜಾ   00
ಫಾಫ್ ಡು ಪ್ಲೆಸಿ ಬಿ ರವೀಂದ್ರ ಜಡೇಜಾ  10
ಜೆ.ಪಿ. ಡುಮಿನಿ ಎಲ್‌ಬಿಡಬ್ಲ್ಯು ಬಿ ಅಮಿತ್ ಮಿಶ್ರಾ  35
ಡೇನ್ ವಿಲಾಸ್ ಬಿ ರವೀಂದ್ರ ಜಡೇಜಾ  01
ಸೈಮನ್ ಹಾರ್ಮರ್ ಬಿ ಅಶ್ವಿನ್  13
ಕಗಿಸೊ ರಬಾಡ ಔಟಾಗದೆ 06
ಮಾರ್ನೆ ಮಾರ್ಕೆಲ್ ಸಿ ಮತ್ತು ಬಿ ಅಶ್ವಿನ್  01
ಇತರೆ:  (ಲೆಗ್‌ಬೈ 1)  01
  ವಿಕೆಟ್‌ ಪತನ: 3–11 (ಎಲ್ಗರ್‌; 9.5), 4–12 (ಆಮ್ಲಾ; 11.1), 5–12 (ಡಿವಿಲಿಯರ್ಸ್; 12.3), 6–35 (ಡುಪ್ಲೆಸಿ; 16.6), 7–47 (ವಿಲಾಸ್; 22.2), 8–66 (ಹಾರ್ಮರ್; 27.2), 9–76 (ಡುಮಿನಿ; 32.1), 10–79 (ಮಾರ್ಕೆಲ್‌; 33.1)
ಬೌಲಿಂಗ್‌: ಇಶಾಂತ್ ಶರ್ಮಾ 2–1–4–0, ಆರ್. ಅಶ್ವಿನ್ 16.1–6–32–5, ರವೀಂದ್ರ ಜಡೇಜಾ 12–3–33–4, ಅಮಿತ್ ಮಿಶ್ರಾ 3–0–9–1.

ಭಾರತ ಎರಡನೇ  ಇನಿಂಗ್ಸ್‌  173  (46.3ಓವರ್‌ಗಳಲ್ಲಿ)
ಮುರಳಿ ವಿಜಯ್ ಸಿ ಹಾಶೀಮ್ ಆಮ್ಲಾ ಬಿ ಮಾರ್ನೆ ಮಾರ್ಕೆಲ್  05
ಶಿಖರ್ ಧವನ್ ಸಿ ಡೇನ್ ವಿಲಾಸ್ ಬಿ ಇಮ್ರಾನ್ ತಾಹೀರ್  39
ಚೇತೇಶ್ವರ್ ಪೂಜಾರ ಬಿ ಜೆ.ಪಿ. ಡುಮಿನಿ   31
ವಿರಾಟ್ ಕೊಹ್ಲಿ ಸಿ ಡುಪ್ಲೆಸಿ ಬಿ ಇಮ್ರಾನ್ ತಾಹೀರ್  16
ಅಜಿಂಕ್ಯ ರಹಾನೆ ಸಿ ಡುಮಿನಿ ಬಿ ಇಮ್ರಾನ್ ತಾಹೀರ್  09
ರೋಹಿತ್ ಶರ್ಮಾ ಸಿ ಡೀನ್ ಎಲ್ಗರ್ ಬಿ ಮಾರ್ನೆ ಮಾರ್ಕೆಲ್  23
ವೃದ್ಧಿಮಾನ್ ಸಹಾ ಸಿ ಹಾಶೀಮ್ ಆಮ್ಲಾ ಬಿ ಇಮ್ರಾನ್ ತಾಹೀರ್  07
ರವೀಂದ್ರ ಜಡೇಜಾ ಬಿ ಸೈಮನ್ ಹಾರ್ಮರ್  05
ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಬಿ ಮಾರ್ನೆ ಮಾರ್ಕೆಲ್  07
ಅಮಿತ್ ಮಿಶ್ರಾ ಬಿ ಇಮ್ರಾನ್ ತಾಹೀರ್  14
ಇಶಾಂತ್ ಶರ್ಮಾ ಔಟಾಗದೆ  01
ಇತರೆ:  (ಬೈ 8, ಲೆಗ್‌ಬೈ 5, ನೋಬಾಲ್ 3) 16
  ವಿಕೆಟ್‌ ಪತನ: 1–8 (ವಿಜಯ್; 4.2), 2–52 (ಪೂಜಾರ; 17.3), 3–97 (ಧವನ್; 26.5), 4–102(ಕೊಹ್ಲಿ; 28.1), 5–108 (ರಹಾನೆ; 30.3), 6–122 (ಸಹಾ; 34.1), 7–128 (ಜಡೇಜಾ; 35.3), 8–150 (ಅಶ್ವಿನ್; 41.4), 9–171 (ರೋಹಿತ್; 45.4), 10–173 (ಮಿಶ್ರಾ; 46.3).

ಬೌಲಿಂಗ್‌: ಮಾರ್ನೆ ಮಾರ್ಕೆಲ್ 10–5–19–3, ಸೈಮನ್ ಹಾರ್ಮರ್ 18–3–64–1, ಕಗಿಸೊ ರಬಾಡ 5–1–15–0, ಜೆ.ಪಿ. ಡುಮಿನಿ 2–0–24–1 (ನೋಬಾಲ್ 1), ಇಮ್ರಾನ್ ತಾಹೀರ್ 11.3–2–38–5 (ನೋಬಾಲ್ 1)

ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್‌  32ಕ್ಕೆ 2 (14 ಓವರ್‌ಗಳಲ್ಲಿ)
ಡೀನ್ ಎಲ್ಗರ್ ಬ್ಯಾಟಿಂಗ್  10
ಸ್ಟಿಯಾನ್ ವಾನ್ ಜಿಲ್ ಸಿ ರೋಹಿತ್ ಶರ್ಮಾ ಬಿ ಅಶ್ವಿನ್  05
ಇಮ್ರಾನ್ ತಾಹೀರ್ ಎಲ್‌ಬಿಡಬ್ಲ್ಯು ಬಿ ಅಮಿತ್ ಮಿಶ್ರಾ  08
ಹಾಶೀಮ್ ಆಮ್ಲಾ ಬ್ಯಾಟಿಂಗ್  03
ಇತರೆ:  (ಬೈ 4, ಲೆಗ್‌ಬೈ 1, ನೋಬಾಲ್ 1) 06
ವಿಕೆಟ್‌ ಪತನ: 1–17 (ವಾನ್ ಜಿಲ್; 7.4), 2–29 (ಇಮ್ರಾನ್ ತಾಹೀರ್; 11.1),
ಬೌಲಿಂಗ್‌: ಇಶಾಂತ್ ಶರ್ಮಾ 3–1–6–0 (ನೋಬಾಲ್ 1), ಆರ್. ಅಶ್ವಿನ್ 6–2–12–1, ರವೀಂದ್ರ ಜಡೇಜಾ 4–2–6–0, ಅಮಿತ್ ಮಿಶ್ರಾ 1–0–3–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT