ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್‌ ನಿರ್ಧಾರ: ಮೋದಿ ಹಸ್ತಕ್ಷೇಪ ಸಾಧ್ಯತೆ

ಲೋಕಸಭೆ ಪ್ರತಿಪಕ್ಷದ ನಾಯಕ ಸ್ಥಾನ: ಕಮಲ್‌ನಾಥ್‌ ಆರೋಪ
Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ ಪ್ರತಿಪಕ್ಷದ ನಾಯಕನ ಸ್ಥಾನಮಾನ ಕುರಿತಂತೆ ಸ್ಪೀಕರ್ ಅವರ ನಿರ್ಧಾರ­ದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮುಖಂಡ ಕಮಲ್‌ನಾಥ್‌ ಭಾನುವಾರ ಆರೋಪಿಸಿದ್ದಾರೆ. ಇದರಿಂದ ಈ ವಿವಾ­ದದ ಕಾವು ಮತ್ತಷ್ಟು ತೀವ್ರಗೊಂಡಿದೆ.

‘ಕೆಳಮನೆಯ ಒಟ್ಟು ಸದಸ್ಯ ಬಲದಲ್ಲಿ (543) ಶೇಕಡ 10ರಷ್ಟು ಸ್ಥಾನಗಳಿಸಿದರೆ ಮಾತ್ರ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ನೀಡಬೇಕು ಎಂಬ ಯಾವುದೇ ನಿಯಮ ಇಲ್ಲ. ಸಂಸದೀಯ ಪ್ರಕ್ರಿಯೆಗಳನ್ನು ನಿರ್ವಹಿ­ಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಸ್ಪೀಕರ್‌ ಅವರು ನಿಷ್ಪಕ್ಷಪಾತವಾಗಿ ವರ್ತಿ­ಸು­ತ್ತಾರೆ. ಆದರೆ, ಈಗಿನ ಸನ್ನಿವೇಶ ನೋಡಿದರೆ ಇಂತಹ ನಿರ್ಧಾರ ಆಗುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಸಂಸದೀಯ ವ್ಯವಹಾರ ಖಾತೆ ಮಾಜಿ ಸಚಿವರೂ ಆದ ಕಮಲ್‌ನಾಥ್‌ ಹೇಳಿದರು.

‘ಹೆಡ್‌ಲೈನ್ಸ್‌ ಟುಡೇ’ ವಾಹಿನಿಯ ‘ನಥಿಂಗ್‌ ಬಟ್ ದಿ ಟ್ರೂತ್‌’ ಕಾರ್ಯ­ಕ್ರಮದಲ್ಲಿ ಮಾತನಾಡಿದ ಅವರು, ‘ಸ್ಪೀಕರ್‌ ಸುಮಿತ್ರಾ ಮಹಾಜನ್ ಅವರು ಬಿಜೆಪಿಯಿಂದ ಆರಿಸಿಬಂದ­ವರು. ಆದರೆ, ಅವರು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗಿ ಕಾರ್ಯನಿರ್ವ­ಹಿಸು­ತ್ತಾರೆ ಎಂದೇನೂ ಅಲ್ಲ. ಆದರೆ, ಈಗಿನ ಸಂದರ್ಭದಲ್ಲಿ ವಿಶ್ಲೇಷಿಸುವು­ದಾ­ದರೆ ಪ್ರತಿಪಕ್ಷದ ನಾಯಕನ ಸ್ಥಾನಮಾನ ಕುರಿತ ಸ್ಪೀಕರ್‌ ನಿರ್ಧಾರದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಕ್ಷೇಪ ಮಾಡುವ ಸಾಧ್ಯತೆಯೇ ಹೆಚ್ಚಿದೆ’ ಎಂದರು.

‘ಈ ವಿಚಾರದಲ್ಲಿ ಕಾಂಗ್ರೆಸ್ ಆಶಯಕ್ಕೆ ವಿರುದ್ಧವಾಗಿ ಸ್ಪೀಕರ್‌ ರೂಲಿಂಗ್‌ ನೀಡಿದರೆ, ನಮ್ಮ ಪಕ್ಷ ನ್ಯಾಯಾಲಯದ ಮೊರೆ ಹೋಗುವುದೇ ಸೂಕ್ತ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT