ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ನಲ್ಲೇ ಬರೆಯಿರಿ ಮಹಾಕಾವ್ಯ!

Last Updated 10 ಮೇ 2016, 19:30 IST
ಅಕ್ಷರ ಗಾತ್ರ

ಲೇಖಕನೊಬ್ಬನಿಗೆ ಬರಹದ ಹೊಳಹು ಹೊಳೆಯುವುದು ಅಥವಾ ಮನಸ್ಸಿಗೆ ಹೊಳೆದ ಕಲ್ಪನೆಯನ್ನು ಅಕ್ಷರಕ್ಕಿಳಿಸಲು ಸ್ಫೂರ್ತಿ ಸಿಗುವುದು ಯಾವ ಕ್ಷಣದಲ್ಲಿ ಎಂದು ಹೇಳಲು ಸಾಧ್ಯವಿಲ್ಲ. ಆ ಅಮೃತ ಗಳಿಗೆಯಲ್ಲೇ ಅಥವಾ ಹೊಳೆದ ಯೋಚನೆಯನ್ನು ಆ ಕ್ಷಣದಲ್ಲೇ ಬರೆದಿಡುವುದರಲ್ಲೇ ಬರಹಗಾರನ ಗೆಲುವು ಅಡಗಿದೆ.

ಹಿಂದೆಲ್ಲಾ ಈ ರೀತಿ ಹೊಳಹು ಹೊಳೆದಾಗ, ಕಲ್ಲಿನ ಮೇಲೆ ಕೆತ್ತಿಡುತ್ತಿದ್ದರು ಅಥವಾ ತೊಗಲಿನ ಮೇಲೆ ಬರೆದಿಡುತ್ತಿದ್ದರು. ನಂತರದ ದಿನಗಳಲ್ಲಿ ಮಸಿ, ಕಾಗದ ಮತ್ತು  ಬೆರಳಚ್ಚು ಯಂತ್ರ ಬಳಕೆಗೆ ಬಂತು.  ಅದರ ಬೆನ್ನಲ್ಲೇ ಕಂಪ್ಯೂಟರ್, ಲ್ಯಾಪ್‌ಟಾಪ್‌ ಆವಿಷ್ಕಾರವಾಯಿತು.  ಕಂಪ್ಯೂಟರ್‌ ಬಳಕೆಗೆ ಬಂದ ನಂತರ ಬರೆಯುವ ರೀತಿಯಲ್ಲಿ ಬದಲಾವಣೆಯಾಯಿತು.

ಸಮಯ ಸಿಕ್ಕಾಗಲೆಲ್ಲ ಹಂತ ಹಂತವಾಗಿ  ಬರೆಯುತ್ತಾ, ಬರೆದಿದ್ದನ್ನು ಮತ್ತೆ ಮತ್ತೆ  ತಿದ್ದುತ್ತಾ ಉತ್ತಮ ಪಡಿಸುವ ಅವಕಾಶ ಲಭಿಸಿತು. ಈಗಿನದು ಇನ್ನೂ ಸ್ವಲ್ಪ ಸುಧಾರಿತ ಕಾಲ. ಡೆಸ್ಕ್‌ಟಾಪ್‌ ಕಂಪ್ಯೂಟರ್‌ನಲ್ಲಿ ಬರೆದು ಉಳಿಸುತ್ತಾ, ಮತ್ತೆ ಮತ್ತೆ ತಿದ್ದುತ್ತಾ ಕೂರುವ ಸಮಯ ಯಾರಿಗೂ ಇಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲೇ ಅಥವಾ ಟ್ಯಾಬ್ಲೆಟ್‌ನಲ್ಲೇ ಬಿಡುವು ಸಿಕ್ಕಾಗಲೆಲ್ಲ ಬರೆಯಬಹುದು.

ಬರೆದಿದ್ದನ್ನು ತಿದ್ದಬಹುದು. ಎಷ್ಟು ಪುಟ ಬೇಕಾದರೂ ಬರೆಯಬಹುದಾದ, ಬರೆದಿದ್ದನ್ನು ಸಂಗ್ರಹಿಸಿ ಇಡಬಹುದಾದ, ವ್ಯಾಕರಣ ದೋಷಗಳನ್ನು ತಿದ್ದುವ, ನೂರಾರು ಪುಟಗಳ ನಡುವೆ ನಮಗೆ ಬೇಕಿರುವ ಪುಟವನ್ನು ತೆರೆದು ಕೊಡುವ, ಪಠ್ಯದಲ್ಲಿರುವುದನ್ನೇ  ಧ್ವನಿ ರೂಪದಲ್ಲಿ ಓದಿ ಹೇಳುವ ಹಲವು ಅಪ್ಲಿಕೇಷನ್ಸ್‌ಗಳೂ ಬಂದಿವೆ.  ಬರಹಗಾರರಿಗೆ ಅನುಕೂಲವಾಗುವ ಕೆಲವು ಜನಪ್ರಿಯ ಅಪ್ಲಿಕೇಷನ್ಸ್‌ಗಳ ಮಾಹಿತಿ ಇಲ್ಲಿದೆ.

Storyist
ಅಂಕಣ ಬರಹಗಾರರಿಗೆ, ಸಿನಿಮಾ ಚಿತ್ರಕತೆಗಳನ್ನು  ಬರೆಯುವವರಿಗೆ ಇದೊಂದು ಅತ್ಯುತ್ತಮ ಅಪ್ಲಿಕೇಷನ್‌.  ಈ ಅಪ್ಲಿಕೇಷನ್‌ ತೆರೆದರೆ ಬೇರೆ ಬೇರೆ ವಿನ್ಯಾಸದ ಟೆಂಪ್ಲೇಟ್‌ಗಳು ಕಾಣಿಸುತ್ತವೆ. ಮೊದಲೇ ವಿನ್ಯಾಸ ಮಾಡಿಟ್ಟಿರುವ ಸಾಕಷ್ಟು ಪುಟಗಳು ಇದರಲ್ಲಿವೆ. ವಿಷಯಕ್ಕೆ ತಕ್ಕಂತೆ ಇಷ್ಟವಿರುವ ಟೆಂಪ್ಲೇಟ್‌ ಆಯ್ದುಕೊಂಡು ಬರೆಯಲು ಪ್ರಾರಂಭಿಸಬಹುದು.

ಕಥೆ ಬರೆಯುವವರಿಗೆ ಪ್ರತ್ಯೇಕ ಸ್ಟೋರಿ ಶೀಟ್‌ ಕೂಡ ಇದರಲ್ಲಿದೆ. ಅಕ್ಷರದ ವಿನ್ಯಾಸ, ಗಾತ್ರ, ಬಣ್ಣವನ್ನು ಬದಲಿಸಿಕೊಳ್ಳಬಹುದಾದ ‘ಟೆಕ್ಟ್ಸ್‌ ಎಡಿಟರ್‌’ ಸೌಲಭ್ಯವೂ ಇದೆ.  ಎಲ್ಲಕ್ಕಿಂತ ಮುಖ್ಯವಾಗಿ ಎಷ್ಟು ಪುಟಗಳನ್ನು ಬೇಕಾದರೂ ಬರೆದು, ಕ್ಲೌಡ್‌ ಸ್ಟೋರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಅಪ್ಲಿಕೇಷನ್‌ ಡೌನ್‌ಲೋಡ್‌ ಶುಲ್ಕ 15 ಡಾಲರ್‌. ಸದ್ಯ ಇದು ಆ್ಯಪಲ್‌  ಐಒಎಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

iA Writer
ಸ್ಟೋರಿಯಿಸ್ಟ್‌ ಅಪ್ಲಿಕೇಷನ್‌ಗೆ ಹೋಲಿಸಿದರೆ ಇದು ಬಳಕೆದಾರ ಸ್ನೇಹಿ. ಈ ಅಪ್ಲಿಕೇಷನ್‌ ಬಳಸಿ ಬರೆಯುವುದೆಂದರೆ ಸಾಂಪ್ರದಾಯಿಕ ಬೆರಳಚ್ಚು ಯಂತ್ರದಲ್ಲಿ ಬರೆದ ಅನುಭವವಾಗುತ್ತದೆ. ಅಕ್ಷರ ವಿನ್ಯಾಸ  ಕೂಡ ಹಳೆಯ ಬೆರಳಚ್ಚು ಮುದ್ರಣದಂತಿದೆ.  ಇದರಲ್ಲಿ ‘ಫೋಕಸ್‌ ಮೋಡ್‌’ ಎಂಬ ತಂತ್ರಜ್ಞಾನ ಇದ್ದು, ಇದು ನೀವು ಬರೆಯುತ್ತಿರುವ ಸಾಲನ್ನು ಬಿಟ್ಟು, ಮೇಲಿನ ಎಲ್ಲ ಪ್ಯಾರಾಗಳನ್ನು ಮರೆಯಾಗಿ ಇಟ್ಟಿರುತ್ತದೆ. ನಂತರ ಬೇಕಿದ್ದರೆ ತಿದ್ದಬಹುದು. 

ವ್ಯಾಕರಣ ದೋಷ ತಿದ್ದುವ ಸೌಲಭ್ಯವೂ ಇದೆ.  ಮೈಕ್ರೊಸಾಫ್ಟ್‌ ವರ್ಡ್‌ ಪ್ರೊಸೆಸಿಂಗ್‌ ತಂತ್ರಾಂಶದಲ್ಲಿರುವಂತೆ ಫೈಂಡ್‌ ಅಂಡ್‌ ರೀಪ್ಲೇಸ್‌ (find and replace) ಎಕ್ಸ್‌ಫೋರ್ಟ್‌  ಟೆಕ್ಟ್ಸ್‌ ಸೇರಿದಂತೆ ಹಲವು ಸಾಮಾನ್ಯ ಸೌಲಭ್ಯಗಳೂ ಇವೆ. ಬುಕ್‌ ಫಾರ್ಮೆಟ್‌ ಸೇರಿದಂತೆ ವಿವಿಧ ಮುದ್ರಣ ಮಾದರಿಗಳಿವೆ. ಐಫೋನ್‌ ಬಳಕೆದಾರರು 5 ಡಾಲರ್‌ ತೆತ್ತು ಈ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆಂಡ್ರಾಯ್ಡ್‌ ಬಳಕೆದಾರರಿಗೆ ಪ್ಲೇ ಸ್ಟೋರ್‌ನಲ್ಲಿ (https://goo.gl/bxpYaL) ಇದು ಉಚಿತವಾಗಿ ಲಭ್ಯವಿದೆ.

OmmWriter
ಬರಹಕ್ಕೆ ಬೇಕಾದ ಏಕಾಗ್ರತೆಯನ್ನು ಈ ಅಪ್ಲಿಕೇಷನ್‌ ನೀಡುತ್ತದೆ ಎನ್ನುತ್ತಾರೆ ಇದನ್ನು ಅಭಿವೃದ್ಧಿಪಡಿಸಿದವರು. ಬರಹಕ್ಕೆ ಪೂರಕವಾದ ರೇಖಾಚಿತ್ರಗಳನ್ನು ಅಲ್ಲಲ್ಲಿ ಬಳಸಿಕೊಳ್ಳಲು  ಅವಕಾಶ ನೀಡಲಾಗಿದೆ. ಬರಹಗಾರನಿಗೆ ಸ್ಫೂರ್ತಿ ನೀಡಲು ಲಘುವಾದ ಸಂಗೀತ, ನೈಸರ್ಗಿಕ ಶಬ್ದಗಳನ್ನು ಆಲಿಸುವ ಸೌಲಭ್ಯವೂ ಇದರಲ್ಲಿದೆ. ಅಪ್ಲಿಕೇಷನ್‌ ತೆರೆದು ಹೆಡ್‌ಫೋನ್‌ ಹಾಕಿಕೊಂಡರೆ ಮೆಲು ಧ್ವನಿಯ ಸಂಗೀತ ಆಲಿಸಬಹುದು. 

ಇದರಲ್ಲಿರುವ ಕೊರತೆ ಎಂದರೆ  ವರ್ಡ್‌ ಪ್ರೊಸೆಸರ್‌ ಇಲ್ಲದಿರುವುದು. ಅಂದರೆ ಈ ಅಪ್ಲಿಕೇಷನ್‌ನಲ್ಲಿ ಬರೆದ ಪಠ್ಯವನ್ನು ತಿದ್ದಲು ಮತ್ತೊಂದು ಅಪ್ಲಿಕೇಷನ್‌ಗೆ ಕಾಪಿ ಮಾಡಿಕೊಳ್ಳಬೇಕಾಗುತ್ತದೆ.  ಈ ಅಪ್ಲಿಕೇಷನ್‌ ಜತೆಗೆ ಅಭಿವೃದ್ಧಿಪಡಿಸಿರುವ ಕೀಬೋರ್ಡ್‌ ಕೂಡ ಅಷ್ಟೊಂದು ಚೆನ್ನಾಗಿಲ್ಲ.  ಐಪ್ಯಾಡ್‌ ಬಳಕೆದಾರರು 5 ಡಾಲರ್‌ ತೆತ್ತು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Scrivo Pro 
ಹೆಚ್ಚು ಕಡಿಮೆ  ಸ್ಟೋರಿಯಿಸ್ಟ್‌ ಅಪ್ಲಿಕೇಷನನ್ನೇ ಇದು ಹೋಲುತ್ತದೆ.  ಸಾಂಪ್ರದಾಯಿಕ ಕಂಪ್ಯೂಟರ್‌ಗಳಲ್ಲಿ ಬಳಸುವ ಜನಪ್ರಿಯ  ಅಪ್ಲಿಕೇಷನ್‌ Scrivener ನಲ್ಲಿ ಬರೆದಿಟ್ಟ ಪಠ್ಯವನ್ನು ಈ ಅಪ್ಲಿಕೇಷನ್‌ಗೆ ಎಕ್ಸ್‌ಪೋರ್ಟ್‌ ಮಾಡಿಕೊಳ್ಳಬಹುದು ಅಥವಾ ಇದರಲ್ಲಿ ತೆರೆಯಬಹುದು.

ಅಂದರೆ ಮನೆಯ ಡೆಸ್ಕ್‌ಟಾಪ್‌ ಗಣಕದಲ್ಲಿ Scrivener ಅಪ್ಲಿಕೇಷನ್‌ನಲ್ಲಿ ಬರೆದಿದ್ದರೆ ಅದನ್ನು ಸ್ಮಾರ್ಟ್‌ಫೋನ್‌ನಲ್ಲಿ   Scrivo Pro ನಲ್ಲಿ ತರೆದು ತಿದ್ದಬಹುದು. ಡೆಸ್ಕ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ ಎರಡರಲ್ಲೂ ಬಳಸಬಹುದು ಎಂಬ ಕಾರಣಕ್ಕೆ ಇದು ದುಬಾರಿ. ಆ್ಯಪಲ್‌ ಐಒಎಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಡೌನ್‌ಲೋಡ್‌ ಮಾಡಿಕೊಳ್ಳಲು 20 ಡಾಲರ್‌ ತೆತ್ತಬೇಕು.

Monospace
ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಈ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲಾಗಿದ್ದು, ಉಚಿತವಾಗಿ ಡೌನ್‌ಲೋಡ್‌ (https://goo.gl/QJXWBs) ಮಾಡಿಕೊಳ್ಳಬಹುದು. ನೋಟ್ಸ್‌ ಬರೆದುಕೊಳ್ಳಲು ಕೂಡ ಇದು ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT