ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಕಳೆದಿದೆ ಹುಡುಕಿ ಕೊಡಿ!

ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ‘ಪ್ರಜಾವಾಣಿ’ ಜನಸ್ಪಂದನ
Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಮಿ, ನಮ್ಮ ಬೆನ್ನಿಗಾನಹಳ್ಳಿ ನಗರವಾಗಿದ್ದೆನೋ ಸಂತಸದ ಸಂಗತಿ. ಆದರೆ, ಈ ನಡುವೆ ನಮ್ಮ ಸ್ಮಶಾನ ಕಳೆದು ಹೋಗಿದೆ. ಸತ್ತವರನ್ನು ಎಲ್ಲಿ ಹೂಳುವುದು ಎನ್ನುವುದೇ ನಮಗೆ ಗೊತ್ತಾಗುತ್ತಿಲ್ಲ. ದಯ­ವಿಟ್ಟು ನಮ್ಮ ಸ್ಮಶಾನ ನಮಗೆ ಹುಡುಕಿ ಕೊಡಿ’
‘ಸಾರ್, ನಮ್ಮ ನಗರದಲ್ಲಿ ಪುಂಡರ ಹಾವಳಿ ಹೆಚ್ಚಿ, ಮಹಿಳೆಯರಲ್ಲಿ ಭಯದ ವಾತಾವರಣ ಮೂಡಿದೆ. ಇದನ್ನು ಹೋಗಲಾಡಿಸಿ’

‘ಎಂಟು ವರ್ಷದಿಂದ ಬಿಲ್‌ ಕಟ್ಟುತ್ತಿದ್ದೇವೆ. ಆದರೆ, ಈವರೆಗೆ ಒಂದೇ ಒಂದು ತೊಟ್ಟು ಕಾವೇರಿ ನೀರು ಸಿಕ್ಕಿಲ್ಲ. ಕೂಡಲೇ ನೀರು ಪೂರೈಸಿ.  ನಮ್ಮ ಪ್ರದೇಶದಲ್ಲಿ ಬೀದಿ ದೀಪ­ಗ­ಳಿಲ್ಲ. ಕಳ್ಳರು ನನ್ನ ಚೈನು ಕಿತ್ತುಕೊಂಡು ಹೋದಾ­ಗಿನಿಂದ ಸಂಜೆಯಾದರೆ ಹೊರಗೆ ಹೋಗಲು ಭಯವಾಗುತ್ತದೆ. ಬೀದಿದೀಪ­ಗಳನ್ನು ಯಾವಾಗ ಸರಿಪಡಿಸುತ್ತಿರಿ ದಯವಿಟ್ಟು ತಿಳಿಸಿ’

‘ಅತಿಕ್ರಮಣಕ್ಕೆ ಒಳಗಾಗಿರುವ ಕಗ್ಗದಾಸನ­ಪುರ ಕೆರೆಯ ಒತ್ತುವರಿಯನ್ನು ಯಾವಾಗ ತೆರವು ಮಾಡುತ್ತಿರಿ ಈಗಲೇ ಹೇಳಿ’
... ಹೀಗೆ ತೂರಿಬಂದ ಪ್ರಶ್ನೆಗಳ ಸುರಿಮಳೆ­ಯಲ್ಲಿ ಗಲಿಬಿಲಿಗೊಂಡ ಅಧಿಕಾರಿಗಳು ಶೀಘ್ರ­ದಲ್ಲಿಯೇ ನಿಮ್ಮ ಸಮಸ್ಯೆಗಳನ್ನು ಬಗೆಹರಿಸು­ತ್ತೇವೆ ಎಂಬ ವಾಗ್ಧಾನವನ್ನು ಅಲ್ಲಿ ನೆರೆದ ಜನ­ರಿಗೆ ನೀಡಿದರು. ಇದಕ್ಕೆ ಸಾಕ್ಷಿಯಾದ ಜನ­ಪ್ರತಿನಿಧಿಗಳು ‘ಸಮಸ್ಯೆಗಳೆಲ್ಲ ನಮಗಿರಲಿ, ಸದಾ ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಅಭಯ ನೀಡಿದರು.

ಹೊಸ ತಿಪ್ಪಸಂದ್ರದ ಪೂರ್ಣಪ್ರಜ್ಞ ಶಾಲೆಯ ಮೈದಾನ­ದಲ್ಲಿ ಶನಿವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ‘ಜನ­ಸ್ಪಂದನ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂತು. ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ರಘು,  ಕ್ಷೇತ್ರದ ಭಾಗಗಳಾದ ಬೆನ್ನಿಗಾನಹಳ್ಳಿ ವಾರ್ಡ್‌–50, ಸಿ.ವಿ.ರಾಮನ್‌­ನಗರ ವಾರ್ಡ್‌–57, ಹೊಸ ತಿಪ್ಪಸಂದ್ರ ವಾರ್ಡ್‌–58, ಹೊಯ್ಸಳನಗರ ವಾರ್ಡ್‌–80 ಮತ್ತು ಜೀವನ್‌ಭೀಮಾ ನಗರ ವಾರ್ಡ್‌ – 88ರ ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಈ ‘ಜನಸ್ಪಂದನ’ದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ತಾಳ್ಮೆಯಿಂದಲೇ ಆಲಿಸಿದ ಶಾಸಕ ಮತ್ತು ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಅವುಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡುವ ಜತೆಗೆ ಕೆಲ ಸಮಸ್ಯೆಗಳನ್ನು ಖುದ್ದಾಗಿ ನಾವೇ ನಿಂತು ಪರಿಹರಿಸುತ್ತೇವೆ ಎಂಬ ವಚನವಿತ್ತರು.

ದೂರುಗಳ ಮಹಾಪೂರ: ಕುಡಿಯುವ ನೀರು, ಪಾದಚಾರಿ ಮಾರ್ಗ ಅತಿಕ್ರಮಣ,  ತ್ಯಾಜ್ಯ ವಿಲೇವಾರಿ, ಸಂಚಾರ ಸಮಸ್ಯೆ, ಒಳಚರಂಡಿ,  ಪುಂಡರ ಹಾವಳಿ, ಬಸ್‌ ಸಮಸ್ಯೆ, ಬೀದಿ ನಾಯಿ ಕಾಟ, ಸ್ಕೈವಾಕ್‌, ರಸ್ತೆ ಡಾಂಬರೀಕರಣ, ಉದ್ಯಾನ ನಿರ್ವಹಣೆ, ಬೀದಿದೀಪ.. ಮುಖ್ಯವಾದ ಈ ಸಮಸ್ಯೆಗಳು ಸೇರಿದಂತೆ ನಾಗರಿಕರು ತಾವು ನಿತ್ಯ ಅನುಭವಿಸುವ ತೊಂದರೆಗಳನ್ನು ‘ಜನಸ್ಪಂದನ’ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

ಅಧಿಕಾರಿಗಳಿಗೆ ತರಾಟೆ: ಅಧಿಕಾರಿಗಳು ನೀಡಿದ ಉತ್ತರಕ್ಕೆ ತೃಪ್ತರಾಗದ ಕೆಲ ಹಿರಿಯ ನಾಗರಿಕರು ಅಧಿಕಾರಿಗಳನ್ನು ತರಾಟೆ ತೆಗೆದು­ಕೊಂಡರು. ಅನೇಕ ದಿನಗಳಿಂದ ಪರಿ­ಹಾರ ಕಾಣದ ಸಮಸ್ಯೆಗಳಿಗೆ ವೇದಿಕೆ­ಯಲ್ಲಿಯೇ ಕಾಲಮಿತಿ ಘೋಷಿಸಬೇಕೆಂದು ಆಗ್ರಹಿಸಿದರು. ಈ ವೇಳೆ ನಾಗರಿಕರ ಬೆಂಬಲಕ್ಕೆ ಬಂದ ಶಾಸಕ ರಘು ಅವರು ತಾವೇ ಕಾಳಜಿ ವಹಿಸಿ ಸಮಸ್ಯೆ­ಗಳನ್ನು ಬಗೆಹರಿಸುವುದಾಗಿ ಹೇಳಿ ಆಕ್ರೋಶ­ಗೊಂಡವರನ್ನು ಸಮಾಧಾನ ಪಡಿಸಿದರು.

ದುಪ್ಪಟ್ಟು ದಂಡ ಹಾಕಿ: ಕೆಲವರು ಸಂಚಾರ ನಿಯಮ ಉಲ್ಲಂಘಿಸಿ ಶಾಸಕರ ಹೆಸರು ಹೇಳಿ ಬಚಾವ್‌ ಆಗುತ್ತಾರೆ ಎಂಬ ಮಾತು ವೇದಿಕೆ­ಯಲ್ಲಿ ಕೇಳಿಬರುತ್ತಿದ್ದಂತೆ ಎದ್ದು ನಿಂತ ಶಾಸಕ ರಘು ಅವರು ‘ಯಾರಾದರೂ ನನ್ನ ಹೆಸರು ಹೇಳಿ­ಕೊಂಡು ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆಗೆ ಮುಂದಾದರೆ ಅಂತಹ ವ್ಯಕ್ತಿಗಳಿಗೆ ಮುಲಾಜಿಲ್ಲದೆ ದುಪ್ಪಟ್ಟು ಹಾಕಿ’ ಎಂದು ವೇದಿಕೆ ಮೇಲಿದ್ದ ಅಧಿಕಾರಿಗಳಿಗೆ ಹೇಳಿದರು. ಸಂಸ್ಥೆಯ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ ಕಾರ್ಯಕ್ರಮ­ದಲ್ಲಿ ಇದ್ದರು.

ನೂರಕ್ಕೆ ನೂರು ಸ್ಪಂದನೆ
ಜನರು ಮತ್ತು ಜನಪ್ರತಿನಿಧಿಗಳ ನಡುವೆ ಕೊಂಡಿಯಾಗಿ ಇಂತಹದೊಂದು ವೇದಿಕೆ ಒದಗಿಸಿದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ಹೆರಾಲ್ಡ್‌’ ಪತ್ರಿಕೆಗಳಿಗೆ ಧನ್ಯವಾದಗಳು. ಸ್ಥಳೀಯ ನಾಗರಿಕರಿಂದ ಕೇಳಿಬಂದ ದೂರುಗಳನ್ನು ಅಧಿಕಾರಿಗಳು ಟಿಪ್ಪಣಿ ಮಾಡಿಕೊಂಡಿದ್ದಾರೆ. ನಾವೆಲ್ಲ ಜನಪ್ರತಿನಿಧಿಗಳು ಸೇರಿ ಎಲ್ಲ ಸಮಸ್ಯೆಗಳನ್ನು ನೂರಕ್ಕೆ ನೂರು ಬಗೆಹರಿಸುತ್ತೆವೆ. ಸುಳ್ಳು ಆಶ್ವಾಸನೆ ನೀಡದೆ, ನುಡಿದಂತೆ ನಡೆದು ಕೆಲಸ ಮಾಡುತ್ತೇವೆ. ಮುಂದಿನ ವರ್ಷ ಇಲ್ಲಿಯೇ ‘ಜನಸ್ಪಂದನ’ ಕಾರ್ಯಕ್ರಮ ನಡೆಯಲಿ.
–ಎಸ್‌.ರಘು, ಶಾಸಕ

ಜನಪ್ರತಿನಿಧಿಗಳ ಮನದಾಳದ ಮಾತು...
ಸ್ಪಂದನೆ ತೃಪ್ತಿ
ಬಹಿರಂಗ ವೇದಿಕೆಯಲ್ಲಿ ನಾಗರಿಕರ ಅಹವಾಲು­ಗಳನ್ನು ಆಲಿಸಿ, ಸಂಬಂಧ ಪಟ್ಟ ಅಧಿಕಾರಿ­ಗಳಿಂದ ಉತ್ತರ ಕೊಡಿಸಿದರೆ  ನಮಗೂ ಜನರ ನೋವಿಗೆ  ಸ್ಪಂದಿಸಿದ ತೃಪ್ತಿ ದೊರೆಯುತ್ತದೆ.
– ಸವಿತಾ ರಮೇಶ್, ಹೊಯ್ಸಳನಗರ ವಾರ್ಡ್‌–80 ಪಾಲಿಕೆ ಸದಸ್ಯೆ

ಎಲ್ಲೆಡೆ ನಡೆಯಲಿ
ಜನರ ನಾಡಿಮಿಡಿತ ಅರಿಯಲು ಇದೊಂದು ಉತ್ತಮ ವೇದಿಕೆ. ಈ ಕಾರ್ಯಕ್ರಮ ಇದೇ ರೀತಿ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿನಡೆದು ನಾಗರಿಕರಿಗೆ ಅನುಕೂಲವಾಗಲಿ.
–ಕೆ.ಚಂದ್ರಶೇಖರ್‌, ಜೀವನ್‌ಭೀಮಾ ನಗರ ವಾರ್ಡ್‌ – 88 ಪಾಲಿಕೆ ಸದಸ್ಯ

ಮುಖಾಮುಖಿ ಸಂವಾದ
ಪ್ರತಿನಾಗರಿಕರ ಮನೆಗೆ ತೆರಳಿ ಅಹವಾಲು ಆಲಿಸಲು ಸಾಧ್ಯವಾಗದು. ಇಂತಹ ವೇದಿಕೆಯಲ್ಲಿ ಆಗುವ ಮುಖಾ­ಮುಖಿ ಸಂವಾದದಲ್ಲಿ ಅದು ಸಾಧ್ಯವಾಗು­ತ್ತದೆ.
– ಸುಮಿತ್ರಾ ವಿಜಯಕುಮಾರ್, ಹೊಸ ತಿಪ್ಪಸಂದ್ರ ವಾರ್ಡ್‌–58 ಪಾಲಿಕೆ ಸದಸ್ಯೆ

ಪ್ರಯೋಜನಕಾರಿ
ಈ ಕಾರ್ಯಕ್ರಮ ನನಗಂತೂ ತುಂಬಾ ಪ್ರಯೋಜನಕಾರಿ­ಯಾಯಿತು.  ಸಣ್ಣಪುಟ್ಟ ಸಮಸ್ಯೆಗಳು ಕೂಡ ಜನರಿಗೆ ಅನೇಕ ತೊಂದರೆ ನೀಡುತ್ತವೆ ಎಂಬ ಅರಿವಾಯಿತು. ಇನ್ನು ಮುಂದೆ ಆ ಬಗ್ಗೆ ಗಮನ ಹರಿಸುತ್ತೆನೆ.
– ಎಂ.ಕೃಷ್ಣ, ಸಿ.ವಿ.ರಾಮನ್‌ನಗರ ವಾರ್ಡ್‌–57 ಪಾಲಿಕೆ ಸದಸ್ಯ

ನಾಳೆಯಿಂದಲೇ ಕಾರ್ಯಾಚರಣೆ
‘ಜನಸ್ಪಂದನ’ದಿಂದಾಗಿ ನಾಗರಿಕರು ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ­ಗಳನ್ನು ಎದುರಿಸುತ್ತಿದ್ದಾರೆ ಎನ್ನು­ವುದು ತಿಳಿದು ಬಂದಿದೆ. ನಾಳೆಯಿಂ­ದಲೇ ಸಮಸ್ಯೆಗಳ ಸ್ಥಳಗಳಿಗೆ ಭೇಟಿ ನೀಡಿ ಅವು­ಗಳನ್ನು ಪರಿಹರಿಸಲು ಪ್ರಯತ್ನಿಸುತ್ತೆನೆ.
ಎನ್.ದಯಾನಂದ, ಬೆನ್ನಿಗಾನಹಳ್ಳಿ ವಾರ್ಡ್‌–50, ಪಾಲಿಕೆ ಸದಸ್ಯ

ಅಧಿಕಾರಿಗಳ ಸ್ಪಂದನೆ
ವಿಶೇಷ ತಂಡ
ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿ­ಸಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ. ನಗರವನ್ನು ಸುಂದರವಾಗಿ­ಡು­ವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಸಾರ್ವಜನಿಕರು ಈ ಕಾರ್ಯ­ದಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಬೇಕು.
– ಲಕ್ಷ್ಮಿದೇವಿ, ಉಪ ಆಯುಕ್ತೆ, ಬಿಬಿಎಂಪಿ ಪೂರ್ವ ವಲಯ

ಭಯದಲ್ಲಿ ಬದುಕಬೇಡಿ
ನಗರದ ನಾಗರಿಕರು ಪುಂಡಪೋಕರಿಗಳಿಗೆ ಹೆದರಿ ಭಯದಲ್ಲಿ ಬದುಕುವ ಅಗತ್ಯ­ವಿಲ್ಲ. ನಿಮ್ಮ ನೆರೆಹೊರೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು, ಅಪರಾಧ ಪ್ರವೃತ್ತಿ­ಯವರು, ಮಹಿಳಾ ಪೀಡಕರು ಕಂಡುಬಂದರೆ  ಮಾಹಿತಿ ನೀಡಿ. ಕೂಡಲೇ ಕ್ರಮತೆಗೆದುಕೊಳ್ಳುತ್ತೇವೆ.
–ಶಿವಶಂಕರ್‌ ರೆಡ್ಡಿ, ಇನ್‌ಸ್ಪೆಕ್ಟರ್‌, ಜೀವನ್‌ಭೀಮಾ ನಗರ  ಠಾಣೆ.

ವಾಸ್ತವ ಸಮಸ್ಯೆಗಳು ತಿಳಿದವು
ನಾಗರಿಕರೆಲ್ಲರೂ ಹೀಗೆ ಮುಂದೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುವು­ದರಿಂದ ನಮಗೆ ವಾಸ್ತವ ಸ್ಥಿತಿ ಅರಿವಿಗೆ ಬರುತ್ತದೆ. ಇಲ್ಲಿ ಪ್ರಸ್ತಾಪಿತವಾದ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೆರೆಗೆ ಶೀಘ್ರದಲ್ಲಿಯೇ ಬಗೆಹರಿಸುತ್ತೆವೆ.
– ಎಸ್‌.ಆರ್‌.ಚಂದ್ರಧರ್, ಇಂದಿರಾ ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌

ನಾಗರಿಕರ ನಾಡಿಮಿಡಿತ...
ಶ್ಲಾಘನೀಯ ಕಾರ್ಯ
ಒಂದೇ ವೇದಿಕೆಯಲ್ಲಿ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ತಂದು ಜನರ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವ ಈ ಕಾರ್ಯ ಶ್ಲಾಘನೀಯ. ಇದು ಹೀಗೆ ಮುಂದುವರೆಯಲಿ ಎನ್ನುವುದು ನಮ್ಮ ಬಯಕೆ.
– ಕೆ.ಟಿ.ಸುಜಾತಾ, ಅಂಗನವಾಡಿ ಮೇಲ್ವಿಚಾರಕಿ

ಉತ್ತಮ ವೇದಿಕೆ

ಜನಸಾಮಾನ್ಯರ ಅನೇಕ ಸಮಸ್ಯೆಗಳು ಜನಪ್ರತಿನಿಧಿಗಳು ಮತ್ತು ಅಧಿ­ಕಾರಿಗಳ ಗಮನಕ್ಕೆ ಬರುವುದಿಲ್ಲ. ಇಂತಹ ವೇದಿಕೆಯಲ್ಲಿ ಕೇಳಿಬರುವ ಸಮಸ್ಯೆಗಳನ್ನು ಅಧಿಕಾರಿಗಳ ಗಂಭೀರವಾಗಿ ಪರಿಗಣಿಸುತ್ತಾರೆ.  ಕಾಲಮಿತಿ­ಯಲ್ಲಿ ಬದ್ಧತೆಯಿಂದ ಅವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ.
–ರಾಜು, ತಿಪ್ಪಸಂದ್ರ ನಿವಾಸಿ

ಅಭಿನಂದನಾರ್ಹ

ಇಂತಹ ವೇದಿಕೆಯಲ್ಲಿ ಜನರು ನಿರ್ಭಯದಿಂದ ಹೇಳಿದ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪರಿಹರಿಸುತ್ತಾರೆ ಎನ್ನುವುದು ನಮ್ಮ ನಂಬಿಕೆ. ಸಾಮಾಜಿಕ ಕಾಳಜಿಯಿಂದ ಸಾರ್ವಜನಿಕರಿಗೆ ಇಂತಹದೊಂದು ವೇದಿಕೆ ಒದಗಿಸಿದ ಪತ್ರಿಕೆಗಳು ಅಭಿನಂದನಾರ್ಹ.
–ಶಿವಣ್ಣ, ಕೃಷ್ಣಯ್ಯನ ಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT